ಪ್ರತಿಭಟಿಸಲು ಹುಟ್ಟಿಕೊಂಡ ಗ್ರಾಫಿಟಿ ಪರಿಪಾಟ
ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ, ಗೋಡೆಗಳ ಮೇಲೆ ಸಿನಿಮಾ ಇತ್ಯಾದಿ ಭಿತ್ತಿಗಳನ್ನು ಅಂಟಿಸುವುದನ್ನು ತಪ್ಪಿಸಲು, ಮಹಾನಗರ ಪಾಲಿಕೆ ಪ್ರಮುಖ ರಸ್ತೆಗಳ ಇಕ್ಕೆಲಗಳ ಕಾಂಪೌಂಡ್, ಕೆಳೆಸೇತುವೆಗಳ ವಿಶಾಲ ಗೋಡೆಗಳಲ್ಲಿ ಕರ್ನಾಟಕದ ಪ್ರೇಕ್ಷಣೀಯ ಸ್ಥಳ, ಪ್ರಾಣಿ-ಪ್ರಕ್ಷಿ, ಇತಿಹಾಸ ಪುರುಷರ ಚಿತ್ರಗಳನ್ನು ಬಿಡಿಸುವ ವ್ಯವಸ್ಥೆ ಮಾಡಿತ್ತು. ಕಾರಣಾಂತರಗಳಿಂದ ಈ ಕಾರ್ಯಕ್ಕೆ ಪೂರ್ಣ ಫಲಶೃತಿ ದೊರೆಯಲಿಲ್ಲ.
- ಎಸ್.ಶಿವಲಿಂಗಯ್ಯ
ಪ್ರತಿ ವರ್ಷ ಜನವರಿ ತಿಂಗಳ ಮೊದಲ ವಾರ ಬೆಂಗಳೂರಿನಲ್ಲಿ, ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸುವ ಚಿತ್ರಸಂತೆ ಚಿತ್ರಕಲಾ ಪ್ರಿಯರ ಕಣ್ಣಿಗೊಂದು ಹಬ್ಬ. ರಾಜ್ಯ ಹೊರರಾಜ್ಯಗಳ ಕಲಾವಿದರು, ಅವರ ಕೈಚಳಕಗಳು ಇಲ್ಲಿ ಅಭಿವ್ಯಕ್ತಿಗೊಳ್ಳುತ್ತವೆ. ಇವುಗಳಲ್ಲಿ ಬಹುತೇಕ ಸ್ಟುಡಿಯೋ ಅಥವಾ ಹೊರಾಂಗಣದಲ್ಲಿ ರಚಿತವಾದವುಗಳು.
ದೇವಾಲಯಗಳ ಒಳಾವರಣದಲ್ಲಿ ಪುರಾಣ ಪ್ರಸಂಗಗಳನ್ನು ವಿವರಿಸಲು, ರಾಜರ ಮನೆತನ, ರಾಜಮನೆತನಗಳ ಶೌರ್ಯ-ಸಾಹಸಗಳನ್ನು ಬಿಂಬಿಸಲು ರಚಿಸುವ ಪರಂಪರೆ ನಮ್ಮಲ್ಲಿತ್ತು. ಅವುಗಳನ್ನು ಈಗಲೂ ಕಾಣಬಹುದು. ನನಗೆ ನೆನೆಪಿರುವಂತೆ 1970ರ ಸುಮಾರಿಗೆ, ಬೆಂಗಳೂರಿನ ಹನುಮಂತನಗರದಲ್ಲಿರುವ ಶ್ರೀರಾಮಾಂಜನೇಯ ಗುಡ್ಡದ ಮೇಲೆ ಚಿತ್ರ ಕಲಾವಿದ ಶ್ರೀಯುತ ಬಿ.ಕೆ.ಎಸ್. ವರ್ಮಾ ಅವರು ರಾಮಾಯಣ ಆರಿಸಿದ ಕೆಲವು ಪ್ರಸಂಗಗಳನ್ನು ಕಲ್ಲಿನ ಆಕೃತಿಗೆ ಹೊಂದುವಂತೆ ಬಿಡಿಸಿದ್ದರು. ಅವು ಸುತ್ತಮುತ್ತಲ ಕಲಾಪ್ರಿಯರನ್ನು ಆಕರ್ಷಿಸಿದ್ದವು.

ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ, ಗೋಡೆಗಳ ಮೇಲೆ ಸಿನಿಮಾ ಇತ್ಯಾದಿ ಭಿತ್ತಿಗಳನ್ನು ಅಂಟಿಸುವುದನ್ನು ತಪ್ಪಿಸಲು, ಮಹಾನಗರ ಪಾಲಿಕೆ ಪ್ರಮುಖ ರಸ್ತೆಗಳ ಇಕ್ಕೆಲಗಳ ಕಾಂಪೌಂಡ್, ಕೆಳೆಸೇತುವೆಗಳ ವಿಶಾಲ ಗೋಡೆಗಳಲ್ಲಿ ಕರ್ನಾಟಕದ ಪ್ರೇಕ್ಷಣೀಯ ಸ್ಥಳ, ಪ್ರಾಣಿ-ಪ್ರಕ್ಷಿ, ಇತಿಹಾಸ ಪುರುಷರ ಚಿತ್ರಗಳನ್ನು ಬಿಡಿಸುವ ವ್ಯವಸ್ಥೆ ಮಾಡಿತ್ತು. ಕಾರಣಾಂತರಗಳಿಂದ ಈ ಕಾರ್ಯಕ್ಕೆ ಪೂರ್ಣ ಫಲಶೃತಿ ದೊರೆಯಲಿಲ್ಲ.
ಇದಕ್ಕಿಂತ ಭಿನ್ನವಾದ ಅಭಿವ್ಯಕ್ತಿ ರೂಪದ ಪರಂಪರೆಯೊಂದು ಇಪ್ಪತ್ತನೆಯ ಶತಮಾನದ ಆರಂಭದಲ್ಲಿಯೇ ಮೆಕ್ಸಿಕೋ ದೇಶದಲ್ಲಿ ಹುಟ್ಟಿಕೊಂಡು, ಇಡೀ ಪಾಶ್ಚಾತ್ಯ ಜಗತ್ತನ್ನು ಆವರಿಸಿತು. ಸಾಮಾಜಿಕ ಕಾಳಜಿಯ ಚಿತ್ರಗಳನ್ನು ಹೊರಾಂಗಣದ ಗೋಡೆಯ ಮೇಲೆ ಸಾರ್ವಜನಿಕ ಅವಗಾಹನೆಗಾಗಿ ಮ್ಯೂರಲ್ ರಚಿಸುವುದು. ಈ ಚಿತ್ರಗಳಲ್ಲಿ ಸಾಮಾಜಿಕ ಸಂದೇಶ ಮಾತ್ರವಲ್ಲದೆ, ಕಲಾವಿದನ ಕೈಚಳಕವೂ ಒಳಗೊಳ್ಳುತಿತ್ತು. ಗೋಡೆಯ ಮಾಲೀಕರ ಒಪ್ಪಿಗೆ ಪಡೆದು, ಬಹುಕಾಲ ಬಾಳಿಕೆ ಬರುವಂತೆ ರಚಿಸುವ ಇಂಥ ಚಿತ್ರಗಳು ಯೂರೋಪಿನ ಹಲವು ಭಾಗಗಳಲ್ಲಿ ಇನ್ನು ಜೀವಂತವಾಗಿವೆ.

ಈ ಪರಂಪರೆಯು ಕವಲೊಡೆದಂತೆ, 1970ರ ದಶಕದಲ್ಲಿ ಗ್ರಾಫಿಟಿ(ಗೀಚು ಬರೆಹ) ಕಲೆ ಶುರುವಾಯಿತು. ಹೊರಾಂಗಣದ ಗೋಡೆಯ ಮೇಲೆ, ಒಳ ಸೂರಿನ ಮೇಲೆ ಸಾರ್ವಜನಿಕರ ಅವಗಾಹನೆಗಾಗಿ ರಚಿಸುವ ಚಿತ್ರಗಳಿವು. ಇವುಗಳ ಪರಂಪರೆಯನ್ನು ಪ್ರಾಚೀನ ಈಜಿಪ್ಟ್, ಗ್ರೀಸ್ ಹಾಗೂ ರೋಮನ್ ಸಾಮ್ರಾಜ್ಯದ ಉಚ್ಚ್ಛ್ರಾಯದ ಕಾಲದವರೆಗೂ ಎಳೆಯಬಹುದು. ಬಂಡೆಗಳ ಮೇಲೆ, ಗುಹೆಗಳಲ್ಲಿ ಆದಿ ಮಾನವ ಗೀಚಿದ ಚಿತ್ರಗಳಲ್ಲಿಯೂ ಇವುಗಳ ಮೂಲವನ್ನು ಗುರುತಿಸಬಹುದು.
