ಪ್ರವಾಸಕ್ಕಿಲ್ಲದ ಗಡಿಯ ಹಂಗು ಪ್ರವಾಸೋದ್ಯಮಕ್ಕೇಕೆ?
ಪ್ರವಾಸಕ್ಕೆ ಗಡಿಗಳ ಹಂಗು ಯಾಕಿರಬೇಕು? ಗಡಿ ಹಾಕಲು ಸಾಧ್ಯವೇ? ಕೊಡಗು ಮೈಸೂರು ಪ್ಯಾಕೇಜ್ ಜತೆ ಗಡಿ ದಾಟಿ ಕೇರಳಕ್ಕೆ ಹೋದರೆ ಸಿಗುವುದೇ ವಯನಾಡು. ಇಂಥದ್ದೊಂದು ಪ್ಯಾಕೇಜ್ ಕೊಟ್ಟರೆ ತಪ್ಪೇನಿದೆ? ಯಾವುದೇ ರಾಜ್ಯಕ್ಕೆ ಕರ್ನಾಟಕದ ಪ್ರವಾಸಿಗರನ್ನು ಕರೆದೊಯ್ದರೂ ಅದರ ಲಾಭ ಕರ್ನಾಟಕದ ಬೊಕ್ಕಸಕ್ಕೇ ಬರುತ್ತದೆ. ಪ್ರವಾಸಿಗರಿಗೂ ಕರ್ನಾಟಕದ ಬೊಕ್ಕಸಕ್ಕೂ ಇದು ಲಾಭವೇ ಅಲ್ವೇ? ಕೇರಳಕ್ಕೂ ಕೊಂಚ ಲಾಭ ಆದರೆ ತಪ್ಪೇನಿದೆ?
ಕರ್ನಾಟಕದ ಕೆ ಎಸ್ ಟಿ ಡಿ ಸಿ ಕೇರಳ ಪ್ರವಾಸೋದ್ಯಮವನ್ನು ಪ್ರೊಮೋಟ್ ಮಾಡ್ತಾ ಇದೆಯಾ? ಸಿದ್ದರಾಮಯ್ಯ ಸರಕಾರ ಪ್ರಿಯಾಂಕಾ ವಾದ್ರಾರನ್ನು ಮೆಚ್ಚಿಸಲು ಪ್ರವಾಸೋದ್ಯಮ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ತಾ ಇದೆಯಾ? ಎರಡು ದಿನಗಳ ಹಿಂದೆ ಎಕ್ಸ್ ಖಾತೆಯಲ್ಲಿ ಹೊತ್ತಿದ ಕಿಡಿ ಸಾಕಷ್ಟು ದೊಡ್ಡ ಬೆಂಕಿಯೇ ಆಗಿ ರಾಜಕೀಯ ತಿರುವು ಪಡೆದುಕೊಂಡದ್ದು ವಯನಾಡು ಟೂರ್ ಪ್ಯಾಕೇಜ್ ವಿಷಯಕ್ಕೆ. ಕೆ ಎಸ್ ಟಿ ಡಿ ಸಿ ಅಧಿಕೃತ ಖಾತೆಯಲ್ಲಿ, ’ವಯನಾಡು ನಿಮ್ಮನ್ನು ಕಾಯುತ್ತಿದೆ’ ಎಂಬ ಜಾಹೀರಾತು ಹಾಕಿ ಟೂರ್ ಪ್ಯಾಕೇಜನ್ನು ಪ್ರೊಮೋಟ್ ಮಾಡಲಾಗಿತ್ತು. ಇದನ್ನು ನೋಡುತ್ತಿದ್ದಂತೆ ನೆಟಿಜನ್‌ಗಳು ಕರ್ನಾಟಕ ಟೂರಿಸಂ ಅಭಿವೃದ್ಧಿ ನಿಗಮ ಕೇರಳ ಪ್ರವಾಸಿ ತಾಣವನ್ನು ಯಾಕೆ ಪ್ರೊಮೋಟ್ ಮಾಡ್ತಾ ಇದೆ, ಇದು ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವೋ ಅಥವಾ ಕರ್ನಾಟಕದ್ದೋ ಎಂದು ಆಕ್ರೋಶ ತೋರಿದರು. ವಿರೋಧಪಕ್ಷ ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಪ್ರಯತ್ನಿಸಿತು. ಆದರೆ ಕೊಂಚ ವ್ಯವಧಾನದಲ್ಲಿ ನೋಡಿದರೆ ಕೆ ಎಸ್ ಟಿ ಡಿ ಸಿ ಯ ಈ ನಡೆ ಯಾವ ರೀತಿಯಲ್ಲೂ ತಪ್ಪು ನಡೆ ಅಲ್ಲ ಎಂಬುದು ಗೊತ್ತಾಗುತ್ತದೆ. ಪ್ರವಾಸಕ್ಕೆ ಗಡಿಗಳ ಹಂಗು ಯಾಕಿರಬೇಕು? ಗಡಿ ಹಾಕಲು ಸಾಧ್ಯವೇ? ಕೊಡಗು ಮೈಸೂರು ಪ್ಯಾಕೇಜ್ ಜತೆ ಗಡಿ ದಾಟಿ ಕೇರಳಕ್ಕೆ ಹೋದರೆ ಸಿಗುವುದೇ ವಯನಾಡು. ಇಂಥದ್ದೊಂದು ಪ್ಯಾಕೇಜ್ ಕೊಟ್ಟರೆ ತಪ್ಪೇನಿದೆ? ಯಾವುದೇ ರಾಜ್ಯಕ್ಕೆ ಕರ್ನಾಟಕದ ಪ್ರವಾಸಿಗರನ್ನು ಕರೆದೊಯ್ದರೂ ಅದರ ಲಾಭ ಕರ್ನಾಟಕದ ಬೊಕ್ಕಸಕ್ಕೇ ಬರುತ್ತದೆ. ಪ್ರವಾಸಿಗರಿಗೂ ಕರ್ನಾಟಕದ ಬೊಕ್ಕಸಕ್ಕೂ ಇದು ಲಾಭವೇ ಅಲ್ವೇ? ಕೇರಳಕ್ಕೂ ಕೊಂಚ ಲಾಭ ಆದರೆ ತಪ್ಪೇನಿದೆ? ಗಮನಿಸಿ ನೋಡಿದರೆ ಇದೇ ರೀತಿಯಲ್ಲಿ ಕೇರಳ ಟೂರಿಸಂ ಕೂಡ ಹಲವಾರು ಪ್ಯಾಕೇಜ್ ಮಾಡಿರುತ್ತದೆ. ಅದರಲ್ಲಿ ಕರ್ನಾಟಕದ ಪ್ರವಾಸಿ ತಾಣಗಳೂ ಇರುತ್ತವೆ. ಇವು ವಿನ್ ವಿನ್ ಸಿಚ್ಯುಯೇಷನ್‌ಗಳು ಎಂಬ ಸರಳ ಸತ್ಯ ಯಾಕೆ ಅರ್ಥವಾಗುತ್ತಿಲ್ಲ? ಇಷ್ಟಕ್ಕೂ ಕೆ ಎಸ್ ಟಿ ಡಿ ಸಿ ಪರ ರಾಜ್ಯಗಳಿಗೆ ಪ್ಯಾಕೇಜ್ ಟ್ರಿಪ್ ಏರ್ಪಡಿಸಿರುವುದು ಇದೇ ಮೊದಲಲ್ಲ. ಬೇರೆ ಹಲವಾರು ರಾಜ್ಯಗಳಿಗೆ ಒಂದಲ್ಲಾ ಒಂದು ಟೂರ್ ಪ್ಯಾಕೇಜ್ ಇದ್ದೇ ಇರುತ್ತದೆ.

