ಪರ್ವತ ಶ್ರೇಣಿಯ ಸುಂದರ ನಗರ-ಜಾರ್ಜಿಯಾ
ಸಮುದ್ರ ಮಟ್ಟದಿಂದ ಸುಮಾರು 400 ಮೀಟರ್ ಎತ್ತರದಲ್ಲಿ ರುವ ಈ ನಗರವು ವಿಶಿಷ್ಟ ಭೌಗೋಳಿಕ ರಚನೆ ಮತ್ತು ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಜಾರ್ಜಿಯಾ ದೇಶದ ರಾಜಧಾನಿ ಟಿಬಿಲಿಸಿ ಕಾಕೇಷನ್ ನಗರವು ತನ್ನ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕ ಮಹತ್ವದಿಂದ ಗಮನ ಸೆಳೆಯುತ್ತದೆ. ಕೂರಾ ನದಿಯ ತೀರದಲ್ಲಿರುವ ಈ ನಗರ, ಪರ್ವತಗಳಿಂದ ಸುತ್ತುವರಿದಿದೆ. ಸಮುದ್ರ ಮಟ್ಟದಿಂದ ಸುಮಾರು 400 ಮೀಟರ್ ಎತ್ತರದಲ್ಲಿರುವ ಈ ನಗರವು ವಿಶಿಷ್ಟ ಭೌಗೋಳಿಕ ರಚನೆ ಮತ್ತು ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಈ ನಗರ ಹಲವು ಶತಮಾನಗಳವರೆಗೆ ಪರ್ಷಿಯನ್, ಅರಬ್, ಮಂಗೋಲರು, ಒಟ್ಟೋಮನ್ ಮತ್ತು ರಷ್ಯನ್ ಸಾಮ್ರಾಜ್ಯಗಳ ಅಧೀನದಲ್ಲಿತ್ತು. ಇದರಿಂದ ಟೆಬಿಲಿಸಿಗೆ ಬಹುಸಾಂಸ್ಕೃತಿಕ ಆಯಾಮವಿದೆ. ಪ್ರತಿ ಆಳ್ವಿಕೆಯಿಂದಲೂ ಇಲ್ಲಿನ ಕಲಾ, ವಾಸ್ತುಶಿಲ್ಪ ಹಾಗೂ ಆಹಾರದ ವೈವಿಧ್ಯ ಶ್ರೀಮಂತವಾಗಿದ್ದನ್ನು ಕಾಣಬಹುದು. ಟಿಬಿಲಿಸಿಯ ಜನಸಂಖ್ಯೆ ಸುಮಾರು ಹನ್ನೆರಡು ಲಕ್ಷ. ಜಾರ್ಜಿಯಾದ ಜನಸಂಖ್ಯೆ ಸುಮಾರು ಮೂವತ್ತೇಳು ಲಕ್ಷ. ಬಹುಪಾಲು ಜನ ಜಾರ್ಜಿಯನ್ ಭಾಷೆಯನ್ನೇ ಮಾತನಾಡುತ್ತಾರೆ. ಜತೆಗೆ ರಷ್ಯನ್, ಇಂಗ್ಲಿಷ್ ಮತ್ತು ಅರ್ಮೇನಿಯನ್ ಭಾಷೆಗಳ ಬಳಕೆಯೂ ಇದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯು ಇಂಗ್ಲಿಷ್ ಭಾಷಾ ಬಳಕೆಯನ್ನು ಹೆಚ್ಚಿಸಿದೆ.
ಟೆಬಿಲಿಸಿ ಜಾರ್ಜಿಯಾದ ಆರ್ಥಿಕ, ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಹಲವು ಬ್ಯಾಂಕುಗಳು, ಇನ್ಸುರನ್ಸ್ ಕಂಪನಿಗಳು ಮತ್ತು ಸ್ಟಾರ್ಟಪ್ ಕಂಪನಿಗಳು ಇಲ್ಲಿ ನೆಲೆಸಿವೆ. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರಗಳು ಇಲ್ಲಿನ ಆರ್ಥಿಕತೆಯ ಮುಖ್ಯ ಅಂಶಗಳು. ಟಿಬಿಲಿಸಿಯು ಬೃಹತ್ ಸಾಂಸ್ಕೃತಿಕ ಮೇಳವಾಗಿದೆ.ಇಲ್ಲಿ ಅನೇಕ ನೃತ್ಯ, ಸಂಗೀತ, ಚಿತ್ರಕಲೆ ಹಾಗೂ ನಾಟಕ ಪ್ರದರ್ಶನ ಗಳು ನಿರಂತರ ನಡೆಯುತ್ತವೆ. ಈ ನಗರದಲ್ಲಿ ಪ್ರತಿವರ್ಷವೂ ಟಿಬಿಲಿಸಿ ಫಿಲ್ಮ್ ಫೆಸ್ಟಿವಲ್, ಜಾಜ್ ಫೆಸ್ಟಿವಲ್ ಮತ್ತು ಬೇರೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಟಿಬಿಲಿಸಿಯು ಜಾರ್ಜಿಯಾದ ಶೈಕ್ಷಣಿಕ ಕೇಂದ್ರವೂ ಆಗಿದೆ. ಟಿಬಿಲಿಸಿ ಸ್ಟೇಟ್ ಯೂನಿವರ್ಸಿಟಿ, ಜಾರ್ಜಿಯನ್ ಟೆಕ್ನಿಕಲ್ ಯುನಿವರ್ಸಿಟಿ ಮತ್ತು ಇನ್ನಷ್ಟು ಸಂಸ್ಥೆಗಳು ರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡಿವೆ. ಬಹುಭಾಷಾ ಶಿಕ್ಷಣವು ಇಲ್ಲಿನ ವೈಶಿಷ್ಟ್ಯ. ಆಶ್ಚರ್ಯವೆಂದರೆ ಈ ನಗರದಲ್ಲಿ ಅನೇಕ ಕನ್ನಡಿಗ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲ ವೈದ್ಯಕೀಯ ಶಿಕ್ಷಣ ವ್ಯಾಸಂಗಕ್ಕೆ ಬಂದವರು. ಟಿಬಿಲಿಸಿಯಲ್ಲಿ ನಡೆದಾಡುವಾಗ, ಕನ್ನಡಿಗೆ ವಿದ್ಯಾರ್ಥಿಗಳು, ಅವರನ್ನು ನೋಡಲು ಬರುವ ಪಾಲಕರನ್ನು ಕಾಣಬಹುದು. ಟಿಬಿಲಿಸಿ ಒಂದು ಚಲನಶೀಲ ಮತ್ತು ಕ್ರಿಯಾತ್ಮಕ ನಗರ. ಇಲ್ಲಿ ಪುರಾತನ ಇತಿಹಾಸವೂ ಇದೆ ಮತ್ತು ಆಧುನಿಕತೆಯ ಸ್ಪರ್ಶವೂ ಇದೆ. ಇಲ್ಲಿನ ಸಂಸ್ಕೃತಿ, ಆಹಾರ, ವಾಸ್ತುಶಿಲ್ಪ, ಜನಪದ, ನೃತ್ಯ ಮತ್ತು ಹಿತಕರ ಹವಾಮಾನ ಈ ನಗರದ ವೈಶಿಷ್ಟ್ಯ. ಜಾರ್ಜಿಯಾದ ಅರಮನೆ ಎಂದೇ ಹೇಳಬಹುದಾದ ಈ ನಗರ, ಇಂದಿಗೂ ಆನೇಕರ ಕಲ್ಪನೆಗಳ ಮೇಲೆ ಸವಾರಿ ಮಾಡುತ್ತದೆ.