ಉಡುಪಿ: ಅವಧಿಗೂ ಮುನ್ನವೇ ಈ ಬಾರಿ ಮುಂಗಾರು ಆರಂಭವಾಗುವ ಮುನ್ಸೂಚನೆಯಿದ್ದು, ಮುಂಗಾರು ಪೂರ್ವ ಮಳೆಯೂ ಪ್ರಾರಂಭವಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರವಾಸಿಗರ ಆಕರ್ಷಣೆಯ ತಾಣ ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಪ್ರವೇಶಕ್ಕೆ ಮುಂದಿನ 4 ತಿಂಗಳ ಕಾಲ ಬ್ರೇಕ್‌ ಹಾಕಲಾಗಿದೆ. ಅಲ್ಲದೆ ಎಲ್ಲ ಜಲಸಾಹಸ ಕ್ರೀಡೆಗಳನ್ನು ಮಳೆಗಾಲ ಮುಗಿಯುವವರೆಗೂ ಸ್ಥಗಿತಗೊಳಿಸಲಾಗಿದೆ. ಮುಂಗಾರು ಮಳೆಯ ಸಂದರ್ಭದಲ್ಲಿ ಈ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿಕೊಡುವ ಸಾಧ್ಯತೆಯಿದ್ದು, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಉಡುಪಿ ಜಿಲ್ಲಾಡಳಿತವು ಈ ನಿರ್ಧಾರವನ್ನು ಕೈಗೊಂಡಿದೆ.

St-Marys_main_SusheelaNair_19032021_1200

ಮಳೆಯಿಂದಾಗಿ ಪ್ರವಾಸಕ್ಕಿಲ್ಲ ಅನುಮತಿ:

ಸಾಮಾನ್ಯವಾಗಿ ಮಳೆಗಾಲದಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಮತ್ತು ಗಾಳಿಯೂ ಜೋರಾಗುತ್ತಿರುವುದರಿಂದ ಪ್ರತಿ ವರ್ಷವೂ ಈ ಸಂದರ್ಭದಲ್ಲಿ ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ಹೇರುತ್ತದೆ. ಮಳೆಗಾಲದಲ್ಲಿ ಪಶ್ಚಿಮ ಕರಾವಳಿಯಲ್ಲಿ ಬೋಟ್‌ ಚಲಾಯಿಸಲು ಅನುಮತಿ ಇರುವುದಿಲ್ಲ. ಹಾರ್ಬರ್‌ ಕ್ರಾಫ್ಟ್‌ ನಿಯಮಗಳ ಅನ್ವಯ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪ್ರವಾಸಿಗರು ಜಿಲ್ಲಾಡಳಿತದ ಜತೆಗೆ ಸಹಕರಿಸುವಂತೆ ಮನವಿ ಮಾಡಿದೆ.

08 Malpe beach _ Malpe

ಸಾಹಸ ಕ್ರೀಡೆಗಳೂ ಫುಲ್‌ ಬಂದ್‌:

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮಲ್ಪೆ ಕಡಲ ತೀರಕ್ಕೆ ಬರುತ್ತಿದ್ದು, ಸಾಹಸಿ ಜಲಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಮುಂಗಾರು ಆರಂಭದ ಮುನ್ಸೂಚನೆ ಇದ್ದು ನಿಯಮಗಳ ಪ್ರಕಾರ ಪ್ರವೇಶ ನಿರ್ಬಂಧಿಸಲಾಗಿದೆ. ಸಮುದ್ರ ತೀರದಲ್ಲಿ ವಾತಾವರಣದ ಅನುಕೂಲ ಆಧರಿಸಿ ಜೂನ್ 1ರ ವರೆಗೆ ನೀರಿಗಿಳಿಯಬಹುದು. ಜೂ. 1ರ ಬಳಿಕ ಬೀಚ್‌ನ ಉದ್ದಕ್ಕೂ ತಡೆಬೇಲಿ ನಿರ್ಮಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದ್ದಾರೆ.

ಒಟ್ಟಿನಲ್ಲಿ ಉಡುಪಿಯ ಕಡಲ ತೀರದ ಸೌಂದರ್ಯವನ್ನು ಸವಿಯುವುದಕ್ಕೆ, ಸೈಂಟ್ ಮೇರಿಸ್ ಸುತ್ತಾಡುವುದಕ್ಕೆ ದೂರದೂರುಗಳಿಂದ ಬರುವ ಯೋಜನೆ ಹಾಕಿಕೊಂಡಿದ್ದರೆ, ನಿರಾಶೆ ಗ್ಯಾರಂಟಿ.