ಅಂಡಮಾನ್‌ ಮತ್ತು ನಿಕೋಬಾರ್‌ ಅತ್ಯಂತ ಜನಪ್ರಿಯವಾದ ಪ್ರವಾಸಿ ತಾಣ. ಇತ್ತೀಚೆಗಂತೂ ಹನಿಮೂನ್‌ ತಾಣವಾಗಿ ಪ್ರಸಿದ್ಧಿ ಪಡೆಯುತ್ತಿದೆ. ಪ್ರವಾಸಿಗರು ವಿದೇಶಕ್ಕೆ ಹೋಗುವ ಬದಲು ಲಕ್ಷದ್ವೀಪ, ಅಂಡಮಾನ್‌ನಂತಹ ಅದ್ಭುತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅಂಡಮಾನ್‌ನಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಹೆಚ್ಚಿನ ಪ್ರೇಕ್ಷಣೀಯ ಸ್ಥಳವಿರುವ ಅಂಡಮಾನ್‌ನಲ್ಲಿ ಮನಸೂರೆಗೊಳಿಸುವ ಮೂರು ಬೀಚ್‌ಗಳಿವೆ. ಅಂಡಮಾನ್‌ಗೆ ಭೇಟಿ ನೀಡುವ ಪ್ರವಾಸಿಗರು ತಪ್ಪದೇ ಬೀಚ್‌ಗಳ ಸೌಂದರ್ಯವನ್ನು ಸವಿಯಲೇಬೇಕು. ಬೀಚ್‌ಗಳ ಕುರಿತಾದ ಮಾಹಿತಿ ಇಲ್ಲಿದೆ.

ರಾಧಾನಗರ ಬೀಚ್
ರಾಧಾನಗರ ಬೀಚ್ ಅಂಡಮಾನ್‌ನಲ್ಲಿರುವ ಅತ್ಯಂತ ಆಕರ್ಷಣೀಯ ಬೀಚ್‌ಗಳಲ್ಲಿ ಒಂದು. ಬೀಚ್‌ನಲ್ಲಿ ಕಾಲ ಕಳೆಯಲು ಇಷ್ಟಪಡುವ ಪ್ರವಾಸಿಗರಿಗೆ ಇದು ಬೆಸ್ಟ್‌ ಆಯ್ಕೆ. ರಾಧಾನಗರ ಬೀಚ್ ಏಷ್ಯಾದಲ್ಲಿಯೇ ಅತ್ಯಂತ ಸ್ವಚ್ಛವಾದ ಬೀಚ್‌ಗಳಲ್ಲಿ ಒಂದು ಎನ್ನಲಾಗುತ್ತದೆ. ಅಲ್ಲಿನ ನೀರು ಮತ್ತು ದೂರತೀರ ಯಾನ ಹಿತವಾದ ಅನುಭವವನ್ನು ನೀಡುತ್ತದೆ. ಹಸುರಿನ ವಾತಾವರಣವೂ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿ ಪ್ರವಾಸಿಗರು ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಮತ್ತು ಗೇಮ್ ಫಿಶಿಂಗ್‌ನಂತಹ ಅಡ್ವೆಂಚರ್‌ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು.

ರಾಧಾನಗರ ಬೀಚ್‌ನ ಸುಂದರವಾದ ನೋಟ

ಎಲಿಫೆಂಟ್‌ ಬೀಚ್

ಅಂಡಮಾನ್‌ನ ಸುಂದರವಾದ ಬೀಚ್‌ಗಳಲ್ಲಿ ಎಲಿಫೆಂಟ್‌ ಬೀಚ್‌ ಕೂಡ ಒಂದಾಗಿದೆ. ಇಲ್ಲಿ ಬೆರಗುಗೊಳಿಸುವ ಹವಳದ ಬಂಡೆ, ಅಡ್ವೆಂಚರ್‌ ಚಟುವಟಿಕೆಗಳಿಗೆ ಅವಕಾಶವಿದೆ. ಮುಖ್ಯವಾಗಿ, ಎಲಿಫೆಂಟ್ ಬೀಚ್ ಹ್ಯಾವ್ಲಾಕ್ ದ್ವೀಪದಲ್ಲಿ ನೆಲೆಸಿರುವ ಪ್ರಸಿದ್ಧ ತೀರಗಳಲ್ಲಿ ಒಂದಾಗಿದೆ. ಎಲಿಫೆಂಟ್ ಬೀಚ್‌ನಲ್ಲಿರುವ ಬಿಳಿ ಮರಳಿನ ತೀರ ಏಕಾಂತ ಕ್ಷಣವನ್ನು ಕಳೆಯಲು ದಿ ಬೆಸ್ಟ್ ಆಯ್ಕೆಯಾಗಿದೆ. ದೋಣಿಯಲ್ಲಿ ವಿಹರಿಸಬಹುದು. ಸ್ನಾರ್ಕ್ಲಿಂಗ್, ಈಜು ಮತ್ತು ಸ್ಕೂಬಾ ಡೈವಿಂಗ್ ಅಂತಹ ಚಟುವಟಿಕೆಗಳಿವೆ.

ಎಲಿಫೆಂಟ್‌ ಬೀಚ್‌ನ ಅದ್ಭುತ ನೋಟ

ಲಕ್ಷ್ಮಣಪುರ ಬೀಚ್
ಅಂಡಮಾನ್‌ನಲ್ಲಿ ಜತ್ತಾರು ಅತ್ಯದ್ಭುತವಾದ ಕಡಲತೀರಗಳಿವೆ. ಅವುಗಳಲ್ಲಿ ಲಕ್ಷ್ಮಣಪುರ ಬೀಚ್ ಕೂಡ ತೀರಾ ಪ್ರಮುಖವಾದದ್ದು. ಬಿಳಿ ಮರಳಿನ ಕಡಲತೀರ ಇದಾಗಿದ್ದು, ಆಕರ್ಷಕವಾದ ಹವಳದ ಬಂಡೆ, ತೂಗಾಡುವ ಮರಗಳು ಈ ಬೀಚ್‌ನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಇದು ಅಂಡಮಾನ್‌ನ ಮತ್ತೊಂದು ಸುಂದರ ಕಡಲತೀರವಾಗಿದ್ದು, ಪ್ರವಾಸಿಗರು ಇಲ್ಲಿಗೆ ತಪ್ಪದೇ ಭೇಟಿಕೊಡಬೇಕು. ಸ್ನೇಹಿತರು ಮತ್ತು ಜೀವನ ಸಂಗಾತಿಯ ಜೊತೆಗೆ ಬೆಸ್ಟ್‌ ಟೈಮ್‌ ಕಳೆಯಬಹುದು.

ಸೂರ್ಯೋದಲ್ಲಿ ಕಂಗೊಳಿಸುತ್ತಿರುವ ಲಕ್ಷ್ಮಣಪುರ ಬೀಚ್