-ಸಿರಿ ಮೈಸೂರು

ನೀರಿನ ಮಧ್ಯೆ, ಕಾಡಿನ ನಡುವೆ, ನದಿ ತೀರದಲ್ಲಿ, ಹೀಗೆ ಇತಿಹಾಸದುದ್ದಕ್ಕೂ ವಿವಿಧ ಸ್ಥಳಗಳಲ್ಲಿ ನಗರಗಳು, ನಾಗರೀಕತೆಗಳು ಹುಟ್ಟಿಕೊಂಡಿವೆ. ಆದರೆ ಏನಂದರೆ ಏನೂ ಇಲ್ಲದ ಮರಳುಗಾಡಿನಲ್ಲಿ ಅಸಾಧ್ಯ ಎನಿಸುವಂಥ ಚಮತ್ಕಾರವನ್ನೇ ನಿರ್ಮಿಸಲಾಗಿದೆ. ಗಗನಚುಂಬಿ ಕಟ್ಟಡಗಳು, ಸೂರ್ಯನು ಎಂದೂ ಮುಳುಗನು ಎನ್ನುವಂಥ ಬೃಹತ್‌ ತೈಲ ಉತ್ಪಾದನಾ ಘಟಕ, ಸಾವಿರಾರು ಉದ್ಯಮಗಳು, ಅತ್ಯಂತ ಶಿಸ್ತಿನ ಸಮಾಜ, ಐಷಾರಾಮಿ ಜೀವನಶೈಲಿ, ಜತೆಗೆ ಹಲವು ವಿಸ್ಮಯಗಳನ್ನು ಒಳಗೊಂಡ ಮಾದರಿ ಸಮಾಜವನ್ನು ರೂಪಿಸಿರುವ ದೇಶ ಯುನೈಟೆಡ್‌ ಅರಬ್‌ ಎಮಿರೇಟ್ಸ್.

ಏಳು ರಾಜ್ಯಗಳನ್ನು ಒಳಗೊಂಡ ಯುಎಇ ಸುಮಾರು ಆರು ದಶಕಗಳಲ್ಲಿ ಗಳಿಸಿರುವ ಪ್ರಗತಿ ಅಪರಿಮಿತವಾಗಿದೆ. ಈ ದೇಶದಲ್ಲಿನ ಆಳ್ವಿಕೆ, ಶಿಸ್ತಿನ ನಿಯಮಗಳು, ಅರಸರ ದೂರದೃಷ್ಟಿ ಇವೆಲ್ಲವೂ ಇದಕ್ಕೆ ಕಾರಣ ಎನ್ನಬಹುದು. ತೈಲ ಮಾರುಕಟ್ಟೆಯ ನಂತರ ಪ್ರವಾಸೋದ್ಯಮ ಇದರ ಎರಡನೇ ಅತಿದೊಡ್ಡ ಆದಾಯದ ಮೂಲ.

Burj Khalifa

ನನ್ನ ಮೊದಲ ವಿದೇಶ ಪ್ರವಾಸದಲ್ಲಿ ನಾನು ಕಂಡ ಎಮಿರೇಟ್ಸ್ ಹೀಗಿದೆ. ಎಮಿರೇಟ್ಸ್‌ ವಿಮಾನ ಏರುತ್ತಿದ್ದಂತೆ ದುಬೈನ ಅನುಭವವಾಯಿತು. ದುಬೈ ಎಂದಾಗ ಮೊದಲು ನೆನಪಾಗುವುದೇ ಬುರ್ಜ್‌ ಖಲೀಫಾ. ಇಂಥ ಅದ್ಭುತ ಕಟ್ಟಡವೊಂದನ್ನು ನಿರ್ಮಾಣ ಮಾಡಿರುವುದರ ಹಿಂದಿನ ರೋಚಕ ಕಥೆ, ಭೂಮಿಯ ಮೇಲಿನ ಮಿಲ್ಕಿ ವೇ ಗ್ಯಾಲಾಕ್ಸಿಯಂತೆ ಕಾಣುವ ದುಬೈನ ನೈಟ್ ವ್ಯೂ. ಆಹಾ! ಹೇಳ ತೀರದು. ಬುರ್ಜ್‌ ಖಲೀಫಾದ ಮೇಲೆ ತಲುಪಲು ಕೆಲ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾದರೂ ಮಧ್ಯೆ ಎಲ್ಲೂ ಬೇಸರ ಆಗವುದಿಲ್ಲ. ಏಕೆಂದರೆ ಬುರ್ಜ್‌ ಖಲೀಫಾ ನಿರ್ಮಾಣವಾದ ರೀತಿ, ಅದರ ಹಿಂದಿನ ದೂರದೃಷ್ಟಿ ಹಾಗೂ ಕಥೆಗಳಿಗೆ ಸಂಬಂಧಿಸಿದಂತೆ ವಿವಿಧ ಆಡಿಯೋ-ವಿಶ್ಯುಯಲ್‌ ರೂಪಕಗಳನ್ನು ನೋಡುತ್ತಾ ಕಾಲ ಕಳೆಯಬಹುದು. ದುಬೈ ಫ್ರೇಮ್‌ನಲ್ಲಿ ಕೂಡ ಹೆಚ್ಚೂಕಮ್ಮಿ ಇಂಥದ್ದೇ ಅನುಭವ.

Dubai at night


ಐಷಾರಾಮಿತನಕ್ಕೆ ಇನ್ನೊಂದು ಹೆಸರು ಎನಿಸುವ ದುಬೈ. ಇಲ್ಲಿನ ಮಾಲ್‌ನಲ್ಲಿ ಒಮ್ಮೆ ಕಾಲಿಟ್ಟರೆ ಒಂದು ಊಹೆಗೆ ನಿಲುಕದ ಜಗತ್ತಿನ ಒಳಗೆ ಪ್ರವೇಶಿಸಿದಂತೆ ಅನುಭವವಾಗುತ್ತದೆ. ಕರೆದು ಸುಗಂಧ ದ್ರವ್ಯಗಳನ್ನು ಹಾಕುವ ಜನರು, ಲಕ್ಸುರಿ ಬ್ರ್ಯಾಂಡ್‌ನ ಸಾವಿರಾರು ಅಂಗಡಿಗಳು, ರೆಸ್ಟೋರೆಂಟ್‌ಗಳು ನಿಮಗೆ ಬೇಕೆಂದರೆ ಮಾಲ್‌ ಒಳಗೇ ದಿನವಿಡೀ ಕಳೆಯಬಹುದು. ಹಾಗೆ ಮಾಡಿದರೂ ಒಂದು ದಿನದಲ್ಲಿ ಎಲ್ಲವನ್ನೂ ನೋಡುವುದು ಅಸಾಧ್ಯದ ಮಾತು. ಅಲ್ಲಿಂದ ಹೊರಗೆ ಬಂದರೆ ಸಂಜೆಯ ಸಮಯ ಪ್ರತಿ ಗಂಟೆಗೊಮ್ಮೆ ಸಂಗೀತಕ್ಕೆ ತಕ್ಕಂತೆ ನಲಿಯುತ್ತಾ ನೃತ್ಯವಾಡುವ ದುಬೈ ಫೌಂಟೇನ್‌ ಕಾಣಿಸುತ್ತದೆ. ಅದನ್ನು ನೋಡುವುದು ಕಣ್ಣಿಗೆ ಹಬ್ಬ. ಇನ್ನು ಮ್ಯೂಸಿಯಂ ಆಫ್‌ ಫ್ಯೂಚರ್‌, ಮಿರಾಕಲ್‌ ಗಾರ್ಡನ್‌ನಂಥ ಸ್ಥಳಗಳಿಗೆ ಹೋದರೆ, ಮನುಷ್ಯ ಎಂಥ ಅಸಾಧ್ಯ ಸಂಗತಿಗಳನ್ನು ಸೃಷ್ಟಿಸಬಹುದೆಂದು ತಿಳಿಯುತ್ತದೆ. ದುಬೈವರೆಗೂ ಹೋಗಿ ಚಿನ್ನದ ಕಾಫಿ ಕುಡಿಯದೇ ಬಂದರೆ ಹೇಗೆ? ಹೌದು, ಇಲ್ಲಿನ ಬುರ್ಜ್‌ ಅಲ್‌ ಅರಬ್‌ನಲ್ಲಿ ಸಿಗುವ ಗೋಲ್ಡ್‌ ಕಾಫಿ ಬಲು ಪ್ರಸಿದ್ಧ. ಅಲ್ಲದೇ ಈ ಹೊಟೇಲ್ ಪ್ರಪಂಚದ ಏಕೈಕ 7 ಸ್ಟಾರ್‌ ಹೊಟೇಲ್. ಇಲ್ಲಿ ಪಾಮ್‌ ಜುಮೈರಾ, ಬುರ್ಜ್‌ ಅಲ್‌ ಅರಬ್‌, ಆಕ್ವಾ ವರ್ಲ್ಡ್‌ ನೋಡುತ್ತಿದ್ದರೆ ಲಕ್ಸುರಿ ಎಂಬುದು ಈ ಜಾಗಗಳನ್ನು ನೋಡಿಯೇ ಹುಟ್ಟಿಕೊಂಡ ಪದವೇನೋ ಎನಿಸುತ್ತದೆ!