ಈ ಚಳುವಳಿ ನ್ಯೂಯಾರ್ಕ್ ನಗರದ ಸಬ್ ವೇನಿಂದ ಆರಂಭವಾಗಿ ನಂತರ USA ಹಾಗೂ ಇಡೀ ವಿಶ್ವಕ್ಕೇ ಹಬ್ಬಿತು. ಈ ಪ್ರಯೋಗ ಹಿಪ್ ಹಾಪ್ ಚಳುವಳಿಯಿಂದ ಹೆಚ್ಚು ಪ್ರಭಾವಿತವಾಯಿತು. ಇವು ಪ್ರಾಥಮಿಕವಾಗಿ ವ್ಯವಸ್ಥೆಯ ವಿರುದ್ಧ ಕಲಾವಿದನ ಬಂಡಾಯ ವ್ಯಕ್ತಪಡಿಸುವ ಪರಿ. ಇದರಿಂದ ಪ್ರೇರಣೆ ಎಂಬಂತೆ ನಮ್ಮಲ್ಲಿ 1970-80ರ ದಶಕದಲ್ಲಿ ಕಾರ್ಮಿಕ ಚಳುವಳಿ ಉಚ್ಛ್ರಾಯ ಕಾಲದಲ್ಲಿ, ಎತ್ತಿ ಹಿಡಿದ ಮುಷ್ಠಿ, ಕುಡುಗೋಲು ಜತೆಗೆ ಸುತ್ತಿಗೆ ಇರುವ ಚಿತ್ರದೊಂದಿಗೆ ಕೆಂಪು ಬಣ್ಣದ ಚಿತ್ರದಲ್ಲಿ ಸಮಾವೇಶ, ಮುಷ್ಕರಗಳಿಗೆ ಕರೆ ನೀಡುವಂತೆ ಬರೆದ ಘೋಷಣೆ, ಗೋಡೆಬರಹಗಳು ಕಾರ್ಯಕ್ರಮಗಳ ನಂತರವೂ ಹಾಗೇ ಉಳಿಯುತ್ತಿದ್ದವು.

ಪಾಶ್ಚಾತ್ಯ ದೇಶಗಳ ಬಹುತೇಕ ನಗರಗಳಲ್ಲಿ ಕಾಣಸಿಗುವ ಗ್ರಾಫಿಟಿ ಚಿತ್ರ ಪ್ರಯೋಗಕ್ಕೆ, ಮಿಯಾಮಿ ನಗರದ ವೈನ್ ವುಡ್ ಜಿಲ್ಲೆಯು ಮೆಕ್ಕಾ ಎನಿಸಿಕೊಡಿದೆ. ನಾವು ಕೀವೆಸ್ಟ್ ಪ್ರಯಾಣದಿಂದ ಹಿಂದಿರುಗಿ ಬರುವಾಗ ಮಿಯಾಮಿಯಲ್ಲಿ ತಂಗಬೇಕಾಯಿತು. ಅಲ್ಲಿಂದ ಹೊರಡುವಾಗ ನಗರ ಪ್ರದಕ್ಷಿಣೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ವೈನ್ ವುಡ್ ಪ್ರದೇಶವನ್ನು ಇಣುಕಿ ನೋಡಿದೆವು. ಗ್ರಾಫಿಟಿ ಕಲೆಯ ವೈವಿದ್ಯತೆ, ಕೆಲವು ಅಭಿವ್ಯಕ್ತಿಗಳ ತೀಕ್ಷಣತೆ ಕಂಡು ಬೆರಗಾದೆವು. ಹೊರಾಂಗಣದ ರಚನೆಯಷ್ಟೇ ಅಲ್ಲದೆ, ಒಂದೆರಡು ಗ್ಯಾಲರಿಗಳನ್ನೂ ಒಳಹೊಕ್ಕಿ ಬಂದವು. ಇಲ್ಲಿ ಖ್ಯಾತನಾಮರು ಮಾತ್ರವಲ್ಲದೆ, ಹವ್ಯಾಸಿ ಕಲಾವಿದರ ಅನೇಕ ರಚನೆಗಳನ್ನು ಕಾಣಬಹುದು. ಕೇವಲ ಗ್ರಾಫಿಟಿ ರಚನೆಯಲ್ಲದೆ, ಅನೇಕ ಮ್ಯೂರಲ್ ಮಾದರಿಯ ಪ್ರಯೋಗಗಳನ್ನು ನೋಡಿದೆವು. ಅಲ್ಲಿಂದ ಹೊರಬಂದ ಮೇಲೆ, ಭೇಟಿಕೊಟ್ಟ ಯಾವ ನಗರದಲ್ಲಿಯೇ ಆಗಲಿ, ಮ್ಯೂರಲ್ / ಗ್ರಾಫಿಟಿ ಕಲೆ ಗಮನಿಸಿದರೆ ಒಂದುಕ್ಷಣ ನಿಂತು ನೋಡುವುದು ನನ್ನ ಪರಿಪಾಠವಾಯಿತು.
ಇಲ್ಲಿ ಕಲಾವಿದನ ಪ್ರತಿಭಟನೆ ಅಥವಾ ಭಾವತೀವ್ರತೆಯ ಅಭಿವ್ಯಕ್ತಿ, ಅವಕಾಶಗಳನ್ನು ಅವರು ಬಳಸಿಕೊಂಡಿರುವ ರೀತಿಯನ್ನು ಗಮನಿಸಬಹುದು.