• ಸಿಂಚನಾ ಹೆಗ್ಡೆ

ಡೆಹ್ರಾಡೂನ್‌ಗೆ ಪ್ರವಾಸ ಕೈಗೊಂಡಾಗ ನೀವು ನೋಡಲೇಬೇಕಾದ ಸ್ಥಳಗಳಲ್ಲಿ ರಾಬರ್ಸ್ ಕೇವ್ ಕೂಡ ಒಂದು. ಸ್ಥಳೀಯರು ಇದನ್ನು ಗುಚ್ಚು ಪಾನಿ ಎಂದು ಕರೆಯುತ್ತಾರೆ. ಇದು ಉತ್ತರಾಖಂಡದ ಡೆಹ್ರಾಡೂನ್‌ ನಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿದೆ. ರಾಬರ್ಸ್ ಕೇವ್ ಅನರ್ವಾಲಾ ಗ್ರಾಮದ ಬಳಿ ನದಿಯಿಂದ ರೂಪುಗೊಂಡ ಗುಹೆ. ಈ ಗುಹೆಯು ಬ್ರಿಟಿಷ್ ಆಳ್ವಿಕೆಯಲ್ಲಿ ದರೋಡೆಕೋರರ ಅಡಗುತಾಣವಾಗಿದ್ದರಿಂದ ಈ ಸ್ಥಳಕ್ಕೆ ರಾಬರ್ಸ್ ಕೇವ್ ಎಂಬ ಹೆಸರು ಬಂದಿದೆ. ಇಲ್ಲಿ ಗುಹೆಯೊಳಗೆ ನೀರು ಹರಿಯುವುದನ್ನು ನೋಡಬಹುದು. ಶಾಂತ ವಾತಾವರಣ ಬಯಸುವ ಪ್ರವಾಸಿಗರಿಗೆ ಇದು ಬೆಸ್ಟ್ ಪಿಕ್ ನಿಕ್ ಸ್ಪಾಟ್. ರಾಬರ್ಸ್ ಕೇವ್ ಉತ್ತರಾಖಂಡದ ಜನಪ್ರಿಯ ಪ್ರವಾಸಿ ಸ್ಥಳವಾಗಿದ್ದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ರಾಬರ್ಸ್ ಕೇವ್ ಗೆ ಭೇಟಿ ನೀಡಬಹುದು.

ರಾಬರ್ಸ್ ಕೇವ್ ತಲುಪುವುದು ಹೇಗೆ?

ರಾಬರ್ಸ್ ಕೇವ್ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿದೆ. ಇಲ್ಲಿಗೆ ತಲುಪಲು ಪ್ರವಾಸಿಗರು ಡೆಹ್ರಾಡೂನ್‌ನ ಅನರ್‌ವಾಲಾ ಗ್ರಾಮದಿಂದ ಸರ್ಕಾರಿ ಬಸ್ ಹತ್ತಬಹುದು. ಅಲ್ಲಿಂದ, ಒಂದು ಕಿಲೋಮೀಟರ್ ಉದ್ದದ ಪಾದಯಾತ್ರೆಯ ಮೂಲಕ ಗಮ್ಯಸ್ಥಾನವನ್ನು ತಲುಪಬಹುದು.

Untitled design (8)

