ಬೆಂಗಳೂರಿನಿಂದ ಸರಿ ಸುಮಾರು 300 ಕಿ.ಮೀ ದೂರದಲ್ಲಿರುವ ಕೊಪ್ಪಳದಲ್ಲಿ ಹತ್ತಾರು ಅದ್ಭುತವಾದ ಪ್ರವಾಸಿ ತಾಣಗಳಿವೆ.ಬಹುತೇಕರು ಉತ್ತರ ಕರ್ನಾಟಕದ ಉರಿ ಬಿಸಿಲಿಗೆ ಹೆದರಿ ಅತ್ತ ಕಡೆಗೆ ಪ್ರವಾಸ ಕೈಗೊಳ್ಳುವುದಿಲ್ಲ. ಆದರೆ ಉತ್ತರ ಕರ್ನಾಟಕದಲ್ಲಿಯೂ ಸಾಕಷ್ಟು ಮನಮೋಹಕ ಸ್ಥಳಗಳಿವೆ. ಅಂತೆಯೇ ಕೊಪ್ಪಳದಲ್ಲಿಯೂ ಪ್ರವಾಸಿ ಜಾಗಗಳಿವೆ. ಈ ಜಿಲ್ಲೆಯಲ್ಲಿ ಪುರಾತನ ದೇವಾಲಯಗಳು ಸೇರಿದಂತೆ ಪಿಕ್ನಿಕ್‌ ತಾಣಗಳಿವೆ.

ಗಂಗ, ಹೊಯ್ಸಳ, ಚಾಲುಕ್ಯ ರಾಜವಂಶದವರ ಕೊಡುಗೆಗಳಿಂದಾಗಿ ಕೊಪ್ಪಳ ತನ್ನ ಶ್ರೀಮಂತ ಪರಂಪರೆಯನ್ನು ಉಳಿಸಿಕೊಂಡಿದೆ. ಕೊಪ್ಪಳದ ಮಹಾದೇವ ದೇವಾಲಯವು ಅಲ್ಲಿನ ಬಹು ದೊಡ್ಡ ಆಕರ್ಷಣೆಯಾಗಿದೆ. ಹಾಗಾದರೆ ಕೊಪ್ಪಳದಲ್ಲಿರುವ ಇನ್ನಿತರ ಪ್ರವಾಸಿ ಜಾಗಗಳ ಕುರಿತು ತಿಳಿದುಕೊಳ್ಳೋಣ; ಇಲ್ಲಿದೆ ಮಾಹಿತಿ.

ಕೊಪ್ಪಳ ಕೋಟೆ
ಕೊಪ್ಪಳದಲ್ಲಿ ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿರುವ ಕೋಟೆ ಇದೆ. ಆ ಕೋಟೆಯನ್ನು ದೇಶದಲ್ಲಿರುವ ಪ್ರಬಲವಾದ ಕೋಟೆಗಳಲ್ಲಿ ಒಂದು ಎಂದು ಕರೆಯಲಾಗಿದೆ. ಈ ಭದ್ರವಾದ ಕೋಟೆ ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಈವರೆಗೆ ಸರಿಯಾದ ಮಾಹಿತಿ ದೊರೆತಿಲ್ಲ. 1786 ರ ಸಮಯದಲ್ಲಿ ಟಿಪ್ಪು ಸುಲ್ತಾನ್‌ ಈ ಕೋಟೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಫ್ರೆಂಚ್‌ ಇಂಜಿನಿಯರ್‌ಗಳ ಸಹಾಯದಿಂದ ಕೋಟೆಯನ್ನು ಪುನರ್ ನಿರ್ಮಿಸಿದನು ಎನ್ನಲಾಗಿದೆ. ಕೊಪ್ಪಳಕ್ಕೆ ಹೋಗುವವರು ತಪ್ಪದೇ ಈ ಕೋಟೆಗೆ ಭೇಟಿ ನೀಡಬೇಕು. ಕೋಟೆ ಶತಮಾನದ ಕತೆಯನ್ನು ಹೇಳುತ್ತದೆ. ಇತಿಹಾಸದ ಬಗ್ಗೆ ಆಸಕ್ತಿ ಇರುವವರು ಈ ಕೋಟೆಯನ್ನು ಇಡಿಯಾಗಿ ಅನ್ವೇಷಿಸಬಹುದು.

