ಕಡಿಮೆ ಬಜೆಟ್‌ನಲ್ಲಿ ನಿಮ್ಮಿಷ್ಟದ ಜಾಗ ನೋಡಿ..
ಬಜೆಟ್ ಫ್ರೆಂಡ್ಲಿ ಟ್ರಿಪ್ ಮಾಡಬೇಕು ಎಂದರೆ ನೀವು ಪ್ಲ್ಯಾನಿಂಗ್ ಗೆ ಆದ್ಯತೆ ನೀಡಲೇಬೇಕು. ಯಾವುದೇ ನಗರ ಅಥವಾ ದೇಶಕ್ಕೆ ಹೋಗೋದಾದರೆ ಅಲ್ಲಿ ಏನು ಮಾಡಬೇಕು? ಎಷ್ಟು ದಿನ ಇರಬೇಕು ಎಂಬಿತ್ಯಾದಿ ಪ್ಲ್ಯಾನ್ ಗಳ ಪಕ್ಕಾ ಪಟ್ಟಿ ನಿಮ್ಮ ಬಳಿ ಸಿದ್ಧವಿರಬೇಕು.
- ಕಾವ್ಯಾ ಎಚ್.
ಜಗತ್ತಿನಲ್ಲಿರುವ ಜಾಗಗಳ ಪಟ್ಟಿ ಮಾಡುತ್ತಾ ಹೋದರೆ ಅದೊಂಥರ ಅಮಾವಾಸ್ಯೆ ರಾತ್ರಿಯಲ್ಲಿ ನಕ್ಷತ್ರ ಎಣಿಸಿದಂತೆ. ಎಂದಿಗೂ ಮುಗಿಯುವಂಥದ್ದಲ್ಲ. ಆದರೆ, ನಮ್ಮಿಷ್ಟದ ಒಂದಷ್ಟು ಜಾಗವನ್ನಂತೂ ನೋಡಬಹುದಲ್ಲ? ಇಷ್ಟದ ಪ್ರದೇಶಗಳನ್ನು ನೋಡಲು ಲಾಟರಿಯೇ ಹೊಡಯಬೇಕೆಂದೇನೂ ಇಲ್ಲ. ಅಚ್ಚುಕಟ್ಟಾಗಿ ಪ್ಲ್ಯಾನ್ ಮಾಡಿದರೆ ಇರುವ ಹಣದಲ್ಲೇ ಒಂದೊಳ್ಳೆಯ ಟ್ರಿಪ್ ಮಾಡಬಹುದು. ಹಾಗಾದರೆ ಕಡಿಮೆ ಬಜೆಟ್ನಲ್ಲಿ ಟ್ರಿಪ್ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್.
ಎಲ್ಲಾ ಪಕ್ಕಾ ಪ್ಲ್ಯಾನ್ ಇದ್ರೆ ಆಯ್ತು..
ಬಜೆಟ್ ಫ್ರೆಂಡ್ಲಿ ಟ್ರಿಪ್ ಮಾಡಬೇಕು ಎಂದರೆ ನೀವು ಪ್ಲ್ಯಾನಿಂಗ್ ಗೆ ಆದ್ಯತೆ ನೀಡಲೇಬೇಕು. ಯಾವುದೇ ನಗರ ಅಥವಾ ದೇಶಕ್ಕೆ ಹೋಗೋದಾದರೆ ಅಲ್ಲಿ ಏನು ಮಾಡಬೇಕು? ಎಷ್ಟು ದಿನ ಇರಬೇಕು ಎಂಬಿತ್ಯಾದಿ ಪ್ಲ್ಯಾನ್ ಗಳ ಪಕ್ಕಾ ಪಟ್ಟಿ ನಿಮ್ಮ ಬಳಿ ಸಿದ್ಧವಿರಬೇಕು. ಅಂದಾಗ ಮಾತ್ರ ಕಡಿಮೆ ಬಜೆಟ್ನಲ್ಲಿ ಪ್ರಯಾಣ ಪೂರ್ಣಗೊಳ್ಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಎಲ್ಲದರ ಬಗ್ಗೆ ಕೆಲ ತಿಂಗಳು ಮೊದಲೇ ಪ್ಲ್ಯಾನ್ ಮಾಡಬೇಕು. ಕೊನೆಯ ಕ್ಷಣದಲ್ಲಿ ನೀವು ಏನೇ ಪ್ಲ್ಯಾನ್ ಮಾಡಿದರೂ ಅದು ದುಬಾರಿಯೇ.

