ಈ ವರ್ಷ ಮದುವೆಯಾದ ನವ ಜೋಡಿಗಳು ಹನಿಮೂನ್‌ ಪ್ಲ್ಯಾನ್‌ನಲ್ಲಿ ಇರುತ್ತಾರೆ. ಹನಿಮೂನ್‌ ಎಂದ ಕೂಡಲೇ ದುಬಾರಿ ಖರ್ಚಿನಲ್ಲಿ ಫಾರಿನ್‌ಗೆ ಹಾರುವವರೇ ಹೆಚ್ಚು. ಆದರೆ ಕಡಿಮೆ ಖರ್ಚಿನಲ್ಲಿಯೇ ದಿ ಬೆಸ್ಟ್‌ ಅನ್ನಿಸುವಂತಹ ಜಾಗಗಳಲ್ಲಿ ಹನಿಮೂನ್‌ ಮುಗಿಸಿಕೊಳ್ಳಬಹುದು. ಚೀಪ್‌ ಅಂಡ್‌ ಬೆಸ್ಟ್‌ ಪ್ರೈಸ್‌ನಲ್ಲಿ ವಾರವಿಡೀ ಹನಿಮೂನ್‌ ಟ್ರಿಪ್‌ ಮಾಡಬಹುದಾದ ತಾಣಗಳು ಭಾರತದಲ್ಲಿದೆ. ಅಂತಹ ಅದ್ಭುತ ಸ್ಥಳಗಳ ಕುರಿತು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ. 2025ನೇ ವರ್ಷ ಮುಗಿಯುವಷ್ಟರೊಳಗೆ ಈ ಜಾಗಗಳಿಗೆ ಮದುವೆಯಾದವರು ʼಮಧುರಾತ್ರಿʼಗಾಗಿ ಹೋಗಿ ಬನ್ನಿ.

ಅಂಡಮಾನ್‌ ದ್ವೀಪ
ಅಂಡಮಾನ್‌ ದ್ವೀಪ ರೋಮ್ಯಾಂಟಿಕ್‌ ಆದ ಮತ್ತು ಹನಿಮೂನ್‌ಗೆ ಹೇಳಿ ಮಾಡಿದ ತಾಣ. ಆಗಷ್ಟೇ ಮದುವೆಯಾದ ನವ ಜೋಡಿಗಳು ಅಂಡಮಾನ್‌ಗೆ ಪ್ರವಾಸ ಬೆಳೆಸಬಹುದು. ಅಲ್ಲಿನ ಮನಮೋಹಕ ಬೀಚ್‌ಗಳ ಮಧ್ಯೆ ನಿಂತು ಫೋಟೊಶೂಟ್‌ಗೆ ಪೋಸ್‌ ಕೊಡುತ್ತಾ ಮೈ ಮರೆಯಬಹುದು. ಬಹುಮುಖ್ಯವಾಗಿ ಅದ್ಭುತವಾದ ರಾಧಾನಗರ ಬೀಚ್‌ನಲ್ಲಿ ತಮ್ಮ ಸಂಗಾತಿಯ ಜೊತೆಗೆ ದೋಣಿ ವಿಹಾರ ಮಾಡಬೇಕು. ಅದೊಂದು ರೀತಿಯ ಬೆಚ್ಚಗಿನ ಅನುಭವ. ಹ್ಯಾವ್ಲಾಕ್ ದ್ವೀಪದಲ್ಲಿ ಸ್ನಾರ್ಕ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್‌ನಂತಹ ಥ್ರಿಲ್ಲಿಂಗ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಅಷ್ಟೇ ಅಲ್ಲದೆ ಐತಿಹಾಸಿಕ ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಬಹುದು. ಅಲ್ಲಿಯೇ ಸಮೀಪವಿರುವ ಬೀಚ್‌ ರೆಸಾರ್ಟ್‌ನಲ್ಲಿ ಹಿತವಾಗಿ ಕಾಲ ಕಳೆಯಬಹುದು. ಹನಿಮೂನ್‌ ಹೋಗುವ ಪ್ಲ್ಯಾನ್‌ ಇದ್ದರೆ ಅಂಡಮಾನ್‌ ನಿಮ್ಮ ಮೊದಲ ಆಯ್ಕೆಯಾಗಿರಲಿ.

