- ಅನಿಲ್ ಹೆಚ್.ಟಿ.

ಭಾರತದ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರವಾಗಿ, ವಿದೇಶಗಳಿಂದಲೂ ಭಕ್ತರ ಭೇಟಿಗೆ ಕಾರಣವಾಗಿರುವ ಅಯೋಧ್ಯೆಯಲ್ಲಿನ ಶ್ರೀರಾಮಮಂದಿರ ಇದೀಗ ಮತ್ತೊಂದು ಹಂತದ ಆಕರ್ಷಣೆಗೆ ಸಜ್ಜುಗೊಂಡಿದೆ. ರಾಮಮಂದಿರ ಲೋಕಾರ್ಪಣೆಯಾಗಿ ಒಂದು ಮುಕ್ಕಾಲು ವರ್ಷಗಳ ಬಳಿಕ ಇದೀಗ ಮತ್ತಷ್ಟು ಆಕರ್ಷಣೆಗಳೊಂದಿಗೆ ರಾಮನಗರಿ ಭಕ್ತ ಸಂದರ್ಶಕರನ್ನು ಸೆಳೆಯಲಿದೆ.

ಅಯೋಧ್ಯೆಯಲ್ಲಿ ಪವಡಿಸಿರುವ ಶ್ರೀರಾಮನ ಭವ್ಯ ಮಂದಿರದ ನಿರ್ಮಾಣ ಸಂಪೂರ್ಣ ರೀತಿಯಲ್ಲಿ ಮುಕ್ತಾಯವಾಗಿದ್ದು, ಇದೀಗ ಶ್ರೀ ರಾಮಮಂದಿರ ಮೂಲಯೋಜನೆಯಂತೆ ಭಕ್ತರನ್ನು ಮನಮೋಹಕವಾದ ವಾಸ್ತುಶೈಲಿಯಿಂದ ಸೆಳೆಯಲು ಸಜ್ಜಾಗಿದೆ.

ಕಳೆದ ವರ್ಷದ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಭಕ್ತರ ದರ್ಶನಕ್ಕೆ ವಿಧ್ಯುಕ್ತವಾಗಿ ತೆರೆಯಲ್ಪಟ್ಟಿದ್ದರೂ ಶ್ರೀರಾಮಮಂದಿರಕ್ಕೆ ಸಂಬಂಧಿಸಿದ ಅನೇಕ ಕಟ್ಟಡ ಕೆಲಸಗಳು ಬಾಕಿ ಉಳಿದಿದ್ದವು. 2025ರ ವರ್ಷಾಂತ್ಯದೊಳಗಾಗಿ ಈ ಎಲ್ಲಾ ಕೆಲಸಗಳನ್ನು ಮುಗಿಸಿ ಸಂಪೂರ್ಣ ರೀತಿಯಲ್ಲಿ ರಾಮಲಲ್ಲಾ ದರ್ಶನಕ್ಕೆ ಅನುವು ಮಾಡಿಕೊಡುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಮೊದಲೇ ಘೋಷಿಸಿತ್ತು. ಅಂದುಕೊಂಡಂತೆ, ನಿಗದಿತ ಸಮಯಕ್ಕೆ ಮುನ್ನವೇ ಇದೀಗ ಶ್ರೀರಾಮಮಂದಿರದ ಎಲ್ಲಾ ಕೆಲಸಗಳು ಅಂತ್ಯಗೊಂಡಿದ್ದು, ನವೆಂಬರ್ 25ರಂದು ಪ್ರಧಾನಿ ನರೇಂದ್ರಮೋದಿಯವರು ಮುಖ್ಯ ದೇವಾಲಯದ ಮೇಲ್ಬದಿ ಧರ್ಮಧ್ವಜ ಹಾರಿಸುವ ಮೂಲಕ ದೇವಾಲಯ ಸಂಕೀರ್ಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭ ದೇಶವಿದೇಶಗಳಿಂದ 6-8 ಸಾವಿರ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಎಲ್ಲಾ ದೇವಾಲಯಗಳಲ್ಲಿಯೂ ಅಂದು ಸಂಪ್ರದಾಯದಂತೆ ಪೂಜೆ, ಹವನಗಳನ್ನು ನಡೆಸಲಾಗುತ್ತದೆ ಎಂದು ಟ್ರಸ್ಟ್‌ನ ಅಧ್ಯಕ್ಷ ನೃಪೇಂದ್ರ ಮಿಶ್ರ ಮಾಹಿತಿ ನೀಡಿದ್ದಾರೆ.

