ಪ್ರವಾಸದ ಫೋಟೋಗಳನ್ನು ಅದ್ಭುತವಾಗಿ ಸೆರೆಹಿಡಿಯಲು 8 ಸಲಹೆಗಳು
ಪೋಸ್ ಕೊಟ್ಟು ಸುಂದರವಾಗಿ ಫೋಟೋಗಳನ್ನು ತೆಗೆಯಬಹುದಾದರೂ ಅನೇಕಬಾರಿ ಕ್ಯಾಂಡಿಡ್ ಫೋಟೋಗಳು ಹೆಚ್ಚಿನ ಸ್ವಾರಸ್ಯವನ್ನು ನೀಡುತ್ತವೆ. ಆದ್ದರಿಂದ ಪ್ರಯಾಣದ ವೇಳೆ ಕ್ಯಾಂಡಿಡ್ ಫೋಟೋಗಳನ್ನು ಕ್ಲಿಕ್ಕಿಸಲು ಮರೆಯದಿರಿ.
ಪ್ರವಾಸ, ಪ್ರಯಾಣ ಎಂಬುದು ಜೀವನದಲ್ಲಿ ಸಾಕಷ್ಟು ಸುಂದರವಾದ ನೆನಪುಗಳನ್ನು ಸೃಷ್ಟಿಸುತ್ತವೆ. ಮನದೊಳಗೆ ಹಿಡಿದಿಟ್ಟುಕೊಂಡರೂ ಕಾಡುವ ಆ ನೆನಪುಗಳನ್ನು ಕಣ್ಣೆದುರು ಕಾಣುವಂತೆ ಮಾಡಬೇಕೆಂದರೆ ಅದಕ್ಕಿರುವ ಉತ್ತಮ ಮಾರ್ಗ ಅವುಗಳನ್ನು ನಿಮ್ಮ ಕ್ಯಾಮೆರಾ ಅಥವಾ ಮೊಬೈಲ್ ಕ್ಯಾಮರಾದ ಲೆನ್ಸ್ ಮೂಲಕ ಸೆರೆಹಿಡಿಯುವುದು.
ನೀವು ವೃತ್ತಿಪರ ಛಾಯಾಗ್ರಾಹಕರಾಗಿರಲಿ ಅಥವಾ ಪ್ರಯಾಣದಲ್ಲಿರುವಾಗ ನೆನಪುಗಳನ್ನು ಸೆರೆಹಿಡಿಯಲು ಇಷ್ಟಪಡುವವರೇ ಆಗಿರಲಿ, ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ನಿಮ್ಮ ಪ್ರಯಾಣದ ಫೋಟೋಗಳ ಗುಣಮಟ್ಟವನ್ನು ಹೆಚ್ಚಿಸಬಹುದು.
ನಿಮ್ಮ ಕ್ಯಾಮರಾ ಬಗ್ಗೆ ನೀವು ಚೆನ್ನಾಗಿ ತಿಳಿದುಕೊಳ್ಳಿ:
ಮೊದಲಿಗೆ ಕ್ಯಾಮರಾ ಅಥವಾ ಮೊಬೈಲ್ ಕ್ಯಾಮರಾವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಕ್ಯಾಮರಾ ಆಪ್ಶನ್ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಅಂದರೆ ಲೆನ್ಸ್ನ ಮೆಗಾಪಿಕ್ಸೆಲ್ ಎಣಿಕೆಯನ್ನು ಲೆಕ್ಕಾಚಾರ ಮಾಡಿ ಮತ್ತು ಅದು ಹೆಚ್ಚಿನ ಡೈನಾಮಿಕ್ ರೇಂಜ್ (HDR) ಅಥವಾ ಪ್ರೊ ಮೋಡ್ನಂತಹ ಆಪ್ಶನ್ಗಳು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಕೊಳ್ಳಿ. ಆಗ ಮಾತ್ರ ನೀವು ಸೆರೆ ಹಿಡಿಯುವ ಫೋಟೋಗಳ ಕ್ವಾಲಿಟಿ ಚೆನ್ನಾಗಿ ಮೂಡಿಬರಲು ಸಾಧ್ಯ.