Honeymoon !

ಗೋವಾ
ಗೋವಾ ಪ್ರವಾಸಿಗರ ಹಾಟ್‌ ಫೇವರಿಟ್‌ ತಾಣ. ಹನಿಮೂನ್‌ ಹೋಗ ಬಯಸುವವರಿಗಂತೂ ಸ್ವರ್ಗಸೀಮೆ. ಅಲ್ಲಿ ಹತ್ತಾರು ಬೀಚ್‌ಗಳಿವೆ. ದಿನಗಟ್ಟಲೆ ಕಾಲ ಕಳೆಯಬಹುದಾದ ಸಖತ್ತಾದ ತಾಣಗಳಿವೆ. ಅಲ್ಲಿನ ವಾತಾವರಣವೇ ಮಜಬೂತಾದ ಅನುಭವವನ್ನು ನೀಡುತ್ತದೆ. ಮೊದಲೇ ಹೇಳಿದಂತೆ ಹನಿಮೂನ್‌ ಹೋಗುವ ನವ ಜೋಡಿಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಗೋವಾ ಹೋಗಿ ಬರಬಹುದು.

goa


ಆಗ್ರಾ
ಆಗ್ರಾ ಎಂದ ಕೂಡಲೇ ಪ್ರೇಮಿಗಳು ನೆನಪಾಗುತ್ತಾರೆ. ಪ್ರೇಮದ ಮಹತ್ವ ಅರಿವಿಗೆ ಬರುತ್ತದೆ. ಹುಡುಗರು ತಾವು ಪ್ರೀತಿಸುವ ಹುಡುಗಿಯನ್ನು ಎಂದಾದರೂ ಒಮ್ಮೆ ಆಗ್ರಾದಲ್ಲಿರುವ ತಾಜ್‌ಮಹಲ್‌ಗೆ ಕರೆದೊಯ್ಯಬೇಕು ಎಂದು ಬಯಸುತ್ತಾರೆ. ತನ್ನ ಹುಡುಗಿಗಾಗಿ ತಾಜ್‌ಮಹಲ್‌ ಕಟ್ಟದಿದ್ದರೂ ಹೃದಯದಲ್ಲಿ ಪ್ರೇಮದ ಮಹಲನ್ನು ಕಟ್ಟುತ್ತೇನೆ ಎಂದು ಡೈಲಾಗ್‌ ಹೊಡೆಯುತ್ತಾರೆ. ಒಟ್ಟಾರೆ ತಾಜ್‌ಮಹಲ್‌ ಪ್ರೇಮದ ಸಂಕೇತ. ಷಹಜಹಾನ್‌ ತನ್ನ ಹೆಂಡತಿ ಮುಮ್ತಾಜ್‌ಳ ನೆನಪಿಗಾಗಿ ಅದನ್ನು ನಿರ್ಮಿಸಿದ್ದಾನೆ ಎಂದು ಹೇಳಲಾಗಿದೆ. ಆಗಷ್ಟೇ ಮದುವೆಯಾದ ನವ ಜೋಡಿಗಳು ಹನಿಮೂನ್‌ಗಾಗಿ ಅಲ್ಲಿಗೆ ಹೋಗಬಹುದು. ಅಲ್ಲಿಯೇ ನಿಂತು ಐ ಲವ್‌ ಯೂ ಎಂದು ಜೋರಾಗಿ ತಮ್ಮ ಸಂಗಾತಿಗೆ ಕೂಗಿ ಹೇಳಬಹುದು. ಬಿಳಿ ಅಮೃತಶಿಲೆಯಿಂದ ಕಂಗೊಳಿಸುತ್ತಿರುವ ಈ ಸ್ಮಾರಕವು ಎಲ್ಲರನ್ನು ಬೆರಗುಗೊಳಿಸುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಅಲ್ಲಿನ ಆಗ್ರಾ ಕೋಟೆಯೂ ಅದ್ಭುತವಾಗಿದೆ. ಹಾಗಾಗಿ ಹನಿಮೂನ್‌ ಹೋಗುವವರು ತಪ್ಪದೇ ಆಗ್ರಾ ಹೋಗಬೇಕು.

Agra