• ಸ್ಮಿತಾರಾಜ್

ಪ್ರವಾಸದಲ್ಲಿ ಸುಲಭವಾಗಿ ವಿಶ್ರಾಂತಿ ಪಡೆಯಲು ಮತ್ತು ಸುರಕ್ಷಿತವಾಗಿ ನೆಲೆಸಲು ಹೊಟೇಲ್‌ಗಳು ಬಹುಪಾಲು ಮುಖ್ಯ ಪಾತ್ರವಹಿಸುತ್ತವೆ. ಹೊಟೇಲ್‌ಗಳಲ್ಲಿ ಉತ್ತಮ ಸೌಲಭ್ಯ, ಆಹಾರ ವ್ಯವಸ್ಥೆ ಹಾಗೂ ಅನುಕೂಲಕರ ವಾತಾವರಣವಿರುವುದರಿಂದ ಪ್ರವಾಸಿಗರಿಗೆ ನೆಮ್ಮದಿ ಹಾಗೂ ಆರಾಮ ಒದಗುತ್ತದೆ. ಆದರೆ ಹೊಟೇಲ್ ನಲ್ಲಿ ಉಳಿದುಕೊಳ್ಳುವುದು ಕೂಡ ಕೆಲವೊಂದು ಬಾರಿ ಅಪಾಯವನ್ನು ತಂದೊಡ್ಡುತ್ತದೆ.

ಹೊಟೇಲ್ ನ ಕೊಠಡಿಯನ್ನು ಸರಿಯಾಗಿ ಪರಿಶೀಲನೆ ಮಾಡದೇ ಹೋದರೆ ನಮ್ಮ ಚಲನವಲನಗಳು ಕಳ್ಳ ಕ್ಯಾಮೆರಾದಲ್ಲಿ ಸೆರೆಯಾಗಿಬಿಡಬಹುದು..ಕೆಲವೊಮ್ಮೆ ನಮ್ಮ ಖಾಸಗಿ ಕ್ಷಣಗಳು ಸೆರೆಯಾಗಬಹುದು. ನಮ್ಮ ಬಟ್ಟೆ ಬದಲಿಸುವಿಕೆ, ಶೌಚ ಚಟುವಟಿಕೆ, ಕೆಲವೊಮ್ಮೆ ಮಾತುಗಳು ಕೂಡ ಕದ್ದು ದಾಖಲಿಸಿಕೊಳ್ಳಬಹುದು. ಇದರಿಂದ ಎಂಥೆಂಥ ಅನಾಹುತಗಳಾಗುತ್ತವೆ ಎಂದು ಬಿಡಿಸಿ ಹೇಳಬೇಕಿಲ್ಲ. ನಿಮ್ಮ ಖಾಸಗಿ ಕೋಣೆಯ ಯಾವ ಭಾಗದಲ್ಲೂ ಸಿಸಿ ಕ್ಯಾಮೆರಾಗಳು ಇರುವಂತಿಲ್ಲ. ಹೀಗಿರುವಾಗ ಕದ್ದು ಕ್ಯಾಮೆರಾ ಇಡುವುದು ಅಪರಾಧವೇ ತಾನೆ? ಇಂಥ ವಿಡಿಯೋಗಳು ಫೊಟೋಗಳು ಎಲ್ಲೆಲ್ಲಿ ಹರಿದಾಡುತ್ತವೆ, ಏನೇನು ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ನೀವು ಸಾಕಷ್ಟು ನೋಡಿದ್ದೀರಿ. ಹಾಗಾದರೆ ಹೊಟೇಲ್ ನ ಕೊಠಡಿ ಬುಕ್‌ ಮಾಡಿದಾಗ ಕಳ್ಳ ಹಿಡನ್ ಕ್ಯಾಮೆರಾಗಳು ಎಲ್ಲಿವೆ ಎಂದು ಪತ್ತೆ ಹಚ್ಚುವುದು ಹೇಗೆ? ಯಾವ ಜಾಗಗಳನ್ನು ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.

