• ಮೃತ್ಯುಂಜಯ ಹೆಗ್ಡೆ

ತುಮಕೂರಿನ ಸಿದ್ಧಗಂಗಾ ಮಠವು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ, ಅದು ಜ್ಞಾನ, ದಾಸೋಹ ಮತ್ತು ಕಾಯಕ ತತ್ವಗಳ ಮಹಾನ್ ಸಂಗಮ. ಕಳೆದ ಶತಮಾನದ ಮಹಾನ್ ತಪಸ್ವಿಗಳು ಮತ್ತು "ನಡೆದಾಡುವ ದೇವರು" ಎಂದೇ ಪ್ರಖ್ಯಾತರಾದ ಕರ್ನಾಟಕ ರತ್ನ ಪರಮಪೂಜ್ಯ, ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಈ ಪವಿತ್ರ ಭೂಮಿಯಲ್ಲಿ ಕೋಟ್ಯಂತರ ಜನರ ಬದುಕಿಗೆ ಬೆಳಕಾದರು. ಅವರ ದಿವ್ಯ ಜೀವನ ಮತ್ತು ಮಹಾನ್ ಕಾರ್ಯಗಳನ್ನು ಸ್ಮರಿಸಲು, ಮಠದ ಆವರಣದಲ್ಲಿ ಒಂದು ಅನನ್ಯ ಸ್ಮಾರಕ ನಿರ್ಮಿಸಲಾಗಿದೆ ಅದೇ 'ಸ್ಮೃತಿ ವನ'.

ಈ ಸ್ಮೃತಿ ವನವು ಕೇವಲ ಒಂದು ಕಟ್ಟಡವಲ್ಲ, ಅದು ಸ್ವಾಮೀಜಿಯವರ ಅಧ್ಯಾತ್ಮಿಕ ಶಕ್ತಿ, ಸಮಾಜ ಸೇವೆ ಮತ್ತು ದಾರ್ಶನಿಕತೆಯ ಪ್ರತೀಕವಾಗಿದೆ. ಇದು ಪೂಜ್ಯರ ಆದರ್ಶಗಳನ್ನು ಮತ್ತು ಅವರ ಜೀವನದ ಸಂದೇಶಗಳನ್ನು ಸದಾ ಸ್ಮರಿಸಲು ಒಂದು ಪ್ರೇರಣಾದಾಯಕ ಸ್ಥಳವಾಗಿದೆ. ಇಲ್ಲಿನ ಪ್ರತಿಯೊಂದು ಕಲ್ಲು, ಮಣ್ಣಿನ ಕಣ, ಕಣ ಕೂಡ, ಶ್ರೀಗಳವರ ಸರಳತೆ, ದಾಸೋಹ ಮತ್ತು ತ್ಯಾಗ ಜೀವನದ ಹಾದಿಯ ಕಥೆಯನ್ನು ಹೇಳುತ್ತವೆ. ಶ್ರೀಗಳವರ ಜೀವನದ ವಿವಿಧ ಘಟ್ಟದ ಘಟನಾವಳಿಗಳು ಕಲಾಕೃತಿಗಳಾಗಿ ಮೂಡಿಬಂದಿದ್ದು, ಕೆಲವು ಕಲಾಕೃತಿಗಳನ್ನು ಆವರಿಸಿಕೊಂಡಿರುವ ಆಲದ ಮರದ ಬಿಳಲುಗಳು, ಅವುಗಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿ, ವಿಶಿಷ್ಟ ನೋಟವನ್ನು ನೀಡಿವೆ. ಈ ಪುಣ್ಯಭೂಮಿಗೆ ಕಾಲಿಟ್ಟಾಗ ಸಿಗುವ ಶಾಂತಿ, ನೆಮ್ಮದಿ ಮತ್ತು ಆಧ್ಯಾತ್ಮಿಕ ಅನುಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಬನ್ನಿ, ಶ್ರೀಗಳ ಪುಣ್ಯ ಸ್ಮರಣೆಯೊಂದಿಗೆ ಸ್ಮೃತಿ ವನದಲ್ಲಿ ಒಂದು ಸುತ್ತು ಬರೋಣ.

