ಹೊಟೇಲ್ ಬುಕ್ಕಿಂಗ್‌ಗೆ ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದು ಒಳ್ಳೆಯದು ?
ಪ್ರವಾಸಕ್ಕೆ ತೆರಳುವ ವೇಳೆ, ಪ್ರಯಾಣ ಮಾಡುವ ಸಂದರ್ಭದಲ್ಲಿ ವಿಶ್ರಾಂತಿ ಪಡೆಯುವುದಕ್ಕಾಗಿ ಹೊಟೇಲ್ ಬುಕ್ ಮಾಡಬೇಕೆಂದುಕೊಂಡಿದ್ದೀರಾ? ಆದರೆ ಆನ್‌ಲೈನ್ ಅಥವಾ ಆಫ್‌ಲೈನ್ ಯಾವ ಆಯ್ಕೆ ಉತ್ತಮ ಎಂಬ ಗೊಂದಲ ನಿಮಗಿದೆಯಾ ?
ಪ್ರವಾಸ ಹೋಗುವುದೆಂದರೆ ಎಷ್ಟು ಖುಷಿಯೋ ಅದಕ್ಕಿಂತ ಹೆಚ್ಚು ತಲೆಬಿಸಿ ಹೋಗುವ ಮುನ್ನ ಮಾಡಿಕೊಳ್ಳುವ ತಯಾರಿಯಲ್ಲಿರುತ್ತದೆ. ಒಂದಕ್ಕಿಂತ ಹೆಚ್ಚು ದಿನ ಪ್ರವಾಸವನ್ನು ಕೈಗೊಳ್ಳುವುದಾದರೆ, ಅದಕ್ಕೆ ಬೇಕಾದ ಲಗೇಜ್ ಸಿದ್ಧಗೊಳಿಸಬೇಕು, ಎಲ್ಲಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದೀರೋ, ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಸೂಕ್ತವಾದ ಹೊಟೇಲ್ ಗಳನ್ನು ಹುಡುಕಿಕೊಳ್ಳುವುದು ಹೀಗೆ ಸಾಲು ಸಾಲು ತಯಾರಿಗಳು ಹೋಗುವ ಮುನ್ನವೇ ಪೂರ್ಣಗೊಂಡಿರಬೇಕಾಗುತ್ತದೆ. ಆದರೆ ಸಾಮಾನ್ಯವಾಗಿ ಹೊಟೇಲ್ ಬುಕ್ಕಿಂಗ್ ಮಾಡುವಾಗ ಒಂದು ಗೊಂದಲವಂತೂ ಪ್ರವಾಸಿಗರಲ್ಲಿ ಸಹಜ. ಅದೆಂದರೆ ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದು ಬೆಸ್ಟ್? ಎಂಬ ವಿಚಾರವಾಗಿ..ಇಲ್ಲಿದೆ ಅದಕ್ಕೆ ಸೂಕ್ತ ಉತ್ತರ.
ಪ್ರವಾಸ, ಪ್ರಯಾಣದ ವಿಧಾನ ಎಲ್ಲರಲ್ಲೂ ವಿಭಿನ್ನವಾಗಿರುತ್ತದೆ. ಕೆಲವು ಅಗ್ಗದ ಬೆಲೆಯಲ್ಲಿ ಸುತ್ತಾಡಿ ಬರುವ ಯೋಜನೆ ಹಾಕಿಕೊಂಡರೆ, ಇನ್ನು ಹಲವರು ದುಬಾರಿ ಜೀವನ ಶೈಲಿಗೆ ತಕ್ಕಂತೆ ಆಯ್ಕೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಯಾವ ಥರದ ಪ್ರಯಾಣವೇ ಆದರೂ ನೀವು ತೆರಳುವ ತಾಣದಲ್ಲಿ ಒಂದೋ, ಎರಡೋ ದಿನ ಉಳಿದುಕೊಳ್ಳುವುದಾದರೆ ಆ ಬಗ್ಗೆ ಮೊದಲೇ ಚಿಂತಿಸಬೇಕು. ಆನ್‌ಲೈನ್ ಮೂಲಕ ಹೊಟೇಲ್ ಬುಕ್ಕಿಂಗ್ ಮಾಡಿಕೊಳ್ಳುವವರು ಹಲವರಾದರೆ, ಗಮ್ಯಸ್ಥಾನಕ್ಕೆ ಹೊರಟು ಅಲ್ಲಿ ಹೊಟೇಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವವರಿಗೂ ಕಡಿಮೆಯೇನಿಲ್ಲ. ಆದರೆ ಆನ್‌ಲೈನ್ ಅಥವಾ ಆಫ್‌ಲೈನ್ ಬುಕ್ಕಿಂಗ್, ಇವೆರಡರಲ್ಲಿ ಯಾವುದು ಅಗ್ಗ ? ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ? ನಿಮಗೆ ಗೊತ್ತಾ?

ಆನ್‌ಲೈನ್ ಹೊಟೇಲ್ ಬುಕ್ಕಿಂಗ್ ಯಾಕೆ ಒಳ್ಳೆಯದು ?
ಇತ್ತೀಚಿನ ದಿನಗಳಲ್ಲಿ ಪ್ರಯಾಣ ಮಾಡುವುದೆಂದರೆ ಜನ ಬಸ್, ರೈಲು, ವಿಮಾನ ಅಷ್ಟೇ ಯಾಕೆ ಉಳಿದುಕೊಳ್ಳುವ ಹೊಟೇಲ್ ತನಕ ಎಲ್ಲವನ್ನೂ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಅನೇಕ ವೆಬ್‌ಸೈಟ್ ಗಳು, ಆಪ್‌ಗಳು ಚಾಲ್ತಿಯಲ್ಲಿದ್ದು, ಹೋಟೆಲ್ ವೆಬ್‌ಸೈಟ್, ಪ್ರಯಾಣ ಏಜೆನ್ಸಿ ವೆಬ್‌ಸೈಟ್ ಅಥವಾ ಇತರ ಏಜೆನ್ಸಿಗಳು ಮತ್ತು ಅಪ್ಲಿಕೇಶನ್‌ಗಳ ಮೂಲಕ ಸುಲಭವಾಗಿ ಬುಕ್ಕಿಂಗ್ ಮಾಡಬಹುದು. ಇದರಿಂದ ಸಮಯ ಮತ್ತು ಹಣ ಎರಡನ್ನೂ ಉಳಿಸಬಹುದು ಎಂಬ ಯೋಚನೆಯನ್ನು ತಳ್ಳಿಹಾಕುವಂತಿಲ್ಲ.
ಅಲ್ಲದೆ, ಆನ್‌ಲೈನ್‌ನಲ್ಲಿ ಬುಕ್ ಮಾಡುವಾಗ, ಉಳಿದುಕೊಳ್ಳುವ ಹೊಟೇಲ್‌ನಿಂದ ತೊಡಗಿ ಎಲ್ಲದಕ್ಕೂ ಆಯ್ಕೆಗಳು ಸಾಕಷ್ಟು ಲಭ್ಯವಾಗಲಿದ್ದು, ಖುದ್ದು ರಿವ್ಯೂಗಳನ್ನು ನೋಡಿಕೊಂಡು, ಸೂಕ್ತವಾದ ಆಯ್ಕೆಯನ್ನು ನಾವೇ ಮಾಡಿಕೊಳ್ಳಬಹುದು. ಅಲ್ಲದೆ ಮೊದಲ ಬಾರಿಗೆ ಬುಕ್ಕಿಂಗ್ ಮಾಡುವಾಗ ರಿಯಾಯಿತಿ, ಅನೇಕ ಸವಲತ್ತುಗಳೂ ಲಭ್ಯವಾಗುವುದರಿಂದ ಇದು ಬೆಸ್ಟ್ ಆಪ್ಶನ್.

ಆಫ್‌ಲೈನ್‌ನಲ್ಲಿ ಹೊಟೇಲ್‌ಗಳನ್ನು ಆಯ್ಕೆ ಮಾಡುವ ಮುನ್ನ
ಹಿಂದೆಲ್ಲಾ ಎಲ್ಲಾದರೂ ಪ್ರಯಾಣ ಹೋದಾಗ ಅಲ್ಲಿ ಉಳಿದುಕೊಳ್ಳಬೇಕಾದ ಸಂದರ್ಭದಲ್ಲಿ ಅಲ್ಲೇ ಸಮೀಪದಲ್ಲೇ ಇರುವ ಹೊಟೇಲ್‌ಗಳನ್ನು ಹುಡುಕಿಕೊಂಡು, ಹೊಟೇಲ್ ರೂಂ ಗಳನ್ನು ಪರಿಶೀಲಿಸಿಕೊಂಡು ರೂಂ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದರು. ಈಗಲೂ ಅನೇಕ ಮಂದಿ ಈ ಆಯ್ಕೆಯನ್ನು ಕೈಬಿಟ್ಟಿಲ್ಲ.
ಆನ್‌ಲೈನ್ ಬುಕ್ಕಿಂಗ್ ಬಹಳ ದುಬಾರಿ ಹಾಗೂ ಫೇಕ್ ಎಂದು ಭಾವಿಸುವ ಸಾಕಷ್ಟು ಮಂದಿ, ಆಫ್‌ಲೈನ್ ಬೆಸ್ಟ್ ಅಂದುಕೊಳ್ಳುತ್ತಾರೆ. ಅಲ್ಲದೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕ್ಲೀನ್ ಹಾಗೂ ನೀಟ್ ಆಗಿರುವ ರೂಮುಗಳು ಸಿಗುತ್ತದೆ.
ಆದರೆ ಇದರಲ್ಲಿರುವ ಸಮಸ್ಯೆಯೇನು ಗೊತ್ತಾ? ನೀವು ಪೀಕ್ ಸೀಸನ್‌ನಲ್ಲಿ ಆಫ್‌ಲೈನ್ ಕೊಠಡಿ ಬುಕ್ಕಿಂಗ್ ಮಾಡಲು ತೆರಳಿದರೆ ಹೊಟೇಲ್, ಲಾಡ್ಜ್ ಅಥವಾ ಇನ್ಯಾವುದೇ ವ್ಯವಸ್ಥೆಗಳು ನಿಮಗೆ ಲಭ್ಯವಾಗದು. ಒಂದು ವೇಳೆ ಲಭ್ಯವಾದರೂ ದುಬಾರಿಯಾಗಿರುವುದಂತೂ ಖಚಿತ. ಇಷ್ಟೇ ಅಲ್ಲ, ಪ್ರವಾಸದಲ್ಲಿ ಏನಾದರೂ ಬದಲಾವಣೆಯಾದರೆ, ಆಫ್‌ಲೈನ್ ಬುಕ್ಕಿಂಗ್ ಮಾಡಿದ ನಂತರ, ಮರುಪಾವತಿ ಪಡೆಯುವುದು ಕಷ್ಟಕರವಾಗುತ್ತದೆ.

ಹಾಗಾದರೆ ಯಾವ ವಿಧಾನ ಸೂಕ್ತ ?
ನೀವು ಕಡಿಮೆ ಬೆಲೆಯಲ್ಲಿ ವಾಸ್ತವ್ಯವನ್ನು ಹುಡುಕುತಿದ್ದರೆ, ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದು ಅಗ್ಗವೆಂದು ತಿಳಿದುಕೊಂಡು ಬುಕ್ಕಿಂಗ್ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ, ನಿಮ್ಮ ಪ್ರಯಾಣದ ಬಳಿಕ ದಣಿವಾಯಿತೆಂದರೆ ನೇರ ನಿಮ್ಮ ಹೋಟೆಲ್ ಕೋಣೆಯಲ್ಲಿ ವಿಶ್ರಾಂತಿ ಪಡೆಯಬಹುದು. ಆಫ್‌ಲೈನ್ ಹೊಟೇಲ್‌ಗಳನ್ನು ಹುಡುಕಲು ನೀವು ಸಾಕಷ್ಟು ಸಮಯ ಓಡಾಡಬೇಕಾಗುತ್ತದೆ. ಇದು ಪ್ರವಾಸದ ಖುಷಿಯನ್ನು ಹಾಳುಮಾಡುವ ಸಾಧ್ಯತೆಯೂ ಇದೆ ಎಂಬುದನ್ನು ಮುಂಚಿತವಾಗಿ ತಿಳಿದುಕೊಳ್ಳಿ.