hidden cam

1 ಬೆಡ್‌ರೂಮ್:
ಹೊಟೇಲ್ ಗೆ ಹೋದಾಗ ಮೊದಲು ಬೆಡ್ ಶೀಟ್ ಗಳು ಸ್ವಚ್ಛವಾಗಿದೆಯೇ ಅನ್ನೋದನ್ನು ನೋಡೋದಕ್ಕೂ ಮೊದಲು
ಬೆಡ್ರೂಂನಲ್ಲಿ ಯಾವುದಾದರೂ ಕ್ಯಾಮೆರಾಗಳು ಅಡಗಿಸಿಟ್ಟಿದ್ದಾರಾ ಎಂಬುದನ್ನು ಪರಿಶೀಲಿಸಿ. ಬೆಡ್‌ನ ಹಿಂಭಾಗ ಮತ್ತು ಮೇಲಿನ ಗೋಡೆಯಲ್ಲಿ ಯಾವುದೇ ಅನುಮಾನಾಸ್ಪದ ಬಿರುಕು, ಸಣ್ಣ ತೂತು ಅಥವಾ ಯಾವುದಾದರೂ ಹೊಸ ವಸ್ತುಗಳನ್ನು ನೇತಾಡಲು ಬಿಟ್ಟಿರುತ್ತಾರೆ. ಅಂಥವುಗಳನ್ನು ಪರಿಶೀಲಿಸಿ.

2 ಬಾತ್‌ರೂಮ್‌ನ ಕಾರ್ನರ್‌ಗಳು:
ಬಾತ್ ರೂಂನ ಕಾರ್ನರ್ ಗಳಲ್ಲಿ ಕ್ಯಾಮೆರಾಗಳನ್ನು ಅಡಗಿಸಿಟ್ಟಿರಬಹುದು. ಅಂಥ ಪ್ರದೇಶಗಳ ಬಗ್ಗೆಯೂ ಎಚ್ಚರವಹಿಸೋದು ಅಗತ್ಯ. ಹೊಟೇಲ್ ಗೆ ಹೋದ ಕೂಡಲೇ ವಿಶ್ರಾಂತಿ ಪಡೆಯೋದಕ್ಕೂ ಮೊದಲೇ ನಾವು ಸ್ನಾನದ ಕೋಣೆಗೆ ತೆರಳುತ್ತೇವೆ. ಸ್ನಾನ ಮಾಡೋದಕ್ಕೆ ತೆರಳೋದಕ್ಕೂ ಮುನ್ನ ಬಾತ್ ರೂಮ್ ನ ಕಾರ್ನರ್ ಗಳನ್ನು ಪರಿಶೀಲಿಸೋದು ಬಹುಮುಖ್ಯ.

hidden camera 2

3 ಟೆಲಿವಿಷನ್‌ನ ಎದುರು:
ಟಿವಿಯ ಎದುರು ಕೂಡ ಕ್ಯಾಮೆರಾ ಅಡಗಿಸಿಟ್ಟಿರುವ ಸಾಧ್ಯತೆ ಬಹಳ ಹೆಚ್ಚಾಗಿರುತ್ತದೆ. ಹೆಚ್ಚಿನ ಹೊಟೇಲ್ ರೂಮ್ ಗಳಲ್ಲಿ ಬೆಡ್ ನ ಎದುರು ಭಾಗದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ವೇಳೆ ನೋಡೋದಕ್ಕೆ ಟಿವಿಯಲ್ಲಿ ಇಟ್ಟಿರಲಾಗುತ್ತದೆ. ಆದರೆ ಟಿವಿಯ ಎದುರು ಕೂಡ ಯಾರಿಗೂ ಕಾಣದಿರುವಂತೆ ಹಿಡನ್ ಕ್ಯಾಮರಾಗಳನ್ನು ಅಡಗಿಸಿಟ್ಟಿರಬಹುದಾದ ಸಂಭವವಿದೆ. ಆದ್ದರಿಂದ ಟೆಲಿವಿಷನ್‌ನಲ್ಲಿ ಚಿಕ್ಕದಾದ ಯಾವುದೇ ರಂಧ್ರ ಕಂಡು ಬರುತ್ತದೆಯೇ ಎಂದು ಪರಿಶೀಲಿಸಿ.

