ರಾತ್ರಿಯಾಗುತ್ತಲೇ ವಜ್ರಗಳಂತೆ ಹೊಳೆಯುವ ಬೀಚ್..!
ಸಾಮಾನ್ಯವಾಗಿ ಕಡಲ ತೀರವನ್ನು ಮೆಚ್ಚಿಕೊಳ್ಳದವರು ಯಾರೂ ಇಲ್ಲ. ತಣ್ಣಯ ಗಾಳಿಯಲ್ಲಿ ಮರಳಿನ ಮೇಲೆ ಕುಳಿತು, ಅಲೆಗಳನ್ನು ನೋಡುತ್ತಾ ಕಳೆದುಹೋಗಿಬಿಡುವವರೇ ಎಲ್ಲರೂ. ಆದರೆ ಬೀಚ್ ಪ್ರಿಯರಾದ ನೀವು, ವಿಶೇಷವಾದ ಡೈಮಂಡ್ ಬೀಚ್ ಬಗ್ಗೆ ಕೇಳಿದ್ದೀರಾ..?
ಸಮಯ ಸಿಕ್ಕಾಗಲೆಲ್ಲಾ ಕಡಲ ತೀರವನ್ನು ಆರಸಿ ಹೋಗುವವರು ನೀವಾದರೆ ಈ ಸುದ್ದಿ ನಿಮಗೆ ಆಪ್ತವಾದೀತು. ಹೌದು, ಸಾಮಾನ್ಯವಾಗಿ ನೀವು ಸಮುದ್ರ ತೀರಕ್ಕೆ ಹೋದರೆ ಬಿಳಿ ಮರಳು, ಚಿಪ್ಪುಗಳು ಮತ್ತು ನಕ್ಷತ್ರ ಮೀನುಗಳನ್ನು ಕಣ್ತುಂಬಿಕೊಂಡಿರಬಹುದು. ಆದರೆ ಕಪ್ಪು ಮರಳು..ಹೊಳೆಯುವ ಡೈಮಂಡ್ ನಂತೆ ಕಾಣುವ ಮಂಜಿನ ಗಡ್ಡೆಗಳನ್ನು ನೋಡುವ ಅವಕಾಶ ಎಂದಾದರೂ ನಿಮಗಾಗಿದೆಯಾ..? ಜಗತ್ತಿನ ಡೈಮಂಡ್ ಬೀಚ್ ಬಗ್ಗೆ ನೀವು ತಿಳಿಯಲೇ ಬೇಕಿರುವ ವಿಚಾರ ಇಲ್ಲಿದೆ.

ಡೈಮಂಡ್ ಬೀಚ್ ಎಲ್ಲಿದೆ ?
ಯುರೋಪ್ ನ ಒಂದು ದ್ವೀಪ ರಾಷ್ಟ್ರವಾಗಿರುವ ಐಸ್ಲ್ಯಾಂಡ್, ಸೂರ್ಯ ಮುಳುಗದ ದೇಶ ಎಂದೇ ಖ್ಯಾತಿ ಹೊಂದಿದೆ. ಐಸ್‌ಲ್ಯಾಂಡ್‌ನ ದಕ್ಷಿಣ ಕರಾವಳಿಯಲ್ಲಿ, ಜೊಕುಲ್ಸಾರ್ಲೋನ್ ಗ್ಲೇಸಿಯರ್ ಲಗೂನ್‌ನ ಪಕ್ಕದಲ್ಲೇ ಡೈಮಂಡ್ ಬೀಚ್ ಇದೆ. ಇದರ ನಿಜವಾದ ಹೆಸರು ಫೆಲ್ಸ್ಫ್ಜಾರಾ ಎಂಬುದಾಗಿದ್ದರೂ ಪ್ರಪಂಚದಾದ್ಯಂತ ಡೈಮಂಡ್ ಬೀಚ್ ಎಂಬುದಾಗಿಯೇ ಹೆಸರುವಾಸಿಯಾಗಿದೆ.
ಸಾಮಾನ್ಯವಾಗಿ ಕಡಲತೀರಗಳಲ್ಲಿ ಸ್ಫಟಿಕ ಸ್ಪಷ್ಟವಾದ ನೀರನ್ನು ನೀವೆಲ್ಲರೂ ನೋಡಿರಬಹುದು, ಆದರೆ ಐಸ್ಲ್ಯಾಂಡ್‌ನ ಈ ವಿಶೇಷ ಕಡಲತೀರದಲ್ಲಿ, ನೀವು ಕಪ್ಪು ಮರಳನ್ನು ನೋಡಬಹುದು. ಅದು ಹೊಳೆಯುವ ಮಂಜುಗಡ್ಡೆಯಿಂದ ಆವೃತವಾಗಿದೆ. ಇವು ದೈತ್ಯ ಹಿಮನದಿಯ ತುಣುಕುಗಳಾಗಿದ್ದು, ಅವು ಒಡೆದು, ಕರಗಿ ಲಗೂನ್‌ಗೆ ಹರಿಯುತ್ತದೆ. ಅದರ ನಡುವೆ ಕಪ್ಪು ಮರಳಿನ ಮೇಲೆ ಬಿದ್ದು, ವಜ್ರಗಳಂತೆ ಹೊಳೆಯುತ್ತವೆ. ಈ ಕಾರಣಕ್ಕೆ ಡೈಮೆಂಡ್ ಬೀಚ್ ಎಂಬ ಖ್ಯಾತಿಯನ್ನು ಇದು ಪಡೆದುಕೊಂಡಿದೆ.

