ಶ್ರೀಲಂಕಾ ಸರಕಾರವು ವಿದೇಶಿ ರಿಮೋಟ್ ವೃತ್ತಿಪರರಿಗಾಗಿ ಬಹುನಿರೀಕ್ಷಿತ 'ಡಿಜಿಟಲ್ ನೋಮಾಡ್ ವೀಸಾ' ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಫೆಬ್ರವರಿ 2026 ರಿಂದ ಈ ವೀಸಾ ಪ್ರಕ್ರಿಯೆಯು ಪೂರ್ಣಪ್ರಮಾಣದಲ್ಲಿ ಚಾಲ್ತಿಯಲ್ಲಿದೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಭಾರತೀಯ ಪ್ರವಾಸಿಗರಿಗೆ ಯುಪಿಐ ಪಾವತಿ ಸೌಲಭ್ಯ

ಈ ವೀಸಾವು ಒಂದು ವರ್ಷದವರೆಗೆ ಮಾನ್ಯತೆ ಹೊಂದಿರುತ್ತದೆ. ವೀಸಾ ಅವಧಿ ಮುಗಿದ ನಂತರ, ಅರ್ಹತಾ ಮಾನದಂಡಗಳನ್ನು ಪೂರೈಸುತ್ತಿದ್ದರೆ ಪ್ರತಿ ವರ್ಷ ಇದನ್ನು ನವೀಕರಿಸಬಹುದಾಗಿದೆ. ಅರ್ಜಿದಾರರು ತಿಂಗಳಿಗೆ ಕನಿಷ್ಠ ₹1.67 ಲಕ್ಷ ವಿದೇಶಿ ಆದಾಯವನ್ನು ಹೊಂದಿರಬೇಕು. ಸಂಪಾದನೆಯು ಶ್ರೀಲಂಕಾದ ಹೊರಗಿನ ಕಂಪೆನಿಗಳು ಅಥವಾ ಗ್ರಾಹಕರಿಂದ ಮಾತ್ರ ಇರಬೇಕು. ಸ್ಥಳೀಯವಾಗಿ ಉದ್ಯೋಗ ಮಾಡಲು ಅವಕಾಶವಿರುವುದಿಲ್ಲ. ಅರ್ಜಿದಾರರು 18 ವರ್ಷ ಮೇಲ್ಪಟ್ಟವರಾಗಿರಬೇಕು. ಪ್ರತಿ ಅರ್ಜಿದಾರರಿಗೆ ವೀಸಾ ಶುಲ್ಕ 500 ಡಾಲರ್‌ ಎಂದು ನಿಗದಿಪಡಿಸಲಾಗಿದೆ. ಸಂಗಾತಿ ಮತ್ತು ಅವಲಂಬಿತರಿಗೂ ತಲಾ 500 ಡಾಲರ್‌ ಶುಲ್ಕ ಅನ್ವಯಿಸುತ್ತದೆ.

ಈ ವೀಸಾ ಹೊಂದಿರುವ ಡಿಜಿಟಲ್ ನೋಮಾಡ್‌ಗಳು ಶ್ರೀಲಂಕಾದಲ್ಲಿ ಬ್ಯಾಂಕ್ ಖಾತೆ ತೆರೆಯಬಹುದು. ತಮ್ಮ ಮಕ್ಕಳನ್ನು ಅಲ್ಲಿನ ಅಂತಾರಾಷ್ಟ್ರೀಯ ಶಾಲೆಗಳಿಗೆ ಸೇರಿಸಬಹುದು. ಸ್ಥಳೀಯ ಇಂಟರ್ನೆಟ್ ಮತ್ತು ಟೆಲಿಕಾಂ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು. ದೇಶದಾದ್ಯಂತ ಇರುವ ಕೋ-ವರ್ಕಿಂಗ್ ಸ್ಪೇಸ್‌ಗಳನ್ನು ಬಳಸಿಕೊಳ್ಳಬಹುದು.

ಶ್ರೀಲಂಕಾ ವಲಸೆ ಮತ್ತು ವಿಲೇವಾರಿ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಸಾಮಾನ್ಯವಾಗಿ 2 ರಿಂದ 4 ವಾರಗಳಲ್ಲಿ ವೀಸಾ ಅನುಮೋದನೆ ದೊರೆಯುತ್ತದೆ.

ಅಗತ್ಯ ದಾಖಲೆಗಳು

  • ಕನಿಷ್ಠ 6 ತಿಂಗಳ ಮಾನ್ಯತೆ ಇರುವ ಪಾಸ್‌ಪೋರ್ಟ್.
  • ಕಳೆದ 3 ರಿಂದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್.
  • ರಿಮೋಟ್ ಕೆಲಸದ ಒಪ್ಪಂದ ಅಥವಾ ಫ್ರೀಲ್ಯಾನ್ಸ್ ಒಪ್ಪಂದದ ಪತ್ರಗಳು.
  • ಶ್ರೀಲಂಕಾದಲ್ಲಿ ಮಾನ್ಯತೆ ಇರುವ ಆರೋಗ್ಯ ವಿಮೆ.
  • ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್.
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.