ಒಡಿಶಾದ ಬಾಲಾಸೋರ್ ಜಿಲ್ಲೆಯ ಚಾಮುಖ್–ಡಾಗರಾ ಕಡಲತೀರವನ್ನು ಪ್ರವಾಸಿ ತಾಣವಾಗಿ ರೂಪಿಸುವ ಕೆಲಸ ವರ್ಷಗಳಿಂದ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಒಡಿಶಾ ಹೈಕೋರ್ಟ್, ರಾಜ್ಯ ಸರಕಾರಕ್ಕೆ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆಯಲ್ಲಿ, ಕಡಲತೀರದ ಅಭಿವೃದ್ಧಿಯ ಬಗ್ಗೆ ಹಲವಾರು ಬಾರಿ ಯೋಜನೆಗಳು ಘೋಷಿಸಲ್ಪಟ್ಟರೂ, ಅಭಿವೃದ್ಧಿಯಲ್ಲಿ ಯಾವುದೇ ಪ್ರಗತಿ ಕಾಣದಿರುವುದಕ್ಕೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

Dagara beach Orissa


ಚಾಮುಖ್–ಡಾಗರಾ ಬೀಚ್ ಅನ್ನು 1998ರಲ್ಲೇ ಪ್ರವಾಸಿ ತಾಣವನ್ನಾಗಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ನಂತರ ಹಲವು ಬಜೆಟ್‌ಗಳಲ್ಲಿ ಈ ಯೋಜನೆಗೆ ಹಣ ಮೀಸಲಾದರೂ, ಮೂಲಸೌಕರ್ಯ ನಿರ್ಮಾಣ, ರಸ್ತೆ ಸಂಪರ್ಕ, ಶೌಚಾಲಯಗಳು, ವೀಕ್ಷಣಾ ಕಟ್ಟಡಗಳು, ಸುರಕ್ಷತಾ ಸೌಲಭ್ಯಗಳಂಥ ಅಗತ್ಯ ಕೆಲಸಗಳು ಸಾಕಷ್ಟು ಸಮಯದಿಂದ ಬಾಕಿಯೇ ಉಳಿದಿರುವುದು ವಿಪರ್ಯಾಸ. ಹೀಗಾಗಿ, ಮುಖ್ಯ ನ್ಯಾಯಮೂರ್ತಿ ನೇತೃತ್ವದ ಬೆಂಚ್‌, ಈ ಯೋಜನೆಯು ರಾಜ್ಯಕ್ಕೆ ಉತ್ತಮ ಆದಾಯ ತರಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮತ್ತು ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.