ಪ್ರವಾಸಕ್ಕೆ ತೆರಳುವುದಿರಲಿ, ಅನಾರೋಗ್ಯದಿಂದ ಬಳಲುತ್ತಿರುವುದಿರಲಿ, ಮನದಲ್ಲಿ ಯಾವುದಾದರೂ ಗೊಂದಲ ಕಾಡುತ್ತಿರಲಿ.. ಈ ಎಲ್ಲ ಸಂದಿಗ್ಧ ಪರಿಸ್ಥಿತಿಗಳಲ್ಲೂ ಗೂಗಲ್‌ನಲ್ಲಿ ಪರಿಹಾರ ಸಿಗುತ್ತದೆ. ನಿಮ್ಮ ಯಾವುದೇ ಪ್ರಶ್ನೆ ಇದ್ದರೂ ಅದಕ್ಕೊಂದು ಪರಿಹಾರ ಒದಗಿಸುತ್ತದೆ ಗೂಗಲ್. ಆದರೆ, ಕೆಲವೊಮ್ಮೆ ಈ ಗೂಗಲ್‌ನಿಂದ ಫಜೀತಿ ಉಂಟಾಗಿದ್ದೂ ಇದೆ. ಹೀಗಾಗಿ, ವಿಮಾನ ಪ್ರಯಾಣದ ವೇಳೆ ಗೂಗಲ್ನ ನಂಬಿ ಮಾತ್ರ ಕೆಡಬೇಡಿ ಎನ್ನುತ್ತಾರೆ ತಿಳಿದವರು. ವಿಮಾನ ತಡವಾಯಿತು ಅಥವಾ ಕ್ಯಾನ್ಸಲ್ ಆಯಿತು ಎಂದು ಏರ್‌ಲೈನ್ ಕಸ್ಟಮರ್ ಸರ್ವಿಸ್ ನಂಬರ್ ಹುಡುಕಲು ಹೋದಿರೋ.. ನಿಮ್ಮ ಕಥೆ ಮುಗಿದಂತೆ. ನಿಮ್ಮ ಹಣೆಗೆ ದೊಡ್ಡ ನಾಮ ಬೀಳೋದು ಗ್ಯಾರಂಟಿ.

ದೊಡ್ಡ ಸ್ಕ್ಯಾಮ್

ನಿಮ್ಮನ್ನು ಮೋಸದ ಕೂಪಕ್ಕೆ ತಳ್ಳಲು ಕೆಲವರು ಕಾಯುತ್ತಾ ಇರುತ್ತಾರೆ. ನೀವು ಕೊಂಚ ಎಚ್ಚರ ತಪ್ಪಿದರೂ ನೀವು ದೊಡ್ಡ ನಷ್ಟ ಅನುಭವಿಸೋದು ಖಚಿತ. ನೀವು ಏರ್‌ಲೈನ್‌ ನಂಬರ್ ಹುಡುಕಿ ಹೋದರೆ ಅಲ್ಲಿ ತೆರೆದುಕೊಳ್ಳೋದು ವಂಚನೆಯ ಜಾಲ. ಗೂಗಲ್‌ನಲ್ಲಿ ಏರ್‌ಲೈನ್ ಹೆಲ್ಪ್‌ಲೈನ್ ಸರ್ಚ್ ಮಾಡಿದಾಗ ಒರಿಜಿನಲ್ ಸೈಟ್‌ಗಳನ್ನೇ ಹೋಲುವ ಒಂದಷ್ಟು ನಕಲಿ ಸೈಟ್‌ಗಳು ಓಪನ್ ಆಗುತ್ತವೆ. ನೀವು ಏರ್ ಲೈನ್‌ನವರ ಜೊತೆ ಚಾಟ್ ಮಾಡುತ್ತಿದ್ದೀರಿ ಎಂದುಕೊಂಡಿರುತ್ತೀರಿ. ಆದರೆ, ನಿಮ್ಮ ಎದುರು ಇರುವುದು ದೊಡ್ಡ ವಂಚನೆಯ ಜಾಲ.

helpline

ನಿಮ್ಮ ಬಳಿ ಕೇಳೋದೇನು?

ನಿಮ್ಮ ವಿಮಾನವನ್ನು ಮತ್ತೆ ಬುಕ್ ಮಾಡುತ್ತೇವೆ ಎಂದು ಕ್ರೆಡಿಟ್ ಕಾರ್ಡ್ ವಿವರಕ್ಕೆ ಬೇಡಿಕೆ ಇಡಬಹುದು. ಟಿಕೆಟ್ ಕ್ಯಾನ್ಸಲೇಷನ್ ಫೀ ಇದೆ ಅಥವಾ ಹೊಸ ದರಕ್ಕೆ ಅನುಗುಣವಾಗಿ ನೀವು ಹಣ ಪಾವತಿ ಮಾಡಬೇಕು ಎಂದು ಕೇಳಬಹುದು. ನಿಮ್ಮ ಪಾಸ್‌ಪೋರ್ಟ್ ಅಥವಾ ಆಧಾರ್ ಸಂಖ್ಯೆ ಕೇಳಬಹುದು. ಇಮೇಲ್‌ಗೆ ಕಳಿಸಿರೋ ಲಿಂಕ್‌ ಕ್ಲಿಕ್ ಮಾಡಿ ಎಂದು ಹೇಳಬಹುದು.

