ಕರಿಯಾ ಐ ಲವ್ ಯೂ.. ಕೆನಡಾದ ಮೇಲಾಣೆ!
ಎರಡು ನಗರಗಳ ನಡುವಿನ ಸ್ನೇಹದ ಸಂಕೇತವಾದ ಅದರ ಮೇಲೆ ಎಲೆಗಳು, ಹೂವುಗಳ ಚಿತ್ರ ಮತ್ತು ಬರವಣಿಗೆ ಇದೆ. ಪಕ್ಕದಲ್ಲೊಂದು ದೊಡ್ಡ ಕೊಳ. ಅದರ ಮೇಲೊಂದು ಅರ್ಧ ಚಂದ್ರಾಕೃತಿಯ ಮರದ ಸೇತುವೆ. ಮುಂದೆ ಹೋದರೆ ಹುಡುಗ ಹುಡುಗಿ ಜೋಡಿ ಪ್ರೀತಿಯಿಂದ ನಗುತ್ತಾ ಕುಳಿತಿರುವ ಕಲ್ಲಿನ " ಫ್ರೆಂಡ್ ಶಿಪ್ ಸ್ಟಾಚ್ಯೂ" ಇದೆ.
- ಡಾ. ಕೆ. ಬಿ. ಸೂರ್ಯ ಕುಮಾರ್, ಮಡಿಕೇರಿ
ಕೆನಡಾದ ಒಂಟಾರಿಯೊದ ಮಿಸ್ಸಿಸಾಗಾ ನಗರದಲ್ಲಿದೆ ಜಪಾನೀಯರ ಕರಿಯಾ ಪಾರ್ಕ್. ಜಪಾನಿನ ಕರಿಯಾ ನಗರ ಮತ್ತು ಮಿಸ್ಸಿಸಾಗ ಅವಳಿ ಸಹೋದರಿ ನಗರಗಳು.
ಸಂಪೂರ್ಣವಾಗಿ ಬಿದಿರಿನ ಬೇಲಿಯಿಂದ ಸುತ್ತುವರಿದ ಉದ್ಯಾನದಲ್ಲಿನ ಹೂವುಗಳ ಅಂದ ನೋಡಲು ಎಷ್ಟು ಕಣ್ಣುಗಳಿದ್ದರೂ ಸಾಲದು. ಜಪಾನಿ ವಿನ್ಯಾಸದ ಪ್ರವೇಶದ್ವಾರ ಪ್ರವೇಶಿಸಿದಂತೆ ನಾಲ್ಕು ಅಡಿ ಉದ್ದಗಲದ ಗೋಡೆಯ ಮೇಲೆ ಮಾಂಡೋ ಮತ್ಸುರಿ ಎಂಬ ಜಪಾನಿನ ಅಕಿಬಾ ದೇಗುಲದಲ್ಲಿ ನಡೆಯುವ ಹಬ್ಬದಲ್ಲಿನ ಜಪಾನಿ ಯೋಧನ ಚಿತ್ರವಿದೆ. ಇದು ಎರಡು ನಗರಗಳ ಸಮಾರಂಭಗಳ 6,750 ಫೋಟೋ ಮೊಸಾಯಿಕ್.
ಒಳಗೆ ವೃತ್ತಾಕಾರದ ಜಲ್ಲಿ, ಮರಳಿನ ಮಾರ್ಗ. ಪಕ್ಕದಲ್ಲಿ ಅನೇಕ ಚೆರ್ರಿ ಮರಗಳು. ಏಪ್ರಿಲ್, ಮೇ ತಿಂಗಳಲ್ಲಿ ಚೆರ್ರಿ ಮರದಲ್ಲಿನ ಹೂವು ಗುಲಾಬಿಯ ಬಣ್ಣದಲ್ಲಿ ಅರಳುತ್ತವೆ. ಇದಲ್ಲದೆ ಮೇಪಲ್, ಜಿಂಕೊ ಬಿಲೋಬ, ರೆಡ್ ಬಡ್, ಸ್ವೀಟ್ ಗಮ್, ಪಿಯೋನಿ, ಐರಿಸ್ ಮತ್ತು ಫಾರ್ಸಿಥಿಯಾ ಮರ ಇಲ್ಲಿದೆ.

ಪಕ್ಕದಲ್ಲೊಂದು ಜಪಾನ್ ಶೈಲಿಯ ಮರದ ಕಟ್ಟಡ. ಮಧ್ಯದಲ್ಲಿ ಜಪಾನ್‌ನಲ್ಲಿ ಎರಕ ಹೊಯ್ದು ತಂದ ದೊಡ್ಡ ಕಂಚಿನ ಸ್ನೇಹ ಗಂಟೆ (ಫ್ರೆಂಡ್‌ಶಿಪ್ ಬೆಲ್). ಎರಡು ನಗರಗಳ ನಡುವಿನ ಸ್ನೇಹದ ಸಂಕೇತವಾದ ಅದರ ಮೇಲೆ ಎಲೆಗಳು, ಹೂವುಗಳ ಚಿತ್ರ ಮತ್ತು ಬರವಣಿಗೆ ಇದೆ. ಪಕ್ಕದಲ್ಲೊಂದು ದೊಡ್ಡ ಕೊಳ. ಅದರ ಮೇಲೊಂದು ಅರ್ಧ ಚಂದ್ರಾಕೃತಿಯ ಮರದ ಸೇತುವೆ. ಮುಂದೆ ಹೋದರೆ ಹುಡುಗ ಹುಡುಗಿ ಜೋಡಿ ಪ್ರೀತಿಯಿಂದ ನಗುತ್ತಾ ಕುಳಿತಿರುವ ಕಲ್ಲಿನ " ಫ್ರೆಂಡ್ ಶಿಪ್ ಸ್ಟಾಚ್ಯೂ" ಇದೆ.
ನಡೆದು ಸುಸ್ತಾದರೆ ಕೂರಲು ಅಲ್ಲಲ್ಲಿ ಮರದ ಬೆಂಚುಗಳೂ ಇರುವುದರಿಂದ ಸುತ್ತಲಿನ ಶಾಂತ ಪರಿಸರವನ್ನು ಆನಂದಿಸಬಹುದು.
ಚಳಿಗಾಲದಲ್ಲಿ ಇಲ್ಲಿನ ಕಾಲುದಾರಿಗಳ ಮೇಲೆ ಬಿದ್ದಿರುವ ಹಿಮವನ್ನು ತೆರವು ಗೊಳಿಸುವುದಿಲ್ಲ. ಆದುದರಿಂದ ಆ ಸಮಯ ಇಲ್ಲಿಗೆ ಪ್ರವೇಶ ಸೀಮಿತ. ಕರಿಯಾ ಪಾರ್ಕ್ ವರ್ಷಪೂರ್ತಿ ತೆರೆದಿರುತ್ತದಾದರೂ ವಸಂತ ಮತ್ತು ಶರತ್ಕಾಲದಲ್ಲಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಈ ಪಾರ್ಕ್‌ಗೆ ಪ್ರವೇಶ ಉಚಿತ.
ಬೇಸಿಗೆಯ ತಿಂಗಳುಗಳಲ್ಲಿ ಕರಿಯಾ ಪಾರ್ಕ್ ಮದುವೆ ಫೋಟೋ ಶೂಟ್ ಗೆ ಅತ್ಯಂತ ಜನಪ್ರಿಯವಾಗಿದ್ದು, ಅದಕ್ಕೆ ಅನುಮತಿಯ ಅಗತ್ಯವಿದೆ. ಇಡೀ ತೋಟವನ್ನು ಜಪಾನಿನ ಸಾಮರಸ್ಯ ಮತ್ತು ಸಮತೋಲನದ ಮೌಲ್ಯಗಳನ್ನು ಎತ್ತಿ ತೋರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ನೀವು ಎಂದಾದರೊಂದು ದಿನ ಮಿಸ್ಸಿಸಾಗ, ಟೊರೊಂಟೊ ಭೇಟಿ ನೀಡಿದರೆ, ಕರಿಯಾ ಪಾರ್ಕನ್ನು ನೋಡಲು ಮರೆಯದಿರಿ.