ಕಾಡಂಚಿನ ಜನರಿಗೆ ಕಾಡಿನಿಂದ ಲಾಭ ಯಾವಾಗ…?
ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ ಸಫಾರಿ ಬಂದ್ ಆಗಿದೆ. ಕರ್ನಾಟಕದಲ್ಲಿ ಪರಿಸರ ಪ್ರವಾಸೋದ್ಯಮದ ಅತಿ ದೊಡ್ಡ ಚಟುವಟಿಕೆ ಎಂದರೆ ಕಾಡಿನಲ್ಲಿ ಸಫಾರಿ ಮಾಡುವುದು. ಬಂಡೀಪುರ, ನಾಗರಹೊಳೆ, ಕಾಳಿ, ಭದ್ರಾ, ಬಿಳಿಗಿರಿ ರಂಗನ ಬೆಟ್ಟ ಮತ್ತು ಮಲೇ ಮಹದೇಶ್ವರ ಬೆಟ್ಟ ವನ್ಯಜೀವಿಧಾಮಗಳಲ್ಲಿ ನಡೆಯುವ ಸಫಾರಿಗಳಿಗೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಈ ಸಫಾರಿಯಿಂದಾಗಿ ಈ ಸಂರಕ್ಷಿತ ಅರಣ್ಯ ಪ್ರದೇಶಗಳ ಸುತ್ತಮುತ್ತ ನೂರಾರು ರೆಸಾರ್ಟ್ ಮತ್ತು ಹೋಮ್ ಸ್ಟೇಗಳು ತಲೆ ಎತ್ತಿವೆ. ಆ ಮೂಲಕ ಕೋಟ್ಯಂತರ ರುಪಾಯಿ ಆದಾಯದ ಜತೆಗೆ ಸಾವಿರಾರು ಜನರಿಗೆ ಉದ್ಯೋಗವನ್ನೂ ಸಹ ಈ ಕಾಡಿನ ಸಫಾರಿಗಳು ಒದಗಿಸಿಕೊಟ್ಟಿವೆ.
- ವಿನೋದಕುಮಾರ್ ಬಿ ನಾಯ್ಕ್
ಇದೀಗ ದೇಶದಲ್ಲಿ “ಟೈಗರ್ ಎಕಾನಮಿ” ಎನ್ನುವ ಪದ ಹೆಚ್ಚು ಚಾಲ್ತಿಯಲ್ಲಿದೆ. ಅಂದರೆ, ಹುಲಿ ಆಧಾರಿತ ಆರ್ಥಿಕತೆ. ಕಾಡಿನಲ್ಲಿರುವ ಹುಲಿ ನಮಗೆ ಅಗಣಿತ ಪಾರಿಸಾರಿಕ ಅನುಕೂಲಗಳನ್ನು ಮಾಡಿಕೊಟ್ಟಿದೆ. ಅವುಗಳನ್ನು ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ಅದರ ಜತೆಗೆ ಸಫಾರಿ, ವಾಸ್ತವ್ಯ, ರೆಸಾರ್ಟ್, ಹೋಮ್ ಸ್ಟೇ, ಟ್ರಾನ್ಸ್ಪೋರ್ಟ್ ಹೀಗೆ ಅನೇಕ ಬೆಂಬಲಿತ ಚಟುವಟಿಕೆಗಳು ಒಟ್ಟಾಗಿ ಅತ್ಯಂತ ಚೇತೋಹಾರಿ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಿದೆ.
