ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಚೀನಾದ ಗೋಡೆಯು (Great Wall of China) ತನ್ನ ಅಗಾಧವಾದ ಉದ್ದ ಮತ್ತು ದೃಢತೆಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ಮಹಾಗೋಡೆಗೆ 2,300 ವರ್ಷಗಳ ಇತಿಹಾಸವಿದ್ದು, ಸುಮಾರು 21,196 ಕಿಮೀ. ಉದ್ದವಿದೆ.. ಪ್ರತಿ ವರ್ಷ ಸುಮಾರು 1 ಕೋಟಿಗೂ ಹೆಚ್ಚು ಪ್ರವಾಸಿಗರು ಈ ಗೋಡೆಯನ್ನು ನೋಡಲು ಬರುತ್ತಾರಾದರೂ ಮೈಲಿಗಳಷ್ಟು ನಡೆದು ಹಸಿವು, ಬಾಯಾರಿಕೆಯಿಂದ ದಣಿದುಬಿಡುತ್ತಾರೆ. ಇಂಥ ಸಂದರ್ಭದಲ್ಲಿ ಚೀನಾದ ಮಹಾ ಗೋಡೆಯಲ್ಲಿ ಆಹಾರವನ್ನು ತಲುಪಿಸುವಲ್ಲಿ ಡ್ರೋನ್ ಸಹಾಯ ಮಾಡುತ್ತದೆಯೆಂದರೆ ನೀವು ನಂಬುತ್ತೀರಾ ? ನಂಬಲೇ ಬೇಕು. ಯಾಕೆಂದರೆ ಈ ಐತಿಹಾಸಿಕ ಸ್ಥಳದಲ್ಲಿ ಡ್ರೋನ್ ಮೂಲಕ ಪ್ರವಾಸಿಗರ ಆಹಾರವನ್ನು ತಲುಪಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

china great wall 1

ಚೀನಾದ ಮಹಾಗೋಡೆಯಲ್ಲಿ ಏರುತ್ತಾ, ಇಳಿಯುತ್ತಾ, ನಡೆದು ದಣಿದು, ಹಸಿವಿನಿಂದ ಕಂಗಾಲಾಗಿರುವ ಪ್ರವಾಸಿಗರನ್ನು ಒಮ್ಮೆ ಯೋಚಿಸಿ. ಅಂಥವರ ಎದುರು ಆಹಾರವನ್ನು ಹೊತ್ತು ಬರುವ ಡ್ರೋನ್‌ ಬಗ್ಗೆ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಾ..? ಇಂಥ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಹುಡುಗಿಯೊಬ್ಬಳು ಈ ಆಶ್ಚರ್ಯಕರ ಕ್ಷಣವನ್ನು ಸೆರೆಹಿಡಿದಿದ್ದಾಳೆ. ಮಹಾ ಗೋಡೆಯನ್ನು ಸುತ್ತಾಡುತ್ತಲೇ ಮಧ್ಯದಲ್ಲಿ ಹಸಿದಿದ್ದೇನೆ ಎಂದು ಆಕೆ ಹೇಳಿಕೊಳ್ಳುವ ವೇಳೆಗೆ ಗ್ರೇಟ್ ವಾಲ್‌ನ ಬಡಾಲಿಂಗ್ ವಿಭಾಗದಲ್ಲಿ ಡ್ರೋನ್ ಮೂಲಕ ಆಹಾರ ಬಂದು ಆಕೆಯ ಕೈಸೇರುತ್ತದೆ. ಇದನ್ನು ಗ್ರಾಫಿಕ್ಸ್‌ ಅಂದುಕೊಳ್ಳಬೇಡಿ..

china great wall4

ಹೌದು, ಈ ಡ್ರೋನ್ ವಿತರಣಾ ಸೇವೆಯನ್ನು ಚೀನಾದ ಆಹಾರ ವಿತರಣಾ ದೈತ್ಯ ಮೀಟುವಾನ್ ಪ್ರಾರಂಭಿಸಿದ್ದು, ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಬೀಜಿಂಗ್ ಬಳಿಯ ಗ್ರೇಟ್ ವಾಲ್‌ನ ಬಡಾಲಿಂಗ್ ವಿಭಾಗದಲ್ಲಿರುವ ಗೊತ್ತುಪಡಿಸಿದ ವಾಚ್‌ಟವರ್‌ಗಳಿಗೆ ಆಹಾರ, ಪಾನೀಯಗಳು ಮತ್ತು ತುರ್ತು ಸರಬರಾಜುಗಳಂಥ ವಸ್ತುಗಳನ್ನು ಆರ್ಡರ್ ಮಾಡಲು ಸಂದರ್ಶಕರಿಗೆ ಅವಕಾಶ ನೀಡುವ ನವೀನ ಸೇವೆಯಿದು..ಈ ಸೇವೆಯು ಸಾಮಾನ್ಯವಾಗಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಪ್ರವಾಸಿಗರಿಗೆ ಲಭ್ಯವಿದ್ದು, ಪ್ರತಿ ಟ್ರಿಪ್‌ಗೆ 2.3 ಕೆಜಿ ವರೆಗೆ ಪ್ಯಾಕೇಜ್‌ಗಳನ್ನು ಹೊತ್ತೊಯ್ಯಬಹುದು.

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿರುವ ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಚೀನಾದ ಗ್ರೇಟ್‌ ವಾಲ್‌ ನಲ್ಲಿ ಇಂಥ ಸೌಕರ್ಯವನ್ನು ಒದಗಿಸಿರುವುದು ಉತ್ತಮ ಕಾರ್ಯವೇ ಆದರೂ ಸ್ವಚ್ಛತೆಯ ಬಗ್ಗೆ ಪ್ರವಾಸಿಗರು ಗಮನಹರಿಸಿದರೆ ಒಳ್ಳೆಯದು ಎಂಬವರ ಸಂಖ್ಯೆಯೇ ಹೆಚ್ಚಿದೆ.