ಅಬುಧಾಬಿ: ದುಬೈ ಪ್ರವಾಸೋದ್ಯಮವು ಪ್ರತಿ ವರ್ಷ ಮೇಲುಗೈ ಸಾಧಿಸಿರುತ್ತದೆ. ಅಂತೆಯೇ ಈ ವರ್ಷವೂ ಅಗ್ರಸ್ಥಾನದಲ್ಲಿದೆ. ಚಳಿಗಾಲ ಮುಗಿದು ಉರಿ ಬೇಸಿಗೆಕಾಲ ಬಂದಿದ್ದರೂ ದುಬೈನಲ್ಲಿ ಪ್ರವಾಸಿಗರು ತುಂಬಿ ಹೋಗಿದ್ದಾರೆ. ಶೇ.80ರಷ್ಟು ಹೊಟೇಲ್‌ಗಳು ಪ್ರವಾಸಿಗರಿಂದ ಭರ್ತಿಯಾಗಿದೆ. ದುಬೈ ನಗರದಲ್ಲಿ 150,000 ಕ್ಕೂ ಹೆಚ್ಚು ಹೋಟೆಲ್ ಕೊಠಡಿಗಳು ಲಭ್ಯವಿದ್ದು, ಪ್ರವಾಸೋದ್ಯಮ ಮತ್ತು ಹೊಟೇಲ್‌ ಉದ್ಯಮದಲ್ಲಿ ಅಭಿವೃದ್ಧಿ ಹೊಂದಿದೆ. ಹೊಟೇಲ್‌ಗಳು ಕೇವಲ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಿಂದ ಮಾತ್ರ ಭರ್ತಿಯಾಗಿಲ್ಲ ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ ಬೇಸಿಗೆಕಾಲದಲ್ಲಿ ಸೇರುವ ಕಾರ್ಪೊರೇಟ್ ಮತ್ತು MICE ಸಭೆಗಳಿಂದಲೂ ಹೊಟೇಲ್‌ಗಳು ಬ್ಯುಸಿಯಾಗಿವೆ.

ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆಯುತ್ತಿರುವ ಅರೇಬಿಯನ್ ಟ್ರಾವೆಲ್ ಅಧಿವೇಶನದಲ್ಲಿ ಈ ಚರ್ಚೆ ನಡೆದಿದೆ. ಜಾಗತಿಕ ಘಟನೆ, ಕೆಲವು ಹಬ್ಬಗಳು ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಹೇಗೆ ಪೂರಕವಾಗಿರುತ್ತವೆ ಎಂಬುದನ್ನು ಅಧಿವೇಶನದಲ್ಲಿ ಬಹಿರಂಗಪಡಿಸಲಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದುಬೈ ಆರ್ಥಿಕ ಮತ್ತು ಪ್ರವಾಸೋದ್ಯಮದ (ದುಬೈ ಫೆಸ್ಟಿವಲ್‌ಗಳು ಮತ್ತು ರೀ-ಟೈಲ್) ಎಸ್‌ಟಾಬ್ಲಿಷ್‌ಮೆಂಟ್‌ನ ಸಿಇಒ ಅಹ್ಮದ್ ಅಲ್ ಖಾಜಾ "ಪ್ರವಾಸೋದ್ಯಮ ಮತ್ತು ಹೊಟೇಲ್‌ ವ್ಯಾಪಾರಗಳು ಚಳಿಗಾಲದಲ್ಲಿ ಮಾತ್ರ ಉತ್ತುಂಗದಲ್ಲಿ ಇರುವುದಿಲ್ಲ. ಬೇಸಿಗೆಯಲ್ಲೂ ನಾವು ಅಭಿವೃದ್ಧಿ ಸಾಧಿಸುತ್ತೇವೆ" ಎಂದು ಹೇಳಿದರು. ದುಬೈ ಚಳಿಗಾಲದಲ್ಲಿ ಮಾತ್ರ ಅದ್ಭುತವಾಗಿರುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಬೇಸಿಗೆಯಲ್ಲೂ ಇಲ್ಲಿ ಒಳ್ಳೆಯ ಅನುಭವ ಸಿಗುತ್ತದೆ ಎಂದು ಖಾಜಾ ತಿಳಿಸಿದರು. ವರ್ಷದಿಂದ ವರ್ಷಕ್ಕೆ ಈ ಬೆಳವಣಿಗೆಯು ಮುಂದುವರೆಯುತ್ತದೆ ಎಂದರು.

ರಂಜಾನ್‌ ಹಬ್ಬದ ಸಂದರ್ಭದಲ್ಲಿಯೂ ದುಬೈ ಮತ್ತು ಅಬುಧಾಬಿ ಹೊಟೇಲ್‌ಗಳು ಪ್ರಗತಿ ಸಾಧಿಸಿವೆ. ಬೇಸಿಗೆಯಲ್ಲಿ ಸ್ಥಳೀಯ ವ್ಯಾಪಾರಿಗಳು ಮತ್ತು ಕಾರ್ಪೋರೆಟ್‌ ಸಂಸ್ಥೆಗಳೊಂದಿಗೆ ನಾವು ನಿಕಟ ಸಂಪರ್ಕ ಸಾಧಿಸಿದ್ದೇವೆ. ಆ ಕಾರಣದಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು ಅಹ್ಮದ್‌ ಅಲ್‌ ಖಾಜಾ ತಿಳಿಸಿದ್ದಾರೆ.