ಪ್ರವಾಸಿಗರಿಗೆ ಊಟಿ ಎಂದರೆ ಸದಾ ಅಚ್ಚುಮೆಚ್ಚು. ಅಲ್ಲಿರುವ ತಾಣಗಳು ಮತ್ತು ಅಲ್ಲಿನ ವಾತಾವರಣಕ್ಕೆ ಎಂಥವರೂ ಫಿದಾ ಆಗುತ್ತಾರೆ. ಆ ಜಾಗ ನಮ್ಮ ಬೇಸರವನ್ನು ಕಳೆಯುತ್ತದೆ. ಅಲ್ಲಿಗೆ ಹೋದ ಕೂಡಲೇ ಮನಸ್ಸು ತೂಗುಯ್ಯಾಲೆ ಆಗುತ್ತದೆ. ಆದರೆ ಹೆಚ್ಚಿನ ಪ್ರವಾಸಿಗರಿಗೆ ಊಟಿಯಿಂದ ಕೆಲವೇ ಕಿ.ಮೀ ದೂರದಲ್ಲಿರುವ ಕೂನೂರಿನ ಕುರಿತು ಮಾಹಿತಿಯಿಲ್ಲ. ಕೂನೂರಿನಲ್ಲಿರುವ ಅದ್ಭುತ ಪ್ರವಾಸಿ ತಾಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಊಟಿ ತಮಿಳುನಾಡಿನ ಬಹಳ ಸುಂದರ ಹಾಗೂ ಜನಪ್ರಿಯವಾಗಿರುವ ಗಿರಿಧಾಮಗಳಲ್ಲಿ ಒಂದಾಗಿದೆ. ಜನರು ಬೇಸಿಗೆಯಿಂದ ಪಾರಾಗಲು ಊಟಿಯಂತಹ ತಂಪಾದ ಗಿರಿಧಾಮಕ್ಕೆ ಬರುತ್ತಾರೆ. ಹೀಗೆ ಊಟಿಗೆ ಹೋದವರು ಕೂನೂರಿಗೆ ಹೋಗಲು ಮರೆತು ಬಿಡುತ್ತಾರೆ. ಕೂನೂರು ಕೂಡ ತಮಿಳುನಾಡಿನ ಪ್ರಸಿದ್ಧ ಶಾಂತ ಗಿರಿಧಾಮವಾಗಿದ್ದು, ಊಟಿಯಿಂದ ಕೇವಲ 19 ಕಿ.ಮೀ ದೂರದಲ್ಲಿದೆ. ನೀಲಗಿರಿಯ ಎರಡನೇ ಅತಿ ದೊಡ್ಡ ಗಿರಿಧಾಮವಾಗಿರುವ ಕೂನೂರ್ ತನ್ನ ಪ್ರಾಕೃತಿಕ ಸೌಂದರ್ಯದ ಮೂಲಕ ಸದಾ ಕಂಗೊಳಿಸುತ್ತದೆ.. ಕೂನೂರಿನಲ್ಲಿ ಸಾಕಷ್ಟು ಕಂದಕಗಳು, ಕಣಿವೆಗಳು, ಬೆಟ್ಟಗಳು ಮತ್ತು ಜಲಪಾತಗಳಿವೆ. ಕೂನೂರಿಗೆ ಹೋಗುವವರು ತಪ್ಪದೇ ಈ ಜಾಗಗಳಿಗೆ ಹೋಗಿ.

ಸಿಮ್ಸ್‌ ಪಾರ್ಕ್
ಸಿಮ್ಸ್ ಪಾರ್ಕ್ ಕೂನೂರಿನಲ್ಲಿದೆ. ಮನೆ ಮಕ್ಕಳೊಂದಿಗೆ ವೀಕೆಂಡ್‌ನಲ್ಲಿ ಭೇಟಿ ನೀಡಲು ಈ ಪಾರ್ಕ್ ಒಂದೊಳ್ಳೆ ತಾಣವಾಗಿದೆ. ಕುಟುಂಬದ ಜೊತೆ ಒಳ್ಳೆಯ ಕ್ಷಣಗಳನ್ನು ಕಳೆಯಲು ಜನರು ಸೀಮ್ಸ್‌ ಪಾರ್ಕ್‌ಗೆ ಹೋಗಬಹದು. ಸಿಮ್ಸ್ ಪಾರ್ಕ್ ಹತ್ತಾರು ಜಾತಿಯ ವಿಶೇಷವಾದ ಹೂ ಗಿಡಗಳಿವೆ. ಇದೊಂದು ವರ್ಣರಂಜಿತ ಉದ್ಯಾನವಾಗಿದ್ದು, ನೋಡುಗರಿಗೆ ಹಿತಾನುಭವವನ್ನು ನೀಡುತ್ತದೆ. ಅಲ್ಲಿನ ವಾತಾವರಣವೂ ಮನಸೂರೆಗೊಳಿಸುತ್ತದೆ.