ಆಫ್ ಸೀಸನ್ ಬೆಸ್ಟ್
ನಿಮ್ಮ ಉದ್ದೇಶ ಇರೋದು ಆ ಸ್ಥಳವನ್ನು ನೋಡಬೇಕೆಂಬುದಷ್ಟೇ ಎಂದಾದರೆ ಯಾವ ಸೀಸನ್ನಲ್ಲಿ ಹೋದರೇನು? ಸಾಮಾನ್ಯವಾಗಿ ಎಲ್ಲರೂ ಹೋಗುವ ಸಮಯದಲ್ಲೇ ನೀವು ಹೋಗುತ್ತೀರಿ ಎಂದಾದರೆ ಟ್ರಿಪ್ ದುಬಾರಿ ಆಗೋದು ಖಚಿತ. ಇಷ್ಟೇ ಅಲ್ಲ, ಅಲ್ಲಾಗುವ ಜನ ಜಂಗುಳಿಯಿಂದ ನಿಮ್ಮ ಪ್ಲ್ಯಾನ್ ಕೂಡ ಉಲ್ಟಾ ಆಗುತ್ತದೆ. ಹೀಗಾಗಿ, ನಿಮ್ಮ ಆಸಕ್ತಿ ದಾಯಕ ಸ್ಥಳದ ಆಫ್ ಸೀಸನ್ ಯಾವಾಗ ಎಂಬುದನ್ನು ನೋಡಿಕೊಳ್ಳಿ. ಆ ವೇಳೆ ಭೇಟಿಗೆ ಯೋಜಿಸಿ. ಆಗ ಹೋಟೆಲ್ ಹಾಗೂ ವಿಮಾನ ಟಿಕೆಟ್ ದರ ಕೈಗೆಟಕೋ ಬೆಲೆಯಲ್ಲಿ ಲಭ್ಯವಾಗುತ್ತದೆ.
ಐಷಾರಾಮಿ ಹೋಟೆಲ್ ಗೆ ಹೇಳಿ ನೋ..
ನಿಮ್ಮ ಉದ್ದೇಶ ಸ್ಥಳವನ್ನು ನೋಡೋದು ಎಂದಾದರೆ ಉಳಿದುಕೊಳ್ಳೋ ಜಾಗ ಹೆಚ್ಚು ಐಷಾರಾಮಿ ಆಗಿರಬೇಕು ಎಂಬುದಕ್ಕೆ ಆದ್ಯತೆ ನೀಡಬಾರದು. ಯಾವುದೇ ಪ್ರವಾಸಿ ಸ್ಥಳಕ್ಕೆ ಭೇಟಿ ಕೊಟ್ಟರೂ ಬಂಕರ್ ರೂಂಗಳು ಲಭ್ಯವಿರುತ್ತವೆ. ಇಲ್ಲವೇ ಕೆಲವೇ ದಿನಕ್ಕೆ ಉಳಿದುಕೊಳ್ಳಲು ಹಾಸ್ಟೆಲ್ಗಳು ಕೂಡ ಲಭ್ಯ. ಇವುಗಳಿಂದ ನೀವು ಹಣ ಉಳಿಸಬಹುದು. ನೀವು ಹೋಗುವ ಸ್ಥಳದಲ್ಲಿ ನಿಮ್ಮ ಗೆಳೆಯರು ಅಥವಾ ಸಂಬಂಧಿಕರು ಇರುತ್ತಾರೆ ಎಂದರೆ ಅದರ ಲಾಭವನ್ನು ನೀವು ಪಡೆಯಬಹುದು.
ಶಾಪಿಂಗ್ ಬೇಡ..
ಟ್ರಿಪ್ ಗೆ ಬೇಕಾದ ವಸ್ತುಗಳನ್ನು ಮೊದಲೇ ಪಟ್ಟಿ ಮಾಡಿ ಖರೀದಿಸಿ. ದಾರಿಯುದ್ದಕ್ಕೂ ಒಂದೊಂದೇ ವಸ್ತುಗಳನ್ನು ನೆನಪು ಮಾಡಿಕೊಂಡು ಖರೀದಿಸುತ್ತಾ ಕುಳಿತರೆ ನಿಮ್ಮ ಸಮಯದ ಜತೆ ಹಣವೂ ಪೋಲಾಗುತ್ತದೆ. ನೀವು ಹೊರಟ ಜಾಗ ಯಾವುದೇ ಇರಲಿ, ಕನಿಷ್ಠ ಒಂದು ಜೀನ್ಸ್, ಹೂಡಿ ಮತ್ತು ವಾಟರ್ಪ್ರೂಫ್ ಜಾಕೆಟ್ ನಿಮ್ಮ ಬಳಿ ಇರಲಿ. ನಿತ್ಯ ಬೇಕಾಗುವ ವಸ್ತುಗಳು ಕೂಡ ನಿಮ್ಮ ಬಳಿ ಇರಲಿ.