ಇತ್ತೀಚೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಹೆಡಿಯಾಲ ಮತ್ತು ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳಲ್ಲಿ ಒಂದು ತಿಂಗಳಲ್ಲಿ ಹುಲಿಗಳ ಓಡಾಟ ವಿಪರೀತ ಹೆಚ್ಚಳಗೊಂಡಿತು. ಊರಿನ ಅಕ್ಕಪಕ್ಕ ಓಡಾಡುವ ಹುಲಿಗಳ ದಾಳಿಗೆ ಸಿಲುಕಿ ಕೆಲ ಅಮಾಯಕ ಗ್ರಾಮಸ್ಥರು ಪ್ರಾಣ ಕಳೆದುಕೊಂಡರು. ಆಗ ಉಂಟಾದ ಆಕ್ರೋಶ, ಕಡೆಗೆ ಅರಣ್ಯ ಸಚಿವರು ಸಫಾರಿ ಬಂದ್ ಮಾಡುವವವರೆಗೆ ಹೋಯಿತು. ಅತ್ತ ಹಳ್ಳಿಗಳಲ್ಲಿ ಹುಲಿ ದಾಳಿ ಮಾಡುತ್ತಿದ್ದರೆ ಇತ್ತ ಅರಣ್ಯಾಧಿಕಾರಿಗಳು ಮಾತ್ರ ಸಫಾರಿ ಕಡೆಗೇ ಗಮನಕೊಟ್ಟಿದ್ದರು. ಇದು ಜನರ ಆಕ್ರೋಶಕ್ಕೂ ಕಾರಣವಾಗಿತ್ತು. ಬಂಡೀಪುರ ಮತ್ತು ನಾಗರಹೊಳೆ ಕಾಡುಗಳಲ್ಲಿ ಸಫಾರಿ ಬಂದ್ ಆಗಿ ಇಪ್ಪತ್ತು ದಿನಗಳೇ ಕಳೆದವು. ಅರಣ್ಯ ಇಲಾಖೆಯ ಅತಿ ದೊಡ್ಡ ಆದಾಯದಲ್ಲಿ ಖೋತಾ ಶುರುವಾಗಿದೆ. ಈ ಎರಡೂ ಕಾಡುಗಳಲ್ಲಿ ಸಫಾರಿ ಇಲ್ಲ, ಅಕ್ಕಪಕ್ಕದ ರೆಸಾರ್ಟ್ ಮತ್ತು ಹೋಮ್ ಸ್ಟೇಗಳಿಗೆ ಜನ ಬರುತ್ತಿಲ್ಲ.

ಇಲಾಖೆ ತನ್ನ ಆದಾಯಕ್ಕೆ ತಾನೇ ಕತ್ತರಿ ಹಾಕಿಕೊಳ್ಳುತ್ತದೆಯೇ..?
ಖಂಡಿತಾ ಇಲ್ಲ. ಸಫಾರಿ ಬಂದ್ ಮಾಡಿದ ಕ್ರಮ ಮೇಲ್ನೋಟಕ್ಕೆ ಇದೊಂದು ಅವೈಜ್ಞಾನಿಕ ನಿರ್ಧಾರ ಎನಿಸಿದರೂ ಈ ಆದೇಶದ ಮೂಲಕ ಅರಣ್ಯ ಸಚಿವರು ಒಂದು ಖಡಕ್ ಸಂದೇಶವನ್ನು ತಮ್ಮ ಸಿಬ್ಬಂದಿಗೆ ರವಾನಿಸಿದ್ದಾರೆ. ಅದೇನೆಂದರೆ, ಮನರಂಜನೆಗೆ ನೀಡುವಷ್ಟೇ ಆದ್ಯತೆಯನ್ನು ಕಾಡಂಚಿನ ಗ್ರಾಮಗಳ ಜನರ ಕಲ್ಯಾಣಕ್ಕೂ ಕೊಡಬೇಕು. ಪ್ರವಾಸೋದ್ಯಮದ ಮೂಲಕ ಬರುವ ಆದಾಯವನ್ನು ಕಾಡಿನೊಳಗೆ ಕಾಮಗಾರಿ ನಡೆಸಲು ಬಳಸದೇ ಕಾಡಂಚಿನ ಜನರ ವಿಶ್ವಾಸ ಗಳಿಸಲು ಬಳಸಬೇಕೆಂದು ಹೇಳಿದ್ದಾರೆ.