ಯಾಮಾರಿದರೆ ಹಣ ಹೋಗುತ್ತದೆ…

ಈ ರೀತಿ ಸ್ಕ್ಯಾಮ್ ಮಾಡುವವರ ಪ್ರಮುಖ ಉದ್ದೇಶ ನಿಮ್ಮಿಂದ ಹಣ ಕಿತ್ತುಕೊಳ್ಳೋದು. ಅವರು ಏರ್‌ಲೈನ್‌ನವರು ಎಂದು ನಂಬಿಬಿಟ್ಟರೆ ನಿಮ್ಮ ಸೇವಿಂಗ್ಸ್ ಹಣ ಅನ್ಯರ ಪಾಲಾಗೋದು ಗ್ಯಾರಂಟಿ. ಹೀಗಾಗಿ, ಈ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯ.

ಈ ಸ್ಕ್ಯಾಮ್ ನಡೆಯೋದು ಹೇಗೆ?

ಈ ಸ್ಕ್ಯಾಮರ್‌ಗಳು ಅವರ ಫೇಕ್ ಸೈಟ್ ಟಾಪ್‌ನಲ್ಲಿ ಬರುವಂತೆ ಮಾಡಲು ಎಸ್ಇಒ ಟ್ರಿಕ್‌ಗಳನ್ನು ಬಳಕೆ ಮಾಡುತ್ತಾರೆ. ಇಲ್ಲವೇ ಆ್ಯಡ್ ಕೊಟ್ಟು ತಮ್ಮ ಸೈಟ್ ಮೊದಲು ತೋರಿಸುವಂತೆ ನೋಡಿಕೊಳ್ಳುತ್ತಾರೆ. ಅಲ್ಲಿ ಸ್ಪಾನ್ಸರ್ಡ್ ಎಂದು ಬರೆದುಕೊಂಡಿರೋದು ಸಣ್ಣದಾಗಿ ತೋರಿಸುತ್ತಿರುತ್ತದೆಯಾದರೂ ಎಲ್ಲ ಬಾರಿಯೂ ಅತ್ತ ಲಕ್ಷ್ಯ ಹೋಗುತ್ತದೆ ಎನ್ನಲು ಸಾಧ್ಯವಿಲ್ಲ. ಇನ್ನು ಅವರ ವೆಬ್‌ಸೈಟ್ ಶ್ರೇಣಿ ಏರಿಕೆ ಆಗಲು ಎಐ ಟೂಲ್‌ಗಳನ್ನು ಬಳಕೆ ಮಾಡುತ್ತಾರೆ. IndiGo customer service ಅಥವಾ Air India cancellation support ಎಂಬಿತ್ಯಾದಿ ಶಬ್ದಗಳು ಸರ್ಚ್ ಮಾಡಿದರೆ ತಮ್ಮದೇ ಸೈಟ್ ಟಾಪ್‌ನಲ್ಲಿ ತೋರಿಸುವಂತೆಯೂ ಮಾಡಿಕೊಂಡಿರುತ್ತಾರೆ.

Airline helpdesk

ಬದಲಿ ಆಯ್ಕೆಗಳೇನು?

ವಿಮಾನ ರದ್ದಾದರೆ ಅಥವಾ ವಿಳಂಬ ಆದರೆ ಏರ್‌ಲೈನ್‌ಗೆ ಸಂಬಂಧಿಸಿದ ಅಧಿಕೃತ ಆ್ಯಪ್ ಹಾಗೂ ವೆಬ್‌ಸೈಟ್ ಬಳಕೆ ಮಾಡಿ. ಬಹುತೇಕ ಏರ್‌ಲೈನ್‌ಗಳು ಆ್ಯಪ್ ಆರಂಭಿಸಿವೆ. ಇದರಿಂದ ಸ್ಕ್ಯಾಮ್‌ಗೆ ಒಳಗಾಗುವ ಸಾಧ್ಯತೆ ಕಡಿಮೆ. ಆ್ಯಪ್ ಮೂಲಕ ನೀವು ಅಧಿಕೃತ ವ್ಯಕ್ತಿಗಳ ಬಳಿ ಸಹಾಯ ಪಡೆಯಬಹುದು.

ಏರ್‌ಪೋರ್ಟ್ ಹೆಲ್ಪ್ ಡೆಸ್ಕ್ ಕೌಂಟರ್‌ಗೆ ತೆರಳೋದು ಕೂಡ ಒಂದು ಒಳ್ಳೆಯ ಆಯ್ಕೆ. ಸಾಲು ದೊಡ್ಡದಾಗಿದ್ದರೂ ಅಲ್ಲಿ ವಂಚನೆಯ ಭಯ ಇರೋದಿಲ್ಲ.

ಬೋರ್ಡಿಂಗ್ ಪಾಸ್ ಮೇಲೆ ಸಹಾಯವಾಣಿ ನಂಬರ್ ಬರೆದಿರುತ್ತದೆ. ಅದಕ್ಕೆ ಕರೆ ಮಾಡಿ ಕೂಡ ನೀವು ಸಹಾಯ ಪಡೆಯಬಹುದು.

ಏರ್‌ಲೈನ್‌ಗಳು ಅಧಿಕೃತ ಸೋಷಿಯಲ್ ಮೀಡಿಯಾ ಖಾತೆ ಹೊಂದಿರುತ್ತವೆ. ಟ್ವೀಟ್ ಮಾಡುವ ಮೂಲಕ ಅಥವಾ ನೇರವಾಗಿ ಮೆಸೇಜ್ ಮಾಡುವ ಮೂಲಕ ಸಹಾಯ ಕೇಳಬಹುದು.