ರಾಬರ್ಸ್ ಕೇವ್ ನಿಜಕ್ಕೂ ಒಂದು ಮಾಂತ್ರಿಕ ಸ್ಥಳ. ಎರಡು ಬೆಟ್ಟಗಳ ನಡುವೆ ಉದ್ದವಾದ, ಕಿರಿದಾದ ಕಣಿವೆ ಇದೆ. ಆ ಕಣಿವೆಯಲ್ಲಿ ನೀರು ನಿರಂತರವಾಗಿ ಹರಿಯುತ್ತಿರುತ್ತದೆ. ಈ
ಡಕಾಯಿತರ ಗುಹೆಯನ್ನು ಶಿವನ ವಾಸಸ್ಥಾನವೆಂದು ನಂಬಲಾಗಿದೆ. ಇದು ಸಹಸ್ರಧಾರಾಗೆ ಬಹಳ ಹತ್ತಿರದಲ್ಲಿದೆ. ನೈಸರ್ಗಿಕವಾಗಿ ಗುಹೆ ರಚನೆಯಾಗಿದ್ದು, ನದಿಯ ನೀರು ಗುಹೆಯ ಮಧ್ಯದಿಂದ ಹರಿಯುವುದೇ ಇಲ್ಲಿನ ವಿಶೇಷತೆ. ಈ ಗುಹೆಯನ್ನು ನೋಡುತ್ತಿದ್ದರೆ ಸಿನಿಮಾದಲ್ಲಿ ನಿಗೂಢ ದೃಶ್ಯಗಳನ್ನು ತೋರಿಸಿದ ಹಾಗೆ ಭಾಸವಾಗುತ್ತದೆ. ಒಂದೆಡೆ ಸುತ್ತಲೂ ಇರುವ ಬಂಡೆಗಳ ಮೇಲೆ ನದಿ ನೀರು ಹೊಳೆಯುವ ದೃಶ್ಯ ಗೋಚರವಾಗುತ್ತದೆ. ಮತ್ತೊಂದೆಡೆ ಗುಹೆಯೊಳಗೆ ನದಿ ನೀರು ಹರಿಯುವುದರಿಂದ ಪ್ರತಿಧ್ವನಿಸುತ್ತದೆ. ಹೀಗೆ ಅನೇಕ ಮೋಡಿ ಮಾಡುವ ದೃಶ್ಯಗಳನ್ನು ನೀವಿಲ್ಲಿ ನೋಡಬಹುದು. ಸುಡುವ ಬಿಸಿಲಿದ್ದರೂ ಮಧ್ಯಾಹ್ನದ ಸಮಯದಲ್ಲಿ ಗುಹೆ ತಣ್ಣಗಿರುತ್ತದೆ.

ಸಂಪತ್ತನ್ನು ಅಡಗಿಸಿಡುತ್ತಿದ್ದರು

ಹಿಂದೆ, ಕಳ್ಳರು ಕದ್ದ ಸಂಪತ್ತನ್ನು ಈ ಗುಹೆಗಳಲ್ಲಿ ಅಡಗಿಸಿಟ್ಟು, ಅಗತ್ಯವಿದ್ದಾಗ ಅವರು ಅದನ್ನು ಹೊರತೆಗೆಯುತ್ತಿದ್ದರು. ನಿಧಿಯ ಸ್ಥಳವನ್ನು ಮರೆಯದಂತೆ ನೋಡಿಕೊಳ್ಳಲು ಬೆಟ್ಟದ ಗುರುತುಗಳನ್ನು ಕಲ್ಲಿನ ಗುಹೆಗಳಲ್ಲಿ ಕೆತ್ತಲಾಗಿದೆ. ಅದಕ್ಕಾಗಿಯೇ ಇದಕ್ಕೆ 'ದರೋಡೆಕೋರರ ಗುಹೆ' ಎಂಬ ಹೆಸರು ಬಂದಿದೆ. ರಾಬರ್ಸ್ ಕೇವ್ ನ ಮತ್ತೊಂದು ವೈಶಿಷ್ಟ್ಯವೆಂದರೆ ಗುಹೆಯಲ್ಲಿ ನೀರು ಕಾಣಿಸಿಕೊಳ್ಳುತ್ತದೆ. ನಂತರ, ಇದ್ದಕ್ಕಿದ್ದಂತೆ, ಭೂಗರ್ಭದಲ್ಲಿ ಕಣ್ಮರೆಯಾಗುತ್ತದೆ. ಕೆಲವು ಗಜಗಳಷ್ಟು ದೂರದಲ್ಲಿರುವ ಮೇಲ್ಮೈಯಲ್ಲಿ ನೀರು ಮತ್ತೆ ಕಾಣಿಸಿಕೊಳ್ಳುತ್ತದೆ. ನೀವು ಗುಹೆಯೊಳಗೆ ಪ್ರವೇಶಿಸಿ ಒಳಗೆ ನಡೆಯುತ್ತಿದ್ದಂತೆ, ಮೇಲಿನಿಂದ ಬೀಳುವ ನೀರಿನ ಸಿಂಚನವು ನಿಮ್ಮನ್ನು ಸ್ವಾಗತಿಸುತ್ತದೆ. ಕಲ್ಲಿನ ಗೋಡೆಗಳ ಮೇಲಿನ ಹಾವುಗಳು ಸಹ ಕಾಣುತ್ತವೆ. ನೀವು ಅಲ್ಲಿ ಇಂಥ ಅನೇಕ ಘಟನೆಗಳನ್ನು ನೋಡಬಹುದು.

