ಮೇ 12ರಂದು ಬುದ್ಧ ಪೂರ್ಣಿಮೆಗೆ ರಜೆ ಸಿಕ್ಕಿದೆಯೇ ? ಭಾರತದ ಈ ಗಿರಿಧಾಮಗಳಿಗೆ ಭೇಟಿ ಕೊಟ್ಟು ಸರಣಿ ರಜೆಯನ್ನು ಆನಂದಿಸಿ.
ವಾರಾತ್ಯದ ಜೊತೆ ಸರಣಿಯಾಗಿ ಒಂದೆರಡು ದಿನ ರಜೆ ಸಿಕ್ಕಿದರೂ ನೀವು ಭಾರತದಲ್ಲಿ ಅನೇಕ ಗಿರಿಧಾಮಗಳನ್ನು ಭೇಟಿಮಾಡಿ ಬರಬಹುದು. ಭಾರತದ ಈ ಪ್ರಮುಖ ಗಿರಿಧಾಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಈ ಬಾರಿ ಬುದ್ಧ ಪೂರ್ಣಿಮೆಯು ಮೇ 12ರ ಸೋಮವಾರದಂದು ಬರುವುದರಿಂದ, 3 ದಿನಗಳ ಸರಣಿ ರಜೆ ಸಿಕ್ಕಂತಾಗುತ್ತದೆ. ಬೇಸಿಗೆಯ ಸುಡು ಬಿಸಿಲಿನಿಂದ ತಪ್ಪಿಸಿಕೊಂಡು ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಪಡೆಯಲು ನೀವು ಬಯಸಿದರೆ, ಭಾರತದಲ್ಲಿ ಅನೇಕ ಗಿರಿಧಾಮಗಳಿವೆ. ಸಾಹಸ ಪ್ರಿಯರಿಗೆ, ಪ್ರಕೃತಿ ಪ್ರಿಯರಿಗೆ, ಧಾರ್ಮಿಕ ತಾಣಗಳನ್ನು ಅರಸುವವರಿಗೆ ಏಕಕಾಲದಲ್ಲಿ ಖುಷಿಕೊಡುವ ಭಾರತ ಈ ಪ್ರಮುಖ ಗಿರಿಧಾಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕರ್ನಾಟಕದ ಕೂರ್ಗ್
"ಭಾರತದ ಸ್ಕಾಟ್ಲೆಂಡ್" ಎಂದೇ ಕರೆಯಲ್ಪಡುವ ಕೂರ್ಗ್, ಹಚ್ಚ ಹಸಿರಿನ ತಾಣ. ವಿಶ್ರಾಂತಿಗೆ, ದೀರ್ಘ ವಾರಾಂತ್ಯಕ್ಕೆ ಸೂಕ್ತ ಸ್ಥಳವಿದು. ಪರಿಮಳಯುಕ್ತ ಕಾಫಿ ಎಸ್ಟೇಟ್‌ಗಳು, ನಯನ ಮನೋಹರವಾದ ಅಬ್ಬೆ ಜಲಪಾತ, ರಾಜಾ ಸೀಟ್, ದುಬಾರೆ ಆನೆ ಶಿಬಿರದಂತಹ ಪರಿಸರವನ್ನು ನೋಡುವುದೇ ಅಂದ. ಬುದ್ಧ ಪೂರ್ಣಿಮೆಯಂದು ಇಲ್ಲಿನ ಗೋಲ್ಡನ್ ಟೆಂಪಲ್ ಭೇಟಿ ನೀಡುವುದನ್ನು ಮರೆಯಬೇಡಿ.

