ವಾಹನಗಳು ರಸ್ತೆಗಿಳಿದರೆ ಸಾಕು, ಟ್ರಾಫಿಕ್‌ ನಿಯಮಗಳನ್ನು ಪಾಲಿಸುವುದಿಲ್ಲ, ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದು, ಲೇನ್‌ ಫಾಲೋ ಮಾಡದಿರುವುದು, ಹೆಲ್ಮೆಟ್‌ ಧರಿಸದೆ, ಸೀಟ್‌ ಬೆಲ್ಟ್‌ ಹಾಕದೆ, ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು ಹೀಗೆ ಮಹಾ ನಗರಿಗಳೆಂಬ ಹಣೆ ಪಟ್ಟಿ ಹೊತ್ತ ಅನೇಕ ನಗರಗಳಲ್ಲಿ ನಿತ್ಯದ ಕತೆಯಿದು. ಆದರೆ ಮಿಜೋರಾಂನ ರಾಜಧಾನಿ ಐಜೋಲ್, ಜನನಿಬಿಡ ನಗರವಾದರೂ ತನ್ನ ಸಂಚಾರ ಶಿಷ್ಟಾಚಾರದಿಂದಾಗಿ ಮೌನ ನಗರಿ ಎಂಬ ಹೆಸರನ್ನು ಪಡೆದುಕೊಂಡಿದೆ.

ಹೌದು, ಈ ನಗರದಲ್ಲಿ ದೈನಂದಿನ ಸಂಚಾರ ಎಷ್ಟು ಸುಗಮವಾಗಿದೆ ಎಂದರೆ ವಾಹನ ದಟ್ಟಣೆಯ ಸಮಯದಲ್ಲಿಯೂ ಸಹ ಇಲ್ಲಿ ಯಾವುದೇ ಗದ್ದಲ, ಗೊಂದಲಗಳಾಗುವುದಿಲ್ಲ. ಇಲ್ಲಿನವರು ಟ್ರಾಫಿಕ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವ ಕಾರಣಕ್ಕೆ ಟ್ರಾಫಿಕ್‌ ದಟ್ಟಣೆಯಿದ್ದರೂ ಶಬ್ದ ಮಾಲಿನ್ಯವಾಗುವುದಿಲ್ಲ.

Aizawl-traffic

ಬೆಂಗಳೂರು, ಮುಂಬೈ ಮತ್ತು ದೆಹಲಿಯ ಜನರು ತಮ್ಮ ಜೀವನದ ಅರ್ಧದಷ್ಟು ಸಮಯವನ್ನು ನಗರದ ಸಂಚಾರದಲ್ಲಿ ಕಳೆಯುತ್ತಿದ್ದೇವೆ ಎಂದು ಭಾವಿಸುತ್ತಿದ್ದರೆ, ಐಜೋಲ್‌ನ ಜನರು ರಸ್ತೆ ನಿಯಮಗಳನ್ನು ಪಾಲಿಸುವುದು, ಲೇನ್‌ ಗಳನ್ನು ಚಾಚೂ ತಪ್ಪದೇ ಅನುಸರಿಸುವ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ.

ಹಾರ್ನ್‌ಗೆ ಇಲ್ಲಿಲ್ಲ ಅವಕಾಶ !

ನೀವು ಐಜೋಲ್‌ನಲ್ಲಿ ಸುತ್ತಾಡುತ್ತಿದ್ದರೆ, ಅಲ್ಲಿನ ಜನರ ಸಂಚಾರದಲ್ಲಿರುವ ಶಿಸ್ತು ನಿಮ್ಮ ಗಮನಕ್ಕೆ ಬಾರದೆ ಇರದು. ಇಲ್ಲಿನ ಜನರು ತಮ್ಮ ವಾಹನಗಳೊಂದಿಗೆ ರಸ್ತೆಗಿಳಿದರೆ, ತಮ್ಮ ಲೇನ್ ಅನ್ನು ತಪ್ಪದೆ ಅನುಸರಿಸುತ್ತಾರೆ,ನಾ ಮುಂದು ತಾ ಮುಂದು ಎಂಬಂತೆ ಅತಿ ವೇಗದಲ್ಲಿ ವಾಹನ ಚಾಲನೆ ಮಾಡದೆ, ಒಬ್ಬರನ್ನೊಬ್ಬರು ಹಿಂದಿಕ್ಕದೆ ನಿಧಾನಗತಿಯಲ್ಲಿ ವಾಹನೆ ಚಾಲನೆ ಮಾಡುತ್ತಾರೆ. ವಿಶೇಷವೆಂದರೆ ಅಷ್ಟೂ ಅಗತ್ಯ ಬಾರದಿದ್ದರೆ ಇಲ್ಲಿ ಹಾರ್ನ್‌ಗಳನ್ನು ಸಹ ಬಳಸುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರೂ ಪರಸ್ಪರ ಪ್ರೀತಿ ಗೌರವದಿಂದ ವರ್ತಿಸುತ್ತಾರೆ. ಇವೆಲ್ಲವೂ, ಪೀಕ್ ಅವರ್‌ನಲ್ಲಿಯೂ ಸಹ ನಡೆಯುತ್ತದೆಯೆಂದರೆ ಅಚ್ಚರಿಪಡಬೇಕಿಲ್ಲ.

mizoram-traffic-rules_621ef46068e8e

ಐಜೋಲ್‌ನ ರಸ್ತೆಗಳೆಲ್ಲವೂ ಹೆದ್ದಾರಿಗಳಲ್ಲ !

ಐಜೋಲ್‌ನ ಹೆಚ್ಚಿನ ನಗರದ ರಸ್ತೆಗಳು ಆರಂಭದಲ್ಲಿ ಸಾಕಷ್ಟು ಕಿರಿದಾಗಿದ್ದು, ವಾಹನ ಸಂಚಾರಕ್ಕೆ ಅಷ್ಟೊಂದು ಸುಗಮವೆನ್ನಿಸದು. ಅಲ್ಲದೆ ರಸ್ತೆ ಲೆಫ್ಟ್‌ ಲೇನ್‌ ನಲ್ಲಿ ನಾಲ್ಕು ಚಕ್ರ ವಾಹನಗಳು ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಮಾರ್ಗಗಳಿವೆ. ಆದರೆ ವಿಭಜಕಗಳಿಲ್ಲ. ಆದರೂ, ಇಲ್ಲಿನ ಜನರು ರಸ್ತೆಯ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ, ರಸ್ತೆ ಸುರಕ್ಷತೆಯ ಕಡೆಗೆ ಪ್ರಾಶಸ್ತ್ಯ ನೀಡುವಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.