4 ಕನ್ನಡಿಗಳ ಹಿಂದೆ:
ಹೊಟೇಲ್ ರೂಂನಲ್ಲಿ ಆಕರ್ಷಣೆಗಾಗಿ ಬೃಹತ್ ಕನ್ನಡಿಗಳನ್ನು ಇಟ್ಟಿರುತ್ತಾರೆ. ದೊಡ್ಡ ದೊಡ್ಡ ಕನ್ನಡಿಗಳಲ್ಲಿ ಒನ್ ವೇ ಮಿರರ್ ಗಳ ಮೂಲಕವೂ ಕೆಲವೊಂದು ಬಾರಿ ಸೀಕ್ರೆಟ್ ಕ್ಯಾಮರಾಗಳನ್ನು ಅಡಗಿಸಿಟ್ಟಿರಬಹುದು.

5 ಅಲಂಕಾರಿಕ ವಸ್ತುಗಳು:
ಫೋಟೋ ಫ್ರೇಮ್‌, ಹೂವುಗಳಿಂದ ತುಂಬಿದ ಸ್ಥಳಗಳಂಥ ಅಲಂಕಾರಿಕ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿ. ಏಕೆಂದರೆ ಇಂಥ ವಸ್ತುಗಳು ಕೊಠಡಿಯ ಮಧ್ಯಭಾಗದಲ್ಲಿ ಇರಿಸಲಾಗುತ್ತದೆ.

6 ಚಾರ್ಜಿಂಗ್ ಅಡಾಪ್ಟರ್, ನೈಟ್ ಲ್ಯಾಂಪ್:
ಹೊಟೇಲ್ ರೂಂನಲ್ಲಿ ನಾವು ಗಮನಿಸದೇ ಇರೋ ಪ್ರಮುಖ ಭಾಗ ಅಂದ್ರೆ ಅದು ಚಾರ್ಜಿಂಗ್ ಅಡಾಪ್ಟರ್ ಮತ್ತು ನೈಟ್ ಲ್ಯಾಂಪ್. ಆದರೆ ಇಂಥ ಅನುಮಾನವೇ ಬಾರದೆ ಇರುವ ಸ್ಥಳಗಳಲ್ಲಿಯೇ ಹೆಚ್ಚಾಗಿ ಸೀಕ್ರೆಟ್ ಕ್ಯಾಮೆರಾಗಳನ್ನು ಅಳವಡಿಸಿರಬಹುದಾದ ಸಂಭವ ಇರುತ್ತದೆ.

8 WiFi ನಲ್ಲಿರುವ ಡಿವೈಸ್‌ಗಳ ಮೂಲಕ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಬಹುದು.
ವೈಫೈ ಡಿವೈಸ್ ಗಳು ಹೊಟೇಲ್ ಗಳಲ್ಲಿ ಸರ್ವೇಸಾಮಾನ್ಯ. ಆದರೆ ಇದರಲ್ಲೂ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಿಟ್ಟಿರವಹುದಾದ ಸಂಭವ ಹೆಚ್ಚಾಗಿರುತ್ತದೆ.

