ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ!
ಕೊಲ್ಕತ್ತಾ ವಿಮಾನ ನಿಲ್ದಾಣದತ್ತ ಧಾವಿಸುತ್ತಿದ್ದ ಪ್ರಯಾಣಿಕರ ವಿಮಾನವೊಂದು ಅಂತಿಮ ಲ್ಯಾಂಡಿಂಗ್ ಹಂತದಲ್ಲಿದ್ದಾಗ, ಭೂಮಿಯ ಮೇಲಿನಿಂದ ವಿಮಾನದ ಕಾಕ್‌ಪಿಟ್‌ನತ್ತ ಪ್ರಕಾಶಮಾನವಾದ ಲೇಸರ್ ಕಿರಣವನ್ನು ಹಾಯಿಸಲಾಗಿದೆ.
ನಗರಕ್ಕೆ ಆಗಮಿಸುತ್ತಿದ್ದ ಪೈಲಟ್ ಒಬ್ಬರು ಲೇಸರ್ ಬೆಳಕಿನ ಕಿರಣದಿಂದಾಗಿ ದಿಕ್ಕುತಪ್ಪಿ, ವಿಮಾನ ಲ್ಯಾಂಡಿಂಗ್ ಮಾಡುವ ಮೊದಲು ಕೆಲ ಕಾಲ ಗಾಳಿಯಲ್ಲೇ ಸುತ್ತು ಹೊಡೆಯಬೇಕಾದ ಆತಂಕಕಾರಿ ಘಟನೆ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಇದನ್ನೂ ಓದಿ: ಯುಎಇಯಿಂದ ಗಲ್ಫ್ ರಾಷ್ಟ್ರಗಳಿಗೆ ವಿಮಾನಯಾನದಲ್ಲಿ ವ್ಯತ್ಯಯ
ಕೊಲ್ಕತ್ತಾ ವಿಮಾನ ನಿಲ್ದಾಣದತ್ತ ಧಾವಿಸುತ್ತಿದ್ದ ಪ್ರಯಾಣಿಕರ ವಿಮಾನವೊಂದು ಅಂತಿಮ ಲ್ಯಾಂಡಿಂಗ್ ಹಂತದಲ್ಲಿದ್ದಾಗ, ಭೂಮಿಯ ಮೇಲಿನಿಂದ ವಿಮಾನದ ಕಾಕ್‌ಪಿಟ್‌ನತ್ತ ಪ್ರಕಾಶಮಾನವಾದ ಲೇಸರ್ ಕಿರಣವನ್ನು ಹಾಯಿಸಲಾಗಿದೆ. ಲೇಸರ್ ಕಿರಣದ ತೀವ್ರ ಬೆಳಕಿನಿಂದಾಗಿ ಪೈಲಟ್ ಕಣ್ಣುಗಳಿಗೆ ಕ್ಷಣಕಾಲ ಆವರಣ ಮಸುಕಾಗಿ, ವಿಮಾನದ ರನ್‌ವೇ ಸ್ಪಷ್ಟವಾಗಿ ಕಾಣಿಸದಂತಾಗಿದೆ.
ಸುರಕ್ಷತೆಯ ಹಿತದೃಷ್ಟಿಯಿಂದ ಪೈಲಟ್ ತಕ್ಷಣವೇ ಲ್ಯಾಂಡಿಂಗ್ ಪ್ರಯತ್ನವನ್ನು ಕೈಬಿಟ್ಟು, ವಿಮಾನವನ್ನು ಮೇಲಕ್ಕೆತ್ತಿ ಕೆಲವು ನಿಮಿಷಗಳ ಕಾಲ ಆಕಾಶದಲ್ಲೇ ಹಾರಾಡುವಂತೆ ಮಾಡಿದ್ದಾರೆ. ತದನಂತರ ಪರಿಸ್ಥಿತಿ ತಿಳಿಯಾದ ಬಳಿಕ ವಿಮಾನವನ್ನು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ರನ್‌ವೇ ಮೇಲೆ ಲ್ಯಾಂಡ್ ಮಾಡುವಲ್ಲಿ ಪೈಲಟ್ ಯಶಸ್ವಿಯಾಗಿದ್ದಾರೆ.
ವಿಮಾನ ನಿಲ್ದಾಣಗಳ ಸುತ್ತಮುತ್ತ ಲೇಸರ್ ಕಿರಣಗಳನ್ನು ಹೊಡೆಯುವುದು ಅತ್ಯಂತ ಅಪಾಯಕಾರಿ ಕೃತ್ಯ. ರಾತ್ರಿ ವೇಳೆ ಲ್ಯಾಂಡಿಂಗ್ ಅಥವಾ ಟೇಕ್-ಆಫ್ ಆಗುವ ಸಮಯದಲ್ಲಿ ಕಾಕ್‌ಪಿಟ್‌ನತ್ತ ಹರಿಯುವ ಲೇಸರ್ ಬೆಳಕು ಪೈಲಟ್‌ಗಳಿಗೆ 'ಫ್ಲ್ಯಾಶ್ ಬ್ಲೈಂಡ್‌ನೆಸ್' ಉಂಟುಮಾಡುತ್ತದೆ. ವಿಮಾನವು ಭೂಮಿಗೆ ಅತ್ಯಂತ ಸಮೀಪದಲ್ಲಿರುವಾಗ ಪೈಲಟ್ ನಿಯಂತ್ರಣ ತಪ್ಪಿದರೆ ಭಾರಿ ದುರಂತ ಸಂಭವಿಸುವ ಸಾಧ್ಯತೆ ಇರುತ್ತದೆ.
ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ ಹಾಗೂ ವಿಮಾನಯಾನ ಸಂಸ್ಥೆಯು ಈ ಕುರಿತು ಪೊಲೀಸ್ ದೂರು ದಾಖಲಿಸಿವೆ. ವಿಮಾನ ನಿಲ್ದಾಣದ ಸುತ್ತಮುತ್ತಲ ವಸತಿ ಪ್ರದೇಶಗಳು ಅಥವಾ ಮದುವೆ/ಸಂಭ್ರಮಾಚರಣೆಗಳ ಸಭಾಂಗಣಗಳಿಂದ ಈ ಲೇಸರ್ ಬೆಳಕನ್ನು ಹಾಯಿಸಲಾಗಿದೆಯೇ ಎಂಬ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.