ಧನುಷ್ಕೋಡಿ... ಸೂರ್ಯೋದಯಕ್ಕೂ ಸಾಕ್ಷಿಯಾಗುವ ಈ ಸಾಗರ ಸಂಗಮ
ರಾಮೇಶ್ವರಂನಿಂದ 18 ಕಿ.ಮೀ. ದೂರದಲ್ಲಿ ಧನುಷ್ಕೋಡಿ ಇದೆ. ರಾಮನ ಬಿಲ್ಲಿನ ಹೆಸರನ್ನು ಈ ಜಾಗಕ್ಕೆ ಇಡಲಾಗಿದೆ. ಈ ಭಾಗದಲ್ಲಿರೋ ಬಂಡೆಗಳು ರಾಮ ಸೇತುವೆಗೆ ಬಳಕೆ ಆದ ಕಲ್ಲು ಎಂಬ ಪ್ರತೀತಿ ಇದೆ. ಇಲ್ಲಿ ಏಳ್ಗೆ ಕಂಡ ಏಕೈಕ ದೇವಾಲಯ ಎಂದರೆ ಕೋದಂಡಸ್ವಾಮಿ. ಈ ದೇವಾಲಯದಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತ ಹಾಗೂ ರಾವಣನ ಸಹೋದರ ವಿಭೀಷಣನ ಪೂಜೆ ಮಾಡಲಾಗುತ್ತದೆ.
- ಇಂದಿರೇಶ್ ಬೆಂಗಳೂರು
ಎರಡು ನದಿ ಸೇರುವ ಜಾಗವನ್ನು ಬಹುತೇಕರು ನೋಡಿರುತ್ತೀರಿ. ಅಲ್ಲಿಗೆ ತೆರಳಿರುತ್ತೀರಿ. ಆದರೆ, ಎರಡು ಸಮುದ್ರ ಸೇರುವ ಜಾಗವನ್ನು ಎಲ್ಲಾದರೂ ನೋಡಿದ್ದೀರಾ? ಅಂಥದ್ದೊಂದು ಅಪರೂಪದ ಜಾಗ ಇರೋದು ಭಾರತದ ತುತ್ತ ತುದಿ ಎನಿಸಿಕೊಂಡಿರೋ ಧನುಷ್ಕೋಡಿಯಲ್ಲಿ. ಇಲ್ಲಿ ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರ ಸಮುದ್ರ ಸೇರುತ್ತದೆ. ಈ ಜಾಗದ ಬಗ್ಗೆ ರಾಮಾಯಣದಲ್ಲೂ ಉಲ್ಲೇಖ ಇದೆ ಅನ್ನೋದು ವಿಶೇಷ. ಈ ಜಾಗದ ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಾಮ ಸೇತುವೆ
ಧನುಷ್ಕೋಡಿ ಬಗ್ಗೆ ರಾಮಾಯಣದಲ್ಲೂ ಬರೆಯಲಾಗಿದೆ. ರಾಮನು ಭಾರತದಿಂದ ಶ್ರೀಲಂಕಾಗೆ ತೆರಳಲು ಸೇತುವೆ ನಿರ್ಮಾಣ ಮಾಡುವವನಿದ್ದನು. ಈ ಸೇತುವೆ ನಿರ್ಮಾಣ ಆರಂಭ ಆಗಿದ್ದು ಇದೇ ಧನುಷ್ಕೋಡಿಯಿಂದ ಎಂಬ ಬಗ್ಗೆ ಪುರಾಣದಲ್ಲಿ ಇದೆ. ರಾಮ ಸೇತುವೆ ಅಥವಾ ಆ್ಯಡಮ್ಸ್ ಬ್ರಿಜ್ ಇಲ್ಲಿಂದಲೇ ನಿರ್ಮಾಣವಾಯಿತು.
ರಾಮೇಶ್ವರಂನಿಂದ 18 ಕಿ.ಮೀ. ದೂರದಲ್ಲಿ ಧನುಷ್ಕೋಡಿ ಇದೆ. ರಾಮನ ಬಿಲ್ಲಿನ ಹೆಸರನ್ನು ಈ ಜಾಗಕ್ಕೆ ಇಡಲಾಗಿದೆ. ಈ ಭಾಗದಲ್ಲಿರೋ ಬಂಡೆಗಳು ರಾಮ ಸೇತುವೆಗೆ ಬಳಕೆ ಆದ ಕಲ್ಲು ಎಂಬ ಪ್ರತೀತಿ ಇದೆ. ಇಲ್ಲಿ ಏಳ್ಗೆ ಕಂಡ ಏಕೈಕ ದೇವಾಲಯ ಎಂದರೆ ಕೋದಂಡಸ್ವಾಮಿ. ಈ ದೇವಾಲಯದಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತ ಹಾಗೂ ರಾವಣನ ಸಹೋದರ ವಿಭೀಷಣನ ಪೂಜೆ ಮಾಡಲಾಗುತ್ತದೆ.

ಭೀಕರ ಚಂಡಮಾರುತ
ಧನುಷ್ಕೋಡಿ ಮೊದಲು ತುಂಬ ದೊಡ್ಡ ಜನಸಂಖ್ಯೆಯನ್ನು ಹೊಂದಿತ್ತು. ಆದರೆ, 1964ರಲ್ಲಿ ಎದ್ದ ಭೀಕರ ಚಂಡಮಾರುತಕ್ಕೆ ಈ ನಗರ ತತ್ತರಿಸಿ ಹೋಯಿತು. ಇಲ್ಲಿನ ಮನೆ, ರೈಲ್ವೆ ನಿಲ್ದಾಣ, ಚರ್ಚ್ ಎಲ್ಲವೂ ನಾಶವಾಗಿ ಹೋಯಿತು. ಆ ಬಳಿಕ ಇದರ ಬೆಳವಣಿಗೆ ಕುಂಠಿತವಾಯಿತು. ಈಗ ಇದು ಘೋಸ್ಟ್ ಟೌನ್ ಆಗಿ ಉಳಿದುಕೊಂಡಿದೆ. ಇಲ್ಲಿ ಯಾರೂ ಉಳಿದುಕೊಳ್ಳೋದಿಲ್ಲ. ಇಲ್ಲಿನ ಅವಶೇಷಗಳು ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ. ಇಲ್ಲಿ ರಾತ್ರಿ ವೇಳೆ ದೆವ್ವ ಹೆದರಿಸುತ್ತದೆ ಎಂಬ ನಂಬಿಕೆ ಇದೆಯಾದರೂ ಅದಕ್ಕೆ ಪುರಾವೆಗಳು ಇಲ್ಲ.
ಧನುಷ್ಕೋಡಿಯಲ್ಲಿಲ್ಲ ವಾಸಕ್ಕೆ ಜಾಗ
ಧನುಷ್ಕೋಡಿಯಲ್ಲಿ ಉಳಿದುಕೊಳ್ಳಲು ಯಾವುದೇ ಸ್ಥಳಗಳು ಇಲ್ಲ. ಈ ಕಾರಣಕ್ಕೆ ರಾಮೇಶ್ವರದಿಂದಲೇ ಈ ಜಾಗಕ್ಕೆ ಬರಬೇಕು. ಈ ಭಾಗದಲ್ಲಿ ರಾತ್ರಿ ಯಾರೂ ಉಳಿದುಕೊಳ್ಳೋದಿಲ್ಲ. ಈ ಕಾರಣದಿಂದಲೇ ಸೂರ್ಯಾಸ್ತ ಆಗುತ್ತಿದ್ದಂತೆ ಇಲ್ಲಿಂದ ಹೊರಡೋದು ಬೆಸ್ಟ್. ಈ ಭಾಗದಲ್ಲಿ ಯಾವುದೇ ದೊಡ್ಡ ಹೊಟೇಲ್ಗಳು ಕೂಡ ಇಲ್ಲ. ಸಣ್ಣಪುಟ್ಟ ರಸ್ತೆ ಬದಿ ತಿಂಡಿಯನ್ನು ನೀವು ಸವಿಯಬಹುದು.
ಸೂರ್ಯೋದಯಕ್ಕೂ ಬೀಚ್!
ಸಾಮಾನ್ಯವಾಗಿ ಕರ್ನಾಟಕದ ಬೀಚ್ಗಳಲ್ಲಿ ಸೂರ್ಯಾಸ್ತ ಮಾತ್ರ ನೋಡಬಹುದು. ಆದರೆ, ಈ ಬೀಚ್ನಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ಎರಡನ್ನೂ ಕಣ್ತುಂಬಿಕೊಳ್ಳಬಹುದು ಅನ್ನೋದು ವಿಶೇಷ.
ತಲುಪೋದು ಹೇಗೆ?
ಧನುಷ್ಕೋಡಿ ಅಥವಾ ರಾಮೇಶ್ವರಂನಲ್ಲಿ ಯಾವುದೇ ವಿಮಾನ ನಿಲ್ದಾಣ ಇಲ್ಲ. ಹೀಗಾಗಿ, ನೀವು ಮಧುರೈ ವಿಮಾನ ನಿಲ್ದಾಣದಿಂದಲೇ ಬರಬೇಕು. ಎರಡೂ ನಗರಗಳ ಮಧ್ಯೆ 192 ಕಿ.ಮೀ ಅಂತರ ಇದೆ. ಹೀಗಾಗಿ, ಇದು ಸ್ವಲ್ಪ ಪ್ರಯಾಸ ಆಗಬಹುದು. ರಾಮೇಶ್ವರಂಗೆ ರೈಲ್ವೆ ವ್ಯವಸ್ಥೆ ಇದೆ. ಖಾಸಗಿ ವಾಹನ ಇದ್ದರೆ ನೀವು ಚಿಂತಿಸೋ ಅಗತ್ಯವೇ ಇಲ್ಲ. ಇನ್ನು ಬಸ್ ಏರಿ ಬರುತ್ತೀರಿ ಎಂದರೂ ರಾಮೇಶ್ವರಂಗೆ ಸಾಕಷ್ಟು ಬಸ್ಗಳು ಲಭ್ಯ.
ತುತ್ತ ತುದಿಗೆ ರಸ್ತೆ
ದೇಶದ ತುತ್ತ ತುದಿಗೆ ಒಂದು ರಸ್ತೆಯನ್ನು ಮಾಡಲಾಗಿದೆ. ಅಕ್ಕ ಪಕ್ಕದಲ್ಲಿ ಸಮುದ್ರ, ಮಧ್ಯದಲ್ಲಿ ಇರೋ ರಸ್ತೆಯಲ್ಲಿ ಡ್ರೈವ್ ಮಾಡುತ್ತಾ ಸಾಗಿದರೆ ಆ ಅನುಭವವೇ ಬೇರೆ. ಕೊನೆಯಲ್ಲಿ ನಿಂತು ನೋಡಲು ಒಂದು ಪಾಯಿಂಟ್ ಮಾಡಲಾಗಿದೆ. ಧನುಷ್ಕೋಡಿ ಬೀಚ್ ಎಂದು ಇದನ್ನು ಕರೆಯಲಾಗುತ್ತದೆ. ಇದು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ.