ತಮಿಳುನಾಡು ಹೇಳಿ ಕೇಳಿ ಪ್ರವಾಸಿಗರ ಅಚ್ಚುಮೆಚ್ಚಿನ ರಾಜ್ಯ. ತಿಂಗಳಿಡೀ ಸುತ್ತಿದರೂ ತಮಿಳುನಾಡಿನ ಗುಂಗಿನಿಂದ ಆಚೆ ಬರಲು ಸಾಧ್ಯವಿಲ್ಲ. ಅಲ್ಲಿನ ದೇವಾಲಯಗಳು, ಕಡಲ ಕಿನಾರೆಗಳು, ಗಿರಿಧಾಮ, ಬೀಚ್‌ ಮತ್ತು ಪುರಾತನ ಸ್ಥಳಗಳು ಪ್ರವಾಸದ ಮೆರಗನ್ನು ಹೆಚ್ಚಿಸುತ್ತಾ ಹೋಗುತ್ತದೆ. ದಕ್ಷಿಣ ಭಾರತ ಪ್ರವಾಸ ಕೈಗೊಳ್ಳುವವರು ತಮಿಳುನಾಡನ್ನು ಅಪ್ಪಿತಪ್ಪಿಯೂ ಮಿಸ್‌ ಮಾಡಿಕೊಳ್ಳುವುದಿಲ್ಲ. ಅಲ್ಲಿ ಅಗತ್ಯವಾಗಿ ನೋಡಲೇಬೇಕಾದ ಮತ್ತು ಪ್ರವಾಸಿಗರ ಮೈಮನ ತಣಿಸುವ ಹತ್ತಾರು ತಾಣಗಳಿವೆ. ದಿ ಬೆಸ್ಟ್‌ ತಾಣಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಪಿಚಾವರಂ

ವಿಶ್ವದ ಎರಡನೇ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯಕ್ಕೆ ಹೆಸರುವಾಸಿಯಾದ ಪಿಚಾವರಂ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿದೆ. ಈ ಪಟ್ಟಣವು ವೆಲ್ಲಾರ್ ಮತ್ತು ಕೊಲೆರೂನ್ ನಡುವೆ ನೆಲೆಗೊಂಡಿರುವ ವಿಶಾಲವಾದ ಮ್ಯಾಂಗ್ರೋವ್‌ ಅರಣ್ಯಗಳಿಗೆ ಹೆಸರುವಾಸಿಯಾಗಿದೆ .ಪಿಚಾವರಂ ಪ್ರಯಾಣವು ಮ್ಯಾಂಗ್ರೋವ್ ಜೌಗು ಪ್ರದೇಶಗಳಲ್ಲಿ ದೋಣಿ ವಿಹಾರದೊಂದಿಗೆ ಆರಂಭಿಸಬಹುದು. ಆ ಜಾಗವು ಅಸಂಖ್ಯಾತ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಅಲ್ಲಿನ ಹಿತವಾದ ವಾತಾವರಣ ಪ್ರವಾಸಿಗರಿಗೆ ಹಿತಾನುಭವವನ್ನು ನೀಡುತ್ತದೆ.

Pichavaram



ಅಲ್ಲಿಗೆ ಹೇಗೆ ಹೋಗುವುದು?:  ಪಿಚಾವರಂ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 200 ಕಿ.ಮೀ ದೂರದಲ್ಲಿದೆ. ಹತ್ತಿರದ ರೈಲು ನಿಲ್ದಾಣವಾದ ಚಿದಂಬರಂನಿಂದ ಸುಮಾರು 13 ಕಿ.ಮೀ ದೂರದಲ್ಲಿದೆ. ರಸ್ತೆಯ ಮೂಲಕ ಪಿಚಾವರಂ ತಲುಪಿ ಕಡಲೂರಿನಿಂದ ಬಸ್‌ನಲ್ಲಿ ಪ್ರಯಾಣಿಸಬಹುದು.

