ಈ ತಾಣಗಳಿಗೆ ನೀವು ಹುಬ್ಬೇರಿಸುವಂಥ ಇತಿಹಾಸವಿದೆ!
ನಮ್ಮ ದೇಶದಲ್ಲಿ ಸಾಕಷ್ಟು ಪ್ರವಾಸಿ ತಾನಗಳಿವೆ. ಪ್ರತಿ ಪ್ರವಾಸ ತಾಣಕ್ಕೂ ಅದರದ್ದೇ ಹಿನ್ನೆಲೆ ಮತ್ತು ರೋಚಕವಾದ ಇತಿಹಾಸವಿದೆ.
ಭಾರತದಲ್ಲಿ ಹಲವಾರು ಪ್ರಸಿದ್ಧ ತಾಣಗಳಿವೆ. ಪ್ರತಿ ಸ್ಥಳಕ್ಕೂ ಅದರದ್ದೇ ಆದ ಮಹತ್ವ ಮತ್ತು ಶ್ರೀಮಂತ ಇತಿಹಾಸವಿದೆ. ಪುರಾಣ ಪ್ರಸಿದ್ಧ ದೇವಾಲಯಗಳು, ಐತಿಹಾಸಿಕ ಕಟ್ಟಡಗಳು ಮತ್ತು ವಾಸ್ತುಶಿಲ್ಪ ಹೀಗೆ ವಿಭಿನ್ನ ಮತ್ತು ವಿಶಿಷ್ಟ ರೀತಿಯ ಜಾಗಗಳನ್ನು ನಾವು ನೋಡಬಹುದು. ಹಾಗಾಗಿ ಈ ಲೇಖನದಲ್ಲಿ ಕೆಲವು ಸ್ಥಳಗಳ ಮತ್ತು ಆ ಸ್ಥಳಗಳ ಹಿಂದಿನ ಆಸಕ್ತಿದಾಯಕ ಇತಿಹಾಸವನ್ನು ಅರಿತುಕೊಳ್ಳೋಣ.
ಹಂಪಿ
ಹಂಪಿಯು ಕರ್ನಾಟಕದ ಐತಿಹಾಸಿಕತೆ ಮತ್ತು ವೈಭವತಯನ್ನು ನೆನಪಿಸುವ ಸುಂದರವಾದ ತಾಣ. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿಯೂ ಹಂಪಿ ಸ್ಥಾನಗಳಿಸಿದೆ. ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಅನಾಮತ್ತು ಬಿದ್ದಿರುವ ಗೋಡೆಗಳು, ಸುಟ್ಟು ಕರಕಲಾಗಿರುವ ಕೋಟೆಗಳು ಮತ್ತು ವಿಜಯನಗರ ಸಾಮ್ರಾಜ್ಯದ ಕುತೂಹಲಕಾರಿ ಅವಶೇಷಗಳನ್ನು ಕಾಣಬಹುದು. ಹಂಪಿಯ ಸುತ್ತಮುತ್ತ ಹತ್ತು ಹಲವು ಪ್ರೇಕ್ಷಣೀಯ ಸ್ಥಳಗಳಿದ್ದು, ಪ್ರತಿ ಸ್ಥಳವೂ ಅದ್ಭುತವಾದ ಇತಿಹಾಸವನ್ನು ಹೇಳುತ್ತದೆ. ಇತಿಹಾಸ ಪ್ರೇಮಿಗಳು ಕುಟುಂಬದವರೊಂದಿಗೆ ಹಂಪಿಯ ಪ್ರವಾಸ ಕೈಗೊಳ್ಳಬಹುದು.

ಶನಿವಾರ ವಾಡಾ
ಮಹಾರಾಷ್ಟ್ರ ರಾಜ್ಯದಲ್ಲಿರುವ ಶನಿವಾಡ ವಾಡಾ ಅತ್ಯದ್ಭುತವಾದ ಐತಿಹಾಸಿಕ ತಾಣವಾಗಿದೆ. ಪೇಶ್ವೆ ಬಾಜಿರಾವ್ ಅವರ ನಿವಾಸವನ್ನು 1820 ರಲ್ಲಿ ಸುಟ್ಟು ಹಾಕಲಾಯಿತು. ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿರುವ ಈ ಅರಮನೆಯು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಸ್ಥಳಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ಇದು ಮರಾಠ ಸಾಮ್ರಾಜ್ಯದ ಎತ್ತರದ ಮತ್ತು ಅತ್ಯಂತ ಶಕ್ತಿಯುತವಾದ 7 ಅಂತಸ್ತಿನ ರಾಜಧಾನಿ ಕಟ್ಟಡವಾಗಿತ್ತು. ಈ ಕೋಟೆಯಲ್ಲಿ ದೆವ್ವ, ಭೂತವಿದೆ ವದಂತಿ ಕೂಡ ಇದೆ. ಪೇಶ್ವೆ ನಾರಾಯಣರಾವ್ ಅವರ ಚಿಕ್ಕಪ್ಪನ ಪಿತೂರಿಯಿಂದ ಸಾವಿಗೆ ಕಾರಣವಾದ ವಿಶ್ವಾಸಘಾತುಕ ಘಟನೆಗೆ ಈ ಕೋಟೆಯು ಸಾಕ್ಷಿಯಾಗಿದೆ.

ಕುಲಧಾರಾ
ರಾಜಸ್ಥಾನ ರಾಜ್ಯದಲ್ಲಿರುವ ಕುಲಧಾರ ಮಹತ್ವದ ಐತಿಹಾಸಿಕ ತಾಣ. ಅಷ್ಟು ಮಾತ್ರವಲ್ಲದೆ ಅದು ಪ್ರೇತಭೀತಿಯ ಸ್ಥಳ ಕೂಡ ಹೌದು. ಜೈಸಲ್ಮೇರ್‌ನ ಪಶ್ಚಿಮಕ್ಕೆ 17 ಕಿ.ಮೀ ದೂರದಲ್ಲಿರುವ ಸಣ್ಣ ಹಳ್ಳಿಯಾದ ಕುಲಧಾರವನ್ನು ರಾಜಸ್ಥಾನದ ಭೂತ ಪಟ್ಟಣ ಎಂದೇ ಕರೆಯಲಾಗುತ್ತದೆ.ಕುಲಧಾರಾ ಒಂದು ಪುರಾತತ್ತ್ವ ಶಾಸ್ತ್ರದ ಜಾಗವಾಗಿದ್ದು, ಇತಿಹಾಸದ ಆಸಕ್ತರನ್ನು ಆಕರ್ಷಿಸಲು ಹಲವಾರು ಅವಶೇಷಗಳಿವೆ. ರಾಜಸ್ಥಾನದ ಅರಾವಳಿ ಶ್ರೇಣಿಗಳಲ್ಲಿರುವ ಭಂಗರ್ ಹವೇಲಿ ಕೂಡ ಭೇಟಿ ನೀಡಬಹುದಾದ ಸ್ಥಳವಾಗಿದೆ.
