ಟ್ರಾವೆಲ್ ಫೋಟೋಗ್ರಫಿ ಕ್ರೇಜಿದ್ದರೆ ಈ ಜಾಗಗಳಿಗೆ ಹೋಗಿ!
ಬಹುತೇಕರಿಗೆ ಫೋಟೊಗ್ರಫಿ ಕ್ರೇಜ್ ಇರುತ್ತದೆ. ಅದರಲ್ಲೂ ಕೆಲವರಿಗೆ ಟ್ರಾವೆಲ್ ಫೋಟೊಗ್ರಫಿ ಎಂದರೆ ಎಲ್ಲಿಲ್ಲದ ಮೋಹ. ಕೈಯಲ್ಲಿ ಕ್ಯಾಮೆರಾ ಹಿಡಿದು ಊರೂರು ಸುತ್ತುವವರಿದ್ದಾರೆ. ಅಂತಹ ಪ್ಯಾಷನೇಟ್ ಫೋಟೊಗ್ರಾಫರ್ಸ್‌ಗಳು ತಪ್ಪದೇ ಹೋಗಬೇಕಾದ ಹತ್ತಾರು ತಾಣಗಳಿವೆ.
ಭಾರತದಲ್ಲಿರುವ ಬಹುತೇಕ ಪ್ರವಾಸಿ ತಾಣಗಳು ಫೋಟೊಜೆನಿಕ್ ಆಗಿವೆ. ಫೋಟೊಶೂಟ್ ಕ್ರೇಜ್ ಇರುವವರು ಕ್ಯಾಮೆರಾ ಹಿಡಿದು ಊರೂರು ಸುತ್ತುತ್ತಾರೆ. ತಮ್ಮ ಕ್ಯಾಮೆರಾದಲ್ಲಿ ಅದ್ಭುತವಾದ ಫೋಟೊಗಳನ್ನು ಸೆರೆ ಹಿಡಿಯುತ್ತಾರೆ. ಅದರಲ್ಲೂ ಟ್ರಾವೆಲ್ ಫೋಟೊಶೂಟ್‌ನಲ್ಲಿ ಒಲವಿರುವವರು ಪ್ರತಿ ಕ್ಷಣವೂ ಹೊಸತನ್ನು Capture ಮಾಡಲು ಕಾತರದಿಂದ ಕಾಯುತ್ತಿರುತ್ತಾರೆ. ಟ್ರಾವೆಲ್ ಫೋಟೋಶೂಟ್‌ನಲ್ಲಿ ಕ್ರೇಜ್ ಇರುವ ಫೋಟೊಗ್ರಾಫರ್ಗಳು ತಪ್ಪದೇ ಈ ಜಾಗಗಳಿಗೆ ಭೇಟಿ ನೀಡಬೇಕು.
ಲೋಕ್ತಕ್
ಮಣಿಪುರದ ಲೋಕ್ತಕ್ ಸರೋವರವು ಟ್ರಾವೆಲ್ ಫೋಟೋಗ್ರಫಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇದು ಭಾರತದ ಅತಿದೊಡ್ಡ ಶುದ್ಧ ನೀರಿನ ಸರೋವರ ಎಂದು ಖ್ಯಾತಿಪಡೆದಿದೆ. ಮಣಿಪುರದ ಅತ್ಯದ್ಭಹುತ ಆಕರ್ಷಣೆಗಳಲ್ಲಿ ಒಂದಾಗಿರುವ ಲೋಕ್ತಕ್ ಸರೋವರ ಇಂಫಾಲ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಮಣಿಪುರ ರಾಜ್ಯದಲ್ಲಿ ಹರಿಯುವ ಎಲ್ಲಾ ನದಿಗಳಿಗೆ ನೆಲೆಯಾಗಿದೆ. ಲೋಕ್ತಕ್ ಸರೋವರ ಮತ್ತು ಸೆಂಡ್ರಾ ದ್ವೀಪದ ದೃಸ್ಯವು ಮನಮೋಹಕವಾಗಿದೆ. ಫೋಟೋಗ್ರಾಫರ್‌ಗಳು ತಮಗಿಷ್ಟ ಬಂದ ಆಂಗಲ್‌ನಲ್ಲಿ ಫೋಟೊಗಳನ್ನು ಸರೆಹಿಡಿಯಬಹುದು. ಅಲ್ಲಿನ ವಾತಾವರಣ, ಸೂರ್ಯೋದಯ ಮತ್ತು ಸೂರ್ಯಾಸ್ತದ ಫೋಟೊಶೂಟ್ ನಿಜಕ್ಕೂ ಅದ್ಭುತವಾಗಿರುತ್ತದೆ.
