ಅಬುಧಾಬಿಯಲ್ಲಿ ಚಿಟ್ಟೆ ಉದ್ಯಾನವನ: ಹೇಗಿದೆ ಗೊತ್ತಾ ಅದ್ಭುತ ಚಿಟ್ಟೆ ಧಾಮ?
10,000 ಕ್ಕೂ ಹೆಚ್ಚು ಚಿಟ್ಟೆಗಳಿಗೆ ನೆಲೆಯಾಗಿರುವ ದಿ ಬಟರ್‌ಫ್ಲೈ ಗಾರ್ಡನ್ ಅನ್ನು ಮೊದಲ ಬಾರಿಗೆ ಅಬುಧಾಬಿಯಲ್ಲಿ ಉದ್ಘಾಟಿಸಲಾಗುತ್ತಿದೆ.
ನಾವೆಲ್ಲ ʼಓ ಚಿಟ್ಟೆ ಬಣ್ಣದ ಚಿಟ್ಟೆʼ ಹಾಡನ್ನು ಕೇಳುತ್ತಾ ಬೆಳೆದವರು. ನಮ್ಮ ಬಾಲ್ಯ ಬದುಕಿಗೆ ಬಣ್ಣ ತುಂಬಿದ್ದೇ ಚಿಟ್ಟೆಗಳು. ಚಿಟ್ಟೆ ಹಿಡಿಯಲು ಹೋಗಿ ಮೈಕೈ ಗಾಯ ಮಾಡಿಕೊಂಡಿದ್ದ ನೆನಪು ಈಗಲೂ ಹಸಿಯಾಗಿಯೇ ಇದೆ. ಪೊಲೀಸ್ ಚಿಟ್ಟೆ, ಆನೆ ಚಿಟ್ಟೆ, ಏರೋಪ್ಲೇನ್ ಚಿಟ್ಟೆ, ಕಲರ್ ಚಿಟ್ಟೆ ಹೀಗೆ ಚಿಟ್ಟೆಗಳಿಗೆ ಏನೇನೋ ಹೆಸರಿಟ್ಟು ನಾಮಕರಣ ಮಾಡಿದ್ದೆವು. ಅದರಲ್ಲೂ ಹೂವಿನ ಗಿಡಗಳ ಮೇಲೆ ಬಣ್ಣದ ಚಿಟ್ಟೆಗಳು ಕೂತರಂತೂ ಕಣ್ಣುಗಳಿಗೆ ಹಬ್ಬ. ಬೆಳಗಿನ ಜಾವ ಮತ್ತು ತಿಳಿ ಸಂಜೆಯಲ್ಲಿ ಸಾವಿರಾರು ಚಿಟ್ಟೆಗಳು ನಮ್ಮ ಮನೆಯ ಆಚೆಗೆ ಬರುತ್ತಿದ್ದವು. ಈಗೆಲ್ಲಾ ಚಿಟ್ಟೆಗಳೇ ಕಾಣುತ್ತಿಲ್ಲ. ಈಗಿನ ಮಕ್ಕಳಲ್ಲೂ ಚಿಟ್ಟೆ ಹಿಡಿದು ಆಟವಾಡುವ ಆಸೆಯಿಲ್ಲ. ಅದರ ಮಜಾವೂ ಅವರಿಗೆ ಗೊತ್ತಿಲ್ಲ. ಅದೆಲ್ಲಾ ಈಗ ಬಿಡಿ. ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ದುಬೈನ ಅಬುಧಾಬಿಯಲ್ಲಿ ಚಿಟ್ಟೆ ಉದ್ಯಾನವನವೊಂದು ಪ್ರಾರಂಭವಾಗುತ್ತಿದೆ. ಹತ್ತು ಸಾವಿರಕ್ಕೂ ಹೆಚ್ಚು ಚಿಟ್ಟೆಗಳು ಈ ಬಟರ್‌ಫ್ಲೈ ಗಾರ್ಡನ್‌ನಲ್ಲಿ ನೆಲೆಸಲಿವೆ ಎಂಬ ಮಾಹಿತಿಯಿದೆ.
