ಕೆಲವು ತಿಂಗಳ ಹಿಂದೆ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತವು ಸಾಕಷ್ಟು ಸಂಚಲನ ಸೃಷ್ಟಿಸಿತು. ಆ ವಿಮಾನ ಅಪಘಾತದಲ್ಲಿ 242 ಮಂದಿ ಪೈಕಿ 241 ಜನರು ಕೊನೆಯುಸಿರೆಳೆದರು. ಅಸಲಿಗೆ ಇಲ್ಲಿ ಯಾರ ತಪ್ಪು ಎಂಬುದರ ತನಿಖೆ ಇನ್ನೂ ನಡೆಯುತ್ತಿದೆ. ಈ ಘಟನೆ ಬಳಿಕ ಅನೇಕರಿಗೆ ವಿಮಾನ ಪ್ರಯಾಣದ ಮೇಲೆ ಭಯ ಉಂಟಾಗಿದೆ. ಹಾಗಾದರೆ ನೀವು ಪ್ರಯಾಣಿಸುತ್ತಿರುವ ವಿಮಾನ ಎಷ್ಟು ಹಳೆಯದು ಎಂದು ಕಂಡು ಹಿಡಿಯೋದು ಹೇಗೆ? ಎಷ್ಟು ಹಳೆಯದಾಗಿದ್ದರೆ ವಿಮಾನ ಪ್ರಯಾಣಕ್ಕೆ ಸೂಕ್ತ? ಆ ಬಗ್ಗೆ ಇಲ್ಲಿದೆ ವಿವರ.

aeroplane

ಯಾವ ವಯಸ್ಸಿನ ವಿಮಾನ ಬೆಸ್ಟ್?

ನೀವು ಪ್ರಯಾಣ ಮಾಡುತ್ತಿರುವ ವಿಮಾನಕ್ಕೆ ಎಷ್ಟು ವಯಸ್ಸಾಗಿದೆ ಎಂದು ನೋಡುವುದಕ್ಕಿಂತ ಅದನ್ನು ಎಷ್ಟು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಬರಲಾಗಿತ್ತು ಎಂಬುದು ತುಂಬಾನೇ ಮುಖ್ಯವಾಗುತ್ತದೆ. ಹಳೆಯ ವಿಮಾನವಾದರೂ ಯಾವಾಗಲೂ ಸರಿಯಾದ ಸಮಯಕ್ಕೆ ಅದಕ್ಕೆ ಸರ್ವಿಸ್ ಮಾಡುತ್ತಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಅದೇ ಹೊಸ ವಿಮಾನವಾದರೂ ಅದಕ್ಕೆ ಸರಿಯಾದ ನಿರ್ವಹಣೆ ಇಲ್ಲ ಎಂದರೆ ಅದನ್ನು ಏರುವಾಗ ನೀವು ಭಯಪಡಬೇಕಾಗಿ ಬರಬಹುದು. ಅದಲ್ಲದೆ ವಿಮಾನದ ಆಸನ, ಶೌಚಾಲಯದ ಸ್ಥಿತಿಗತಿ ಇತ್ಯಾದಿಗಳನ್ನು ಗಮನಿಸಿದರೆ ಅವು ಎಷ್ಟು ಹಳೆಯ ವಿಮಾನ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ವಿಮಾನದ ವಯಸ್ಸನ್ನು ಹೇಗೆ ಪರಿಗಣಿಸುತ್ತಾರೆ?

ವಿಮಾನದ ವಯಸ್ಸನ್ನು ಅದು ನಿರ್ಮಾಣವಾದ ಸಮಯದಿಂದ ಕೌಂಟ್ ಮಾಡುತ್ತಾರೆ. ವಿಮಾನ ಎಷ್ಟು ಗಂಟೆ ಹಾರಾಟ ಮಾಡಿದೆ ಅಥವಾ ಎಷ್ಟು ಕಿ.ಮೀ ಪ್ರಯಾಣ ಮಾಡಿದೆ ಎಂಬುದರ ಆಧಾರದ ಮೇಲೆ ಅದು ಹಾರಲು ಸೂಕ್ತ ಹೌದೋ ಅಥವಾ ಇಲ್ಲವೋ ಎಂಬುದನ್ನು ನಿರ್ಧರಿಸಲಾಗದು.

Airbus

ವಯಸ್ಸಿನ ಆಧಾರ

10 ವರ್ಷಗಳವರೆಗಿನ ವಿಮಾನವನ್ನು ಹೊಸ ವಿಮಾನ ಎಂದು ಪರಿಗಣಿಸಬಹುದು ಎಂಬುದು ತಜ್ಞರ ಅಭಿಪ್ರಾಯ. ಇನ್ನು, 10ರಿಂದ 20 ವರ್ಷ ಹಳೆಯ ವಿಮಾನಗಳನ್ನು ಸ್ಟ್ಯಾಂಡರ್ಡ್ ಪ್ಲೇನ್ ಎಂದು ಪರಿಗಣಿಸಲಾಗುತ್ತದೆ. 20 ವರ್ಷಕ್ಕಿಂತ ಮೇಲ್ಪಟ್ಟ ವಿಮಾನಗಳನ್ನು ಹಳೆಯ ವಿಮಾನ ಎಂದು ಪರಿಗಣಿಸಬಹುದು.