ಧನುಷ್ಕೋಡಿ

ಐತಿಹಾಸಿಕವಾಗಿ ಧನುಷ್ಕೋಡಿ ಭಗವಾನ್ ಶ್ರೀ ರಾಮನು ರಾಮ್ ಸೇತು ನಿರ್ಮಾಣವನ್ನು ಪ್ರಾರಂಭಿಸಿದ ಸ್ಥಳವೆಂದು ಪರಿಗಣಿಸಲಾಗಿದೆ. ಧನುಷ್ಕೋಡಿ ತಮಿಳುನಾಡಿನ ಕರಾವಳಿಯಲ್ಲಿರುವ , ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಪಟ್ಟಣವಾಗಿದೆ. 1964 ರಲ್ಲಿ ಧನುಷ್ಕೋಡಿಯು ಅತ್ಯಂತ ಭೀಕರ ಚಂಡಮಾರುತಕ್ಕೆ ತುತ್ತಾಯಿತು. ನಂತರ ತಮಿಳುನಾಡು ಈ ಪಟ್ಟಣವನ್ನು ಪುನರ್ ನಿರ್ಮಿಸಿ ಭಾರತದ ಅತ್ಯಂತ ವಿಶಿಷ್ಟ ಬೀಚ್‌ಗಳಲ್ಲಿ ಒಂದನ್ನಾಗಿ ರೂಪಿಸಿದೆ. ಅಲ್ಲಿನ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Danushkodi



ಅಲ್ಲಿಗೆ ಹೇಗೆ ಹೋಗುವುದು?:  ಧನುಷ್ಕೋಡಿ ಮಧುರೈ ವಿಮಾನ ನಿಲ್ದಾಣದಿಂದ ಸುಮಾರು 198 ಕಿ.ಮೀ ದೂರದಲ್ಲಿದೆ. ಹತ್ತಿರದ ರಾಮೇಶ್ವರಂ ರೈಲು ನಿಲ್ದಾಣದಿಂದ ಸುಮಾರು 18 ಕಿ.ಮೀ ದೂರದಲ್ಲಿದೆ. ರಸ್ತೆಯ ಮೂಲಕ ಧನುಷ್ಕೋಡಿ ತಲುಪಲು ಮಧುರೈ ಅಥವಾ ರಾಮೇಶ್ವರಂನಿಂದ ಬಸ್‌ನಲ್ಲಿ ಪ್ರಯಾಣಿಸಬಹುದು.

ಯಳಗಿರಿ

ಯಳಗಿರಿ ಗಿರಿಧಾಮವು ತಮಿಳುನಾಡಿನಲ್ಲಿದೆ. ಬೆಂಗಳೂರಿನಿಂದ ಸರಿ ಸುಮಾರು 150 ಕಿ.ಮೀ ದೂರದಲ್ಲಿರುವ ಈ ತಾಣವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಸಾಹಸ ಪ್ರವೃತ್ತಿಯಲ್ಲಿ ಆಸಕ್ತಿ ಇರುವವರು ಇಲ್ಲಿ ಎಂಜಾಯ್‌ ಮಾಡಬಹುದು. ಅಲ್ಲಿ ಸ್ವಾಮಿಮಲೈ ಎಂಬ ಬೆಟ್ಟವಿದ್ದು ಪ್ರವಾಸಿಗರು ಚಾರಣಕ್ಕೂ ಹೋಗಬಹುದು. ಅಲ್ಲಿನ ಪ್ರಶಾಂತವಾದ ಸೌಂದರ್ಯ ಮನಸೂರೆಗೊಳಿಸುತ್ತದೆ.

Yelagiri



ಅಲ್ಲಿಗೆ ಹೇಗೆ ಹೋಗುವುದು ?: ಯಳಗಿರಿಗೆ ವಿಮಾನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದಲ್ಲಿದೆ. ಇದು ಬೆಂಗಳೂರಿನಿಂದ ಸರಿ ಸುಮಾರು 150-160 ಕಿ.ಮೀ ದೂರದಲ್ಲಿದೆ. ಹತ್ತಿರದ ರೈಲು ನಿಲ್ದಾಣ ಜೋಲಾರ್ಪೆಟ್ಟೈ ಜಂಕ್ಷನ್. ಬೆಂಗಳೂರು ಮತ್ತು ಚೆನ್ನೈನಂತಹ ನಗರಗಳಿಂದ ನಿಯಮಿತ ಬಸ್ ಸೇವೆಗಳು ಲಭ್ಯವಿದೆ.