ಲೋಕ್ತಕ್ ವಿಸ್ಮಯವಾಗಿದೆ. ಆದರೆ ಅಲ್ಲಿಗೆ ಪ್ರವಾಸಿಗರು ತಲುಪಲು ರಸ್ತೆಗಳು ದುರಸ್ತಿಯಲ್ಲಿವೆ. ಸ್ವಲ್ಪ ರಿಸ್ಕ್ ತೆಗೆದುಕೊಂಡೇ ಅಲ್ಲಿಗೆ ತಲುಪಬೇಕಾಗುತ್ತದೆ. ಲೋಕ್ತಕ್ ಸರೋವರದಿಂದ ಕೇವಲ 48 ಕಿ.ಮೀ ದೂರದಲ್ಲಿರುವ ಇಂಫಾಲ್‌ನಲ್ಲಿ ವಿಮಾನ ನಿಲ್ದಾಣವಿದೆ. ಇಲ್ಲಿಂದ ಕ್ಯಾಬ್ ಮೂಲಕ ಸರೋವರಕ್ಕೆ ತಲುಪಬಹುದು. ಹತ್ತಿರದ ರೈಲು ನಿಲ್ದಾಣ ದಿಮಾಪುರದಲ್ಲಿದೆ. ರಸ್ತೆ ಮೂಲಕವಾದರೆ ಇಂಫಾಲ್‌ನಿಂದ ಎನ್ಎಚ್ 53 ಮೂಲಕ ಅಥವಾ ಮೊಯಿರಾಂಗ್ ತನಕ ಬಸ್‌ಗಳಲ್ಲಿ ತೆರಳಬಹುದು.

ಹೆಮಿಸ್ ರಾಷ್ಟ್ರೀಯ ಉದ್ಯಾನವನ
ವನ್ಯಜೀವಿ ಫೋಟೊಗ್ರಾಫರ್ಸ್‌ಗೆ ಲಡಾಖ್‌ನ ಹೆಮಿಸ್ ರಾಷ್ಟ್ರೀಯ ಉದ್ಯಾನ ದಿ ಬೆಸ್ಟ್ ತಾಣ. ಇಲ್ಲಿ ಹಿಮ ಚಿರತೆಗಳ ವಾಸ ಸ್ತಳವಾಗಿದೆ. ಇದನ್ನು ‘ಘೋಸ್ಟ್ಸ್ ಆಫ್ ದಿ ಮೌಂಟೇನ್ಸ್’ ಎಂದೂ ಕರೆಯುತ್ತಾರೆ. ಹಿಮಾಲಯದ ದೂರದ ಅರಣ್ಯದಲ್ಲಿ ಕ್ಯಾಂಪಿಂಗ್ ಮಾಡಲು ಅವಕಾಶವಿದೆ. ಸಮುದ್ರ ಮಟ್ಟದಿಂದ 3,300 ಮೀನಿಂದ 6,000 ಮೀಟರ್ ಎತ್ತರದಲ್ಲಿರುವ ಹೆಮಿಸ್ ರಾಷ್ಟ್ರೀಯ ಉದ್ಯಾನವು ವಿಶ್ವದ ಅತಿ ಎತ್ತರ ಮತ್ತು ದಕ್ಷಿಣ ಏಷ್ಯಾದ ಅತಿದೊಡ್ಡ ಉದ್ಯಾನವನವ ಎಂದು ಪ್ರಸಿದ್ಧತೆ ಪಡೆದಿದೆ.
