ಮುಂಬೈ ಬಹುತೇಕರ ಕನಸಿನ ನಗರಿ. ಉದ್ಯೋಗ ಪಡೆದು ಅಲ್ಲಿಯೇ ವಾಸಿಸಲು ಬಯಸುತ್ತಾರೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಂತೆಯೇ ಮುಂಬೈ ನಗರವು ಕೂಡ ಅದೆಷ್ಟೋ ಜನರಿಗೆ ಆಶ್ರಯ ನೀಡಿದೆ. ತನ್ನೊಡಲೊಳಗೆ ಸೇರಿಸಿಕೊಂಡಿದೆ. ಈಗಲೂ ಉದ್ಯೋಗ ಅರಸಿ ಸಾಕಷ್ಟು ಜನ ಮುಂಬೈ ಸೇರುತ್ತಾರೆ. ವಿಶೇಷವೆಂದರೆ ಮುಂಬೈ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೂ ಹೌದು. ಮಹಾರಾಷ್ಟ್ರದಲ್ಲಿನ ಸುಂದರವಾದ ನಗರಗಳಲ್ಲಿ ಮುಂಬೈಗೆ ಅಗ್ರಸ್ಥಾನ. ಮುಂಬೈ ನಗರದಲ್ಲಿ ಭವ್ಯವಾದ ಪುರಾತನ ದೇವಾಲಯಗಳು ಮತ್ತು ವಿಸ್ಮಯ ಕಡಲತೀರಗಳಿವೆ. ಕಡಲ ತೀರದಲ್ಲಿ ನಿಂತು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವುದೇ ಚಂದ. ಮುಂಬೇನ ಐದು ಪ್ರಸಿದ್ಧ ಬೀಚ್(ಕಡಲ ತೀರ) ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಜಹು ಬೀಚ್
ಮುಂಬೈನ ಪಶ್ಚಿಮ ಉಪನಗರದಲ್ಲಿ ನೆಲೆಗೊಂಡಿರುವ ಜುಹು ಬೀಚ್‌ ಸಾಕಷ್ಟು ಪ್ರಸಿದ್ಧಿಪಡೆದಿರುವ ಬೀಚ್‌ಗಳಲ್ಲಿ ಒಂದಾಗಿದೆ. ಜನರು ಇಲ್ಲಿ ಸೂರ್ಯಾಸ್ತದ ವೀಕ್ಷಣೆಯನ್ನು ಆನಂದಿಸಲು ಇಷ್ಟಪಡುತ್ತಾರೆ. ವೀಕೆಂಡ್‌ನಲ್ಲಿ ಈ ಬೀಚ್‌ ಬೆಸ್ಟ್‌ ಆಯ್ಕೆ. ಪ್ರೇಮಿಗಳು, ಸ್ನೇಹಿತರು ಮತ್ತು ಕುಟುಂಬದ ಜೊತೆಗೆ ಇಲ್ಲಿಗೆ ಬರಬಹುದು. ಅಪ್ಪಳಿಸಿ ಬರುವ ಕಡಲತೀರದಲ್ಲಿ ನಿಂತು ಭೇಲ್ಪುರಿ, ಪಾವ್ ಭಾಜಿಯನ್ನು ಸವಿಯುತ್ತಿದ್ದರೆ ಆಹಾ! ಸ್ವರ್ಗಕ್ಕೆ ಮೂರೇ ಗೇಣು. ಪ್ರವಾಸಿಗರು ಒಮ್ಮೆಯಾದರೂ ಈ ಬೀಚ್‌ಗೆ ಭೇಟಿಕೊಡಬೇಕು.

Jahu Beach

ಚೌಪಾಟಿ ಬೀಚ್
ಚೌಪಾಟಿ ಮುಂಬೈನ ಪ್ರಸಿದ್ಧ ಬೀಚ್. ಅಲ್ಲಿನ ಮನೋಹರವಾದ ದೃಶ್ಯ ಕಣ್ಮನವನ್ನು ಸೆಳೆಯುತ್ತದೆ. ಬೆಳ್ಳಂ ಬೆಳಗ್ಗೆ ಆಥವಾ ಇಳಿ ಸಂಜೆಯಲ್ಲಿ ಆ ಬೀಚ್‌ನ ಸೌಂದರ್ಯ ದುಪ್ಪಟ್ಟಾಗಿರುತ್ತದೆ. ಅಚ್ಚರಿ ಎಂದರೆ ಬೀಚ್‌ ಪಕ್ಕದಲ್ಲಿ ಮಾರಾಟ ಮಾಡುವ ರುಚಿಕರವಾದ ತಿಂಡಿಗಳು ಚೌಪಾಟಿಯಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಗುತ್ತದೆ. ಆಗ ಲಕ್ಷಾಂತರ ಜನರು ಸಮುದ್ರತೀರದಲ್ಲಿ ಸೇರುತ್ತಾರೆ. ದೋಣಿ ಚಕ್ರಗಳು, ಮಂಗಗಳು, ಕುದುರೆ ಮತ್ತು ಒಂಟೆ ಸವಾರಿಗಳಿಂದ ಹಿಡಿದು ಹಾವು ಮೋಡಿ ಮಾಡುವವರು ಅಲ್ಲಿರುತ್ತಾರೆ. ಈ ಬೀಚ್ ಫೋಟೊಗ್ರಾಫರ್‌ಗಳ ಸ್ವರ್ಗ ಸೀಮೆಯಾಗಿದೆ.