ಹಾಗಾದರೆ ಈ ಹಿಡನ್ ಕ್ಯಾಮೆರಾ ಪತ್ತೆಹಚ್ಚುವುದು ಹೇಗೆ?
ಲೈಟ್‌ ಆಫ್ ಮಾಡಿ ಕೆಂಪು ಲೈಟ್ ಹುಡುಕಿ: ಹಿಡನ್ ಕ್ಯಾಮರಾದ ಇನ್‌ಫ್ರಾರೆಡ್ ಸೆನ್ಸರ್‌ನಿಂದ ರಾತ್ರಿಯಲ್ಲಿ ಸಣ್ಣ ಕೆಂಪು ಲೈಟ್ ಕಣ್ಣಿಗೆ ಬೀಳಬಹುದು. ಫೋನ್ ಕ್ಯಾಮೆರಾ ಬಳಸಿ ಸ್ಕ್ಯಾನ್ ಮಾಡಿ: ನಿಮ್ಮ ಫೋನ್‌ನ ಕ್ಯಾಮೆರಾ ಬಳಸಿ ಶಂಕಾಸ್ಪದ ಪ್ರದೇಶಗಳನ್ನು ಸ್ಕ್ಯಾನ್ ಮಾಡಿ. ಇನ್‌ಫ್ರಾರೆಡ್ ಸೆನ್ಸರ್‌ಗಳು ಕ್ಯಾಮೆರಾ ಲೆನ್ಸ್‌ನಲ್ಲಿ ತೀವ್ರ ಬೆಳಕಿನಂತೆ ಕಾಣಬಹುದು.

hidden camera

ಫಿಂಗ್‌ರ್ ನಾಕ್ ಮತ್ತು ಮಿರರ್ ಟೆಸ್ಟ್:

ಕನ್ನಡಿಗಳು ಒನ್ ವೇ ಮಿರರ್ ಹೌದೋ ಅಲ್ಲವೊ ತಿಳಿದುಕೊಳ್ಳಲು, ಮಿರರ್ ಮೇಲೆ ಉಂಗುರ ಅಥವಾ ಬೆರಳಿನಿಂದ ತಟ್ಟಿರಿ. ನಿಜವಾದ ಮಿರರ್‌ನಲ್ಲಿ ನಿಮ್ಮ ಬೆರಳು ಮತ್ತು ಪ್ರತಿಬಿಂಬದ ನಡುವೆ ಸ್ಪೇಸ್ ಇರುತ್ತದೆ. ಕ್ಯಾಮರಾ ಒಳಗೊಂಡಿರುವ ಮಿರರ್‌ನಲ್ಲಿ ಈ ಗ್ಯಾಪ್ ಇರೋದಿಲ್ಲ.

RF ಡಿಟೆಕ್ಟರ್ ಅಥವಾ Hidden Camera App:

ಕೆಲ RF (Radio Frequency) ಡಿಟೆಕ್ಟರ್ ಉಪಕರಣಗಳು ಸಿಗ್ನಲ್‌ಗಳನ್ನು ಪತ್ತೆಮಾಡುತ್ತವೆ.

ಹಿಡನ್ ಕ್ಯಾಮೆರಾ ಡಿಟೆಕ್ಟರ್ ಆ್ಯಪ್ ಗಳು ಸಹ ಸಹಾಯಕವಾಗಬಹುದು.

Wi-Fi ನಲ್ಲಿನ ಅನುಮಾನಾಸ್ಪದ ಡಿವೈಸುಗಳು:

ನಿಮ್ಮ ಫೋನ್‌ನ ಮೂಲಕ Wi-Fi ಅನ್ನು ಸ್ಕ್ಯಾನ್ ಮಾಡಿ. ಅನುಮಾನಾಸ್ಪದ ಡಿವೈಸ್ ಗಳಿದ್ದರೆ ನೋಡಿ

ಹಿಡನ್ ಕ್ಯಾಮೆರಾ ಪತ್ತೆಯಾದರೆ ಏನು ಮಾಡಬೇಕು?

ಫೋಟೋ/ವೀಡಿಯೊ ಮಾಡಿ. ತಕ್ಷಣ ಹೋಟೆಲ್ ಮ್ಯಾನೇಜ್ಮೆಂಟ್‌ಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿ. ಆ ಹೊಟೇಲನ್ನು ತೊರೆದು ಬೇರೆ ಸುರಕ್ಷಿತ ವಾಸಸ್ಥಳಕ್ಕೆ ಹೋಗಿ. ಆಯಾಯ ದೇಶ ಮತ್ತು ರಾಜ್ಯದಲ್ಲಿ ಸೈಬರ್ ಕ್ರೈಮ್ ವಿಭಾಗದಲ್ಲಿಯೂ ದೂರು ನೀಡಬಹುದು.