Koppala Fort


ಆನೆಗುಂದಿ
ಆನೆಗುಂದಿಯು ವಿಜಯನಗರದ ಹಂಪಿಗಿಂತ ಹೆಚ್ಚು ಪುರಾತನವಾದುದು ಎನ್ನುತ್ತಾರೆ ಇತಿಹಾಸಕಾರರು. ಪೌರಾಣಿಕ ಕಥೆಗಳಲ್ಲಿಯು ಈ ಆನೆಗುಂಡಿ ಅಥವಾ ಆನೆಗುಂದಿಯ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಇಲ್ಲಿ ಅನೇಕ ಪುರಾತನವಾದ ದೇವಾಲಯ ಹಾಗು ಅದ್ಭುತವಾದ ಕೋಟೆಗಳಿವೆ. ಆನೆಗುಂದಿಯಲ್ಲಿ ಪಂಪಾ ಸರೋವರ, ಚಿಂತಾಮಣಿ ದೇವಾಲಯ ಹಾಗು ರಂಗನಾಥ ದೇವಾಲಯ ಜನಪ್ರಿಯವಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

Anegundi koppala


ಪಿಕ್ನಿಕ್‌ಗೂ ಹೋಗಬಹುದು
ಕೊಪ್ಪಳದಲ್ಲಿ ಪಿಕ್ನಿಕ್‌ ತಾಣಗಳೂ ಇವೆ. ಕುಟುಂಬದ ಜೊತೆಗೆ ವೀಕೆಂಡ್‌ನಲ್ಲಿ ಪಿಕ್ನಿಕ್‌ ಹೋಗಬಹುದು.

ಪಂಪಾ ಸರೋವರ: ಆನೆಗುಂದಿಯಲ್ಲಿರುವ ಪ್ರಶಾಂತವಾದ ಸರೋವರ ಇದಾಗಿದೆ. ಭಾರತದ ಪವಿತ್ರವಾದ 5 ಸರೋವರಗಳಲ್ಲಿ ಇದು ಕೂಡ ಒಂದು. ಕೊಪ್ಪಳಕ್ಕೆ ಹೋಗುವ ಮಂದಿ ಈ ಪಂಪಾ ಸರೋವರದಂತಹ ಶಾಂತವಾದ ತಾಣಕ್ಕೆ ಹೋಗಬಹುದು.

ಸಣಾಪುರ ಕೆರೆ: ಹಂಪಿಯ ಬಳಿ ಇರುವ ಈ ಕೆರೆಯು ಸುತ್ತಮುತ್ತಲಿನ ವಾತಾವರಣದಿಂದಾಗಿ ಹೆಚ್ಚು ಹೆಸರುವಾಸಿಯಾಗಿದೆ. ಪ್ರವಾಸಿಗರು ಈ ಕೆರೆಯಲ್ಲಿ ತೆಪ್ಪದ ಮೇಲೆ ಕೂತು ವಿಹಾರ ಮಾಡಬಹುದು. ಹಿತಾನುಭವ ಸಿಗುತ್ತದೆ.

Koppala Picnic sopt


ಧಾರ್ಮಿಕ ತಾಣ
ಕೊಪ್ಪಳದಲ್ಲಿ ಮಹಾಮಾಯ ದೇವಾಲಯ, ನವಲಿಂಗ ಸ್ವಾಮಿ ದೇವಾಲಯ, ಕನಕಗಿರಿಯ ಕನಕ ಮುನಿ ಸ್ಥಳ, ಹುಲಿಗೆಮ್ಮ ದೇವಿ ದೇವಾಲಯ, ಗವಿಮಠ ಮತ್ತು ಪಾಲ್ಕಿಗುಂದ ಅಶೋಕನ ಶಾಸನ, ಚಿಂತಾಮಣಿ ದೇವಸ್ಥಾನ ಸೇರಿದಂತೆ ಇನ್ನು ಹತ್ತಾರು ಧಾರ್ಮಿಕ ತಾಣಗಳಿವೆ.

koppala Religion Spot