• ವಿದೇಶ ಪ್ರವಾಸವೆಂದರೆ ಬಹುತೇಕರಿಗೆ ಎಲ್ಲಿಲ್ಲದ ಮೋಹ. ಪ್ರತಿಯೊಬ್ಬರು ವಿದೇಶ ಪ್ರವಾಸ ಕೈಗೊಳ್ಳಬೇಕು ಎಂದು ಬಯಸುತ್ತಾರೆ. ಕೈ ತುಂಬಾ ಹಣವಿದ್ದರೂ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲದವರು ಇದ್ದಾರೆ. ವಿದೇಶ ಪ್ರವಾಸಕ್ಕೆ ಹೋಗಬೇಕಾದರೆ ಎಷ್ಟು ಹಣಬೇಕು, ವಿಮಾನ ಟಿಕೆಟ್‌ ದರವೆಷ್ಟು, ಅಲ್ಲಿನ ಊಟ-ತಿಂಡಿ ಮತ್ತು ವಸತಿಗೆ ತಗುಲುವ ವೆಚ್ಚವೆಷ್ಟು, ಪಾಸ್‌ಪೋರ್ಟ್‌ ಮತ್ತು ವೀಸಾ ಪ್ರೊಸೆಸಿಂಗ್‌ ಹೇಗೆ ಎಂಬುದರ ಮಾಹಿತಿ ಹಲವರಿಗೆ ಇರುವುದಿಲ್ಲ. ಪ್ರವಾಸದ ಕುರಿತು ಅರಿವಿಲ್ಲದ ಮುಗ್ಧ ಜನರು ವಂಚನೆಗೆ ಒಳಗಾಗುವ ಸಾಧ್ಯತೆಯಿರುತ್ತದೆ. ವಿದೇಶಿ ಪ್ರವಾಸದ ಆಮಿಷವೊಡ್ಡಿ ಮೋಸಮಾಡುವ ಒಂದು ವರ್ಗವಿದೆ. ಈಗಾಗಲೇ ಎಷ್ಟೋ ಜನರು ವಿದೇಶಿ ಪ್ರವಾಸದ ಮೋಹಕ್ಕೆ ಸಿಲುಕಿ ಲಕ್ಷಾಂತರ ರುಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

    ವಿದೇಶ ಪ್ರವಾಸ ಕೈಗೊಳ್ಳುವ ಪ್ರತಿಯೊಬ್ಬರಿಗೂ ಅರಿವು ಮುಖ್ಯ. ಪ್ಯಾಕೆಜ್‌ ಟೂರ್‌ನಲ್ಲಿ ಹಣ ಪಾವತಿಸಿ ವಿದೇಶಕ್ಕೆ ಹೋಗುವವರು ನೂರು ಬಾರಿ ಯೋಚಿಸಬೇಕಾಗುತ್ತದೆ. ಪ್ರವಾಸದ ಕುರಿತು ಏನೇನೂ ಗೊತ್ತಿಲ್ಲದವರು ತಿಳಿದವರಿಂದ ಅಗತ್ಯ ಮಾಹಿತಿ ಪಡೆಯುವುದು ಸೂಕ್ತ. ವಿಮಾನ ಟಿಕೆಟ್‌ ದರ, ಯಾವ ದೇಶದ ಪ್ರವಾಸಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂಬ ಅರಿವಿರಬೇಕು. ವಿಮಾನಯಾನ ಸಂಸ್ಥೆಗೆ ಒದಗಿಸಬೇಕಾದ ದಾಖಲೆಗಳು ಯಾವುವು ಎಂಬುದರ ಬಗ್ಗೆಯೂ ತಿಳಿದಿರಬೇಕು.

    ಪ್ರವಾಸಿಗರಿಗೆ ಸಲಹೆಗಳು

    ಪ್ಯಾಕೆಜ್‌ ಪ್ರವಾಸ ಹೊರಡುವ ಮುನ್ನ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ತಗುಲುವ ವೆಚ್ಚದ ಕುರಿತಾದ ಅನುಮಾನವನ್ನು ಬಗೆಹರಿಸಿಕೊಳ್ಳಬೇಕು.

    ನೀವು ತಲುಪಲಿರುವ ಜಾಗದ ಕುರಿತಾದ ಮಾಹಿತಿ, ವಿಮಾನ ದರದ ಕುರಿತಾದ ಮಾಹಿತಿಯನ್ನು ಸಂಗ್ರಹಿಸಬೇಕು. ಪರಿಣತರೊಂದಿಗೆ ಮತ್ತು ರೆಗ್ಯುಲರ್‌ ಆಗಿ ಪ್ರವಾಸ ಹೋಗುವ ವ್ಯಕ್ತಿಗಳೊಂದಿಗೆ ಕೆಲ ನಿಮಿಷಗಳಾದರೂ ಮಾತನಾಡಬೇಕು.

