Tuesday, June 17, 2025
Tuesday, June 17, 2025

ಪ್ರವಾಸಕ್ಕೆ ಹೋಗ್ತಿದ್ದೀರಾ ? ಪ್ರಯಾಣದ ನಡುವೆ ಆರೋಗ್ಯಕರವಾಗಿರಲು ಹೀಗೆ ಮಾಡಿ...

ನೀವು ಪ್ರವಾಸದ ಯೋಚನೆಯಲ್ಲಿದ್ದರೆ ಈ ಲೇಖನ ನಿಮಗಾಗಿ ಮಾತ್ರ. ಪ್ರಯಾಣ ಮಾಡುವಾಗ ಆರೋಗ್ಯವಾಗಿರಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಚಾರಗಳು ಇಲ್ಲಿವೆ.

ಪ್ರವಾಸಕ್ಕೆ ಹೋಗುವುದೆಂದರೆ ಎಲ್ಲರಿಗೂ ಬಹಳ ಖುಷಿಯೆನ್ನಿಸುವ ವಿಚಾರ. ವಾರಾಂತ್ಯದ ಪ್ರವಾಸ, ವಾರದ ಅಥವಾ ಅದಕ್ಕೂ ಹೆಚ್ಚಿನ ದಿನಗಳನ್ನು ಪ್ರವಾಸ ಕೈಗೊಂಡರೂ ಪೂರ್ವಸಿದ್ಧತೆ ಮಾಡಿಕೊಳ್ಳದೇ ಹೋಗುವುದು ಕಷ್ಟ. ಅದರಲ್ಲೂ ಕುಟುಂಬ ಸಮೇತವಾಗಿ ಮಕ್ಕಳ ಜೊತೆಗೆಲ್ಲ ಹೋಗುವುದೆಂದರೆ ಆರೋಗ್ಯಕರವಾಗಿರಲು ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಪ್ರವಾಸವೆಂದರೆ ಅನೇಕಬಾರಿ ಮೋಜು- ಮಸ್ತಿಯ ಜೊತೆಗೆ ವಿಶ್ರಾಂತಿಯನ್ನು ಬಯಸುವವರಿಗಾಗಿದ್ದರೆ ಮತ್ತೆ ಕೆಲವೊಮ್ಮೆ ಹೊಸ ಸ್ಥಳಗಳಿಗೆ ಭೇಟಿ ನೀಡುವುದು, ಹೊಸತನದ ಅನ್ವೇಷಣೆಯಾಗಿರುತ್ತದೆ. ಆದರೆ ಇಂತಹ ಸಂಭ್ರಮದಲ್ಲಿ ನಿಮ್ಮ ಆರೋಗ್ಯದ ಕಡೆಗೆ ಸರಿಯಾಗಿ ಗಮನಕೊಡಬೇಕಾಗುತ್ತದೆ. ಪ್ರಯಾಣ ಮಾಡುವಾಗ ಆರೋಗ್ಯವಾಗಿರಲು ನೆನಪಿಕೊಳ್ಳಬೇಕಾದ ಕೆಲವು ಮೂಲಭೂತ ಸಲಹೆಗಳು ನಿಮಗಾಗಿ.

ಪ್ರಯಾಣ ಮಾಡುವಾಗ ಆರೋಗ್ಯವಾಗಿರಲು 5 ಸಲಹೆಗಳು:

ಹೈಡ್ರೇಟೆಡ್ ಆಗಿರಿ:

ಪ್ರವಾಸವೆಂದರೆ ಪ್ರಯಾಸ ಇದ್ದೇ ಇರುತ್ತದೆ. ಪ್ರಯಾಣದಿಂದಲೋ, ಅಥವಾ ಬೇರೆ ವಾತಾವರಣಕ್ಕೆ ಹೊಂದಿಕೊಳ್ಳುವ ಸಮಸ್ಯೆಯಿಂದಲೋ ಆಯಾಸವಾಗಿಬಿಡುವುದು ಸಾಮಾನ್ಯ. ಹಾಗಾಗಿ ಆಗಾಗ ನೀರನ್ನು ಕುಡಿಯುತ್ತಿರಿ. ಇದರಿಂದ ನೀವು ಚುರುಕಿನಿಂದಲೂ ಚೈತನ್ಯಶೀಲರಾಗಿಯೂ ಇರಲು ಸಾಧ್ಯ. ಅಲ್ಲದೆ ಪ್ರಯಾಣದ ವೇಳೆ ಸಾಮಾನ್ಯವಾಗಿ ಕಾಡುವ ಕರುಳಿನ ಸಮಸ್ಯೆ, ಯೂರಿನ್‌ ಇನ್ಫೆಕ್ಷನ್‌ ನಂತಹ ಸಮಸ್ಯೆಗಳಿಂದಲೂ ಮುಕ್ತಿಹೊಂದಬಹುದು.

istock-681050056

ಸೇವಿಸುವ ಉಪಾಹಾರ ಆರೋಗ್ಯಕರವಾಗಿರಲಿ:

ದಿನದಲ್ಲಿ ನೀವು ಸೇವಿಸುವ ಮೊದಲ ಆಹಾರ ಅಂದರೆ ಉಪಾಹಾರವು ಆರೋಗ್ಯಕರವಾಗಿದ್ದರೆ ದಿನವಿಡೀ ಅದು ನಿಮ್ಮ ದೇಹಕ್ಕೆ ಶಕ್ತಿ, ಚೈತನ್ಯವನ್ನು ನೀಡುತ್ತದೆ. ಇದು ಇಡೀ ದಿನದ ಪ್ರಯಾಣ, ಪ್ರವಾಸವನ್ನು ಉಲ್ಲಾಸಭರಿತವಾಗಿಸುತ್ತದೆ. ನೀವು ಸರಿಯಾಗಿ ಉಪಹಾರ ಸೇವಿಸದೇ ಹೋದರೆ, ಇಲ್ಲವೇ ಅನಾರೋಗ್ಯಕರವಾದ ಆಹಾರ ಸೇವಿಸಿದರೆ ಇದರಿಂದ ಪ್ರವಾಸ ಮೊದಲ ಹಂತದಲ್ಲೇ ಕೈಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಬೇಗನೆ ಕೆಡದ ಆಹಾರ ಪದಾರ್ಥಗಳನ್ನು ಜೊತೆಗಿರಿಸಿಕೊಳ್ಳಿ:

ಪ್ರವಾಸ ಒಂದು ದಿನದ್ದೇ ಆಗಿರಲಿ, ಒಂದು ವಾರದ್ದೇ ಆಗಿರಲಿ, ಅದಕ್ಕೆ ತಕ್ಕಂತೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಪ್ರವಾಸದ ವೇಳೆ ಹಸಿವು ಹೆಚ್ಚಾಗಿರುವುದರಿಂದ ಭೇಟಿ ಕೊಡುವ ಸ್ಥಳಗಳಲ್ಲಿ ತಾಜಾ ಆಹಾರ ಸಿಗುವುದಾದರೆ ಸರಿ, ಇಲ್ಲವಾದರೆ ನಿಮ್ಮ ಬ್ಯಾಗ್‌ ನಲ್ಲಿ ಹಣ್ಣು, ಮನೆಯಲ್ಲಿ ತಯಾರಿಸಿದ ಕುರುಕಲು ತಿಂಡಿಗಳು, ಚಿವ್ಡಾ, ಡ್ರೈಫ್ರುಟ್ಸ್‌ ಗಳನ್ನು ಇಟ್ಟುಕೊಳ್ಳುವುದು ಉತ್ತಮ.

full-shot-smiley-women-taking-selfie-outdoors_23-2149333796

ಜಂಕ್ ಫುಡ್ ನಿಂದ ದೂರವಿರಿ:

ಆಹಾರ ಮತ್ತು ಪ್ರವಾಸಗಳು ಪರಸ್ಪರ ಪೂರಕವಾಗಿರುತ್ತವೆ. ಆದ್ದರಿಂದ ನೀವು ಆರೋಗ್ಯಕರವಾದ ಆಹಾರ ಸೇವಿಸಿ, ಜಂಕ್‌ ಫುಡ್‌ ನಿಂದ ದೂರ ಉಳಿಯುವ ಮೂಲಕ ಪ್ರವಾಸವನ್ನು ಎಂಜಾಯ್‌ ಮಾಡಬಹುದು. ಅನಾರೋಗ್ಯಕರ ಆಹಾರದಿಂದ ಹೊಟ್ಟೆ ಕೆಟ್ಟುಹೋದರೆ ಪ್ರವಾಸ ಅರ್ಧಕ್ಕೇ ನಿಂತುಬಿಡಬಹುದು.

ಸರಳವಾಗಿ ಅಡುಗೆಯನ್ನು ನೀವೇ ತಯಾರಿಸಿಕೊಳ್ಳಿ:

ಅವಕಾಶವಿದ್ದರೆ, ಪ್ರಯಾಣದ ನಡುವೆ ಬಿಡುವಿದ್ದರೆ ಸಿಂಪಲ್‌ ಆಗಿರುವ ಆಹಾರ ಪದಾರ್ಥಗಳನ್ನು ನೀವೇ ತಯಾರಿಸಿಕೊಳ್ಳಿ. ಇದು ಅನೇಕ ಬಾರಿ ಪ್ರಯಾಣದಲ್ಲಿ ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಮಾತ್ರವೇ ಅಲ್ಲದೆ, ಆರೋಗ್ಯಕರವಾದ ಆಹಾರ ಸೇವನೆಯಿಂದ ಪ್ರಯಾಣವೂ ಸುಖಕರವಾಗುವಂತೆ ಮಾಡುತ್ತದೆ.

ಪ್ರವಾಸವೇ ಇರಲಿ, ಪ್ರಯಾಣದ ನಡುವೆಯೇ ಆಗಿರಲಿ, ಆರೋಗ್ಯವಾಗಿರುವುದು ಅತೀ ಮುಖ್ಯ. ಆದ್ದರಿಂದ ಈ ಸುಲಭದ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಪ್ರಯಾಣವನ್ನು ಆರೋಗ್ಯಕರವಾಗಿ ಆನಂದಿಸಿ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!