ಟರ್ಕಿ ಮತ್ತು ಅಜರ್‌ಬೈಜಾನ್ ಪ್ರವಾಸಕ್ಕೆ ಹೋಗುವುದನ್ನು ತಪ್ಪಿಸಿ...
ಟರ್ಕಿ ಮತ್ತು ಅಜರ್ಬೈಜಾನ್ ಈಗ ನಡೆಯುತ್ತಿರುವ ಉದ್ವಿಗ್ನತೆಯಲ್ಲಿ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸದ್ದು, ಭಾರತೀಯರು ಆ ದೇಶಗಳಿಗೆ ಪ್ರವಾಸ ಹೋಗುವುದನ್ನು ತಪ್ಪಿಸಬೇಕಿದೆ.
ಭಾರತ–ಪಾಕಿಸ್ತಾನ (India Pakistan) ನಡುವೆ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ, ಟರ್ಕಿ ಮತ್ತು ಅಜರ್‌ಬೈಜಾನ್ ಪಾಕಿಸ್ತಾನ ಪರ ನಿಲುವು ವ್ಯಕ್ತಪಡಿಸಿದ್ದು, ಭಾರತದೊಳಗೆ ಪ್ರವಾಸ ಬಹಿಷ್ಕಾರದ ಕೂಗು ಎದ್ದಿದೆ. EaseMyTrip ಸಂಸ್ಥೆಯ ಸ್ಥಾಪಕ ನಿಶಾಂತ್ ಪಿಟ್ಟಿ, ಏಪ್ರಿಲ್ 22ರಂದು ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯ ಹಿನ್ನೆಲೆ ಮತ್ತು ಇಂಡೋ–ಪಾಕ್ ಯುದ್ಧದ ಪರಿಸ್ಥಿತಿಯ ನಡುವೆ, ಈ ಎರಡು ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇದೊಂದು ದುಃಖಕರ ಸಂಗತಿ. ಈ ಪರಿಸ್ಥಿತಿಯಲ್ಲಿ ಟರ್ಕಿ ಮತ್ತು ಅಜರ್‌ಬೈಜಾನ್‌ಗೆ ಪ್ರಯಾಣಿಸುವುದನ್ನು ಬಿಡುವುದು ಉತ್ತಮ," ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಪಿಕಿಯರ್‌ಟ್ರೈಲ್ ಸಹ ತನ್ನ ಮುಂದಿನ ಎಲ್ಲಾ ಬುಕ್ಕಿಂಗ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸಂಸ್ಥೆಯ ಸಹ–ಸ್ಥಾಪಕ ಹರೀ ಗಣಪತಿ, "ಇದು ಆ ದೇಶದ ಜನರ ವಿರುದ್ಧವಲ್ಲ. ಆದರೆ ಭಾರತೀಯ ಹಿತಾಸಕ್ತಿಗೆ ವಿರುದ್ಧವಾದ ನೀತಿಯ ವಿರುದ್ಧದ ನಿಲುವು," ಎಂದು ಹೇಳಿದ್ದಾರೆ. "ಒಂದು ಭಾರತೀಯ ಪ್ರವಾಸ ಸಂಸ್ಥೆಯಾಗಿ ನಮ್ಮ ಮೊದಲ ಕರ್ತವ್ಯ ಭಾರತೀಯರತ್ತ. ಜೈ ಹಿಂದ್," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Go Homestays ಸಂಸ್ಥೆಯು ಟರ್ಕಿಶ್ ಏರ್‌ಲೈನ್ಸ್‌ನೊಂದಿಗೆ ಹೊಂದಿದ್ದ ಒಪ್ಪಂದವನ್ನು ಮುರಿದಿದ್ದು, Cox & Kings ಸಂಸ್ಥೆ ಕೂಡ ಅಜರ್‌ಬೈಜಾನ್, ಉಜ್ಬೆಕಿಸ್ತಾನ್ ಹಾಗೂ ಟರ್ಕಿಗೆ ಸಂಬಂಧಿಸಿದ ಹೊಸ ಪ್ರವಾಸ ಯೋಜನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸಂಸ್ಥೆಯ ನಿರ್ದೇಶಕ ಕರಣ್ ಅಗರವಾಲ್, “ಇವು ಅಹಿತಕರ ಪರಿಸ್ಥಿತಿಗಳಾಗಿರುವುದರಿಂದ, ಅಲ್ಲಿ ಪ್ರಯಾಣ ಮಾಡುವುದನ್ನು ತಡೆಹಿಡಿಯುವಂತೆ ನಾವು ಸಲಹೆ ನೀಡುತ್ತೇವೆ,” ಎಂದಿದ್ದಾರೆ.
ಈ ಎಲ್ಲ ಬೆಳವಣಿಗೆಗೂ ಕಾರಣವಾಗಿರುವುದೆಂದರೆ ಏಪ್ರಿಲ್ 23ರಂದು ಟರ್ಕಿ ಮತ್ತು ಅಜರ್‌ಬೈಜಾನ್ ನೀಡಿದ ಅಧಿಕೃತ ಹೇಳಿಕೆಗಳು. ಭಾರತ ನಡೆಸಿದ 'ಆಪರೇಷನ್ ಸಿಂಧೂರ್'— ಉಗ್ರರ ತಾಣಗಳ ಮೇಲೆ ದಾಳಿ ನಡೆದ ಬಳಿಕ, ಅಜರ್‌ಬೈಜಾನ್, “ಪಾಕಿಸ್ತಾನದ ನಾಗರಿಕರ ಮೇಲೆ ದಾಳಿ ನಡೆದಿದ್ದು ಖಂಡನೀಯ,” ಎಂಬ ಹೇಳಿಕೆಯನ್ನು ನೀಡಿತು.
ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣವೇ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 2024ರಲ್ಲಿ 3.3 ಲಕ್ಷ ಭಾರತೀಯರು ಟರ್ಕಿಗೆ ಹಾಗೂ 2.4 ಲಕ್ಷ ಮಂದಿ ಅಜರ್‌ಬೈಜಾನ್‌ಗೆ ಪ್ರವಾಸಕ್ಕೆ ಹೋಗಿದ್ದ ದಾಖಲೆಗಳು ಹರಿದಾಡುತ್ತಿವೆ. “ಪ್ರವಾಸ ಒಂದು ಆಯ್ಕೆ. ಘನತೆಯೂ ಹಾಗೆ” ಎಂಬಂತಹ ಪೋಸ್ಟ್‌ಗಳು ವೈರಲ್ ಆಗಿವೆ. ಅನಂತ್ ಲಾಧಾ ಎಂಬ ಬಳಕೆದಾರರು, “ಇನ್ನು ಮುಂದೆ ಭಾರತದಿಂದ ಪ್ರವಾಸವಿಲ್ಲ. ನಮ್ಮ ಶಕ್ತಿಯ ತಾಕತ್ತು ಅವರಿಗೆ ತೋರಿಸೋಣ,” ಎಂದು ಬರೆದಿದ್ದಾರೆ.
Goa Villas ಸಂಸ್ಥೆಯು, “ಈ ಗಂಭೀರ ಜಾಗತಿಕ ಪರಿಸ್ಥಿತಿಯಲ್ಲಿ ಟರ್ಕಿಯ ಅಸಹಕಾರದ ನಿಲುವಿನ ಹಿನ್ನೆಲೆಯಲ್ಲಿ, ನಾವು ಟರ್ಕಿ ನಾಗರಿಕರಿಗೆ ಯಾವುದೇ ವಸತಿ ಸೇವೆ ನೀಡುವುದಿಲ್ಲ,” ಎಂದು ಪ್ರಕಟಿಸಿದೆ. ಹಾಗೆಯೇ, Atlys ಮತ್ತು Skyscanner ಮುಂತಾದ ಸಂಸ್ಥೆಗಳಲ್ಲಿ ಅಜರ್‌ಬೈಜಾನ್ನ ಬುಕಿಂಗ್ ಗಳು ಕುಸಿತ ಕಂಡಿವೆ.