ಭಾರತವು ಪ್ರವಾಸೋದ್ಯಮದ ಅಪಾರ ಸಾಮರ್ಥ್ಯ ಹೊಂದಿದ್ದರೂ, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ನಿರೀಕ್ಷಿತ ವೇಗದ ಬೆಳವಣಿಗೆ ಕಾಣುತ್ತಿಲ್ಲ. 2026ರಲ್ಲಿ ವಿದೇಶಿ ಪ್ರವಾಸಿಗರ ಆಗಮನವು ಹಿಂದಿನ ವರ್ಷದ ಮಟ್ಟದಲ್ಲೇ ಸ್ಥಿರವಾಗುವ ಸಾಧ್ಯತೆ ಇದೆ ಎಂದು ಪ್ರವಾಸೋದ್ಯಮ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಸಂಘರ್ಷಗಳು, ತೈಲ ಬೆಲೆ ಏರಿಕೆ ಹಾಗೂ ವಿಮಾನ ಪ್ರಯಾಣ ದುಬಾರಿಯಾಗಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

2025ರಲ್ಲಿ ಭಾರತಕ್ಕೆ ಒಟ್ಟು 2.02 ಕೋಟಿ ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನ ದಾಖಲಾಗಿತ್ತು. ಇದು 2024ಕ್ಕೆ ಹೋಲಿಸಿದರೆ ಸುಮಾರು 1.71% ಇಳಿಕೆ. ಅದರಲ್ಲಿ ವಿದೇಶಿ ಪ್ರವಾಸಿಗರ ಆಗಮನ 91.5 ಲಕ್ಷಕ್ಕೆ ಇಳಿದಿದ್ದು, ಶೇ.8.07ರಷ್ಟು ಕುಸಿತ ಕಂಡಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ‘ಅಂತರರಾಷ್ಟ್ರೀಯ ಪ್ರವಾಸಿಗರು’ ಎಂಬ ಅಂಕಿ-ಅಂಶದಲ್ಲಿ ವಿದೇಶದಲ್ಲಿರುವ ಭಾರತೀಯರು (NRI) ಕೂಡ ಸೇರಿದ್ದಾರೆ. ವಿದೇಶಿ ಪ್ರವಾಸಿಗರ ನಿಜವಾದ ಪ್ರವಾಸೋದ್ಯಮ ಬೇಡಿಕೆಯನ್ನು ನೋಡಿದಾಗ ಭಾರತ ಇನ್ನೂ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡಿಲ್ಲ. NITI Aayog ಪ್ರಕಾರ, ಭಾರತವು ಜಾಗತಿಕ ಅಂತಾರಾಷ್ಟ್ರೀಯ ಪ್ರವಾಸಿ ಆಗಮನದಲ್ಲಿ 1.5%ಕ್ಕಿಂತಲೂ ಕಡಿಮೆ ಪಾಲು ಹೊಂದಿದೆ.

ಇದನ್ನು ಓದಿ:ಫಿನ್ಲ್ಯಾಂಡ್-ಭಾರತ ಪ್ರವಾಸೋದ್ಯಮ ಕಾರ್ಯಾಗಾರ 2026

ಪ್ರವಾಸಿಗರನ್ನು ಸೆಳೆಯಲು ಭಾರತವು ವಿದೇಶಗಳಲ್ಲಿ ಪ್ರವಾಸೋದ್ಯಮ ರೋಡ್‌ಶೋ, ಅಂತಾರಾಷ್ಟ್ರೀಯ ಪ್ರವಾಸಿ ಮೇಳಗಳಲ್ಲಿ ಭಾಗವಹಿಸುವಿಕೆ, ವಿದೇಶಿ ಪ್ರವಾಸ ನಿರ್ವಾಹಕರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪರಿಚಯ ಪ್ರವಾಸ, ಆಹಾರ ಉತ್ಸವಗಳು ಹಾಗೂ ಸಾಮಾಜಿಕ ಮಾಧ್ಯಮ ಪ್ರಚಾರದಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಹೀಗಾಗಿ, ಭಾರತದ ಪ್ರವಾಸೋದ್ಯಮಕ್ಕೆ ಸಾಂಸ್ಕೃತಿಕ ವೈವಿಧ್ಯ, ಐತಿಹಾಸಿಕ ತಾಣಗಳು, ಆಧ್ಯಾತ್ಮಿಕ ಪ್ರವಾಸ, ವನ್ಯಜೀವಿ, ಕಡಲತೀರ ಮತ್ತು ವೆಲ್‌ನೆಸ್‌ ಪ್ರವಾಸ ದೊಡ್ಡ ಅವಕಾಶಗಳಾಗಿವೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪ್ರವಾಸಿ ಬ್ರ್ಯಾಂಡಿಂಗ್, ಸಂಪರ್ಕ ವ್ಯವಸ್ಥೆ ಮತ್ತು ವಿದೇಶಿ ಪ್ರವಾಸಿಗರಿಗೆ ಅನುಕೂಲಕರ ಅನುಭವವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ.