Saturday, July 26, 2025
Saturday, July 26, 2025

ರೈಲಿನಲ್ಲಿ ಲಗೇಜ್ ಕಳುವಾದರೆ...? ಗಾಬರಿ ಬೇಡ.. ಇಲ್ಲಿದೆ ಪರಿಹಾರ!

ರೈಲಿನಲ್ಲಿ ಪ್ರಯಾಣಿಸುವ ಸಮಯದಲ್ಲಿ ನಿಮ್ಮ ಲಗೇಜ್​​ ಎಲ್ಲೋ ಕಳೆದುಹೋದರೆ ಈಗ ನೀವು ಭಯಪಡಬೇಕಾಗಿಲ್ಲ. ನಿಮ್ಮ ಕಳೆದುಹೋದ ವಸ್ತುಗಳನ್ನು ಮರಳಿ ಪಡೆದುಕೊಳ್ಳಲು ಸುಲಭ ಉಪಾಯಗಳು ಇಲ್ಲಿವೆ.

ಭಾರತೀಯ ರೈಲ್ವೆ ದೇಶದ ಅತಿದೊಡ್ಡ ಸಾರಿಗೆ ವ್ಯವಸ್ಥೆಯಾಗಿದ್ದು, ಪ್ರತಿದಿನ ಸುಮಾರು ಎರಡೂವರೆ ಕೋಟಿ ಪ್ರಯಾಣಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದೊಂದು ಕೈಗೆಟುಕುವ ಸಾರಿಗೆ ಮಾತ್ರವಲ್ಲ, ಆರಾಮದಾಯಕವೂ ಹೌದು. ಸಾಮಾನ್ಯವಾಗಿ ರೈಲು ಆಯ್ಕೆ ಮಾಡುವುದೇ ದೂರದ ಊರಿಗೆ ತೆರಳಲು. ಅದಕ್ಕೆ ಕಾರಣ ಕಡಿಮೆ ವೆಚ್ಚ ಮತ್ತು ವೇಗ. ಆ ಸಮಯದಲ್ಲಿ ಎರಡು ಮೂರು ಲಗೇಜ್​ ಬ್ಯಾಗ್​ಗಳು ಇದ್ದೇ ಇರುತ್ತದೆ. ಕೆಲವೊಮ್ಮೆ ನಾವೇ ಅಥವಾ ಬೇರೆ ಯಾರೋ ಪ್ರಯಾಣಿಕರು ಆತುರದಲ್ಲಿ ತಮ್ಮ ಸಾಮಾನುಗಳನ್ನು ರೈಲಿನಲ್ಲಿ ಮರೆತುಬಿಡುವುದನ್ನು ಹಲವು ಬಾರಿ ನೋಡಿರಬಹುದು ಅಥವಾ ನಿಮಗೂ ಅನುಭವವಾಗಿರಬಹುದು. ಇದಲ್ಲದೇ ಹಲವು ಬಾರಿ ರೈಲಿನಿಂದ ತಮ್ಮ ವಸ್ತುಗಳು ಕಳುವಾಗುವ ಪ್ರಸಂಗಗಳೂ ಇವೆ. ಅಂಥ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಗೆ ಸಮಸ್ಯೆಗಳು ಉದ್ಭವಿಸುತ್ತವೆ.

train luggage 2

ರೈಲಿನಲ್ಲಿ ಪ್ರಯಾಣಿಸುವ ಸಮಯದಲ್ಲಿ ನಿಮ್ಮ ಲಗೇಜ್​​ ಎಲ್ಲೋ ಕಳೆದುಹೋದರೆ ಈಗ ನೀವು ಭಯಪಡಬೇಕಾಗಿಲ್ಲ. ನಿಮ್ಮ ಕಳೆದುಹೋದ ವಸ್ತುಗಳ ಬಗ್ಗೆ ನೀವು ದೂರು ನೀಡಿ,ಮತ್ತೆ ಅದನ್ನು ಮರಳಿ ಪಡೆಯಬಹುದು. ರೈಲಿನಲ್ಲಿ ಕಳೆದುಹೋದ ವಸ್ತುವನ್ನು ಮರಳಿ ಪಡೆಯಲು ಏನು ಮಾಡಬೇಕು? ಅದರ ಪ್ರಕ್ರಿಯೆಗಳೇನು? ಎಲ್ಲಿ ದೂರು ನೀಡಬೇಕು ಎಂಬ ಸಾಕಷ್ಟು ಗೊಂದಲಗಳಿಗೆ ಇಲ್ಲಿದೆ ಉತ್ತರ.