Untitled design (9)

ನೀವು ರಾಬರ್ಸ್ ಕೇವ್ ನಲ್ಲಿ ನಡೆಯುವುದನ್ನು ಮುಂದುವರಿಸಿದರೆ, ಕೆಲವು ಸ್ಥಳಗಳಲ್ಲಿ ಎರಡು ಬೆಟ್ಟಗಳ ನಡುವಿನ ಅಂತರವು ತುಂಬಾ ಚಿಕ್ಕದಾಗುತ್ತದೆ. ಕೆಲವು ಸ್ಥಳಗಳಲ್ಲಿ, ಬಂಡೆಗಳು ಅಸಮವಾಗಿದ್ದು ನಡೆಯಲು ಸ್ವಲ್ಪ ಕಷ್ಟವಾಗುತ್ತದೆ. ಅಲ್ಲಿ ನೀರಿನ ಹರಿವು ವೇಗವಾಗಿರುತ್ತದೆ. ಇಲ್ಲಿ ಹೆಚ್ಚು ಆಳವೂ ಇದೆ! ಆದ್ದರಿಂದ ಪ್ರವಾಸಿಗರು ಜಾಗರೂಕರಾಗಿರಬೇಕು. ಆ ನೀರಿನ ಹೊಳೆಯಲ್ಲಿ ನೀವು ಸುಮಾರು 4-5 ಕಿಲೋಮೀಟರ್ ನಡೆಯಬಹುದು. ನಿಮಗೆ ತಾಳ್ಮೆ ಇದ್ದರೆ, ಗುಹೆಯ ಕೊನೆಯಲ್ಲಿ ಇನ್ನೊಂದು ದಾರಿಯ ಮೂಲಕ ಹೊರಬರಬಹುದು.

ಡೆಹ್ರಾಡೂನ್‌ನಲ್ಲಿ ಭೇಟಿ ನೀಡಬಹುದಾದ ಇತರ ಆಕರ್ಷಣೆಗಳಲ್ಲಿ ಟಿಬೆಟಿಯನ್ ಬೌದ್ಧ ದೇವಾಲಯ, ತಪಕೇಶ್ವರ ಮಹಾದೇವ ದೇವಾಲಯ, ಮೈಂಡ್‌ರೋಲಿಂಗ್ ಮಠ, ಲಾಚಿವಾಲಾ, ಮಾಲ್ಸಿ ಜಿಂಕೆ ಉದ್ಯಾನವನ ಮತ್ತು ರಾಜಾಜಿ ರಾಷ್ಟ್ರೀಯ ಉದ್ಯಾನವನ ಸೇರಿವೆ.

ಡೆಹ್ರಾಡೂನ್ ತಲುಪುವುದು ಹೇಗೆ?

ಬಸ್/ರಸ್ತೆ ಮಾರ್ಗ: ಡೆಹ್ರಾಡೂನ್ ನವದೆಹಲಿಯಿಂದ 245 ಕಿ.ಮೀ ದೂರದಲ್ಲಿದೆ. ಪ್ರತಿದಿನ ಬಸ್ ಸೇವೆ ಇದೆ. ರಾಜ್ಯದ ಎಲ್ಲಾ ಭಾಗಗಳಿಂದ ಡೆಹ್ರಾಡೂನ್‌ಗೆ ಸರ್ಕಾರಿ ಬಸ್‌ಗಳು ಚಲಿಸುತ್ತವೆ.

ರೈಲು ಮಾರ್ಗ: ಡೆಹ್ರಾಡೂನ್‌ನಲ್ಲಿ ಒಂದು ರೈಲು ನಿಲ್ದಾಣವಿದೆ. ದೆಹಲಿ, ಕೋಲ್ಕತ್ತಾ, ಮುಂಬೈ, ಲಖನೌ ಮುಂತಾದ ಸ್ಥಳಗಳಿಂದ ಇಲ್ಲಿಗೆ ರೈಲುಗಳು ಚಲಿಸುತ್ತವೆ.

ವಿಮಾನ ಮಾರ್ಗ: ಡೆಹ್ರಾಡೂನ್‌ನಲ್ಲಿ ವಿಮಾನ ನಿಲ್ದಾಣವಿದೆ. ಇದು ದೆಹಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಹೊಂದಿದೆ.