ಕಬ್ಬನ್ ನಡಿಗೆ… ವಾರಾಂತ್ಯ ಮಾರ್ಗದರ್ಶಕ ಪ್ರವಾಸ
ಕಬ್ಬನ್ ಉದ್ಯಾನದ ವೈಶಿಷ್ಟ್ಯತೆ ತಿಳಿಸಲು ತೋಟಗಾರಿಕೆ ಇಲಾಖೆ ವೀಕೆಂಡ್ ಪ್ರವಾಸ ಆಯೋಜಿಸಿದ್ದು, ಮೊದಲ ದಿನದಂದೇ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. 90ನಿಮಿಷಗಳ ಕಾಲ್ನಡಿಗೆಯ ಪ್ರವಾಸದಲ್ಲಿ100ಕ್ಕೂ ಹೆಚ್ಚು ಮಂದಿ ಈ ವಾರಾಂತ್ಯ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು: ತೋಟಗಾರಿಕೆ ಇಲಾಖೆಯು ಜುಲೈ 27 ರಿಂದ ಕಬ್ಬನ್‌ಪಾರ್ಕ್ ಪ್ರವಾಸವನ್ನು ಅಧಿಕೃತವಾಗಿ ಆರಂಭಗೊಳಿಸಿದೆ. ಕಬ್ಬನ್‌ಪಾರ್ಕ್‌ಗೆ ಭೇಟಿ ನೀಡುವವರಲ್ಲಿ ಬಹುತೇಕರಿಗೆ ಉದ್ಯಾನದ ಇತಿಹಾಸ, ಯಾವ ಭಾಗದಲ್ಲಿ ಏನು ವಿಶೇಷವಿದೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ, ಕಬ್ಬನ್ ಉದ್ಯಾನದ ವೈಶಿಷ್ಟ್ಯತೆ ತಿಳಿಸಲು ತೋಟಗಾರಿಕೆ ಇಲಾಖೆ ವೀಕೆಂಡ್ ಪ್ರವಾಸ ಆಯೋಜಿಸಿದೆ.
ಸುಮಾರು 190 ಎಕರೆ ವಿಸ್ತೀರ್ಣದ ಕಬ್ಬನ್‌ಪಾರ್ಕ್ ಬಗ್ಗೆ ತಿಳಿಯಲು 'ಅದ್ಭುತ ಪ್ರಕೃತಿ ಗೈಡೆಡ್ ವಾಕ್ಸ್' ಹೆಸರಿನ ಮೂರು ತಂಡಗಳಾಗಿ ಬಿಎಸ್‌ಎನ್‌ಎಲ್ ಕಚೇರಿ ಬಳಿಯ ಪ್ರವೇಶ ದ್ವಾರದಲ್ಲಿ ಬೆಳಗ್ಗೆ 7.30ಕ್ಕೆ ನಡಿಗೆ ಆರಂಭವಾಗಿ, ತಾವರೆಕೊಳದವರೆಗೆ ಸಾಗಿತು. 100 ಕ್ಕೂ ಹೆಚ್ಚು ಮಂದಿ 90 ನಿಮಿಷಗಳ ಕಬ್ಬನ್ ನಡಿಗೆ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.

ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಬ್ಬನ್‌ಪಾರ್ಕ್ ನಿತ್ಯ ಪ್ರವಾಸಿಗರು, ಪರಿಸರ ಪ್ರೇಮಿಗಳು, ವಾಯುವಿಹಾರಿಗಳು, ಸಾರ್ವಜನಿಕರು ಬರುತ್ತಾರೆ. ಆದರೆ, ಅನೇಕರಿಗೆ ಉದ್ಯಾನದ ಮಹತ್ವ ಗೊತ್ತಿಲ್ಲ. ಹೀಗಾಗಿ, ಅದನ್ನು ತಿಳಿಸುವ ಉದ್ದೇಶದಿಂದ ಮಾರ್ಗದರ್ಶಕ ಪ್ರವಾಸ ಆರಂಭಿಸಲಾಗಿದೆ ಎಂದರು.
ಆನ್‌ಲೈನ್‌ನಲ್ಲಿ ಹೆಸರು ನೋಂದಣಿ
ಪ್ರತಿ ಶನಿವಾರ-ಭಾನುವಾರ ಕಬ್ಬನ್ ನಡಿಗೆಯ ಟಿಕೆಟ್ ದರ ವಯಸ್ಕರಿಗೆ 200 ರು. ಹಾಗೂ ಮಕ್ಕಳಿಗೆ 50 ರು. ನಿಗದಿಪಡಿಸಲಾಗಿದೆ. ಮುಂಗಡವಾಗಿ ಹೆಸರು ನೋಂದಾಯಿಸಿಕೊಳ್ಳಲು : walk.cubbonpark.in ಭೇಟಿ ನೀಡಬೇಕು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಶಾಮ್ಲಾ ಇಟ್ಬಾಲ್, ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್, ಕಬ್ಬನ್‌ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.