Bala rama

ಅತ್ಯಂತ ಸಂತಸದಿಂದ ಶ್ರೀರಾಮನ ಭಕ್ತರಿಗೆ ತಿಳಿಸುವುದೇನೆಂದರೆ, ಶ್ರೀರಾಮ ಮಂದಿರದ ಎಲ್ಲಾ ಕೆಲಸಗಳು ಮುಕ್ತಾಯಗೊಂಡಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕೃತವಾಗಿ ಘೋಷಿಸಿದೆ. ದೇವಾಲಯಕ್ಕೆ ಸಂಬಂಧಿಸಿದಂತೆ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ 3.50 ಕಿ.ಮೀ. ಮಾರ್ಗದ ಇಕ್ಕೆಲಗಳಲ್ಲಿ ಸುಸಜ್ಜಿತ ಗೋಡೆ ನಿರ್ಮಾಣ, ಅತಿಥಿಗೖಹ ಸಭಾಂಗಣ ಮುಂತಾದ ದೇವಾಲಯ ಸಂಕೀರ್ಣದಿಂದ ಹೊರಗಡೆ ಆಗಬೇಕಾಗಿರುವ ಕೆಲವೊಂದು ಯೋಜನಾ ಕಾಮಗಾರಿಗಳು ಮಾತ್ರ ಬಾಕಿ ಉಳಿದಿದೆ.

ವಿಶೇಷತೆಗಳೇನು?

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಬಾಲ ಶ್ರೀರಾಮನ ಶಿಲಾಮೂರ್ತಿಯಿರುವ ದೇವಾಲಯ ಕಳೆದ ವರ್ಷದ ಜನವರಿಯಿಂದ ಭಕ್ತರ ದರ್ಶನಕ್ಕೆ ಲಭ್ಯವಿತ್ತು. ಇದೀಗ ಶಿವ, ಗಣೇಶ, ಆಂಜನೇಯ, ಸಹದೇವ ಭಗವತಿ, ಅನ್ನಪೂರ್ಣ ಮತ್ತು ಶೇಷಾವತಾರ ದೇವಾಲಯಗಳ ಕಾಮಗಾರಿಗಳು ಮುಕ್ತಾಯಗೊಂಡಿದ್ದು ಈ ಆಲಯಗಳಲ್ಲಿ ದೇವರ ದರ್ಶನವನ್ನು ನವೆಂಬರ್ 25ರಿಂದ ಭಕ್ತಾದಿಗಳು ಮಾಡಬಹುದಾಗಿದೆ.

ಈ ಏಳೂ ದೇವಾಲಯಗಳ ಮೇಲೆ ಕಳಶ, ಧ್ವಜಸ್ತಂಭ ನಿರ್ಮಾಣ ಮಾಡಲಾಗಿದೆ. ಅಂತೆಯೇ ದೇವಾಲಯಗಳ ಸಂಕೀರ್ಣದಲ್ಲಿ ಅತ್ಯಾಕರ್ಷಕ ರೀತಿಯಲ್ಲಿ ಆಯಾ ದೇವಾಲಯಗಳ ಮುಂಬದಿ 7 ಮಂಟಪಗಳೂ ನಿರ್ಮಾಣಗೊಂಡಿದೆ. ಮಹರ್ಷಿ ವಾಲ್ಮೀಕಿ, ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದ್ ರಾಜ್, ಶಬರಿ, ಋಷಿ ಮುನಿಯ ಪತ್ನಿ ಅಹಲ್ಯಾ ಅವರ ಹೆಸರನ್ನೇ ಈ ಸಪ್ತ ಮಂಟಪಗಳಿಗೆ ಇಡಲಾಗಿದೆ. ಉದ್ದೇಶಿತ ಕಾಮಗಾರಿಗಳು ಮುಕ್ತಾಯವಾಗಿದ್ದು, ಇದರಿಂದಾಗಿ ರಾಮನ ಪರಿವಾರದ ಆಕರ್ಷಕ ಮೂರ್ತಿಗಳನ್ನು ಮುಖ್ಯ ದೇವಾಲಯದ ಮೊದಲ ಮಹಡಿಯಲ್ಲಿ ಕಾಣಬಹುದಾಗಿದೆ. ನೃತ್ಯಮಂಟಪ, ರಂಗಮಂಟಪ, ಸಭಾಮಂಟಪ, ಪ್ರಾರ್ಥನಾ ಮಂಟಪ, ಕೀರ್ತನಾ ಮಂಟಪ ಎಂಬ 5 ಮಂಟಪಗಳನ್ನು ರೂಪಿಸಲಾಗಿದೆ. ಇವುಗಳ ಹೖದಯಭಾಗದಲ್ಲಿಯೇ ಶ್ರೀರಾಮನ ಆಸ್ಥಾನ ರೂಪುಗೊಂಡಿದ್ದು, ಶ್ರೀರಾಮ ಸೀತೆ, ಲಕ್ಷ್ಮಣ, ಹನುಮಂತ, ಶತ್ರುಘ್ನ, ಭರತನ ಮೂರ್ತಿಗಳನ್ನು ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ಶ್ರೀರಾಮ, ಸೀತೆ ಚಿನ್ನದಿಂದ ನಿರ್ಮಿಸಲ್ಪಟ್ಟ ಅತ್ಯಾಕರ್ಷಕ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದರೆ, ಹನುಮಂತ, ಭರತ ಇವರ ಪಾದದ ಕೆಳಗಡೆ ಭಕ್ತಪೂರ್ವಕ ಭಾವದೊಂದಿಗೆ ಆಸೀನರಾಗಿದ್ದಾರೆ. ಲಕ್ಷ್ಮಣ ಹಾಗೂ ಶತ್ರುಘ್ನರು ರಾಮಸೀತೆಯರ ಹಿಂದೆ ವಿಧೇಯರಾಗಿ ನಿಂತಿದ್ದಾರೆ. ಇದೊಂದೇ ಮಹಡಿಯಲ್ಲಿ 140 ಶಿಲೆಗಳಿಂದ ಕಂಬಗಳನ್ನು ಕೆತ್ತಲಾಗಿದೆ. ರಾಮಾಯಣದ ವಿವಿಧ ಪ್ರಸಂಗಗಳ ಚಿತ್ರಗಳನ್ನು ಈ ಕಂಬಗಳ ಮೇಲೆ ಕಾಣಬಹುದಾಗಿದೆ. ಅಪರೂಪದ ಶಿಲೆಗಳನ್ನು ಬಳಸಿ ಮೊದಲ ಮಹಡಿಯಲ್ಲಿ ಶ್ರೀರಾಮಪರಿವಾರವನ್ನು ಹೖದಯಂಗಮವಾಗಿ ರೂಪಿಸಲಾಗಿದೆ.

