ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.16ರ ಸಂಜೆ ಸಂಭವಿಸಬಹುದಾಗಿದ್ದ ವಿಮಾನ ಅವಘಡವೊಂದು ಪೈಲಟ್‌ನ ಸಮಯಪ್ರಜ್ಞೆಯಿಂದ ತಪ್ಪಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನ (6E 388) ಟೇಕ್‌ಆಫ್‌ಗೆ ಸಿದ್ಧವಾಗಿ ರನ್‌ವೇಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಪೈಲಟ್ ವಿಮಾನದ ತುರ್ತು ಬ್ರೇಕ್ ಹಾಕಿ ಹಾರಾಟವನ್ನು ಸ್ಥಗಿತಗೊಳಿಸಿದ್ದಾರೆ. ವಿಮಾನವು ಸಂಜೆ ಸುಮಾರು 6.05ಕ್ಕೆ ಮತ್ತೆ ಪಾರ್ಕಿಂಗ್ ಪ್ರದೇಶಕ್ಕೆ ಮರಳಿತು.

ವಿಮಾನದಲ್ಲಿದ್ದ 229 ಪ್ರಯಾಣಿಕರು ಹಾಗೂ ಏಳು ಸಿಬ್ಬಂದಿ ಸೇರಿದಂತೆ ಒಟ್ಟು 236 ಮಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಯಾರಿಗೂ ಗಾಯಗಳಾಗಿಲ್ಲ. ತಾಂತ್ರಿಕ ತಪಾಸಣೆ ನಡೆಸಿದ ಬಳಿಕ ವಿಮಾನವನ್ನು 'ಏರ್‌ಕ್ರಾಫ್ಟ್ ಆನ್ ಗ್ರೌಂಡ್' (AOG) ಎಂದು ಘೋಷಿಸಿ, ದುರಸ್ತಿ ಕಾರ್ಯಕ್ಕಾಗಿ ಹಾರಾಟದಿಂದ ತಾತ್ಕಾಲಿಕವಾಗಿ ಹೊರಗಿಡಲಾಗಿದೆ.

ಪ್ರಯಾಣಿಕರಿಗೆ ಊಟ, ಉಪಾಹಾರ, ಹೊಟೇಲ್ ವಸತಿ ಹಾಗೂ ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡಲಾಯಿತು. ಬದಲಿ ವಿಮಾನ ಮಧ್ಯರಾತ್ರಿ 12.10ಕ್ಕೆ ಮಂಗಳೂರಿನಿಂದ ಹೊರಟಿದ್ದು, ಮೂಲ ಪ್ರಯಾಣಿಕರ ಪೈಕಿ 34 ಮಂದಿ ಮಾತ್ರ ಅದರಲ್ಲಿ ಪ್ರಯಾಣಿಸಿದರು. ಉಳಿದವರಿಗೆ ಪರ್ಯಾಯ ಸಂಪರ್ಕ ವಿಮಾನ ಮತ್ತು ಮರುಪಾವತಿಯ ಆಯ್ಕೆಯನ್ನೂ ನೀಡಲಾಯಿತು.