ಭಾರತೀಯ ವಿಮಾನಯಾನ ಕ್ಷೇತ್ರಕ್ಕೆ ವಾರದಲ್ಲಿ 77 ಕೋಟಿ ಲಾಸ್...
ಭಾರತದ ವಿಮಾನಯಾನ ಕಂಪನಿಗಳು ವಾರಕ್ಕೆ ಸುಮಾರು ₹77 ಕೋಟಿಯಷ್ಟು ಹೆಚ್ಚುವರಿ ವೆಚ್ಚವನ್ನು ಭರಿಸುತ್ತಿವೆ ಎಂದು ವರದಿಯಾಗಿದೆ
ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿಯ ಮಧ್ಯೆ, ಪಾಕಿಸ್ತಾನ ತನ್ನ ಏರ್‌ಸ್ಪೇಸ್‌ನ್ನು (Airspace) ಭಾರತೀಯ ವಿಮಾನಗಳಿಗೆ ಮುಚ್ಚಿರುವುದು ಭಾರತದಿಂದ ವಿದೇಶಗಳಿಗೆ ಹೊರಡುವ ವಿಮಾನಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಕಾರಣದಿಂದಾಗಿ ಭಾರತದ ವಿಮಾನಯಾನ ಕಂಪನಿಗಳು ವಾರಕ್ಕೆ ಸುಮಾರು ₹77 ಕೋಟಿಯಷ್ಟು ಹೆಚ್ಚುವರಿ ವೆಚ್ಚವನ್ನು ಭರಿಸುತ್ತಿವೆ ಎಂದು ಪಿಟಿಐ ವರದಿ ಮಾಡಿದೆ.
ವಿಶ್ಲೇಷಣೆಯ ಪ್ರಕಾರ, ನೈಋತ್ಯ ಏಶಿಯಾ (Asia) ಮತ್ತು ಯುರೋಪ್ (Europe) ಹಾಗೂ ಅಮೆರಿಕದತ್ತ (America) ಉತ್ತರ ಭಾರತದ ನಗರಗಳಿಂದ ಹೊರಡುವ ವಿಮಾನಗಳಿಗೆ ಈಗ ಸುಮಾರು 1.5 ಗಂಟೆಗಳಷ್ಟು ಹೆಚ್ಚುವರಿ ಪ್ರಯಾಣ ಸಮಯ ಬೇಕಾಗುತ್ತಿದೆ. ಈ ಕಾರಣದಿಂದ ವಿಮಾನಗಳ ಇಂಧನ ಖರ್ಚು, ಲ್ಯಾಂಡಿಂಗ್ ಫೀಸ್, ಪಾರ್ಕಿಂಗ್ ಚಾರ್ಜ್‌ಗಳು ಮತ್ತು ತಾಂತ್ರಿಕ ಹಾಲ್ಟ್‌ನಂತಹ ವೆಚ್ಚಗಳು ಹೆಚ್ಚಾಗಿವೆ. ಇದರಿಂದಾಗಿ ವಿಮಾನಯಾನ ಕಂಪನಿಗಳಿಗೆ ಪ್ರತಿ ತಿಂಗಳು ₹306 ಕೋಟಿಗೂ ಹೆಚ್ಚು ಹೆಚ್ಚುವರಿ ವೆಚ್ಚವಾಗುತ್ತಿದೆ.
ಪಹಲ್ಗಾಮ್ ದಾಳಿ ನಂತರ ಭಾರತ ತೆಗೆದುಕೊಂಡ ಭದ್ರತಾ ಕ್ರಮಗಳಿಗೆ ಪ್ರತಿಯಾಗಿ ಪಾಕಿಸ್ತಾನ ತನ್ನ ವಾಯುಪಥವನ್ನು ಮುಚ್ಚಿದೆ. ಇದರಿಂದಾಗಿ ಉತ್ತರ ಭಾರತದ ಪ್ರಮುಖ ನಗರಗಳಾದ ದೆಹಲಿ, ಲಕ್ನೋ, ಅಮೃತಸರ ಮುಂತಾದ ಕಡೆಗಳಿಂದ ಯುರೋಪ್ ಹಾಗೂ ಅಮೆರಿಕದತ್ತ ವಿಮಾನಗಳ ವೇಳಾಪಟ್ಟಿಯು ಗಂಭೀರವಾಗಿ ಪರಿಣಾಮ ಉಂಟಾಗಿದೆ.
ಈ ಪರಿಸ್ಥಿತಿಯಿಂದ ಹೊರಬರಲು ಭಾರತ ಸರ್ಕಾರ ಪರ್ಯಾಯ ಮಾರ್ಗಗಳ ಹುಡುಕಾಡುತ್ತಿದೆ. ಇತ್ತೀಚೆಗೆ ಭದ್ರತಾ, ವಿದೇಶಾಂಗ ಮತ್ತು ನಾಗರಿಕ ವಿಮಾನಯಾನ ಇಲಾಖೆಗಳ ಅಧಿಕಾರಿಗಳು ವಿಮಾನಯಾನ ಕಂಪನಿಗಳೊಂದಿಗೆ ಸಭೆ ನಡೆಸಿದ್ದಾರೆ. ಅವರು ಪಹಲ್ಗಾಮ್‌ನ್ನು ತಲುಪಿದ ನಂತರ ವಿಮಾನಗಳು ಲೇಹ್‌ಗೆ ಉತ್ತರಕ್ಕೆ ಹೋಗಿ ಹಿಂದು ಕುಶ್ ಪರ್ವತದ ಮೇಲೆ ಹಾರುತ್ತಾ ಕಿರ್ಗಿಸ್ಥಾನ್, ತಜಿಕಿಸ್ತಾನ್ ಮೂಲಕ ಯುರೋಪ್ ಅಥವಾ ಅಮೆರಿಕ ತಲುಪುವ ಮಾರ್ಗವನ್ನು ಪರಿಶೀಲಿಸುತ್ತಿದ್ದಾರೆ.
ಈ ಮಾರ್ಗವು ಚೀನಾದ ವಾಯುಪಥದ ಮೂಲಕ ಸಾಗುವ ಅಗತ್ಯವಿದೆ, ಅದಕ್ಕಾಗಿ ಭಾರತ ಸರ್ಕಾರ ಚೀನಾದ ಅನುಮತಿಯ ಬಗ್ಗೆ ಚಿಂತನೆ ಮಾಡುತ್ತಿದೆ. ಒಂದು ಬಾರಿ ಈ ಮಾರ್ಗ ಅನುಮೋದಿತವಾದರೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಾಯುಪಥವನ್ನು ಸಂಪೂರ್ಣವಾಗಿ ಬಿಟ್ಟು ಮುಂದುವರಿಯಬಹುದು.
ವಿಮಾನಯಾನ ಸಂಸ್ಥೆಗಳ ಪ್ರಕಾರ, ಈ ಹೊಸ ಮಾರ್ಗವನ್ನು ಅನುಸರಿಸಲು ಪೈಲಟ್‌ಗಳಿಗೆ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ ಹಾರಾಟ ಮಾಡಲು ವಿಶೇಷ ತರಬೇತಿಗಳು ಬೇಕಾಗುತ್ತವೆ. ಜೊತೆಗೆ, 22 ನಿಮಿಷಕ್ಕಿಂತ ಹೆಚ್ಚು ಕಾಲದ ಆಕ್ಸಿಜನ್ ಸೌಲಭ್ಯವಿರುವ ವಿಮಾನಗಳನ್ನು ಬಳಸುವ ಅಗತ್ಯವಿದೆ.