Chowpati Beach


ಅಕ್ಸಾ ಬೀಚ್
ತೂಗಾಡುವ ತೆಂಗಿನ ಮರಗಳಿಂದ ಆವೃತವಾದ ಕಡಲತೀರಕ್ಕೆ ಹೋಗಲು ಪ್ರವಾಸಿಗರು ಬಯಸಿದರೆ ಮುಂಬೈನ ಪ್ರಸಿದ್ಧ ಅಕ್ಸಾ ಬೀಚ್‌ಗೆ ಭೇಟಿ ನೀಡಬಹುದು. ವೀಕೆಂಡ್‌ಗಳಲ್ಲಿ ಭೇಟಿ ನೀಡಬಹುದಾದ ಅದ್ಭುತ ತಾಣವಿದು. ಕಾಲುಗಳಿಗೆ ಕಚಗುಳಿ ಇಡುವ ಅಲ್ಲಿನ ಮರಳು ಹಾಗು ಶಾಂತವಾದ ವಾತಾವರಣವೇ ಜನರನ್ನು ಹೆಚ್ಚು ಸೆಳೆಯುತ್ತದೆ. ಏಕಾಂತ ಬಯಸುವ ಮಂದಿಯನ್ನು ಅಕ್ಸಾ ಬೀಚ್‌ ಕೈಬೀಸಿ ಕರೆಯುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಮರಳಿನ ಮೇಲೆ ಬರಿಗಾಲಿನಲ್ಲಿ ನಡೆದಾಗಲಂತೂ ರೋಮಾಂಚಕಾರಿ ಅನುಭವ. ಅಲ್ಲಿ ಬೀಸುವ ಶಾಂತವಾದ ತಂಗಾಳಿ ಮೈಕೈಯನ್ನು ಅರಳಿಸುತ್ತದೆ.

Axa Beach


ಮಾಧ್‌ ದ್ವೀಪ ಬೀಚ್
ಮುಂಬೈ ನಗರಕ್ಕೆ ಅತ್ಯಂತ ಸಮೀಪದಲ್ಲಿರುವ ಮತ್ತೊಂದು ಸುಂದರವಾದ ಬೀಚ್‌ ಎಂದರೆ ಅದು ಮಾಧ್‌ ದ್ವೀಪ ಬೀಚ್‌. ಇದು ವಿಶೇಷವಾಗಿ ಮೀನುಗಾರರ ಹಳ್ಳಿಯಾಗಿದೆ. 17 ನೇ ಶತಮಾನದ ಆರಂಭದಲ್ಲಿ ಪೋರ್ಚುಗೀಸರು ನಿರ್ಮಿಸಿದ ಕಾವಲು ಗೋಪುರವನ್ನೇ ಮಾಧ್ ಕೋಟೆ ಎಂದು ಕರೆಯಲಾಗುತ್ತಿದೆ. ತನ್ನ ಪ್ರಶಾಂತವಾದ ವಾತಾವರಣ ಮತ್ತು ಸೌಂದರ್ಯದಿಂದ ಮಾಧ್‌ ದ್ವೀಪ ಬೀಚ್‌ ಎಲ್ಲರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಬೀಚ್‌ನಲ್ಲಿ ಪ್ರವಾಸಿಗರು ಈಜಬಹುದು.

Madh Dweep Beach


ಮಾರ್ವೆ ಬೀಚ್
ಮುಂಬೈನ ಪ್ರಸಿದ್ಧ ಮಾರ್ವೆ ಬೀಚ್‌ ಥೇಟ್ ಗೋವಾ ಬೀಚ್‌ಗಳ ಸೌಂದರ್ಯವನ್ನು ಹೋಲುತ್ತದೆ. ಅಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತವೇ ಪ್ರವಾಸಿಗರ ಮೂಲ ಆಕರ್ಷಣೆ. ಪೋರ್ಚುಗೀಸ್ ಕಾಲದ ಚರ್ಚ್‌ಗಳು ಮತ್ತು ಮುಂಬೈನ ಕ್ಯಾಥೋಲಿಕ್ ಸ್ಥಳೀಯರ ಉಡುಪುಗಳನ್ನು ಬೀಚ್ನ ಸಮೀಪದಲ್ಲಿಯೇ ಮಾರಾಟ ಮಾಡಲಾಗುತ್ತದೆ. ಈ ಬೀಚ್‌ನಲ್ಲಿ ದೋಣಿ ವಿಹಾರ ಮಾಡಬಹುದು. ಪ್ರಶಾಂತ ವಾತಾವರಣ ಮತ್ತು ತಣ್ಣನೆಯ ಗಾಳಿಯಲ್ಲಿ ದೋಣಿ ವಿಹಾರ ಮಜಾವಾದ ಅನುಭವವನ್ನು ನೀಡುತ್ತದೆ. ವೀಕೆಂಡ್‌ನಲ್ಲಿ ಪ್ರವಾಸಿಗರು ತಪ್ಪದೇ ಮಾರ್ವೆ ಬೀಚ್‌ಗೆ ಭೇಟಿಕೊಡಬೇಕು.

Mumbai Marve Beach