ayodhya ram mandir (1)

ಹೀಗಿದ್ದರೂ, ಈ ಅಂತಸ್ತಿಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೇ ಅಥವಾ ಹೊರಬದಿಯಿಂದ ಅನತಿ ದೂರದಿಂದಲೇ ಈ ಸಭಾಂಗಣದ ವೀಕ್ಷಣೆ ಮಾಡಬೇಕೆ ಎಂಬ ಪ್ರಶ್ನೆಗೆ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇನ್ನಷ್ಟೇ ಉತ್ತರ ಕೊಡಬೇಕಾಗಿದೆ.

ಅಂತೆಯೇ ಪ್ರತ್ಯೇಕ ಜಾಗದಲ್ಲಿ ಸಂತಶ್ರೇಷ್ಠ ತುಳಸಿ ದಾಸ್ ಅವರ ದೇವಾಲಯ ಕೂಡ ನಿರ್ಮಾಣವಾಗಿದೆ. ಜಟಾಯು ಮತ್ತು ರಾಮಸೇವಕ ಖ್ಯಾತಿಯ ಅಳಿಲಿನ ಬೃಹತ್ ಮೂರ್ತಿಯೂ ಶ್ರೀರಾಮಮಂದಿರ ಸಂಕೀರ್ಣದಲ್ಲಿ ಕಂಗೊಳಿಸಲಿದೆ.

ದೇಶದ ಪ್ರತಿಷ್ಠಿತ ಕಾಮಗಾರಿ ಸಂಸ್ಥೆಯಾದ ಲಾರ್ಸನ್ ಅಂಡ್ ಟರ್ಬೋ ಸಂಸ್ಥೆಯ ವತಿಯಿಂದ ಅತ್ಯುತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡಲಾಗಿದೆ. ದೇವಾಲಯದ ಸಂಕೀರ್ಣದಲ್ಲಿ ಎಲ್ಲೆಲ್ಲೂ ಸಸಿಗಳು, ಔಷಧೀಯ ಗಿಡಗಳು, ಹಸಿರ ಹಾಸು ಕಂಗೊಳಿಸುತ್ತಿದ್ದು, ದಿವ್ಯ ಅನುಭೂತಿಯನ್ನು ದೇವಾಲಯದ ವ್ಯಾಪ್ತಿಯಲ್ಲಿ ನೀಡುವಂತಿದೆ. 10 ಎಕರೆ ವಿಸ್ತಾರದಲ್ಲಿ ಪಂಚವಟಿ ಎಂಬ ಪುಷ್ಪೋದ್ಯಾನದ ನಿರ್ಮಾಣ ಕೂಡ ಮುಕ್ತಾಯದ ಹಂತದಲ್ಲಿದೆ.

ಶ್ರಮಿಕರಿಗೆ ಯೋಗಿ ಶ್ಲಾಘನೆ...