ತಮಿಳುನಾಡಿನ ಯೆರ್ಕಾಡ್
ಬಿಸಿಲ ನಾಡು ಎಂದೇ ಖ್ಯಾತಿಯ ತಮಿಳುನಾಡಿನಲ್ಲಿ ಮೈಮನಕ್ಕೆ ತಂಪೆರೆಯುವ ಗಿರಿಧಾಮವೊಂದಿದೆ. ಅದು ಯೆರ್ಕಾಡ್ ಗಿರಿಧಾಮ. ಬಡವರ ಉದಕಮಂಡಲ ಎಂದೂ ಕರೆಯಲ್ಪಡುವ ಈ ತಾಣದಲ್ಲಿ ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ಯೆರ್ಕಾಡ್ ಸರೋವರವು ಪೆಡಲ್‌ಬೋಟ್ ಸವಾರಿಗೆ ಸೂಕ್ತ ಸ್ತಳವಾಗಿದೆ. ಇಲ್ಲಿನ ಪಗೋಡಾ ಪಾಯಿಂಟ್ ಸೂರ್ಯೋದಯದ ನೋಡಬಯಸುವವರಿಗೆ ಉತ್ತಮ ಆಯ್ಕೆ. ಗುಹೆಯೊಳಗೆ ನಿರ್ಮಿಸಲಾದ ಶೆವರಾಯ್ ದೇವಾಲಯ ಮಾತ್ರವಲ್ಲದೆ ಕಿತ್ತಳೆ ತೋಪುಗಳು ಮತ್ತು ಕಾಫಿ ತೋಟಗಳಿಂದ ಸುತ್ತುವರೆದಿರುವ ಈ ತಾಣಕ್ಕೆ ತಪ್ಪದೇ ಹೋಗಿ ಬನ್ನಿ.

ರಾಜಸ್ಥಾನದ ಮೌಂಟ್ ಅಬು
ರಾಜಸ್ಥಾನದ ಸುಡು ಬಿಸಿಲಿನ ವಾತಾವರಣದಿಂದ ಸಾಂತ್ವನ ನೀಡುವ ಮೌಂಟ್ ಅಬು, ರಾಜ್ಯದ ಏಕೈಕ ಗಿರಿಧಾಮವಾಗಿದ್ದು, ಸಮುದ್ರ ಮಟ್ಟದಿಂದ 1722 ಮೀಟರ್ ಎತ್ತರದಲ್ಲಿದೆ. ಹಸಿರು ಕಾಡುಗಳು, ಪ್ರಶಾಂತ ಸರೋವರಗಳು ಮತ್ತು ಉಕ್ಕಿ ಹರಿಯುವ ಜಲಪಾತಗಳಿಂದ ಆವೃತವಾಗಿರುವ ಈ ಪ್ರದೇಶವು ವರ್ಷಪೂರ್ತಿ ವಿಹಂಗಮ ನೋಟಗಳ ನಡುವೆ ಆನಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇಲ್ಲಿನ ನಕ್ಕಿ ಸರೋವರದಲ್ಲಿ ದೋಣಿ ವಿಹಾರ, ಅರವಳ್ಳಿಗಳ ಅತ್ಯುನ್ನತ ಸ್ಥಳವಾದ ಗುರು ಶಿಖರದ ಚಾರಣ, ಬೆಟ್ಟಗಳ ಮೇಲೆ ಸೂರ್ಯಾಸ್ತವನ್ನು ನೋಡುವ ಅನುಭವವೇ ಬೇರೆ. ಜೈನ ತೀರ್ಥಂಕರರಿಗೆ ಸಮರ್ಪಿತವಾದ ದಿಲ್ವಾರ ದೇವಾಲಯಗಳು ಬುದ್ಧ ಪೂರ್ಣಿಮೆಯ ಸಮಯದಲ್ಲಿ ಭೇಟಿ ನೀಡಲೇಬೇಕಾದ ಸ್ಥಳ.

