ಲಾಲ್‌ ಬಾಗ್‌ನಲ್ಲಿ ಫೊಟೋ, ವಿಡಿಯೋ ಶೂಟ್‌ ಮಾಡುವಂತಿಲ್ಲ ಎಂದು ರಾಜ್ಯ ಸರಕಾರ ನಿಷೇಧ ಹೇರಿ ಆದೇಶ ಹೊರಡಿಸಿದೆ. ಇದರಿಂದಾಗಿ ಬೆಂಗಳೂರಿನ 2 ಪ್ರಮುಖ ಪಾರ್ಕ್‌ಗಳಾದ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ಕ್ಯಾಮೆರಾ ಬಳಕೆಯ ಮೇಲೆಯೇ ನಿರ್ಬಂಧ ಹೇರಿದಂತಾಗಿದೆ. ಅಲ್ಲದೇ ಈ ನಿಯಮವನ್ನು ಉಲ್ಲಂಘಿಸಿದರೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ಹೊಸ ನಿಯಮದ ಪ್ರಕಾರ, ಲಾಲ್‌ ಬಾಗ್‌ನಲ್ಲಿ ಬೆಳಗ್ಗೆ 5.30ರಿಂದ 9ರ ವರೆಗೆ ಹಾಗೂ ಸಂಜೆ 4.30 ರಿಂದ 7 ರವರೆಗೆ ಮಾತ್ರ ವಾಕಿಂಗ್ ಮತ್ತು ಜಾಗಿಂಗ್‌ಗೆ ಅವಕಾಶವಿದೆ. ಅಲ್ಲದೇ ಕಬ್ಬನ್‌ ಪಾರ್ಕ್‌ನಲ್ಲಿ ಮಾಡಬಹುದಾದ ಸೈಕ್ಲಿಂಗ್ ಮತ್ತು ಸ್ಕೇಟಿಂಗ್‌ಗಳಂಥ ಚಟುವಟಿಕೆಗಳಿಗೆ ಲಾಲ್‌ ಬಾಗ್‌ನಲ್ಲಿ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಜತೆಗೆ ಹೊರಗಿನವರು ನೇರವಾಗಿ ಇಲ್ಲಿಗೆ ಬಂದು ಗಿಡಗಳನ್ನು ನೆಡುವುದಕ್ಕೆ ಅವಕಾಶವಿಲ್ಲ. ಆದರೆ ಪರಿಸರ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಗಿಡ ನೆಡುವ ಕಾರ್ಯಕ್ರಮಗಳಿದ್ದರೆ ತೋಟಗಾರಿಕೆ ಇಲಾಖೆಯಿಂದ ಮುಂಚಿತವಾಗಿ ಅನುಮತಿ ಪಡೆದರೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಹೊಸ ನಿಯಮವನ್ನು ಸಸ್ಯ ಸಂಪತ್ತು ಮತ್ತು ಜೀನ್ ಬ್ಯಾಂಕ್‌ಗಳನ್ನು ಸಂರಕ್ಷಿಸುವ ಕಾರಣ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.