ಕೆಲವೇ ತಿಂಗಳ ಹಿಂದೆ ಅಯೋಧ್ಯೆಯಲ್ಲಿ ಉದ್ದೇಶಿತ ರೀತಿಯಲ್ಲಿ, ನಿಗದಿತ ದಿನಗಳಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವೇ ಎಂದು ಕೆಲವರು ವ್ಯಂಗ್ಯದ ರೀತಿಯಲ್ಲಿ ಪ್ರಶ್ನಿಸಿದ್ದರು ಆದರೀಗ ಎಲ್ಲವೂ ಸುಗಮವಾಗಿ ಮುಕ್ತಾಯವಾಗಿದ್ದು, ಭಾರತೀಯರ ಮತ್ತು ಶ್ರೀರಾಮ ಭಕ್ತರ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ. ಕಳೆದ ವರ್ಷ 6ಕೋಟಿ ಭಕ್ತರು ಶ್ರೀರಾಮಮಂದಿರಕ್ಕೆ ಭೇಟಿ ನೀಡಿ ದಾಖಲೆ ನಿರ್ಮಿಸಿದ್ದರು. ಭವಿಷ್ಯದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉದ್ದೇಶಿತ ರೀತಿಯಲ್ಲಿಯೇ ಪ್ರಾಚೀನ ಕಾಲದ ವೈಭವದೊಂದಿಗೆ ಶ್ರೀರಾಮನ ದೇವಾಲಯ ನಿರ್ಮಿಸಿದ ಎಲ್ಲಾ ಶ್ರಮಿಕರನ್ನೂ ಅಭಿನಂದಿಸಿದ್ದಾರೆ.

Ram mandir construction


ಕಳೆದ ವಷ೯ ಜನವರಿ 22 ರಂದು ಶ್ರೀರಾಮ ಮಂದಿರ ಲೋಕಾರ್ಪಣೆಯಾದ ದಿನದಂದು ಇಡೀ ದೇಶವೇ ಭಕ್ತಿಭಾವದಿಂದ ಸಂಭ್ರಮಿಸಿದಂತೆ ಇದೀಗ ನವೆಂಬರ್ 25 ರಂದು ಕೂಡ ದೇಶವ್ಯಾಪಿ ಶ್ರೀರಾಮಮಂದಿರದ ಕೆಲಸಗಳು ಸಂಪೂರ್ಣವಾಗಿ ಮುಕ್ತಾಯವಾಗಿ ರಾಮಮಂದಿರ ಸಂಕೀರ್ಣದ ಉದ್ಘಾಟನೆಯಾಗುತ್ತಿರುವ ಸಂದರ್ಭ ದೇಶದಾದ್ಯಂತ ಸಡಗರ, ಸಂಭ್ರಮ ಕಂಡುಬರಲಿದೆ.

3 ಸಾವಿರ ಕೋಟಿ ದೇಣಿಗೆ - 1,500 ಕೋಟಿ ಈವರೆಗಿನ ವೆಚ್ಚ!

ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ದೇಶ ವಿದೇಶಗಳಿಂದ ಭಕ್ತಾದಿಗಳು 3 ಸಾವಿರ ಕೋಟಿ ರು.ಗಳಿಗೂ ಅಧಿಕ ದೇಣಿಗೆ ನೀಡಿದ್ದಾರೆ. ಈ ಪೈಕಿ ಈಗಾಗಲೇ ಕಾಮಗಾರಿಗಳಿಗೆ 1,500 ಕೋಟಿ ರು. ವೆಚ್ಚವಾಗಿದ್ದು, ಉಳಿದಿರುವ ಕಾಮಗಾರಿಗಳಿಗೆ ಅಂದಾಜು 1,800 ಕೋಟಿ ರು. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ 2022ರಲ್ಲಿ ದೇಣಿಗೆ ಸಂಗ್ರಹ ಪ್ರಾರಂಭಿಸಲಾಗಿತ್ತು. ದೇಶವ್ಯಾಪಿ ಮಾತ್ರವಲ್ಲದೇ ವಿದೇಶಗಳಿಂದಲೂ ಜನರು ಉದಾರವಾಗಿ ದೇಣಿಗೆ ನೀಡಿದ್ದಾರೆ. ನ. 22ರಂದು ಪ್ರಧಾನಿ ಮೋದಿ ಅಯೋಧ್ಯೆಗೆ ಬರುವ ಸಂದರ್ಭ ಶ್ರೀರಾಮಮಂದಿರದ 70 ಎಕರೆ ವಿಸ್ತೀರ್ಣದಲ್ಲಿರುವ ಶೇಷಾವತಾರ ದೇವಾಲಯ, ಕುಬೇರ ತಿಲ, ಸಪ್ತ ಮಂಟಪಕ್ಕೂ ಭೇಟಿ ನೀಡಲಿದ್ದಾರೆ.
- ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರ ಮಾಹಿತಿ