ದೇಶದಲ್ಲಿ ಹುಲಿ ಯೋಜನೆ ಜಾರಿಗೆ ಬಂದ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹುಲಿ ಸಂತತಿ ಉಳಿಸಿ ಬೆಳೆಸಲು ಕೈಗೊಂಡ ಅನೇಕ ಕ್ರಮಗಳಲ್ಲಿ ಹುಲಿ ಸಂರಕ್ಷಣಾ ಪ್ರತಿಷ್ಠಾನ (Tiger Conservation Foundation) ಸಹ ಒಂದು. ಸರಕಾರವೇ ಒಂದು ಸರಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿ, ಖಾಸಗಿ ವ್ಯಕ್ತಿ, ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುವುದಕ್ಕೆ ಅವಕಾಶ ಮಾಡಿಕೊಂಡಿತು. ಅಷ್ಟೇ ಅಲ್ಲ, ತನ್ನ ಆದಾಯ ಹೆಚ್ಚಿಸಿಕೊಳ್ಳಲು, ಸಂರಕ್ಷಿತ ಪ್ರದೇಶಗಳು ಸ್ವಾವಲಂಬಿಗಳಾಗಲು ಅನೇಕ ಹೊಸ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಆಗುವಂತೆ ಇದನ್ನು ರೂಪಿಸಲಾಗಿದೆ. ಹುಲಿ ಪ್ರತಿಷ್ಠಾನಗಳ ರಚನೆ ಆದ ನಂತರ ಇದೀಗ ಎಲ್ಲ ಪ್ರತಿಷ್ಠಾನಗಳಲ್ಲೂ ಸಾಕಷ್ಟು ನಿಧಿ ಸಂಗ್ರಹವಾಗಿದೆ. ಸಫಾರಿ, ವಾಸ್ತವ್ಯ ಮತ್ತು ಕಾಡನ್ನು ಹಾದು ಹೋಗುವ ರಸ್ತೆಗಳಲ್ಲಿ “ಹಸಿರು ಸುಂಕ” ಸಂಗ್ರಹಿಸುವ ಮೂಲಕ ನಿರಂತರ ಆದಾಯ ಬರುತ್ತಿದೆ. ಆದರೆ, ಈ ಹಣ ವಿನಿಯೋಗ ಹೇಗಾಗುತ್ತಿದೆ ಎನ್ನುವುದಕ್ಕೆ ಯಾವುದೇ ಸ್ಪಷ್ಟ ಮಾಹಿತಿಗಳು ಸಿಗುವುದಿಲ್ಲ. ಈ ಹಣ ಅನಾವಶ್ಯಕ ಕಾಮಗಾರಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಖರ್ಚಾಗುತ್ತಿದೆ ಎನ್ನುವ ದೂರುಗಳು ಮಾತ್ರ ಸಾಕಷ್ಟಿವೆ.

ಅರಣ್ಯ ಇಲಾಖೆ ಈ ಹುಲಿ ಸಂರಕ್ಷಣಾ ಪ್ರತಿಷ್ಠಾನಗಳನ್ನು ಸ್ಥಾಪಿಸಲು ಪ್ರಮುಖ ಕಾರಣಗಳೆಂದರೆ, ಆಯಾ ಹುಲಿ ಸಂರಕ್ಷಿತ ಪ್ರದೇಶಗಳು ಸ್ವಾವಲಂಬಿಗಳಾಗಬೇಕು ಮತ್ತು ಆದಾಯವನ್ನು ಕಾಡಂಚಿನ ಗ್ರಾಮಗಳ ಜನರ ಕಲ್ಯಾಣಕ್ಕೆ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು ಎನ್ನುವುದು. ಆದರೆ, ಅರಣ್ಯ ಅಧಿಕಾರಿಗಳು ಮೊದಲಿನಿಂದಲೂ ಕಾಡಂಚಿನ ಗ್ರಾಮಗಳ ಜನರ ಬಗ್ಗೆ ಸಂಶಯದ ಮನಸ್ಥಿತಿಯನ್ನೇ ಹೊಂದಿದ್ದಾರೆ. ಖಾಕಿ ಹಾಕಿಕೊಂಡು, ಕೈಯಲ್ಲಿ ಲಾಠಿ ಹಿಡಿದುಕೊಂಡು ಕಾಡು ಕಾವಲು ಮಾಡಿದರೆ, ಕಾಡು ತಾನಾಗಿಯೇ ಉಳಿದು, ಬೆಳೆಯುತ್ತದೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ, ಈಗ ವಾಸ್ತವ ಬದಲಾಗಿದೆ. ಕಾಡಂಚಿನ ಗ್ರಾಮಗಳತ್ತ ಇಲಾಖೆ ಹೆಚ್ಚಿನ ಗಮನ ನೀಡಬೇಕಿದೆ.
