ರಾಷ್ಟ್ರೀಯ ಗುರುತಿನ ಚೀಟಿ ಮಾನ್ಯಗೊಳಿಸಲು ನೇಪಾಳದ ಮನವಿ
ಭಾರತ–ನೇಪಾಳ ನಡುವಿನ ಗಡಿದಾಟುವ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ, ನೇಪಾಳ ಸರಕಾರ ತನ್ನ ಬಯೋಮೆಟ್ರಿಕ್ ರಾಷ್ಟ್ರೀಯ ಗುರುತಿನ ಚೀಟಿಯನ್ನು (National Identity Card–NID) ಅಧಿಕೃತ ಪ್ರಯಾಣ ದಾಖಲೆಯಾಗಿ ಮಾನ್ಯಗೊಳಿಸುವಂತೆ ಭಾರತ ಸರಕಾರಕ್ಕೆ ಅಧಿಕೃತ ಮನವಿ ಸಲ್ಲಿಸಿದೆ.
ಭಾರತ–ನೇಪಾಳ ನಡುವಿನ ಗಡಿದಾಟುವ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ, ನೇಪಾಳ ಸರಕಾರ ತನ್ನ ಬಯೋಮೆಟ್ರಿಕ್ ರಾಷ್ಟ್ರೀಯ ಗುರುತಿನ ಚೀಟಿಯನ್ನು (National Identity Card- NID) ಅಧಿಕೃತ ಪ್ರಯಾಣ ದಾಖಲೆಯಾಗಿ ಮಾನ್ಯಗೊಳಿಸುವಂತೆ ಭಾರತ ಸರಕಾರಕ್ಕೆ ಅಧಿಕೃತ ಮನವಿ ಸಲ್ಲಿಸಿದೆ. ಈ ಪ್ರಸ್ತಾವನೆಗೆ ಭಾರತ ಒಪ್ಪಿಗೆ ನೀಡಿದರೆ, ಪಾಸ್‌ಪೋರ್ಟ್ ಮತ್ತು ನಾಗರಿಕತ್ವ ಪ್ರಮಾಣಪತ್ರದ ಜತೆಗೆ ರಾಷ್ಟ್ರೀಯ ಗುರುತಿನ ಚೀಟಿಯನ್ನೂ ಬಳಸಿಕೊಂಡು ನೇಪಾಳದ ನಾಗರಿಕರು ಭಾರತಕ್ಕೆ ಪ್ರಯಾಣಿಸಬಹುದಾಗಿದೆ.

ಪ್ರಸ್ತುತ ಭಾರತಕ್ಕೆ ವಿಮಾನ ಅಥವಾ ಭೂಮಾರ್ಗದ ಮೂಲಕ ಪ್ರಯಾಣಿಸುವ ನೇಪಾಳದ ನಾಗರಿಕರು ಪಾಸ್‌ಪೋರ್ಟ್ ಅಥವಾ ಮೂಲ ನಾಗರಿಕತ್ವ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಹೊಸ ಬಯೋಮೆಟ್ರಿಕ್ ಗುರುತಿನ ಚೀಟಿಯಲ್ಲಿ ಬೆರಳಚ್ಚು, ಮುಖದ ಚಿತ್ರ ಹಾಗೂ ಐರಿಸ್ ಮಾಹಿತಿಯಿರುವುದರಿಂದ ಗುರುತಿನ ದೃಢೀಕರಣ ಹೆಚ್ಚು ಸುರಕ್ಷಿತವಾಗಲಿದೆ ಎಂದು ನೇಪಾಳ ಸರಕಾರ ಅಭಿಪ್ರಾಯಪಟ್ಟಿದೆ.
ಈ ಪ್ರಸ್ತಾವನೆಗೆ ಭಾರತ ಸರಕಾರದ ಅನುಮೋದನೆ ದೊರೆತರೆ, ಎರಡೂ ದೇಶಗಳ ನಡುವೆ ಜನರ ಸಂಚಾರ ಮತ್ತಷ್ಟು ಸುಗಮವಾಗುವ ನಿರೀಕ್ಷೆಯಿದೆ. ಜತೆಗೆ, ಗಡಿ ನಿರ್ವಹಣೆ, ಗುರುತಿನ ಪರಿಶೀಲನೆ ಹಾಗೂ ಭದ್ರತಾ ವ್ಯವಸ್ಥೆಗಳಲ್ಲೂ ಇದು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತಿಮ ನಿರ್ಧಾರವನ್ನು ಭಾರತ ಸರಕಾರ ಕೈಗೊಳ್ಳಬೇಕಿದ್ದು, ರಾಜತಾಂತ್ರಿಕ ಮಟ್ಟದಲ್ಲಿ ಚರ್ಚೆಗಳು ಮುಂದುವರಿದಿವೆ.