  1. ರೈಲಿನಲ್ಲಿ ಲಗೇಜ್ ಕಳೆದುಹೋದರೆ, ನೀವು ರೈಲ್ವೆ ತುರ್ತು ಸಹಾಯ (Railway Emergency Helpline) ಸಂಖ್ಯೆ 182ಕ್ಕೆ ಕರೆ ಮಾಡಿ ದೂರು ನೀಡಬೇಕು. ಇದು ರೈಲಿನಲ್ಲಿ ಪ್ರಯಾಣದ ವೇಳೆ ತುರ್ತು ಪರಿಸ್ಥಿತಿಗಳಿಗೆ ಸಹಾಯ ಪಡೆಯಲು ಬಳಸಬಹುದಾದ ಸಂಖ್ಯೆ. ಕಳ್ಳತನ, ಮಹಿಳೆ ಪ್ರಯಾಣಿಕರ ಸುರಕ್ಷತೆ, ಅನಗತ್ಯ ಪ್ರಯಾಣಿಕರ ತೊಂದರೆಯನ್ನು ಅನುಭವಿಸುತ್ತಿದ್ದಾಗ ನೀವು ಈ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.
  2. ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ದೂರನ್ನು ನೋಂದಾಯಿಸುವುದು ಅವಶ್ಯಕ. ಇದಕ್ಕಾಗಿ, ನೀವು railmadad.indianrailways.gov.in/madad/final/home.jsp ಗೆ ಭೇಟಿ ನೀಡಬೇಕು. ಈ ಪೋರ್ಟಲ್‌ಗೆ ಹೋಗುವ ಮೂಲಕ, ನಿಮ್ಮ ಕಳೆದುಹೋದ ಲಗೇಜ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೀಡಬೇಕು. ಮೊದಲು ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ನಿಮ್ಮ ಮೊಬೈಲ್​​ಗೆ OTP ಬರುತ್ತದೆ ಅದನ್ನು ಕೂಡ ಹಾಕಬೇಕಾಗುತ್ತದೆ. ಬಳಿಕ ನಿಮ್ಮ ಲಗೇಜ್ ಕಳೆದುಹೋದ ಸ್ಟೇಷನ್‌ನ ಹೆಸರು ಮತ್ತು ಈ ಘಟನೆಯ ದಿನಾಂಕವನ್ನು ಅಲ್ಲಿ ತಿಳಿಸಬೇಕಾಗುತ್ತದೆ. ಸಂಪೂರ್ಣ ಮಾಹಿತಿಯನ್ನು ನಮೂದಿಸಿದ ನಂತರ,ನೀವು ದೂರು ಸಲ್ಲಿಸಬಹುದು.
  3. ರೈಲ್ ಮದದ್ ಪೋರ್ಟಲ್ ಹೊರತಾಗಿ, ನಿಮ್ಮ ಲಗೇಜ್ ಕಳೆದುಹೋದ ನಿಲ್ದಾಣದ ಸ್ಟೇಷನ್ ಮಾಸ್ಟರ್‌ಗೆ ಸಹ ನೀವು ತಿಳಿಸಬಹುದು. ನೀವು ಅಲ್ಲಿ ಲಿಖಿತ ದೂರನ್ನು ಸಲ್ಲಿಸಬೇಕಾಗುತ್ತದೆ. ಇದಲ್ಲದೇ ನೀವು ಸೋಷಿಯಲ್​​ ಮೀಡಿಯಾಗಳಲ್ಲಿ ಆಕ್ಟೀವ್​​ ಆಗಿದ್ದರೆ ಆನ್‌ಲೈನ್‌ನಲ್ಲಿ ಟ್ಯಾಗ್ ಮಾಡುವ ಮೂಲಕ ನೀವು ರೈಲ್ವೆ ಸಚಿವಾಲಯಕ್ಕೂ ಈ ಬಗ್ಗೆ ತಿಳಿಸಬಹುದು.
  4. RPF (Railway Protection Force) ಕಚೇರಿಯಲ್ಲಿ ತಕ್ಷಣ ನಕಲು ದೂರು (FIR/complaint) ದಾಖಲಿಸಿ:

ದಾಖಲಾತಿಗೆ ಅಗತ್ಯವಿರುವ ಮಾಹಿತಿ:

ಟಿಕೆಟ್ ವಿವರ (PNR ಸಂಖ್ಯೆ)

ಪ್ರಯಾಣಿಸಿದ ರೈಲು ಸಂಖ್ಯೆ/ಹೆಸರು

ಕೋಚ್ ಮತ್ತು ಸೀಟು ಸಂಖ್ಯೆ

ಕಳೆದುಹೋದ ಲಗೇಜಿನ ವಿವರ (ಬಣ್ಣ, ಗಾತ್ರ, ಒಳಗೊಂಡಿರುವ ವಸ್ತುಗಳು)

ಸಮಯ ಮತ್ತು ಸ್ಥಳ

ಕಳೆದುಹೋದ ನಿಮ್ಮ ಲಗೇಜ್ ಸಿಕ್ಕಿದ ತಕ್ಷಣ, ನೀವು ದೂರು ದಾಖಲಿಸಿದ ಠಾಣೆಯಿಂದ ಕರೆ ಬರುತ್ತದೆ. ಅಲ್ಲಿಗೆ ನೀವು ತಲುಪಿದ ಬಳಿಕ ನಿಮ್ಮ ವಸ್ತುಗಳನ್ನು ಮರಳಿ ಪಡೆಯಲು, ಆ ವಸ್ತು ನಿಮ್ಮದೇ ಎಂಬುದಕ್ಕೆ ನೀವು ಪುರಾವೆ ತೋರಿಸಬೇಕಾಗುತ್ತದೆ. ನೀವು ಬೇಗ ದೂರು ಸಲ್ಲಿಸಿದಷ್ಟೂ, ನಿಮ್ಮ ಲಗೇಜ್ ಅಥವಾ ವಸ್ತುಗಳನ್ನು ಮರಳಿ ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಇನ್ನುಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಲಗೇಜ್ ಕಳೆದು ಹೋದರೆ ಏನು ಮಾಡುವುದು ಎಂಬ ಚಿಂತೆ ಬೇಡ. ಈ ಸಲಹೆಗಳನ್ನು ನೀವೂ ಬಳಸಿಕೊಳ್ಳಿ ಮತ್ತು ನಿಮ್ಮವರಿಗೂ ಈ ಬಗ್ಗೆ ಮಾಹಿತಿ ನೀಡಿ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!