ಗೋಲ್ಡನ್ ಅವರ್ ಅನ್ನು ಅರ್ಥಮಾಡಿಕೊಳ್ಳಿ:
ಛಾಯಾಗ್ರಾಹಕರಿಗೆ ಗೋಲ್ಡನ್ ಅವರ್ ಎಂಬುದು ವಿಶೇಷವಾದ ಸಮಯ. ಅಂದರೆ ಸೂರ್ಯೋದಯದ ನಂತರದ ಒಂದು ಗಂಟೆಯ ಅವಧಿ ಮತ್ತು ಸೂರ್ಯಾಸ್ತದ ಹಿಂದಿನ ಒಂದು ಗಂಟೆಯ ಸುವರ್ಣ ಅವಧಿಯಲ್ಲಿ ಬೆಳಕು ದಿನದ ಉಳಿದ ಸಮಯಕ್ಕಿಂತ ಹಿತವಾಗಿರುತ್ತದೆ. ಅದು ನಿಮ್ಮ ಪ್ರಯಾಣದ ಫೋಟೋಗಳನ್ನು ಮಾಂತ್ರಿಕವಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಚಿತ್ರಗಳಿಗೆ ಡೀಪ್ ಲುಕ್ ನೀಡುತ್ತದೆ.

ಮೂರನೇ ನಿಯಮವನ್ನು ತಪ್ಪದೇ ಫಾಲೋ ಮಾಡಿ:
ಪ್ರಯಾಣದ ಫೋಟೋಗಳನ್ನು ತೆಗೆದುಕೊಳ್ಳುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ತಂತ್ರವೆಂದರೆ ಮೂರನೇ ನಿಯಮವನ್ನು ಅನುಸರಿಸಬೇಕಾಗಿರುವುದು. ಇದು ನಿಮ್ಮ ಕ್ಯಾಮೆರಾ ಫ್ರೇಮ್ ಅನ್ನು ಒಂಬತ್ತು ಸಮಾನ ಭಾಗಗಳಾಗಿ ವಿಂಗಡಿಸುವಂತೆ ಮಾಡುತ್ತದೆ. ಈಗ, ನಿಮ್ಮ ಸಬ್ಜೆಕ್ಟನ್ನು ಕೇಂದ್ರದಿಂದ ಹೊರಗೆ, ಛೇದಕ ಬಿಂದುಗಳಲ್ಲಿ ಒಂದರ ಮೇಲೆ ಇರಿಸಿ. ಇದರಿಂದ, ನಿಮ್ಮ ಫೋಟೋಗಳು ಹೆಚ್ಚು ಬ್ಯಾಲೆನ್ಸ್ಡ್ ಮತ್ತು ನೋಡಲು ಆಕರ್ಷಕವಾಗಿ ಕಾಣುತ್ತದೆ. ಸಾಮಾನ್ಯವಾಗಿ ಎಲ್ಲರ ಮೊಬೈಲ್ ಫೋನ್ ಕ್ಯಾಮರಾದಲ್ಲೂ ಇಂತಹ ಆಪ್ಶನ್ ಇದ್ದೇ ಇರುತ್ತದೆ.
ವಿಭಿನ್ನ ದೃಷ್ಟಿಕೋನಗಳಲ್ಲಿ ಪ್ರಯತ್ನಿಸಿ ನೋಡಿ:
ಯಾವಾಗಲೂ ಒಂದೇ ರೀತಿಯಲ್ಲಿ ಫೋಟೋಗಳನ್ನು ತೆಗೆಯುವವರು ನೀವಾಗಿದ್ದರೆ ಅದನ್ನು ಬದಲಾಯಿಸಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿ. ನೀವು ವಿಷಯವನ್ನು ದೊಡ್ಡದಾಗಿ ಕಾಣುವಂತೆ ಮಾಡಲು ಬಯಸಿದರೆ, ಕಡಿಮೆ ಕೋನದಿಂದ ಫೋಟೋವನ್ನು ಕ್ಲಿಕ್ಕಿಸಿ, ಚಿಕ್ಕದಾಗಿ ಕಾಣುವಂತೆ ಮಾಡಲು ಬಯಸಿದರೆ, ಹೆಚ್ಚಿನ ಕೋನದಿಂದ ಫೋಟೋವನ್ನು ಕ್ಲಿಕ್ ಮಾಡಿ. ನಿಮ್ಮ ಫೋಟೋಗಳಿಗೆ ಹೊಸತನವನ್ನು ನೀಡಬೇಕೆಂದುಕೊಂಡರೆ ನೆಲದ ಮೇಲೆ ಎತ್ತರದಿಂದ ಅಥವಾ ಕೆಳಕ್ಕೆ ಚಿತ್ರೀಕರಣ ಮಾಡಲು ಪ್ರಯತ್ನಿಸಿ.