ತಜ್ಞರು ಹೇಳುವ ಪ್ರಕಾರ, 30 ವರ್ಷ ಹಾಗೂ ಅದಕ್ಕಿಂತ ಹಳೆಯ ವಿಮಾನದಲ್ಲಿ ಪ್ರಯಾಣಿಸೋದು ತುಂಬಾನೇ ಅಪಾಯವಂತೆ. ಅದರಲ್ಲೂ ಈ ವಿಮಾನದಲ್ಲಿ ಲಾಂಗ್ ಜರ್ನಿ ಮಾಡುವ ಪರಿಸ್ಥಿತಿ ಬಂದರೆ ಅಂಥ ಸಂದರ್ಭದಲ್ಲಿ ನೀವು ಹಿಂದಕ್ಕೆ ಸರಿಯೋದು ಬೆಸ್ಟ್ ಎನ್ನುತ್ತಾರೆ ತಜ್ಞರು.

ವಿಮಾನದ ಆಯಸ್ಸು ಕಂಡು ಹಿಡಿಯೋದು ಹೀಗೆ...

ವಿಮಾನದ ಆಯಸ್ಸನ್ನು ನೀವು ಮೊಬೈಲ್‌ನಲ್ಲಿ ಸರ್ಚ್ ಮಾಡಿ ಕಂಡು ಹಿಡಿಯಬಹುದು. ವಿಮಾನ ನಿಲ್ದಾಣಕ್ಕೆ ತಲುಪೋ ಮೊದಲೇ ನೀವು ಏರುತ್ತಿರುವ ವಿಮಾನದ ಜಾತಕ ನಿಮ್ಮ ಕೈಯಲ್ಲಿ ಇರುತ್ತದೆ. ನಿಮಗೆ ಇದಕ್ಕೆ ಮುಖ್ಯವಾಗಿ ಬೇಕಾಗಿದ್ದು ವಿಮಾನದ ಸಂಖ್ಯೆ. ಅದು ನಿಮ್ಮ ವಿಮಾನ ಟಿಕೆಟ್‌ನಲ್ಲಿ ಕಾಣಬಹುದು. ಬೋರ್ಡಿಂಗ್ ಪಾಸ್ ಅಥವಾ ಬುಕಿಂಗ್ ಕನ್ಫರ್ಮೇಷನ್ ಇಮೇಲ್‌ನಲ್ಲಿ ಈ ಬಗ್ಗೆ ವಿವರ ಇರುತ್ತದೆ.

ವಿಮಾನದ ಸಂಖ್ಯೆ

ವಿಮಾನದ ಟಿಕೆಟ್ ಮೇಲೆ ನಿಮ್ಮ ವಿಮಾನದ ಸಂಖ್ಯೆ ಬರೆದಿರುತ್ತದೆ. ಉದಾಹರಣೆಗೆ, AI302, 6E203 ಅಥವಾ UK981 ಎಂದಿರುತ್ತದೆ. ಇದು ವಿಮಾನದ ಸಂಖ್ಯೆ. ಇದು ಗೊತ್ತಾದರೆ ನಂತರದ್ದೆಲ್ಲವೂ ಸುಲಭ.

Flight tracking website

ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್

FlightRadar24, FlightAware, Airfleets.net, Planespotters.net ಇವು ಫ್ಲೈಟ್ ಟ್ರ್ಯಾಕಿಂಗ್‌ಗಾಗಿ ಮಾಡಲ್ಪಟ್ಟ ವೆಬ್‌ಸೈಟ್‌ಗಳು. ಈ ಸೈಟ್‌ಗೆ ತೆರಳಿ ನಿಮ್ಮ ಏರ್‌ಕ್ರಾಫ್ಟ್ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಪಡೆಯಿರಿ. ಭಾರತದ ವಿಮಾನಗಳ ರಿಜಿಸ್ಟ್ರೇಷನ್ ಸಂಖ್ಯೆಯು VT ಇಂದ ಆರಂಭವಾಗುತ್ತದೆ. ಉದಾಹರಣೆಗೆ, VT-IBQ ಅಥವಾ VT-ANU.

ವಿಮಾನದ ರಿಜಿಸ್ಟ್ರೇಷನ್ ಸಂಖ್ಯೆ ಸಿಕ್ಕ ಬಳಿಕ ನೀವು ಗೆದ್ದಂತೆ. Airfleets.net ಅಥವಾ Planespotters.net ವೆಬ್‌ಸೈಟ್‌ಗೆ ಭೇಟಿ ನೀಡಿ ವಿಮಾನದ ಇತಿಹಾಸವನ್ನು ಪಡೆದುಕೊಳ್ಳಿ. ಇಲ್ಲಿ ನಿಮ್ಮ ವಿಮಾನ ಏರ್‌ಬಸ್ ಅಥವಾ ಬೋಯಿಂಗ್ ಎಂದು ತಿಳಿಯುತ್ತದೆ. ಅಲ್ಲದೆ, ಯಾವ ಯಾವ ಏರ್‌ಲೈನ್‌ಗಳನ್ನು ಈ ವಿಮಾನ ಬಳಸಿದ್ದವು, ಇದು ಎಷ್ಟು ಹಳೆಯದು ಸೇರಿದಂತೆ ಎಲ್ಲಾ ಇತಿಹಾಸ ಸಿಗಲಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಅವರು ಸಾಮಾನ್ಯವಾಗಿ ಆಡಿಟ್ ನಡೆಸಿ, ವಿಮಾನ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಾರೆ. ಹೀಗಾಗಿ, ವಿಮಾನದ ಆಯಸ್ಸಿನ ಬಗ್ಗೆ ಹೆಚ್ಚಿನ ಚಿಂತೆ ಬೇಡ.