ನಮ್ಮ ಕಾಡಂಚಿನ ಗ್ರಾಮಗಳ ಅನೇಕ ಮಕ್ಕಳು, ಹಳ್ಳಿಗರು ಕಾಡನ್ನು ಬೇರೆ ದೃಷ್ಟಿಕೋನದಿಂದ ನೋಡಿರುವುದೇ ಇಲ್ಲ. ಕಾಡಿನ ಅಕ್ಕಪಕ್ಕ ಇರುವ ಶಾಲಾ ಮಕ್ಕಳಿಗೆ “ಚಿಣ್ಣರ ವನದರ್ಶನ” ಕಾರ್ಯಕ್ರಮ ಶುರುವಾಗುವ ತನಕ ಕಾಡಿನಲ್ಲಿ ಸಫಾರಿ ಮೂಲಕ ವನ್ಯಜೀವಿಗಳನ್ನು ನೋಡುವ ಭಾಗ್ಯ ಇರಲಿಲ್ಲ. ಕಾಡಿನ ಅಕ್ಕಪಕ್ಕ ಇರುವ ಹಳ್ಳಿಗರೆಲ್ಲ ಆನೆ ನೋಡೋದು ಯಾವಾಗ ಅಂದರೆ, ತಮ್ಮ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡಿದಾಗ. ಹುಲಿ ನೋಡೋದು ಅಥವಾ ಹುಲಿ ಬಗ್ಗೆ ಮಾತನಾಡೋದು ಯಾವಾಗ ಅಂದರೆ, ಕೊಟ್ಟಿಗೆಯೊಳಗಿನ ದನ ಕರುಗಳನ್ನು ಕೊಂದು ಹಾಕಿದಾಗ ಮಾತ್ರ. ಹೀಗಿರುವಾಗ ಕಾಡಂಚಿನ ಜನರಲ್ಲಿ ಜಾಗೃತಿ ಖಂಡಿತಾ ಇರುವುದಿಲ್ಲ. ಕಾನೂನಿಗೆ ಹೆದರಿ ಕಾಡು ಮತ್ತು ಕಾಡುಪ್ರಾಣಿಗಳನ್ನು ಮುಟ್ಟಲು ಅಥವಾ ತೊಂದರೆ ಕೊಡಲು ಹೆದರುತ್ತಾರೆಯೇ ಹೊರತು, ಅವರಿಗೆ ತಮ್ಮ ಪಕ್ಕದಲ್ಲೇ ಇರುವ ಕಾಡಿನ ಮಹತ್ವ, ಅದರೊಳಗೆ ಇರುವ ಜೀವಜಾಲ, ಪ್ರಾಕೃತಿಕ ಜಗತ್ತಿನ ಬಗ್ಗೆ ಪ್ರೀತಿ ಹುಟ್ಟಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಲೇ ಇಲ್ಲ. ಕಾಡಿನಿಂದ ನಮಗೆ ಏನೇನು ಉಪಯೋಗ ಎನ್ನುವುದು ಗೊತ್ತಾಗದ ಹೊರತು, ಅದರಿಂದ ನಮಗೆ ಲಾಭವಿದೆ ಎನ್ನುವುದು ಮನವರಿಕೆಯಾಗದ ಹೊರತು, ಅದನ್ನು ಉಳಿಸಿ ಬೆಳೆಸಲು ನಮ್ಮಿಂದ ಯಾವುದೇ ಪ್ರಯತ್ನಗಳು ಆಗುವುದಿಲ್ಲ.

ಪರಿಸರ ಪ್ರವಾಸೋದ್ಯಮ ಇವತ್ತು ದೊಡ್ಡ ಉದ್ಯಮವಾಗಿ ಬೆಳೆದಿದೆ. ಅದರ ಲಾಭ ಕೆಲವೇ ಕೆಲ ಜನರಿಗಷ್ಟೇ ಆಗುತ್ತಿದೆ. ಕಾಡನ್ನು ನೋಡಿಕೊಂಡು, ಕಾಡು ಪ್ರಾಣಿಗಳ ಉಪಟಳ ಸಹಿಸಿಕೊಂಡು, ಅದರ ಜತೆಗೆ ಬೆಳೆದು ಬಂದಿರುವ ಕಾಡಂಚಿನ ಜನರಿಗೆ ಪರಿಸರ ಪ್ರವಾಸೋದ್ಯಮದ ಲಾಭಾಂಶ ಸಿಗುವಂತಾಗಬೇಕು. ಕಾಡಿನ ಅಕ್ಕಪಕ್ಕ ಸಮುದಾಯ ಆಧಾರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಬೇಕು. ಯಾರೋ ಬಂಡವಾಳಶಾಹಿಗಳ ರೆಸಾರ್ಟ್‌ಗಳು ಎಷ್ಟು ಮುಖ್ಯವೋ, ಕಾಡಿನ ಅಕ್ಕಪಕ್ಕದ ಹಳ್ಳಿಗಳ ಜನರೂ ಕಾಡಿನಿಂದ ಒಂದಷ್ಟು ಆರ್ಥಿಕ ಲಾಭ ಮಾಡಿಕೊಳ್ಳುವಂತಾಗಬೇಕು. ಆದಷ್ಟು ಬೇಗ ಸಫಾರಿ ಪುನರಾರಂಭವಾಗಬೇಕು. ಅರಣ್ಯ ಇಲಾಖೆ ತನ್ನ ಆದಾಯವನ್ನು ಜನರೊಂದಿಗೂ ಹಂಚಿಕೊಂಡು ಅವರ ಅಭಿವೃದ್ಧಿಗೂ ಕೈ ಜೋಡಿಸಬೇಕು.