ಕ್ಯಾಂಡಿಡ್ ಕ್ಷಣಗಳನ್ನು ಸೆರೆಹಿಡಿಯಿರಿ:
ಪೋಸ್ ಕೊಟ್ಟು ಸುಂದರವಾಗಿ ಫೋಟೋಗಳನ್ನು ತೆಗೆಯಬಹುದಾದರೂ ಅನೇಕಬಾರಿ ಕ್ಯಾಂಡಿಡ್ ಫೋಟೋಗಳು ಹೆಚ್ಚಿನ ಸ್ವಾರಸ್ಯವನ್ನು ನೀಡುತ್ತವೆ. ಹೆಚ್ಚು ಆಕರ್ಷಕ ಕಥೆಯನ್ನು ಹೇಳುತ್ತವೆ. ಆದ್ದರಿಂದ ಪ್ರಯಾಣದ ವೇಳೆ ಕ್ಯಾಂಡಿಡ್ ಫೋಟೋಗಳನ್ನು ಕ್ಲಿಕ್ಕಿಸಲು ಯಾವುದೇ ವೇಳೆ ಕ್ಯಾಮರಾ ಆನ್ ಇರುವಂತೆ ನೋಡಿಕೊಳ್ಳಿ.

ಬೆಳಕು ಮತ್ತು ನೆರಳುಗಳೊಂದಿಗೆ ಆಟವಾಡಿ:
ಬೆಳಕು ಮತ್ತು ನೆರಳುಗಳು ನಿಮ್ಮ ಪ್ರಯಾಣದ ಫೋಟೋಗಳಲ್ಲಿ ಸಾಕಷ್ಟು ಪರಿಣಾಮಗಳನ್ನು ಉಂಟು ಮಾಡುತ್ತವೆ. ಬೆಳಕು ಮತ್ತು ನೆರಳುಗಳ ನಡುವಿನ ವ್ಯತಿರಿಕ್ತತೆಯೊಂದಿಗೆ ಆಟವಾಡಲು ಮುಂಜಾನೆ ಅಥವಾ ಮಧ್ಯಾಹ್ನ ಸೂಕ್ತ ಸಮಯ.
ಜೂಮ್ ಇನ್ ಮಾಡಬೇಡಿ:
ಅನೇಕರು ಪ್ರಯಾಣದ ಫೋಟೋಗಳನ್ನು ತೆಗೆಯುವಾಗ ಜೂಮ್ ಇನ್ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಫೋಟೋ ಕ್ವಾಲಿಟಿ ಕೆಡುತ್ತದೆ. ಇದಕ್ಕೆ ಬದಲಾಗಿ ಲೆನ್ಸ್ ಫೋಕಸ್ ಝೂಮ್ ಔಟ್ ಮಾಡಿಕೊಂಡು ಫೋಟೋ ಸಬ್ಜೆಕ್ಟ್ ಸಮೀಪ ತೆರಳಿ ಫೋಟೋ ಕ್ಲಿಕ್ಕಿಸಿಕೊಳ್ಳಿ. ಕ್ವಾಲಿಟಿಯಲ್ಲಿ ರಾಜಿಮಾಡುವ ಅಗತ್ಯ ಬರುವುದಿಲ್ಲ.
ಅಗತ್ಯವಿರುವ ಎಡಿಟಿಂಗ್ ಮಾಡಿಕೊಳ್ಳಿ:
ಫೋಟೋವನ್ನು ಯಥಾವತ್ತಾಗಿ ಬಳಸಿಕೊಳ್ಳುವ ಬದಲು ಎಡಿಟಿಂಗ್ ಸಾಫ್ಟ್ ವೇರ್ ಬಳಸಿ ಅಗತ್ಯವಿರುವ ಸಣ್ಣಪುಟ್ಟ ಎಡಿಟಿಂಗ್ ಮಾಡಿಕೊಳ್ಳಿ. ಕಲರ್ ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳುವುದು, ಅನಗತ್ಯ ಸ್ಪೇಸಿಂಗ್ಗೆ ಕತ್ತರಿ ಹಾಕುವುದಕ್ಕೆ ಹೀಗೆ ಎಡಿಟಿಂಗ್ ಮಾಡಿಕೊಂಡರೆ ಫೋಟೋ ಇನ್ನಷ್ಟು ಸುಂದರವಾಗಿ ಕಾಣಿಸಿಕೊಳ್ಳುತ್ತದೆ.
ಪ್ರಯಾಣದ ಫೋಟೋಗಳನ್ನು ಸೆರೆಹಿಡಿಯುವುದು ಅಂದುಕೊಂಡಷ್ಟು ಕಷ್ಟವಲ್ಲ. ಈ ಸುಲಭ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಫೋಟೋಗಳನ್ನು ಅಚ್ಚುಕಟ್ಟಾಗಿ ಕ್ಲಿಕ್ಕಿಸುವುದು ಮಾತ್ರವಲ್ಲದೆ ಸುಂದರ ನೆನಪುಗಳನ್ನು ಹೊತ್ತು ಮುನ್ನಡೆಯಬಹುದು.