ಡೈಮಂಡ್ ಬೀಚ್‌ಗೆ ಹೋಗುವ ಮುನ್ನ ಹೀಗೆ ಮಾಡಿ:
ಐಸ್ಲ್ಯಾಂಡ್‌ನ ಡೈಮಂಡ್ ಬೀಚ್‌ಗೆ ಹೋಗುವುದಾದರೆ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯ ಬಹಳ ಉತ್ತಮ ಆಯ್ಕೆ.
ಬೆಚ್ಚಗಿನ ಬಟ್ಟೆಗಳನ್ನು ತೊಟ್ಟುಕೊಳ್ಳಿ. ಕಡಲತೀರವನ್ನು ತಲುಪಲು ನೀವು ಕಲ್ಲಿನ ಹಾದಿಯಲ್ಲಿ ನಡೆಯಬೇಕಾಗಿರುವುದರಿಂದ ಆರಾಮದಾಯಕ ಬೂಟುಗಳನ್ನು ಧರಿಸಿ.
ಸುಂದರವಾದ ದೃಶ್ಯಗಳನ್ನು ಸೆರೆಹಿಡಿಯಲು ಬಯಸುವವರಾದರೆ ಕ್ಯಾಮರಾವನ್ನು ಕೊಂಡೊಯ್ಯಲು ಮರೆಯದಿರಿ.
ಡೈಮಂಡ್ ಬೀಚ್‌ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಯಸಿದರೆ ನೀವು ವರ್ಷದ ಯಾವುದೇ ತಿಂಗಳಲ್ಲೂ ಅಲ್ಲಿಗೆ ಭೇಟಿ ನೀಡಬಹುದು. ಆದರೂ ಐಸ್ಲ್ಯಾಂಡ್ ಬೇಸಿಗೆಯಲ್ಲಿ ದೀರ್ಘ ಹಗಲು ಸಮಯವನ್ನು ಹೊಂದಿರುವುದರಿಂದ ಈ ಸಮಯ ಭೇಟಿ ನೀಡಲು ಯೋಗ್ಯವಾಗಿದೆ. ಇದರ ಜೊತೆಗೆ, ಚಳಿಗಾಲದಲ್ಲಿಯೂ ಈ ಸ್ಥಳಕ್ಕೆ ತೆರಳುವ ಮೂಲಕ ವಿಭಿನ್ನ ಅನುಭವವನ್ನು ನಿಮ್ಮದಾಗಿಸಿಕೊಳ್ಳಬಹುದು.

ಡೈಮಂಡ್ ಬೀಚ್ ತಲುಪುವುದು ಹೇಗೆ?
ಐಸ್ಲ್ಯಾಂಡ್‌ಗೆ ಹತ್ತಿರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ರೇಕ್‌ಜಾವಿಕ್‌ನಲ್ಲಿರುವ ಕೆಫ್ಲಾವಿಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KEF). ಕತಾರ್ ಏರ್‌ವೇಸ್, ಎಮಿರೇಟ್ಸ್ ಅಥವಾ ಟರ್ಕಿಶ್ ಏರ್‌ಲೈನ್ಸ್‌ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳ ವಿಮಾನಗಳ ಮೂಲಕ ಬೆಂಗಳೂರಿನಿಂದ ರೇಕ್‌ಜಾವಿಕ್‌ಗೆ ತಲುಪಬಹುದು.
ರೇಕ್‌ಜಾವಿಕ್‌ಗೆ ತಲುಪಿದ ನಂತರ, ಅಲ್ಲಿಂದ ಡೈಮಂಡ್ ಬೀಚ್ ತಲುಪಲು 370 ಕಿಮೀ ಕ್ರಮಿಸಬೇಕಾಗಿದ್ದು, ಸುಮಾರು ಸುಮಾರು 5-6 ಗಂಟೆಗಳ ಪ್ರಯಾಣ ಬೇಕಾಗುತ್ತದೆ. ಅದರಕ್ಕಾಗಿ ನೀವು ಕಾರನ್ನು ಬಾಡಿಗೆಗೆ ಪಡೆಯಬಹುದು, ಅಥವಾ ಬಸ್ ವ್ಯವಸ್ಥೆಯನ್ನೂ ಅವಲಂಭಿಸಬಹುದು.