    ಕಡಿಮೆ ಬಜೆಟ್‌ನಲ್ಲಿ ದೇಶ-ವಿದೇಶ ಸುತ್ತಿಸುತ್ತೇವೆ ಎಂಬ ವ್ಯಕ್ತಿಗಳ ಮಾತನ್ನು ಸುಲಭಕ್ಕೆ ನಂಬಬಾರದು. ಅವರ ಏಜೆನ್ಸಿಯ ಬಗ್ಗೆ ಖಚಿತ ಮಾಹಿತಿಯನ್ನು ಪಡೆಯಬೇಕು. ಯಾರೆಲ್ಲ ಪ್ರವಾಸಿಗರು ಆ ಪ್ಯಾಕೆಜ್‌ನಡಿ ಬರಲಿದ್ದಾರೆ ಎಂಬುದನ್ನು ವಿಚಾರಿಸಬೇಕು.

    ಇಂದು ಇಂಟರ್ನೆಟ್‌ ಯುಗವಾದ್ದರಿಂದ ಪ್ರತಿ ಮಾಹಿತಿಯೂ ಅಂಗೈನಲ್ಲಿ ಸಿಗುತ್ತದೆ. ಯಾವುದೇ ವಿಷಯದ ಕುರಿತು ಅನುಮಾನಗಳಿದ್ದರೂ ಗೂಗಲ್‌ನಿಂದ ಮಾಹಿತಿ ಪಡೆಯಬಹುದು.

    ವಾಟ್ಸ್ಯಾಪ್‌ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸದ ಕುರಿತು ಪ್ರಕಟವಾಗುವ ಜಾಹೀರಾತುಗಳನ್ನು ನಂಬಬಾರದು. ಬಹುತೇಕ ಜಾಹೀರಾತುಗಳು ಸುಳ್ಳಾಗಿರುತ್ತವೆ. ಮೋಸದ ಜಾಲವಿರುತ್ತದೆ.

    ಪ್ಯಾಕೆಜ್‌ ಟೂರ್‌ ಹೆಸರಿನಲ್ಲಿ ಹಣ ಕೇಳುವ ವ್ಯಕ್ತಿಗಳನ್ನು ಸುಲಭಕ್ಕೆ ನಂಬಬಾರದು. ಅವರನ್ನು ಖುದ್ದು ಭೇಟಿಯಾಗಿ ಅವರ ಕಚೇರಿಗೂ ಒಮ್ಮೆ ಹೋಗಿ ಬರಬೇಕು. ಅವರ ವಿಶ್ವಾಸರ್ಹತೆಯನ್ನು ಪರೀಕ್ಷಿಸಬೇಕು.

    ಪ್ಯಾಕೆಜ್‌ ಟೂರಿನಲ್ಲಿ ವಂಚಿಸುವವರ ಕುರಿತಾದ ಮಾಹಿತಿಯನ್ನು ತಕ್ಷಣವೇ ಸ್ಥಳೀಯ ಪೊಲೀಸ್‌ ಠಾಣೆಗೆ ಕೊಡಬೇಕು.

    ಇತ್ತೀಚೆಗಿನ ವಂಚನೆ

    ಕಡಿಮೆ ಬಜೆಟ್‌ನಲ್ಲಿ ಉತ್ತರ ಪ್ರದೇಶ ಮತ್ತು ದೆಹಲಿ ಪ್ರವಾಸ ಮಾಡಿಸುವುದಾಗಿ ನಂಬಿಸಿ ಮೈಸೂರಿನ ಇಬ್ಬರು ಮಹಿಳೆಯರಿಗೆ ರು. 18 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಮಹಿಳೆಯರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆನ್‌ಲೈನ್‌ವೊಂದರಲ್ಲಿ ಪ್ರಕಟವಾಗಿದ್ದ ಪ್ರವಾಸದ ಕುರಿತಾದ ಜಾಹೀರಾತನ್ನು ನೋಡಿ ಮಹಿಳೆಯರು ಮೋಸ ಹೋಗಿದ್ದಾರೆ. ಜಾಹೀರಾತಿನಲಿದ್ದ ಫೋನ್‌ ನಂಬರ್‌ಗೆ ಕರೆಮಾಡಿ ಪ್ಯಾಕೇಜ್‌ ಟೂರಿನ ಕುರಿತು ಮಹಿಳೆಯರು ವಿಚಾರಿಸಿದ್ದು, ಏಜೆನ್ಸಿ ಸೋಗಿನಲ್ಲಿದ್ದ ನಕಲಿ ವ್ಯಕ್ತಿಗಳು ದೆಹಲಿ ಮತ್ತು ಉತ್ತರಪ್ರದೇಶವನ್ನು ತೋರಿಸುವಂತೆ ನಂಬಿಸಿ ಬರೋಬ್ಬರಿ 18 ಲಕ್ಷ ರೂಪಾಯಿ ವಂಚಿಸಿದ್ದಾರೆ.