ಇಲ್ಲಿರುವುದು ಎಪ್ಪತ್ತು ಅಡಿ ಎತ್ತರದ ಜಟಾಯು!
ರೋಲರ್-ಕಾಂಪ್ಯಾಕ್ಟೆಡ್ ಕಾಂಕ್ರೀಟ್ ಅಥವಾ ಆರ್ಸಿಸಿಯಿಂದ ಇದನ್ನು ಮಾಡಲಾಗಿದೆ. ಈ ಹಕ್ಕಿಯ ಉಗುರನ್ನು ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಲಾಗಿದೆ. ಈ ಪಕ್ಷಿಯ ಪ್ರತಿಮೆ ಬರೋಬ್ಬರಿ 70 ಅಡಿ ಎತ್ತರ ಹಾಗೂ 200 ಮೀಟರ್ ಉದ್ದ, 150 ಮೀಟರ್ ಅಗಲ ಇದೆ.
- ರಾಧಾಕೃಷ್ಣ .ಟಿ
ರಾಮಾಯಣದಲ್ಲಿ ಬರೋ ಜಟಾಯು ಹಕ್ಕಿ ಬಗ್ಗೆ ಕೇಳಿಯೇ ಇರುತ್ತೀರಿ. ಆ ಹಕ್ಕಿ ಒಂದು ರೀತಿಯ ಸೈನಿಕನ ತರಹ. ರಾಮ ಹಾಗೂ ಸೀತೆ ವನವಾಸದಲ್ಲಿ ಇರುವಾಗ ರಾವಣನು ಸೀತೆಯನ್ನು ಮೋಸದಿಂದ ಎಳೆದೊಯ್ಯುತ್ತಾನೆ. ರಾವಣ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಕರೆದುಕೊಂಡು ಹೋಗುವಾಗ ಇದನ್ನು ಜಟಾಯು ಪಕ್ಷಿ ತಡೆಯಲು ಪ್ರಯತ್ನಿಸುತ್ತದೆ, ರಾವಣನ ವಿರುದ್ಧ ಹೋರಾಡುತ್ತದೆ. ಆದರೆ, ರಾವಣನ ರಕ್ಕಸ ತನಕ್ಕೆ ಪಕ್ಷಿ ಅಸುನೀಗುತ್ತದೆ. ರಾಮನು ಜಟಾಯುವಿನ ತ್ಯಾಗವನ್ನು ಮೆಚ್ಚುತ್ತಾನೆ. ಇದರ ಗೌರವಾರ್ಥವಾಗಿ ಜಟಾಯು ಸತ್ತ ಜಾಗದಲ್ಲಿ ದೊಡ್ಡ ಜಟಾಯುವಿನ ಸ್ಟ್ಯಾಚ್ಯೂ ಮಾಡಲಾಗಿದೆ. ಈ ಕಾರಣದಿಂದ ಈ ಜಾಗವು ಪ್ರವಾಸಿ ಸ್ಥಳದ ಜೊತೆಗೆ ಪೌರಾಣಿಕ ಮಹತ್ವ ಕೂಡ ಹೊಂದಿದೆ.
ಕೇರಳದ ಚಡಯಮಂಗಳಂ ಭಾಗದಲ್ಲಿರುವ ದಟ್ಟ ಕಾಡುಗಳ ಮಧ್ಯೆ ಕಲ್ಲಿನ ಬೆಟ್ಟವಿದೆ. ಇಲ್ಲಿ ಜಟಾಯು ಅರ್ಥ್ಸ್ ಸೆಂಟರ್ ನಿರ್ಮಾಣ ಮಾಡಲಾಗಿದೆ. ಇದು ಕೇವಲ ಪ್ರವಾಸಿ ತಾಣವಾಗಿ ಉಳಿದಿಲ್ಲ. ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಭಾರತೀಯ ಪುರಾಣ ಮತ್ತು ಸಂಸ್ಕೃತಿ, ಮಹತ್ವಾಕಾಂಕ್ಷೆಯನ್ನು ಸಾರುವುದು ಇದರ ನಿರ್ಮಾಣದ ಮುಖ್ಯ ಉದ್ದೇಶ. ದೊಡ್ಡದಾದ ಕಲ್ಲು ಬಂಡೆಯ ಮೇಲೆ ಜಟಾಯು ಅರ್ಥ್ ಸೆಂಟರ್ ನಿರ್ಮಾಣ ಆಗಿದೆ. ಒಮ್ಮೆ ನೋಡಿದರೆ ನಿಜವಾಗಲೂ ಜಟಾಯು ಪಕ್ಷಿ ಇಲ್ಲಿ ಮಲಗಿದೆಯೇ ಎಂಬಂಥ ಭಾವನೆ ನಿಮಗೆ ಮೂಡುತ್ತದೆ.

ತಲುಪೋದು ಹೇಗೆ?