Sims Park


ಡ್ರೂಗ್‌ ಕೋಟೆ
ಡ್ರೂಗ್ ಫೋರ್ಟ್ ಅಥವಾ ಡ್ಯೂಗ್‌ ಕೋಟೆ ಐತಿಹಾಸಿಕ ಸ್ಥಳವನ್ನು ನೋಡ ಬಯಸುವ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿದೆ. ಇಲ್ಲಿ ಪ್ರವಾಸಿಗರು ಟ್ರೆಕ್ಕಿಂಗ್‌ ಸಹ ಮಾಡಬಹುದು. ಐತಿಹಾಸಿಕ ವಿಷಯಗಳ ಕುರಿತು ಆಸಕ್ತಿ ಇರುವವರು ಇಲ್ಲಿಗೆ ಭೇಟಿ ನೀಡಬಹುದು. ಕೋಟೆಯ ಸುತ್ತಲೂ ಕೆಲವು ಅಪರೂಪದ ಪಕ್ಷಿಗಳಿವೆ. ಪಕ್ಷಿಗಳ ಕಲರವ ನೆಮ್ಮದಿಯನ್ನು ನೀಡುತ್ತದೆ. ವಿಶೇಷವೆಂದರೆ ಡ್ರೂಗ್‌ ಕೋಟೆ ಅಚ್ಚ ಹಸುರಿನಿಂದ ಆವೃತ್ತವಾಗಿದ್ದು ಮನಸ್ಸಿಗೆ ಮುದ ನೀಡುತ್ತದೆ.

Droog Fort


ಹೆರಿಟೈಜ್‌ ರೈಲು
ಕೂನೂರಿಗೆ ಭೇಟಿ ನೀಡುವ ಪ್ರವಾಸಿಗರು ಹೆರಿಟೇಜ್‌ ರೈಲಿನಲ್ಲಿ ಪ್ರಯಾಣಿಸಿ ಆನಂದಿಸಬಹುದು. ಈ ರೈಲು ಸವಾರಿಯು ಪ್ರಶಾಂತವಾದ ವಾತಾವರಣ ಮತ್ತು ಸೇತುವೆಗಳ ಮೂಲಕ ನಿಧಾನವಾಗಿ ಚಲಿಸುತ್ತದೆ. ಇದನ್ನು ಆಟಿಕೆ ರೈಲು ಎಂದೇ ಕರೆಯುತ್ತಾರೆ. 19 ನೇ ಶತಮಾನದ ಯುಗದ ಹಿಂದಿನ ಈ ಪರಂಪರೆಯ ರೈಲು ಚಹಾ ಅಥವಾ ಕಾಫಿ ಸಾರಿಗೆಯ ಸಾಧನವಾಗಿ ತನ್ನ ಸೇವೆಯನ್ನು ಪ್ರಾರಂಭಿಸಿತು. ಈ ಆಟಿಕೆ ರೈಲು ಗಂಟೆಗೆ ಸುಮಾರು 60 ಕಿಮೀ ವೇಗದಲ್ಲಿ ಚಲಿಸುತ್ತದೆ. ಈ ರೈಲು ನಮ್ಮನ್ನು ವಿಸ್ತಾರವಾದ ಟೀ ಎಸ್ಟೇಟ್‌ಗಳು ಮತ್ತು ಮಂಜಿನ ಪರ್ವತದ ತುದಿಗಳತ್ತ ಕರೆದೊಯ್ಯುತ್ತದೆ. ಒಂದು ರೀತಿಯ ಕಚಗುಳಿಯ ಭಾವ ಉಂಟಾಗುತ್ತದೆ.

Heritage Rail


ಲಾಸ್‌ ಫಾಲ್ಸ್
ಊಟಿಯ ಕೂನೂರಿನ ಲಾಸ್‌ ಫಾಲ್ಸ್‌ ಮಳೆಗಾಲದಲ್ಲಿ ಹಾಲ್ನೊರೆಯಂತೆ ಮೈದುಂಬಿ ಧುಮ್ಮಿಕ್ಕುತ್ತದೆ. ಕೂನೂರಿನಲ್ಲಿ ತಪ್ಪದೇ ನೋಡಲೇಬೇಕಾದ ಜಲಪಾತ ಇದಾಗಿದೆ. ಈ ಲಾಸ್ ಫಾಲ್ಸ್ ಪ್ರವಾಸಿಗರ ಮನಸೂರೆಗೊಳಿಸುತ್ತದೆ . ಸುಮಾರು 180 ಅಡಿ ಎತ್ತರದಿಂದ ಈ ಜಲಪಾತ ಬೀಳುತ್ತದೆ. ಅಲ್ಲಿ ವಿಶೇಷವಾದ ನೀರಿನ ಕೊಳವಿದೆ. ಕೂನೂರಿನಿಂದ ಕೇವಲ 7 ಕಿ.ಮೀ ದೂರದಲ್ಲಿ ಈ ಲಾಸ್‌ ಫಾಲ್ಸ್‌ ಇದ್ದು, ನಿಸರ್ಗ ಪ್ರಿಯರನ್ನು ಬಹುವಾಗಿ ಆಕರ್ಷಿಸುತ್ತದೆ.

Loss Falls