ದುಬೈನವರ ಪ್ರಕಾರ ಸಾಮಾನ್ಯ ಎನಿಸುವ ಮಾಲ್‌ಗಳು, ರೆಸ್ಟೋರೆಂಟ್‌ಗಳು ಸಾಮಾನ್ಯ ಜನರಿಗೆ ಸಿಕ್ಕಾಪಟ್ಟೆ ಎನಿಸುವಷ್ಟು ಐಷಾರಾಮಿ. ಆದರೆ ಈ ಅನುಭವಗಳು ಮಾತ್ರ ಬೆಲೆಕಟ್ಟಲಾಗದವು. ಅಬುಧಾಬಿಯ ಬಿಎಪಿಎಸ್‌ ಹಿಂದೂ ಮಂದಿರ ಹಾಗೂ ಫೆರಾರಿ ವರ್ಡ್‌ಗೆ ಹೋಗಿದ್ದೆ. ಅಷ್ಟು ದೂರ ಹೋಗಿ ನಮ್ಮೂರಿನ ದೇವರ ಆಶೀರ್ವಾದ ಪಡೆಯುವುದು ಸಾಮಾನ್ಯ ವಿಷಯವೇ? ದುಬೈನ ಕ್ರೂಸ್‌ನ ಅನುಭವ, ಅಲ್ಲಿಂದ ಸಮುದ್ರದ ಮಧ್ಯೆ ಕುಳಿತು ಸೂರ್ಯಾಸ್ತ ವೀಕ್ಷಣೆ, ಗೋಲ್ಡ್‌ ಸೌಕ್‌ನಲ್ಲಿ ಓಡಾಡುವಾಗ ಅಷ್ಟೆಲ್ಲಾ ಚಿನ್ನ ಒಟ್ಟಿಗೆ ನೋಡಿ ಆಗುವ ಅತೀವ ಆಶ್ಚರ್ಯ, ಡೆಸರ್ಟ್‌ ಸಫಾರಿ ಅಚ್ಚರಿ, ಸಫಾರಿಯ ನಂತರದ ದುಬೈನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿದ ನೆನಪು ಹೇಳಿದಷ್ಟೂ ಮಿಕ್ಕುತ್ತವೆ ದುಬೈ ಅನುಭವಗಳು.

Golden gate

ಈ ಜಾಗ ಇನ್ನಷ್ಟು ಇಷ್ಟವಾಗುವುದು ಇಲ್ಲಿನ ಜನರ ಶಿಸ್ತು, ಸ್ವಚ್ಛತೆ ಹಾಗೂ ಸುರಕ್ಷತೆಗೆ. ಇಲ್ಲಿ ಇವುಗಳನ್ನು ಮೀರಿದರೆ ಹಾಗೂ ಅಪರಾಧಕ್ಕೆ ಘೋರವಾದ ಶಿಕ್ಷೆಗಳಿವೆ. ಅಷ್ಟೇ ಅಲ್ಲ, ಟ್ರಾಫಿಕ್‌ ನಿಯಮಗಳನ್ನು ಬ್ರೇಕ್‌ ಮಾಡಿದರೂ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಇವೆಲ್ಲವೂ ನಡೆಯವುದು ಹೆಚ್ಚೂಕಮ್ಮಿ ತಂತ್ರಜ್ಞಾನದ ಸಹಾಯದಿಂದ. ಒಂದಿಡೀ ನಾಗರೀಕತೆ ದೂರದೃಷ್ಟಿ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ಮರಳಿನಲ್ಲಿ ಎಂದೂ ಮುಳುಗದ ಅದ್ಭುತ ಸಾಮಾಜ್ಯವನ್ನು ಹೇಗೆ ಕಟ್ಟಬಹುದು ಎಂಬುದಕ್ಕೆ ಜೀವಂತ ಉದಾಹರಣೆ ಯುಎಇ. ಈ ದೇಶ ಕೇವಲ ದೇಶವಲ್ಲ. ಕೋಟ್ಯಂತರ ಜನರ ನಿರಂತರ ಪರಿಶ್ರಮ, ದೂರದೃಷ್ಟಿ ಹಾಗೂ ಬೆವರಿನಿಂದ ನಿರ್ಮಾಣವಾಗಿರುವ ಮನುಕುಲದ ಅಚ್ಚರಿ. ಜತೆಗೆ ಪ್ರತಿಕೂಲ ಹವಾಮಾನ ಹಾಗೂ ಪ್ರಾಕೃತಿಕ ಸ್ಥಿತಿಗತಿಗಳನ್ನು ಮೆಟ್ಟಿನಿಂತು ಅಸಂಖ್ಯಾತ ಜನರಿಗೆ ಬದುಕು ಕಟ್ಟಿಕೊಡುತ್ತಾ ಎಲ್ಲ ಕ್ಷೇತ್ರಗಳಲ್ಲಿಯೂ ಟಾಪ್‌ 1 ಸ್ಥಾನ ಉಳಿಸಿಕೊಂಡು ʻಇದ್ದರೆ ಹೀಗಿರಬೇಕುʼ ಎನಿಸುವಂತೆ ಮಾಡಿರುವ ಇತಿಹಾಸದ ಅಧ್ಯಯನಾರ್ಹ ಭಾಗ.