Thursday, June 12, 2025
Thursday, June 12, 2025

ನೀವು ಆಮೆ ಪ್ರಿಯರೇ? ಹಾಗಾದರೆ ಈ ತಾಣಗಳಿಗೆ ತಪ್ಪದೇ ಭೇಟಿ ನೀಡಿ

ಪ್ರಪಂಚದಾದ್ಯಂತ ಸುಮಾರು 300ಕ್ಕೂ ಹೆಚ್ಚು ಪ್ರಬೇಧದ ಆಮೆಗಳಿದ್ದು, ಈ ಪೈಕಿ 129 ಅಳಿವಿನಂಚಿನಲ್ಲಿವೆ. ಆಮೆಗಳ ಮಹತ್ವ ತಿಳಿಸಲು, ಅವುಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸುವ ಸಲುವಾಗಿಯೇ ಪ್ರತಿ ವರ್ಷ ಮೇ 23ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ.

ಆಮೆ-ಪರಿಸರ ವ್ಯವಸ್ಥೆಯನ್ನು ಸುಸ್ಥಿರವಾಗಿಡುವ ಬಹುಮುಖ್ಯ ಜೀವಿಗಳಲ್ಲಿ ಒಂದು. ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಜೀವಿಗಳಲ್ಲಿ ಆಮೆ ಪ್ರಮುಖವಾದುದು. ಸರೀಸೃಪ ಗುಂಪಿಗೆ ಸೇರಿದ ಇದು ಭೂಮಿಯ ಮೇಲೆ ಸುಮಾರು 220 ಮಿಲಿಯನ್‌ ವರ್ಷಗಳಿಂದ ಅಸ್ತಿತ್ವದಲ್ಲಿವೆ. ದೀರ್ಘಾಯುಷ್ಯ ಹೊಂದಿರುವ ಆಮೆಗಳ ಸರಾಸರಿ ವಯಸ್ಸು 150 ವರ್ಷ. ಪ್ರಪಂಚದಾದ್ಯಂತ ಸುಮಾರು 300ಕ್ಕೂ ಹೆಚ್ಚು ಪ್ರಬೇಧದ ಆಮೆಗಳಿದ್ದು, ಈ ಪೈಕಿ 129 ಅಳಿವಿನಂಚಿನಲ್ಲಿವೆ. ಅದಕ್ಕಾಗಿಯೇ ಪ್ರತಿ ವರ್ಷ ಮೇ 23ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ. ಆಮೆಗಳ ಮಹತ್ವ ತಿಳಿಸಲು, ಅವುಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಆಮೆಗಳು ಕಂಡುಬರುವ ದೇಶದ ಪ್ರಮುಖ ತಾಣಗಳ ಬಗ್ಗೆ ಇಲ್ಲಿದೆ ವಿವರ.

turtle s

ವೇಲಸ್‌ ಬೀಚ್‌-ಮಹಾರಾಷ್ಟ್ರ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ವೇಲಸ್‌ ಸಮುದ್ರ ತೀರದಲ್ಲಿ ಆಲಿವ್ ರಿಡ್ಲಿ ಆಮೆಗಳು (Olive Ridley turtles) ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಇವನ್ನು ಸಂರಕ್ಷಿಸಲು ಇಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವರ್ಷ ಫೆಬ್ರವರಿಯಿಂದ ಏಪ್ರಿಲ್‌ವರೆಗೆ ಈ ಅಳಿವಿನಂಚಿನಲ್ಲಿರುವ ಆಮೆಗಳು ತಮ್ಮ ಮೊಟ್ಟೆಗಳನ್ನು ಇಡಲು ವೆಲಾಸ್ ಬೀಚ್‌ಗೆ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತವೆ. ಇಲ್ಲಿ ಆಯೋಜಿಸುವ ವೆಲಾಸ್ ಆಮೆ ಉತ್ಸವದಲ್ಲಿ ಅರೇಬಿಯನ್ ಸಮುದ್ರಕ್ಕೆ ಮರಿಗಳನ್ನು ಬಿಡುವುದನ್ನು ವೀಕ್ಷಿಸುವುದೇ ವಿಶೇಷ ಅನುಭವ ನೀಡುತ್ತದೆ.

ಅಗೊಂಡಾ ಬೀಚ್, ಗೋವಾ

ರೋಮಾಂಚನಕಾರಿ ಬೀಚ್‌ಗಳಿಗೆ ಹೆಸರುವಾಸಿಯಾದ ಗೋವಾ ಆಮೆ ಪ್ರವಾಸೋದ್ಯಮಕ್ಕೂ ಜನಪ್ರಿಯ ಎನ್ನುವುದು ನಿಮಗೆ ಗೊತ್ತೆ? ಹೌದು, ಗೋವಾದ ಅಗೊಂಡಾ ಬೀಚ್ ಆಲಿವ್ ರಿಡ್ಲಿ ಆಮೆಗಳು ಗೂಡು ಕಟ್ಟುವುದು ಮತ್ತು ಮೊಟ್ಟೆಯೊಡೆದು ಮರಿ ಹೊರ ಬರುವುದನ್ನು ವೀಕ್ಷಿಸಲು ಸೂಕ್ತ ತಾಣ ಎನಿಸಿಕೊಂಡಿದೆ. ಇಲ್ಲಿಯೂ ಆಮೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ವಿಶೇಷವಾಗಿ ನವೆಂಬರ್‌ನಿಂದ ಮಾರ್ಚ್‌ವರೆಗೆ ಆಮೆ ಗೂಡು ಕಟ್ಟುವ ಅವಧಿಯಲ್ಲಿ ಬೀಚ್ ಅನ್ನು ಅವುಗಳ ಸುರಕ್ಷಿತ ತಾಣವಾಗಿಸಲು ವ್ಯವಸ್ಥೆ ಮಾಡಲಾಗುತ್ತದೆ.

sea-turtle

ಮೊರ್ಜಿಮ್ ಬೀಚ್, ಗೋವಾ

ಆಮೆ ಪ್ರಿಯರ ಇನ್ನೊಂದು ನೆಚ್ಚಿನ ತಾಣವೆಂದರೆ ಅದು ಗೋವಾದ ಮೊರ್ಜಿಮ್ ಬೀಚ್. ಇಲ್ಲಿ ವಿಶೇಷವಾಗಿ ಅಳಿವಿನಂಚಿನಲ್ಲಿರುವ ಕೆಂಪ್ಸ್ ರಿಡ್ಲಿ ಆಮೆಗಳು (Kemp's Ridley turtles) ಗೂಡು ಕಟ್ಟುತ್ತವೆ. ಇಲ್ಲಿನ ಆಮೆ ಸಂರಕ್ಷಣಾ ಯೋಜನೆಯು ಈ ಆಮೆಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಆಮೆಗಳನ್ನು ನೋಡಲು ಬಯಸುವ ಸಂದರ್ಶಕರಿಗೆ ಜಾಗೃತಿ, ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ರುಶಿಕುಲ್ಯ ಬೀಚ್, ಒಡಿಶಾ

ಒಡಿಶಾದ ಗಂಜಾಂ ಜಿಲ್ಲೆಯ ಬೆರ್ಹಾಂಪುರ್ ಬಳಿ ಇರುವ ರುಶಿಕುಲ್ಯ ಬೀಚ್‌ನಲ್ಲಿ ಆಲಿವ್ ರಿಡ್ಲಿ ಆಮೆಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಈ ಪ್ರಬೇಧದ ಆಮೆಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗೂಡು ಕಟ್ಟುವ ವಿಶ್ವದ ಅಪರೂಪದ ಸ್ಥಳಗಳಲ್ಲಿ ಇದೂ ಒಂದು. ಅರಿಬಾಡ ಎಂದು ಕರೆಯಲ್ಪಡುವ ಈ ಅಪರೂಪದ ದೃಶ್ಯ ಸಾಮಾನ್ಯವಾಗಿ ಜನವರಿ ಮತ್ತು ಮಾರ್ಚ್ ನಡುವೆ ಕಾಣಸಿಗುತ್ತದೆ. ಮೊಟ್ಟೆಗಳನ್ನು ಇಡಲು ಸಾವಿರಾರು ಸಂಖ್ಯೆಯ ಆಮೆಗಳು ಕಡಲ ತೀರಕ್ಕೆ ಆಗಮಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಜತೆಗೆ ಮೊಟ್ಟೆಯೊಡೆದು ಹೊರ ಬರುವ ಆಮೆ ಮರಿಗಳು ಪುಟ್ಟ ಪುಟ್ಟ ಕಾಲಿನಿಂದ ಚಿಕ್ಕ ಚಿಕ್ಕ ಹೆಜ್ಜೆ ಇಡುತ್ತ ನಿಧಾನವಾಗಿ ಸಮುದ್ರದತ್ತ ತೆರಳುವುದನ್ನು ವೀಕ್ಷಿಸುವುದು ರೋಮಾಂಚನಕಾರಿ ಅನುಭವ.

turtle  new

ಲಿಟಲ್ ಅಂಡಮಾನ್ ದ್ವೀಪ, ಅಂಡಮಾನ್ ಮತ್ತು ನಿಕೋಬಾರ್

ಲಿಟಲ್ ಅಂಡಮಾನ್ ದ್ವೀಪದ ಸುಂದರವಾದ ಕಡಲ ತೀರಗಳು ವಿಶೇಷವಾಗಿ ಕಾಲಿಪುರ ಬೀಚ್ ಮತ್ತು ಹತ್ತಿರದ ಸ್ಥಳಗಳು ಲೆದರ್‌ಬ್ಯಾಕ್ ಆಮೆಗಳು ಮತ್ತು ಹಸಿರು ಆಮೆ (Leatherback turtles and Green turtles)ಗಳನ್ನು ವೀಕ್ಷಿಸಲು ಸೂಕ್ತ ತಾಣ. ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಆಮೆಗಳ ಗೂಡು ಕಟ್ಟುವಿಕೆ ಮತ್ತು ಮೊಟ್ಟೆಯೊಡೆದು ಮರಿಗಳು ಹೊರ ಬರುವುದನ್ನು ವೀಕ್ಷಿಸಬಹುದು

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!