smriti vana  1

ಸ್ಮೃತಿ ವನದ ವಿಶೇಷತೆಗಳು:

ಈ ಉದ್ಯಾನವನದಲ್ಲಿ ತಾಯಿಯ ಮಡಿಲಲ್ಲಿ ಶಿಶುವಾಗಿರುವ, ಗುರುಗಳ ಆಶ್ರಯ ಕೇಳಿ ಬರುವ, ಗುರುಗಳಿಗೆ ಶಿಷ್ಯನಾಗಿ ಒಪ್ಪಿಗೆ ಸೂಚಿಸುವ, ಸಹಪಾಠಿಗಳೊಂದಿಗೆ ಮರಳಲ್ಲಿ ಅಕ್ಷರಾಭ್ಯಾಸ ಮಾಡುವ, ಗುರುಗಳಿಂದ ಜಂಗಮ ದೀಕ್ಷೆ ಪಡೆಯುತ್ತಿರುವ ಶ್ರೀಗಳ ಪೂರ್ವಾಶ್ರಮದ ಘಟನಾವಳಿಗಳಲ್ಲದೇ, ಶ್ರೀಗಳು ದೀಕ್ಷೆ ಪಡೆದ ನಂತರದ ಅವರ ದಿವ್ಯ ಜೀವನ ಮತ್ತು ಮಹಾನ್ ಕಾರ್ಯಗಳನ್ನು ನೆನಪಿಸುವಂಥ ಸ್ಮಾರಕಗಳನ್ನು ಸಹ ನಿರ್ಮಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ, ಉದ್ದಾನ ಶಿವಯೋಗಿಗಳು ದೃಷ್ಟಿ ಯೋಗದಿಂದ ಶ್ರೀಗಳನ್ನು ಅನುಗ್ರಹಿಸುವ, ಶ್ರೀಗಳು ಮಕ್ಕಳನ್ನು ಶ್ರೀ ಮಠಕ್ಕೆ ದಾಖಲು ಮಾಡಿಕೊಳ್ಳುತ್ತಿರುವ, ಮಂತ್ರ ಪೀಠದಲ್ಲಿ ಶ್ರೀಗಳು ಉದ್ಧರಣೆ ಕಾಯಕದಲ್ಲಿ ತೊಡಗಿರುವ, ಅಂಧ ಮಕ್ಕಳನ್ನು ಮಠಕ್ಕೆ ದಾಖಲಿಸಿಕೊಳ್ಳುತ್ತಿರುವ, ಅವರ ಪರಿಸರ ಹಾಗೂ ಪ್ರಾಣಿಗಳ ಮೇಲಿನ ಕಾಳಜಿಯನ್ನು ಬಿಂಬಿಸುವ ಕಲಾಕೃತಿಗಳಿವೆ. ಜೊತೆಗೆ, ಶ್ರಮಶಕ್ತಿಯ ಮಹತ್ವವನ್ನು ಸಾರುವಂತಹ, ಸ್ವತಃ ಸ್ವಾಮಿಗಳೇ ದಾಸೋಹಕ್ಕಾಗಿ ಸೌದೆ ಸೀಳುತ್ತಿರುವ ದೃಶ್ಯಗಳ ಕಲಾಕೃತಿಯು ಶ್ರೀಗಳ ವಿರಾಟ್ ಶಕ್ತಿಯ ದರ್ಶನ ಮಾಡಿಸುತ್ತದೆ.