ಈ ಉದ್ಯಾನವನದಲ್ಲಿ ಹಿಮ ಚಿರತೆಗಳಲ್ಲದೆ, ಐಬೆಕ್ಸ್, ಶಾಪು, ಭರಲ್’ನಂತಹ ಇತರ ಪ್ರಾಣಿಗಳೂ ಇವೆ. ಆಲ್ಪೈನ್ ಮತ್ತು ಹುಲ್ಲುಗಾವಲು ಮರಗಳು, ಕಣಿವೆಯ ತಳಭಾಗದಲ್ಲಿ ಹರಡಿರುವ ಪೊದೆಗಳು, 73 ವಿಧದ ಪಕ್ಷಿಗಳು ಈ ಸ್ಥಳದಲ್ಲಿ ವಾಸಿಸುತ್ತಿರುವುದರಿಂದ, ಇದು ಅರಣ್ಯ ಮತ್ತು ಪ್ರಕೃತಿಯನ್ನು ಇಷ್ಟಪಡುವ ಪ್ರವಾಸಿಗರಿಗೆ ಅದ್ಭುತ ಪ್ರವಾಸಿ ಸ್ಥಳವಾಗಿದೆ. ಬಹುಮುಖ್ಯವಾಗಿ ಫೋಟೊಗ್ರಫಿಯಲ್ಲಿ ಕ್ರೇಜ್ ಇರುವವರು ಅದ್ಭುತವಾದ ಫೊಟೊಗಳನ್ನು ಇಲ್ಲಿ ಸೆರೆ ಹಿಡಿಯಬಹುದು.

ಉತ್ತರಾಖಂಡ
ಟ್ರಾವೆಲ್ ಫೋಟೋಗ್ರಾಫರ್‌ಗಳು ತಪ್ಪದೇ ಉತ್ತರಾಖಂಡಕ್ಕೆ ಭೇಟಿ ನೀಡಬೇಕು. ಈ ಜಾಗವು ಹೂವುಗಳ ಕಣಿವೆ ಪ್ರವಾಸಕ್ಕೆ ಉತ್ತಮ ಸ್ಥಳವಾಗಿದೆ. ಸ್ವಿಟ್ಜರ್ಲೆಂಡ್‌ನ ಆಲ್ಪೈನ್ ಹುಲ್ಲುಗಾವಲುಗಳನ್ನು ಇಲ್ಲಿ ಕಾಣಬಹುದು. ಓಕ್ಸ್, ಬರ್ಚ್, ಸಿಲ್ವರ್ ಫರ್ ಮತ್ತು ರೋಡೋಡೆಂಡ್ರನ್ ಗಳು ಕಣ್ಮನ ಸೆಳೆಯುತ್ತದೆ. ಉತ್ತರಾಖಂಡವು ಬಹಳ ಜನಪ್ರಿಯ ಯಾತ್ರಾಸ್ಥಳವಾಗಿಯೂ ಖ್ಯಾತಿಪಡೆದಿದೆ. ಇದು ಗಂಗಾ ಮತ್ತು ಯಮುನಾ ನದಿಗಳ ಮೂಲ ತಾಣವಾಗಿದೆ. ಪ್ರತಿ ವರ್ಷ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದ್ರಿನಾಥ್, ಚಾರ್ ಧಾಮ್‌ಗಳಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಉತ್ತರಾಖಂಡಕ್ಕೆ ಬರುವ ಪ್ರವಾಸಿಗರಿಗೆ ಪ್ರಾಚೀನ ದೇವಾಲಯಗಳು, ಅರಣ್ಯ ಮೀಸಲು ಪ್ರದೇಶಗಳು, ರಾಷ್ಟ್ರೀಯ ಉದ್ಯಾನಗಳು, ಗಿರಿಧಾಮಗಳು, ಶಿಖರಗಳು ಗಮನಸೆಳೆಯುತ್ತವೆ. ಪ್ರವಾಸಿ ಫೋಟೊಗಳನ್ನು ತೆಗೆಯುವವರು ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.