ವಿಮಾನ ಕಾಯ್ದಿರಿಸುವಾಗ ಇರಲಿ ಮುಂದಾಲೋಚನೆ
ವಿಮಾನ ಟಿಕೆಟ್ ಅನ್ನು ಎಷ್ಟು ಮೊದಲೇ ಬುಕ್ ಮಾಡುತ್ತೀರೋ ಅಷ್ಟು ಉಳಿತಾಯ ನಿಮಗಾಗುತ್ತದೆ. ಟ್ರಿಪ್ ಸಮೀಪಿಸುತ್ತಿರುವಾಗ ವಿಮಾನದ ಟಿಕೆಟ್ ಬುಕ್ ಮಾಡಲು ನೋಡಿದರೆ ಅದು ದುಬಾರಿಯೇ. ಸಾಮಾನ್ಯವಾಗಿ ಒಂದು ವರ್ಷ ಮೊದಲೇ ವಿಮಾನ ಟಿಕೆಟ್ಗಳನ್ನು ನೀವು ಬುಕ್ ಮಾಡಬಹುದು! ಆ ನಿಟ್ಟಿನಲ್ಲೇ ಪ್ಲ್ಯಾನ್ ಇರಲಿ.

ವಾರದ ಮಧ್ಯೆ ಪ್ರಯಾಣ ಉತ್ತಮ!
ಈ ಪ್ರ್ಯಾಕ್ಟಿಸ್ ನಿಂದ ನಿಮಗೆ ಸಾಕಷ್ಟು ಹಣ ಉಳಿತಾಯ ಆಗುವ ಎಲ್ಲಾ ಸಾಧ್ಯತೆ ಇದೆ. ವಾರಾಂತ್ಯಕ್ಕಿಂತ ವಾರದ ದಿನದಲ್ಲಿ ಪ್ರಯಾಣ ಮಾಡಿದರೆ ನಿಮಗೆ ಎಲ್ಲವೂ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಇದು ಕೇವಲ ವಿಮಾನ ಟಿಕೆಟ್ ದರ ಎಂದಲ್ಲ, ಬಸ್ ಪ್ರಯಾಣಕ್ಕೂ ಅನ್ವಯ.
ವಿಮಾನದ ಬದಲು ಟ್ರೇನ್ ಹತ್ತಿ..
ಕೆಲವು ಪ್ರದೇಶಗಳಿಗೆ ವಿಮಾನದಲ್ಲಿ ತೆರಳಿದರೆ ಬೇಗ ತಲುಪಬಹುದು ನಿಜ. ಅದೇ ಜಾಗಕ್ಕೆ ನೀವು ರೈಲ್ವೆ ಅಥವಾ ಬಸ್ನ ಆಯ್ಕೆ ಮಾಡಿಕೊಂಡರೆ ಸಮಯ ಕೊಂಚ ಹೆಚ್ಚು ಬೇಕಾಗಬಹುದು. ಆದರೆ, ಬಜೆಟ್ ಫ್ರೆಂಡ್ಲಿ ಆಗಲಿದೆ.
ಊಟದ ಬಗ್ಗೆ ಇರಲಿ ಗಮನ
ಪ್ರಯಾಣ ಮಾಡುವಾಗ ಯಾರೂ ಕೂಡ ಹಸಿದುಕೊಂಡಂತೂ ಇರೋಕೆ ಸಾಧ್ಯವಿಲ್ಲ. ಈ ವೇಳೆ ಐಷಾರಾಮಿ ಹೋಟೆಲ್ ಬದಲು, ಸ್ಥಳೀಯ ಮೆಸ್ಗಳನ್ನು ಆಯ್ಕೆ ಮಾಡಿಕೊಂಡರೆ ರುಚಿ-ಶುಚಿಯಾದ ಊಟದ ಜೊತೆಗೆ ಹಣವೂ ಕಡಿಮೆ ಖರ್ಚಾಗುತ್ತದೆ.
ಹಣವನ್ನೂ ಮಾಡಬಹುದು!
ಟ್ರಿಪ್ ಎಂದರೆ ನಿಮ್ಮ ಕೈಯಿಂದ ಮಾತ್ರ ಹಣ ಖರ್ಚಾಗೋದಲ್ಲ, ಹಣವನ್ನು ಮಾಡುವ ಅವಕಾಶವೂ ಇದೆ. ನೀವು ಯಾವಾಗಲೂ ಟ್ರಾವೆಲ್ ಮಾಡ್ತೀರಿ ಎಂದಾದರೆ ಒಂದು ಯೂಟ್ಯೂಬ್ ಚಾನೆಲ್ ಮಾಡಿಕೊಂಡರೆ ಸುತ್ತಾಟಡದ ಜೊತೆ ಹಣವೂ ಆಗುತ್ತದೆ.