ಹಿಮಾಚಲ ಪ್ರದೇಶದ ಚೈಲ್
ಚಂಡೀಗಢದಿಂದ ಕೆಲವೇ ಗಂಟೆಗಳ ದೂರದಲ್ಲಿರುವ ಚೈಲ್, ಹಿಮಾಚಲ ಪ್ರದೇಶದ ಅತ್ಯಂತ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿರುವ ಚೈಲ್ ಅರಮನೆಯು ತನ್ನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ಅರಮನೆಯನ್ನು ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಪಟಿಯಾಲ ಮಹಾರಾಜರು ಬೇಸಿಗೆಯ ವಿಶ್ರಾಂತಿ ತಾಣವಾಗಿ ನಿರ್ಮಿಸಿದರು. ಇದು ಶಿಮ್ಲಾದಿಂದ 49 ಕಿ.ಮೀ ಮತ್ತು ಸೋಲನ್‌ನಿಂದ 38 ಕಿ.ಮೀ ದೂರದಲ್ಲಿದೆ. ಚೈಲ್ ನ ಗೆ ಪ್ರವಾಸಿ ಸ್ಥಳಗಳ ಪೈಕಿ ಚೈಲ್ ಅರಮನೆ, ಕ್ರಿಕೆಟ್ ಮೈದಾನ, ಕಾಳಿ ಟಿಬ್ಬಾ ಮತ್ತು ಹನುಮಾನ್ ದೇವಾಲಯ ಮಾತ್ರವಲ್ಲದೆ ವನ್ಯಜೀವಿ ಪ್ರಿಯರಿಗಾಗಿ ಚೈಲ್ ವನ್ಯಜೀವಿ ಅಭಯಾರಣ್ಯವು ಇಲ್ಲಿದೆ.

ಪಶ್ಚಿಮ ಬಂಗಾಳದ ಕುರ್ಸಿಯಾಂಗ್
'ಬಿಳಿ ಆರ್ಕಿಡ್‌ನ ತಾಣ' ಎಂದೇ ಜನಪ್ರಿಯವಾಗಿರುವ ಕುರ್ಸಿಯೊಂಗ್, ಬಂಗಾಳದ ಡಾರ್ಜಿಲಿಂಗ್ ಮತ್ತು ಸಿಲಿಗುರಿಗೆ ಹತ್ತಿರದಲ್ಲಿರುವ ಒಂದು ಸುಂದರವಾದ ಹಿಮಾಲಯನ್ ಪಟ್ಟಣವಾಗಿದೆ. ಇಲ್ಲಿಗೆ ಭೇಟಿ ನೀಡುವ ವೇಳೆ ಈಗಲ್ಸ್ ಕ್ರಾಗ್, ಡೌ ಹಿಲ್ ಅರಣ್ಯ ಪ್ರದೇಶ, ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ.

ಅರುಣಾಚಲ ಪ್ರದೇಶದ ತವಾಂಗ್
ಈಶಾನ್ಯ ಭಾರತದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ತವಾಂಗ್ ಒಂದಾಗಿದೆ. ಅರುಣಾಚಲ ಪ್ರದೇಶದಲ್ಲಿರುವ ಈ ಸುಂದರವಾದ ಪಟ್ಟಣವು ಮಠಗಳು, ಸ್ಮಾರಕಗಳು, ಮೋಡಿಮಾಡುವ ಸರೋವರಗಳು ಮತ್ತು ಜಲಪಾತಗಳಿಂದ ಕೂಡಿದೆ. ಪ್ರಕೃತಿ, ಇತಿಹಾಸ, ಪರಂಪರೆಗಳ ಮಿಶ್ರಣವೇ ತವಾಂಗ್. ವಿಶ್ವದ ಎರಡನೇ ಅತಿದೊಡ್ಡ ಭವ್ಯವಾದ ತವಾಂಗ್ ಮಠಕ್ಕೆ ನೀವು ಭೇಟಿ ನೀಡಬಹುದು. ಹಿಮದಿಂದ ಆವೃತವಾಗಿರುವ ಸೆಲಾ ಪಾಸ್ , ನುರಾನಾಂಗ್ ಜಲಪಾತ ಮತ್ತು ತವಾಂಗ್ ಯುದ್ಧ ಸ್ಮಾರಕವನ್ನು ಭೇಟಿ ಮಾಡಲು ಮರೆಯದಿರಿ.