ವಿಜಯವಾಡ: ಆಂಧ್ರ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (APTDC) ಆಶ್ರಯದಲ್ಲಿ ಕಾರ್ಯನಿರ್ವಹಿಸುವ ವಿಜಯವಾಡದ ಭವಾನಿ ದ್ವೀಪ ಪ್ರವಾಸೋದ್ಯಮ ನಿಗಮ (BITC), ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೆಚ್ಚಿನ ಸಾಹಸ ಚಟುವಟಿಕೆಗಳನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಿದೆ. ಇದಕ್ಕಾಗಿ ಆಧುನಿಕ ದೋಣಿಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

bhavani

ಕಳೆದ ವರ್ಷದ ಕೃಷ್ಣಾ ನದಿಯಲ್ಲಿನ ದಾಖಲೆಯ ಪ್ರವಾಹದಿಂದಾಗಿ ಭವಾನಿ ದ್ವೀಪದೊಳಗಿನ ಜಲಕ್ರೀಡೆ, ಹಲವಾರು ಸಾಹಸ ಚಟುವಟಿಕೆಗಳು ಭಾಗಶಃ ಹಾನಿಗೊಳಗಾಗಿತ್ತು. ಈಗ, ಪ್ರವಾಸೋದ್ಯಮ ಇಲಾಖೆಯು ದ್ವೀಪದಲ್ಲಿ ಜೆಟ್ ಸ್ಕೀಯಿಂಗ್ ಮತ್ತು ಸ್ಪೀಡ್ ಬೋಟ್‌ಗಳನ್ನು ತರುವ ಯೋಜನೆಯಲ್ಲಿದೆ. ಖಾಸಗಿ ಏಜೆನ್ಸಿಯೊಂದು ಈಗಾಗಲೇ ದ್ವೀಪಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ಪೀಡ್ ಬೋಟಿಂಗ್, ಪೆಡಲ್ ಬೋಟಿಂಗ್ ಮತ್ತು ಇತರ ಹಲವಾರು ಜಲ ಕ್ರೀಡೆಗಳಿಗೆ ಅನುವುಮಾಡಿಕೊಟ್ಟಿದೆ.

ಈ ಬಗ್ಗೆ ಪತ್ರಿಕೆಗಳೊಂದಿಗೆ ಮಾತನಾಡಿರುವ ಪ್ರವಾಸೋದ್ಯಮ ನಿಗಮದ ಹಿರಿಯ ಅಧಿಕಾರಿಯೊಬ್ಬರು, “ದ್ವೀಪದಲ್ಲಿ ಈಗಾಗಲೇ ಜಲಕ್ರೀಡೆ ಚಟುವಟಕೆಗಳೆಲ್ಲವೂ ಸ್ಥಗಿತಗೊಂಡಿದ್ದು, ಸುಮಾರು ಆರು ಹೊಸ ದೋಣಿಗಳನ್ನು ಖರೀದಿಸಲು ಸರ್ಕಾರವನ್ನು ವಿನಂತಿಸಿದ್ದೇವೆ. ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಲು ಅಥವಾ ಹಾನಿಗೊಳಗಾದವುಗಳಿಗೆ ಬದಲಿ ಖರೀದಿಸಲು ಹಲವಾರು ಕೋಟಿ ರೂಪಾಯಿಗಳು ಬೇಕಾಗುತ್ತವೆ." ಎಂಬುದಾಗಿ ತಿಳಿಸಿದ್ದಾರೆ.

bhavani

ಪ್ರವಾಹದಿಂದ ಉಂಟಾದ ಅನಾಹುತದ ನಂತರ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಿ ಪ್ರವಾಸಿಗರಿಗೆ ದ್ವೀಪವನ್ನು ಮತ್ತೆ ತೆರೆಯಲಾಗಿದೆ. ಇವೆಲ್ಲವೂ ಆದ ನಂತರ, ಅಂದರೆ ಕಳೆದ ಐದು ತಿಂಗಳ ಹಿಂದೆಯೇ ಹೊಸ ದೋಣಿಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದು ಪ್ರವಾಸೋದ್ಯಮ ಅಧಿಕಾರಿ ತಿಳಿಸಿದ್ದಾರೆ.

"ಭವಾನಿ ದ್ವೀಪ ಮಾತ್ರವಲ್ಲದೆ, ನಾಗಾರ್ಜುನ ಸಾಗರದಲ್ಲೂ ಕಾರ್ಯನಿರ್ವಹಿಸಲು ದೋಣಿಗಳು ಬೇಕು ಎಂಬುದಾಗಿ ಸರ್ಕಾರವನ್ನು ಕೋರಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.