ಸೌದಿ ಪ್ರವಾಸೋದ್ಯಮ ಪ್ರಾಧಿಕಾರ (Saudi Tourism Authority – STA) ಭಾರತದಲ್ಲಿ ತನ್ನ ಪ್ರಮುಖ ಪ್ರವಾಸೋದ್ಯಮ ಅಭಿಯಾನ “Spectacular Saudi” ಯನ್ನು ಆರಂಭಿಸಲು ಸಜ್ಜಾಗಿದೆ. ನವೆಂಬರ್ 21 ರಿಂದ 23ರವರೆಗೆ, ಭಾರತದಲ್ಲಿನ ಮುಂಬೈ, ದಿಲ್ಲಿ, ಬೆಂಗಳೂರು, ಹೈದರಾಬಾದ್ ಮತ್ತು ಅಹಮದಾಬಾದ್ ನಗರಗಳಲ್ಲಿ ಈ ಅಭಿಯಾನದ ನಿಮಿತ್ತ ವಿಶೇಷ ಕಾರ್ಯಕ್ರಮ ನಡೆಯಲಿದೆ. ಸೌದಿಯ ಸಂಸ್ಕೃತಿ, ಪರಂಪರೆ, ಆಹಾರ, ಆತಿಥ್ಯ ಹಾಗೂ ನೂತನ ಪ್ರವಾಸೋದ್ಯಮ ಯೋಜನೆಗಳನ್ನು ಭಾರತೀಯರಿಗೆ ಪರಿಚಯಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

ಕಾರ್ಯಕ್ರಮದ ವೇಳೆ ಸೌದಿಯ ಪರಂಪರೆಯ ಬಗ್ಗೆ ವೀಕ್ಷಕರಿಗೆ ತಿಳಿಸುವ ಸಲುವಾಗಿ ವಿವಿಧ ನೃತ್ಯ-ಸಂಗೀತ ಕಾರ್ಯಕ್ರಮಗಳು ಹಾಗೂ ಆಹಾರ ಮೇಳಗಳನ್ನು ನಡೆಸಲಾಗುತ್ತಿದೆ. “Brewtopia: A Qahwa Experience” ಮೂಲಕ ಸೌದಿ ಕಾಫಿ ಮತ್ತು ಬಖೂರ್ ಸುಗಂಧದ ಬಗ್ಗೆ ವಿಸ್ತೃತ ವಿವರಣೆ ನೀಡಲಾಗುತ್ತದೆ. “Epicurean-Culinary Corner” ವಿಭಾಗದಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಸೌದಿ ಆಹಾರವನ್ನು ಸವಿಯುವ ಅವಕಾಶವಿರುತ್ತದೆ.

Saudi Arabia (3)


ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ Qiddiya City ಯೋಜನೆಯನ್ನು VR (ವರ್ಚುವಲ್ ರಿಯಾಲಿಟಿ) ಮೂಲಕ ಪ್ರದರ್ಶಿಸಲಾಗುತ್ತದೆ. ಮನರಂಜನೆಗೆ ವಿಶೇಷವಾಗಿ ರೂಪುಗೊಂಡಿರುವ ಈ ವಿಶಿಷ್ಟ ಪ್ರಾಜೆಕ್ಟ್‌ನಲ್ಲಿ ವಿಶ್ವದ ಅತ್ಯಂತ ದೊಡ್ಡ Six Flags ಮನರಂಜನಾ ಪಾರ್ಕ್ ಹಾಗೂ ಸೌದಿಯ ಮೊದಲ ಬಹು ದೊಡ್ಡ ವಾಟರ್‌ಪಾರ್ಕ್‌ ಸ್ಥಾಪನೆಯಾಗಲಿವೆ.

ಇದೇ ಸಂದರ್ಭದಲ್ಲಿ ಪ್ರವಾಸಿಗರಿಗೆ ಸುಲಭ ವೀಸಾ ಪ್ರಕ್ರಿಯೆ ಕುರಿತು ಕಾರ್ಯಕ್ರಮದ ಸ್ಥಳದಲ್ಲಿ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಪ್ರಯಾಣ ಪ್ಯಾಕೇಜ್‌ಗಳು, ಏರ್‌ಲೈನ್ಸ್ ರಿಯಾಯಿತಿಗಳು ಮತ್ತು ವಿಶೇಷ ಕೌಟುಂಬಿಕ ಆಫರ್‌ಗಳನ್ನು ಸಹ STA ಪರಿಚಯಿಸಿದೆ. ರಿಯಾಧ್ ಪ್ರವಾಸಕ್ಕಾಗಿ ನಾಲ್ಕು ದಿನಗಳ ಪ್ಯಾಕೇಜ್, ಸೌದಿಯಾ ಏರ್‌ಲೈನ್ಸ್ ವಿಶೇಷ ದರಗಳು ಮತ್ತು 75 ಲಕ್ಷ ರು. ಗೂ ಅಧಿಕ ಮೌಲ್ಯದ ಟ್ರಾವೆಲ್ ವೌಚರ್‌ಗಳು ಕಾರ್ಯಕ್ರಮದ ಸಂದರ್ಭದಲ್ಲಿ ನೀಡಲಾಗುವುದೆಂದು ಪ್ರಾಧಿಕಾರ ತಿಳಿಸಿದೆ.