ಅಬುಧಾಬಿಯಲ್ಲಿ ಮೊದಲ ಚಿಟ್ಟೆಧಾಮ ಆರಂಭವಾಗುತ್ತಿದ್ದು, ಹಚ್ಚ ಹಸುರಿನ ವಾತಾವರಣ ಮಧ್ಯೆ ಕಂಗೊಳಿಸುವ ಉದ್ಯಾನವನವು ಪ್ರವಾಸಿಗರನ್ನು ಸೆಳೆಯಲಿದೆ. ಸೆಪ್ಟೆಂಬರ್ 2025 ರಲ್ಲಿ ಉದ್ಯಾನವನದ ಬಾಗಿಲು ತೆರೆಯಲಿದೆ ಎಂಬ ಅಧಿಕೃತ ಮಾಹಿತಿ ದೊರೆತಿದೆ. ಈ ಘೋಷಣೆಯನ್ನು ಅರೇಬಿಯನ್ ಟ್ರಾವೆಲ್ ಮಾರ್ಕೆಟ್ (ಎಟಿಎಂ) 2025 ರ ಸಂದರ್ಭದಲ್ಲಿ ಮಾಡಲಾಗಿದೆ.ಇದು ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜನಗೊಳಿಸಲಿದೆ ಎಂದು ಹೇಳಲಾಗಿದೆ.
ಬಟರ್‌ಫ್ಲೈ ಗಾರ್ಡನ್ ಕುರಿತ ಮಾಹಿತಿ
ಅಲ್ ಖಾನಾದಲ್ಲಿರುವ ರಾಷ್ಟ್ರೀಯ ಅಕ್ವೇರಿಯಂ ಪಕ್ಕದಲ್ಲಿರುವ ಬಟರ್‌ಫ್ಲೈ ಗಾರ್ಡನ್ ನೋಡುಗರನ್ನು ವಿಸ್ಮಯಗೊಳಿಸುತ್ತದೆ. ಪ್ರಾಕೃತಿಕ ಸೌಂದರ್ಯವೂ ದಿವ್ಯಾನುಭವ ನೀಡುತ್ತದೆ. ಈ ಹೊಸ ಆಕರ್ಷಣೆಯು ಅಬುಧಾಬಿಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ. 10,000 ಕ್ಕೂ ಹೆಚ್ಚು ಚಿಟ್ಟೆಗಳಿಗೆ ನೆಲೆಯಾಗಿರುವ ಬಟರ್‌ಫ್ಲೈ ಗಾರ್ಡನ್ ನೂರಾರು ಜಾತಿಯ ಚಿಟ್ಟೆಗಳಿರುತ್ತವೆ. ಏಷ್ಯಾ ಮತ್ತು ಅಮೆರಿಕಾ ಮೂಲದ ಚಿಟ್ಟೆಗಳನ್ನು ಈ ಗಾರ್ಡನ್‌ನಲ್ಲಿ ಕಾಣಬಹುದು.
"ಬಟರ್‌ಫ್ಲೈ ಗಾರ್ಡನ್ ನಿರ್ಮಿಸುವುದರ ಹಿಂದಿನ ನಮ್ಮ ಉದ್ದೇಶವೆಂದರೆ ಅವುಗಳಿಗೆ ತಕ್ಕುದಾದ ನೈಸರ್ಗಿಕ ವಾತಾವರಣವನ್ನು ಸೃಷ್ಟಿಸುವುದು. ಅವು ಎಲ್ಲಿ ಸುರಕ್ಷಿತವಾಗಿರುತ್ತವೆ ಮತ್ತು ಅವುಗಳಿಗೆ ಯಾವ ವಾತಾವರಣ ಹೇಳಿ ಮಾಡಿಸಿದಂತಿದೆ ಎಂದು ಖಚಿತಪಡಿಸಿಕೊಳ್ಳಬೇಕು" ಎಂದು ಅಬುಧಾಬಿಯ ದಿ ಬಟರ್‌ಫ್ಲೈ ಗಾರ್ಡನ್ಸ್ ಜನರಲ್ ಮ್ಯಾನೇಜರ್ ಪಾಲ್ ಹ್ಯಾಮಿಲ್ಟನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.