ಈ ಭಾಗಕ್ಕೆ ರಸ್ತೆ, ರೈಲ್ವೆ ಹಾಗೂ ವಿಮಾನದ ಮೂಲಕ ತೆರಳಬಹುದು. ಜಟಾಯು ಅರ್ಥ್ ಸೆಂಟರ್ಗೆ ಸಮೀಪದ ವಿಮಾನ ನಿಲ್ದಾಣ ಎಂದರೆ ಅದು ತಿರುವನಂತಪುರ. ಇಲ್ಲಿಂದ ಕೇವಲ 51 ಕಿ.ಮೀ ದೂರ ಸಾಗಿದರೆ ಈ ಜಾಗ ಸಿಗುತ್ತದೆ. ಕೊಲ್ಲಂ, ಪರವೂರು ಭಾಗದಲ್ಲಿ ರೈ ಮಾರ್ಗವಿದ್ದು ಇದ್ದು, ಅಲ್ಲಿಗೆ ಬಂದರೆ ಆ ಬಳಿಕ ಖಾಸಗಿ ವಾಹನದ ಮೂಲಕ ಇಲ್ಲಿಗೆ ತೆರಳಬಹುದು. ಕೊಲ್ಲಂ, ವರ್ಕಲಾ, ಕೊಟ್ಟರಾಕ್ಕಾರ ಭಾಗಕ್ಕೆ ಬಸ್ ಸಂಪರ್ಕ ಇದ್ದು, ಇದು ಈ ತಾಣಕ್ಕೆ ಹತ್ತಿರವಾಗಿದೆ.
ಗಿನ್ನಿಸ್ ರೆಕಾರ್ಡ್..
ಜಟಾಯು ಅರ್ಥ್ ಸೆಂಟರ್ ಹೆಸರಲ್ಲಿ ಗಿನ್ನಿಸ್ ರೆಕಾರ್ಡ್ ಇದೆ. ಇದು ವಿಶ್ವದ ಅತಿದೊಡ್ಡ ಪಕ್ಷಿ ಶಿಲೆ ಎಂಬ ಕಾರಣಕ್ಕೆ ಈ ದಾಖಲೆಯು ಇದರ ಹೆಸರಿನಲ್ಲಿ ಇದೆ. ರೋಲರ್-ಕಾಂಪ್ಯಾಕ್ಟೆಡ್ ಕಾಂಕ್ರೀಟ್ ಅಥವಾ ಆರ್ಸಿಸಿಯಿಂದ ಇದನ್ನು ಮಾಡಲಾಗಿದೆ. ಈ ಹಕ್ಕಿಯ ಉಗುರನ್ನು ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಲಾಗಿದೆ. ಈ ಪಕ್ಷಿಯ ಪ್ರತಿಮೆ ಬರೋಬ್ಬರಿ 70 ಅಡಿ ಎತ್ತರ ಹಾಗೂ 200 ಮೀಟರ್ ಉದ್ದ, 150 ಮೀಟರ್ ಅಗಲ ಇದೆ.

ವಿವಿಧ ಆಟ
ಇಲ್ಲಿಗೆ ಬಂದರೆ ನೀವು ಕೇವಲ ಜಟಾಯುವನ್ನು ನೋಡಿ ಹೋಗೋದು ಮಾತ್ರವಲ್ಲ, ವಿವಿಧ ಮನರಂಜನೆಗೂ ಇಲ್ಲಿ ಅವಕಾಶ ಇದೆ. ಕಲ್ಲು ಬಂಡೆ ಏರುವ ಅಡ್ವೆಂಚರ್ ಗೇಮ್ ಇದೆ. ಜಿಪ್ ಲೈನಿಂಗ್ ಕೂಡ ಇಡಲಾಗಿದೆ. ಈ ಭಾಗದಲ್ಲಿ ವಾಕ್ ಮಾಡಲು ವಿಶೇಷ ಜಾಗ ಇದೆ. ಕೇರಳದ ಸಂಸ್ಕೃತಿಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಭಾಗದಲ್ಲಿ ನಡೆಯುತ್ತವೆ.
ಅಯೋಧ್ಯೆಯಲ್ಲೂ ಇದೆ ಜಟಾಯು ಪಕ್ಷಿ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಿದೆ. ವಿಶೇಷ ಎಂದರೆ ಈ ಭಾಗದಲ್ಲಿ 3.5 ಟನ್ ಜಟಾಯುವಿನ ಪ್ರತಿಮೆ ಮಾಡಲಾಗಿದೆ. ಈ ಪ್ರತಿಮೆಯನ್ನು ತಯಾರಿಸಲು ಮೂರು ತಿಂಗಳು ಬೇಕಾಯಿತು. ಇದರಲ್ಲಿ ಎರಡು ತಿಂಗಳ ವ್ಯಾಪಕ ಸಂಶೋಧನೆ ನಡೆದಿದೆ. ಖ್ಯಾತ ಕಲಾವಿದ ರಾಮ್ ಸುತಾರ್ ಈ ಪ್ರತಿಮೆಯನ್ನು ಕೆತ್ತಿದ್ದು, ಇದು 20 ಅಡಿ ಎತ್ತರ, 8 ಅಡಿ ಉದ್ದ ಮತ್ತು 8 ಅಡಿ ಅಗಲ ಇದೆ.