ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವಿನ ಪ್ರಯಾಣಿಕರ ಬಹುದಿನಗಳ ಕನಸಾದ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲು ಸೇವೆಯನ್ನು ಆರಂಭಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಅತ್ಯಂತ ಮಹತ್ವದ ಹೆಜ್ಜೆಯಿಟ್ಟಿದೆ. ಕಡಿದಾದ ಹಾಗೂ ಸವಾಲಿನಿಂದ ಕೂಡಿದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಇದನ್ನೂ ಓದಿ: ಮಂಗಳೂರು–ಬೆಂಗಳೂರು ರೈಲು ಸಂಚಾರ ಪುನರಾರಂಭ

ಪಶ್ಚಿಮ ಘಟ್ಟಗಳ ಅತ್ಯಂತ ಕಡಿದಾದ ತಿರುವುಗಳು, ಸುರಂಗಗಳು ಹಾಗೂ ಸೇತುವೆಗಳನ್ನು ಹೊಂದಿರುವ ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್‌ವರೆಗಿನ 55 ಕಿಲೋಮೀಟರ್‌ಗಳ ಘಾಟ್ ಮಾರ್ಗದಲ್ಲಿ ವಂದೇ ಭಾರತ್‌ ರೈಲಿನ ಎಂಜಿನ್ ಸಾಮರ್ಥ್ಯ, ಬ್ರೇಕಿಂಗ್ ವ್ಯವಸ್ಥೆ ಹಾಗೂ ವೇಗವನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ಕಠಿಣ ತಿರುವುಗಳಲ್ಲೂ ರೈಲು ಅತ್ಯಂತ ಸುಗಮವಾಗಿ ಸಂಚರಿಸಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಮಂಗಳೂರು ಮತ್ತು ಬೆಂಗಳೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳು ಘಾಟ್ ಪ್ರದೇಶದ ಕಠಿಣ ಹಾದಿಯಿಂದಾಗಿ 9 ರಿಂದ 10 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತವೆ. ಆದರೆ ವಂದೇ ಭಾರತ್ ಎಕ್ಸ್‌ಪ್ರೆಸ್ ಜಾರಿಗೆ ಬಂದರೆ ಈ ಪ್ರಯಾಣದ ಅವಧಿಯು ಕೇವಲ 6.5 ರಿಂದ 7 ಗಂಟೆಗಳಿಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಮಂಗಳೂರು, ಸುಬ್ರಹ್ಮಣ್ಯ, ಹಾಸನ ಮತ್ತು ಬೆಂಗಳೂರು ನಗರಗಳನ್ನು ಸಂಪರ್ಕಿಸುವ ಈ ಹೈ-ಸ್ಪೀಡ್ ರೈಲು ಸೇವೆಯಿಂದಾಗಿ ಉದ್ಯಮಿಗಳು, ವಿದ್ಯಾರ್ಥಿಗಳು, ಕರಾವಳಿಯ ಪ್ರವಾಸಿಗರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ತೆರಳುವ ಧಾರ್ಮಿಕ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.