ಕೇರಳದ ವಯನಾಡು ಎಂಬ ಕಾರಣಕ್ಕೆ ಇದಕ್ಕೆ ರಾಜಕೀಯ ತಿರುವು ಸಿಕ್ಕಿದೆ. ಜತೆಗೆ ಈ ಹಿಂದೆ ಸರಕಾರ ಕೇರಳದ ವಯನಾಡು ಕ್ಷೇತ್ರದ ಬಗ್ಗೆ ಒಲವು ತೋರಿತ್ತು ಎಂಬ ಆರೋಪ ಇರುವುದರಿಂದ, ಕೆ ಎಸ್ ಟಿ ಡಿ ಸಿ ಯ ಈ ಬಾರಿಯ ನಡೆಯನ್ನೂ ಅದೇ ನಿಟ್ಟಿನಲ್ಲಿ ನೋಡಲಾಗುತ್ತಿದೆ. ಕೆ ಎಸ್ ಟಿ ಡಿಸಿ ಯ ವೆಬ್ ಸೈಟ್ ಒಮ್ಮೆ ಹೊಕ್ಕು ನೋಡಿದರೆ ಆರೋಪ ಮಾಡುತ್ತಿರುವವರ ಬಾಯಿ ಬಂದ್ ಆಗುತ್ತದೆ. ಯಾಕಂದ್ರೆ ಅಲ್ಲಿ ಅತಿ ಹೆಚ್ಚು ಕಾಣುವುದು ಕರ್ನಾಟಕದ ಟೂರ್ ಪ್ಯಾಕೇಜ್‌ಗಳೇ. ಕೆ ಎಸ್ ಟಿ ಡಿ ಸಿ ಎಂಬುದು ಸರಕಾರದ ಒಂದು ಕಮರ್ಷಿಯಲ್ ವಿಂಗ್. ಅದು ಏನೇ ಮಾಡಿದರೂ ಲಾಭಕ್ಕೋಸ್ಕರವೇ ಮಾಡುತ್ತದೆ. ಕೇರಳದ ಜತೆಗೆ ವ್ಯಾವಹಾರಿಕ ಸಂಬಂಧ ಚೆನ್ನಾಗಿಟ್ಟುಕೊಳ್ಳುವುದು ಕೆ ಎಸ್ ಟಿ ಡಿ ಸಿ ಯ ಸಹಜ ಅಗತ್ಯ. ಅದೇ ರೀತಿ ಕೇರಳಕ್ಕೂ ಕರ್ನಾಟಕದ ಸಂಬಂಧ ಬೇಕಿರುತ್ತದೆ. ಪ್ರವಾಸಗಳು ಇರುವುದೇ ಗಡಿಗಳನ್ನು ತೊಡೆದು ಹಾಕುವುದಕ್ಕೆ. ರಾಜ್ಯರಾಜ್ಯಗಳ ನಡುವ ಸಂಬಂಧ ಗಟ್ಟಿಗೊಳಿಸುವುದಕ್ಕೆ. ಹೀಗಿರುವಾಗ ಸಂಕುಚಿತ ಭಾವದಲ್ಲಿ ಪ್ರತಿಕ್ರಿಯಿಸುವುದು ಸರ್ವಥಾ ಸರಿಯಲ್ಲ. ದೂರದರ್ಶಿತ್ವ, ಆರ್ಥಿಕತೆ, ಪರಸ್ಪರ ಸೌಹಾರ್ದ ಸಂಬಂಧ ಇವೆಲ್ಲವುಗಳ ನೆಲೆಗಟ್ಟಿನಲ್ಲಿ ನೋಡಿದಾಗ ಪ್ರವಾಸೋದ್ಯಮ ಎಂಬುದು ಗಡಿಯ ಹಂಗಿನಿಂದ ಹೊರತಾಗಿ ನಿಲ್ಲಬೇಕು. ಪ್ರವಾಸೋದ್ಯಮ ಎಂಬುದು ರಾಜಕೀಯ ಸೋಂಕು ತಾಕದ ಒಂದು ವಿಭಾಗ. ಅದನ್ನು ಜನರು ಮತ್ತು ವಿರೋಧಪಕ್ಷ ರಾಜಕೀಯದ ಲೆನ್ಸ್‌ನಿಂದ ನೋಡದಿರಲಿ.