smriti vana 3

ಸ್ಮೃತಿ ವನವು ವಿವಿಧ ಜಾತಿಯ ಹೂವುಗಳು, ಮರಗಳು ಮತ್ತು ಔಷಧೀಯ ಗಿಡಮೂಲಿಕೆಗಳ ಸಮೃದ್ಧ ತಾಣವಾಗಿದ್ದು; ಇಲ್ಲಿನ ಪ್ರಕೃತಿಯ ಸೊಬಗು ಮತ್ತು ತಂತ್ರಜ್ಞಾನದ ಸಮ್ಮಿಶ್ರಣವು ವಿಶಿಷ್ಟವಾಗಿದೆ. ಉದ್ಯಾನವನದ ಹಾದಿಗಳಲ್ಲಿ ನಡೆದಾಡುವಾಗ ಪ್ರಕೃತಿಯೊಡನೆ ಬೆರೆಯುವ ಅನುಭವವಾಗುವುದರ ಜೊತೆಗೆ, ಅಲ್ಲಲ್ಲಿ ಕಣ್ಣಿಗೆ ಕಾಣುವ ಶ್ರೀವಾಣಿ ನಮ್ಮ ಜೀವನಕ್ಕೆ ಜ್ಞಾನದ ಬೆಳಕನ್ನು ಚೆಲ್ಲುತ್ತವೆ.

ಸ್ಮೃತಿ ವನಕ್ಕೆ ಹೊಂದಿಕೊಂಡಂತೆ ಒಂದು ದೊಡ್ಡ ಕೆರೆಯಿದ್ದು, ಇದು ಉದ್ಯಾನವನದ ಸೌಂದರ್ಯವನ್ನು ಹೆಚ್ಚಿಸಿದೆ. ಈ ಕೆರೆಯು ನೀರುಕೋಳಿಗಳು ಮತ್ತು ಇತರ ಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ. ಇಲ್ಲಿನ ಪಕ್ಷಿಗಳ ಚಿಲಿಪಿಲಿ ಶಬ್ದವು ಕೇಳುಗರ ಮನಸ್ಸಿಗೆ ಮುದ ನೀಡುತ್ತದೆ. ಸಂದರ್ಶಕರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯಗಳು, ವಿಶ್ರಾಂತಿ ಶೆಲ್ಟರ್‌ಗಳು ಮತ್ತು ಆಸನಗಳ ವ್ಯವಸ್ಥೆ ಇದೆ. ಜೊತೆಗೆ, ಮಕ್ಕಳ ಮನರಂಜನೆಗಾಗಿ ಆಟಿಕೆಗಳು ಮತ್ತು ಜೋಕಾಲಿಗಳನ್ನು ಸಹ ಅಳವಡಿಸಲಾಗಿದೆ. ಈ ಉದ್ಯಾನವನವು ಪ್ರತಿದಿನ ಬೆಳಿಗ್ಗೆ 6:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಎಲ್ಲರಿಗೂ ಮುಕ್ತ ಅವಕಾಶವಿದೆ.

ಹೀಗೆ ಬನ್ನಿ:

ಸ್ಮೃತಿ ವನವು ತುಮಕೂರು ಕೇಂದ್ರ ಸ್ಥಳದಿಂದ ಸುಮಾರು 7 ಕಿ.ಮೀ ದೂರದಲ್ಲಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 63 ಕಿ.ಮೀ ದೂರದಲ್ಲಿದೆ. ರೈಲು ಅಥವಾ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತುಮಕೂರು ತಲುಪಬಹುದು. ಹತ್ತಿರದ ವಿಮಾನ ನಿಲ್ದಾಣವೆಂದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ನಡಿಗೆಯಲ್ಲೇ ಸಾಗಬಹುದಾದಷ್ಟು ಸನಿಹದಲ್ಲಿ ಕ್ಯಾತಸಂದ್ರ ರೈಲ್ವೆ ನಿಲ್ದಾಣವಿದೆ.

ಶ್ರೀಗಳವರ ಈ ಸ್ಮೃತಿ ವನವು ಪ್ರಕೃತಿ ಮತ್ತು ಅಧ್ಯಾತ್ಮಿಕತೆಯ ಸಮ್ಮಿಲನವನ್ನು ನೀಡುತ್ತದೆ. ಕುಟುಂಬದೊಡನೆ ಇಲ್ಲಿಗೆ ಭೇಟಿ ನೀಡಿ ಒಂದು ವಿಭಿನ್ನ ಅನುಭವವನ್ನು ಪಡೆಯಿರಿ.