ಸೂರ್ಯಾಸ್ತವನ್ನು ವೀಕ್ಷಿಸಲು ಇದು ವಿಶ್ವದಲ್ಲೇ ಅತ್ಯುತ್ತಮ ಸ್ಥಳ!
ಇತ್ತೀಚೆಗಷ್ಟೇ ಟ್ರಾವೆಲ್ ಇನ್ಶೂರೆನ್ಸ್ ಕಂಪನಿಯಾದ ಆಲ್‌ಕ್ಲಿಯರ್ (AllClear), ವಿಶ್ವದ ಅತ್ಯುತ್ತಮ ಸೂರ್ಯಾಸ್ತದ ತಾಣಗಳ ಕುರಿತು ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಟರ್ಕಿಯ ಕಪ್ಪಡೋಸಿಯಾವನ್ನು ವಿಶ್ವದಲ್ಲೇ ಅತ್ಯುತ್ತಮ ಸೂರ್ಯಾಸ್ತದ ಸ್ಥಳವೆಂದು ಗುರುತಿಸಿದೆ.
ಕಡಲತೀರದಲ್ಲಿ ಕುಳಿತು ಸೂರ್ಯೋದಯ, ಸೂರ್ಯಾಸ್ತವನ್ನು ನೋಡುವ ಖುಷೀಯೇ ಬೇರೆ. ಮರಳಿನ ಮೇಲೆ ಕುಳಿತು, ಶಾಂತವಾದ ಅಲೆಗಳ ಶಬ್ದವನ್ನು ಕೇಳುತ್ತಾ, ಮುಳುಗುವ ಸೂರ್ಯನನ್ನು ನೋಡಬೇಕೆನ್ನುವುದು ಪ್ರಕೃತಿ ಪ್ರಿಯರ ಮನದಾಸೆ. ಸಾಮಾನ್ಯವಾಗಿ ಯಾವುದೇ ಕಡಲತೀರದಲ್ಲಿ ಕುಳಿತರೂ ಸೂರ್ಯಾಸ್ತವನ್ನು ಒಂದೇ ತೆರನಾಗಿ ಕಾಣಬಹುದು. ಆದರೆ ಇಡೀ ವಿಶ್ವದಲ್ಲಿ ಇದೊಂದೇ ಕಡಲ ತೀರದಲ್ಲಿ ಸೂರ್ಯಾಸ್ತದ ಅನುಭವ ಬೇರೆಯದೇ ಇರಲಿದೆಯಂತೆ.

ಹೌದು, ಟ್ರಾವೆಲ್ ಇನ್ಶೂರೆನ್ಸ್ ಕಂಪನಿಯಾದ ಆಲ್‌ಕ್ಲಿಯರ್ (AllClear), ಸೂರ್ಯಾಸ್ತದ ವೀಕ್ಷಣೆಗೆ ವಿಶ್ವದಲ್ಲೇ ಯಾವ ತಾಣಗಳು ಅತ್ಯುತ್ತಮ ಎಂಬ ಬಗ್ಗೆ ಅಧ್ಯಯನವನ್ನು ನಡೆಸಿದೆ. ಇದಕ್ಕಾಗಿ ಪ್ರಪಂಚದಾದ್ಯಂತ ಹೆಸರುಮಾಡಿರುವ 100 ತಾಣಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ನಂತರ ಸೂರ್ಯಾಸ್ತದ ಗುಣಮಟ್ಟದ ಮೇಲೆ ಪ್ರಭಾವ ಬೀರುವ ಐದು ಪ್ರಮುಖ ಅಂಶಗಳ ಆಧಾರ ಮೇಲೆ ಸ್ಕೋರ್ ಮಾಡಲಾಯಿತು. ಮೋಡ ಮುಚ್ಚಿಕೊಂಡಿರುವ , ಗಾಳಿಯ ವೇಗ, ಮಳೆ, ಆರ್ದ್ರತೆ ಇಂತಹ ಅಂಶಗಳನ್ನು ಇದಕ್ಕಾಗಿ ಪರಿಗಣಿಸಲಾಗಿದೆ.
ಟರ್ಕಿಯ ಕಪ್ಪಡೋಸಿಯಾದ ಪ್ರಶಾಂತ ಪರಿಸರವು ಈ ಅಂಶಗಳಲ್ಲಿ 100 ರಲ್ಲಿ 86.1 ಅಂಕಗಳನ್ನು ಗಳಿಸಿದೆ. ಹವಾಯಿಯ ವೈಕಿಕಿ 100 ರಲ್ಲಿ 79.8 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಮೆರಿಕದ ಅರಿಜೋನಾದ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನವು ಪಡೆದುಕೊಂಡಿದ್ದು, 100 ರಲ್ಲಿ 79.6 ರ ಅಂಕ ಗಳಿಸಿದೆ.

ಇತರ ಪ್ರಮುಖ ಸೂರ್ಯಾಸ್ತದ ತಾಣಗಳಲ್ಲಿ ಆಸ್ಟ್ರೇಲಿಯಾದ ಐಯರ್ಸ್ ರಾಕ್ ನಾಲ್ಕನೇ ಸ್ಥಾನದಲ್ಲಿದೆ, ನಂತರ ವ್ಯೋಮಿಂಗ್‌ನಲ್ಲಿರುವ ಗ್ರ್ಯಾಂಡ್ ಟೆಟನ್ ರಾಷ್ಟ್ರೀಯ ಉದ್ಯಾನವನವು ಐದನೇ ಸ್ಥಾನಗಳನ್ನು ಗಳಿಸಿದೆ.
ಒಟ್ಟಿನಲ್ಲಿ ಸೂರ್ಯಾಸ್ತವನ್ನು ಆನಂದಿಸಬೇಕು, ಸಂಭ್ರಮಿಸಬೇಕು ಎಂದುಕೊಳ್ಳುವವರು, ವಿಶ್ವದ ಈ ಪ್ರಮುಖ ದೇಶಗಳ ತಾಣಗಳಿಗೆ ಭೇಟಿ ಕೊಡಿ. ಸೂರ್ಯಾಸ್ತ ಇಷ್ಟೂ ಅದ್ಭುತವಾಗಿರಲಿದೆಯಾ ಎಂದು ಬೆರಗಾಗಿಬಿಡುವುದು ಖಚಿತ.